ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆಗೆ ದೊರೆಯದ ಚಿಕ್ಕಾಸು

Last Updated 9 ಆಗಸ್ಟ್ 2011, 9:40 IST
ಅಕ್ಷರ ಗಾತ್ರ

ಕಳಸ: ಇದು ಹೆಸರಿಗೆ ರಾಜ್ಯ ಹೆದ್ದಾರಿ. ಆದರೆ ರಸ್ತೆಯ ಉದ್ದಕ್ಕೂ ಎರಡೂ ಬದಿ ಬೆಳೆದಿರುವ ಕಳೆ ಗಿಡಗಳು ರಸ್ತೆಯನ್ನೇ ಆಕ್ರಮಿಸಿವೆ. ರಸ್ತೆ ಬದಿಯ ಚರಂಡಿಗಳು ಬಹುತೇಕ ಮುಚ್ಚಿ ಹೋಗಿದ್ದು, ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ.

ರಸ್ತೆ ಬದಿಯಲ್ಲಿ ಅಲ್ಲಲ್ಲಿ ಸಂಭವಿಸಿರುವ ಭೂಕುಸಿತದಿಂದಾಗಿ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ವಿಪರ್ಯಾಸವೆಂದರೆ 41 ಕಿ.ಮೀ. ಉದ್ದದ ಈ ಹೆದ್ದಾರಿಯ ನಿರ್ವಹಣೆಗೆ ಈ ಬಾರಿ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ!

ಕಳಸ-ಕೊಟ್ಟಿಗೆಹಾರ ರಾಜ್ಯ ಹೆದ್ದಾರಿ 66ರ ಈಗಿನ ದುಸ್ಥಿತಿಗೆ ನಿರ್ವಹಣೆ ಕೊರತೆಯೇ ಕಾರಣ ಎಂಬ ಪ್ರಯಾಣಿಕರ ದೂರಿನಲ್ಲಿ ಸಾಕಷ್ಟು ಹುರುಳಿದೆ. ಮಳೆಗಾಲದ ಆರಂಭ ದಲ್ಲಿ ರಸ್ತೆ ಬದಿಯ ಕಳೆ ಗಿಡಗಳನ್ನು ನಿವಾರಿಸಿ ಚರಂಡಿಯ ಹೂಳು ತೆಗೆಯಬೇಕಿದ್ದ ಲೋಕೋಪಯೋಗಿ ಇಲಾಖೆ ಈ ಬಾರಿ ಆ ಬಗ್ಗೆ ಚಿಂತೆಯನ್ನೇ ಮಾಡದಿರುವುದು ರಸ್ತೆ ಇನ್ನಷ್ಟು ಹಾನಿಗೀಡಾಗಲು ಕಾರಣ.

ಮಾತೆತ್ತಿದರೆ ಕೋಟಿಗಳ ಲೆಕ್ಕದಲ್ಲಿ ಹೊಸ ಕಾಮಗಾರಿಗಳ ಬಗ್ಗೆ ಗಿಳಿಪಾಠ ಒಪ್ಪಿಸುವ ಲೋಕೋಪಯೋಗಿ ಅಧಿಕಾರಿಗಳು ಈ ಪ್ರಮುಖ ಹೆದ್ದಾರಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿ ರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ರಸ್ತೆ ನಿರ್ವಹಣೆಯಲ್ಲಿ ಅಧಿಕಾರಿಗಳಿಗೆ ಲಾಭ ಇಲ್ಲದ ಕಾರಣ ನಿರ್ವಹಣೆಗೆ ಅವರು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ತಾಲ್ಲೂಕು ಕೇಂದ್ರ ಮೂಡಿಗೆರೆ ಮತ್ತು ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿಗೆ  ತೆರಳುವ ಪ್ರಯಾಣಿಕರಿಗೆ ಈ ರಸ್ತೆಯ ದುರವಸ್ಥೆಯಿಂದಾಗಿಯೇ ಪ್ರಯಾಣ ತ್ರಾಸದಾಯಕವಾಗಿ ಪರಿಣಮಿಸಿದೆ. `ಇಲಾಖೆಯ ವಾಹನದಲ್ಲಿ ಜುಮ್ಮೆಂದು ಬಂದು ಹೋಗುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ರಸ್ತೆಗೆ ಆದ ಹಾನಿ ತಿಳಿಯುತ್ತಿಲ್ಲ~ ಎಂಬುದು ರಸ್ತೆ ಬಳಸುವವರ ಆಂಬೋಣ.

150 ಇಂಚಿನಷ್ಟು ಮಳೆ ಆಗುವ ಈ ಪ್ರದೇಶದಲ್ಲಿ ರಸ್ತೆ ಬದಿ ಕಳೆ ನಿವಾರಿಸಲು ಮತ್ತು ಚರಂಡಿಯ ಹೂಳು ತೆಗೆಯಲು ಹಣ ನೀಡಿಲ್ಲ. ಹೊರನಾಡು, ಕುದುರೆಮುಖಕ್ಕೆಂದು ಇದೇ ರಸ್ತೆಯಲ್ಲಿ ಪ್ರತಿ ವಾರವೂ ಸಂಚರಿಸುವ ಸಾವಿರಾರು ಪ್ರವಾಸಿ ವಾಹನಗಳ ಪಾಲಿಗಂತೂ ಕೊಟ್ಟಿಗೆಹಾರ ರಸ್ತೆಯ ಪ್ರಯಾಣ ಮರೆಯಲಾಗದ ಕೆಟ್ಟ ಅನುಭವ!

ಕಳೆದ ವರ್ಷದ ಮಳೆಗಾಲಕ್ಕೆ ಮುನ್ನ ಚರಂಡಿ ದುರಸ್ತಿ ಮತ್ತು ರಸ್ತೆ ಬದಿ ಕಳೆ ತೆಗೆ ಯಲು 12 ಲಕ್ಷ ರೂಪಾಯಿ ನೀಡಲಾಗಿತ್ತು. ಆದರೆ ಈ ಬಾರಿ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ. ಆದ್ದರಿಂದಲೇ ರಸ್ತೆ ನಿರ್ವಹಣೆ ಮಾಡಿಲ್ಲ ಎಂಬುದು ಲೋಕೋಪಯೋಗಿ ಇಲಾಖೆ ಸ್ಪಷ್ಟನೆ.

ಕೆಳಗೂರು ಸಮೀಪ ರಸ್ತೆ ಕುಸಿದಿರುವಲ್ಲಿ ತಡೆಗೋಡೆ ನಿರ್ಮಿಸಲು 25 ಲಕ್ಷ ರೂಪಾಯಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡುತ್ತದೆ. ಆದರೆ ಎರಡು ವರ್ಷದಿಂದಲೂ ಪ್ರಸ್ತಾವನೆ ರೂಪ ದಲ್ಲೇ ಉಳಿದಿರುವ ತಡೆಗೋಡೆ ಹೆದ್ದಾರಿಗೆ ಆಧಾರ ಆಗುವುದು ಯಾವಾಗ ಎಂಬುದು ಸ್ಥಳೀಯರ ಪ್ರಶ್ನೆ.  

 ಪಕ್ಕದ  ಶೃಂಗೇರಿ ವಿಧಾನಸಭಾ ಕ್ಷೇತ್ರದ ರಸ್ತೆಗಳೆಲ್ಲ ನುಣುಪಿನಿಂದ ಕಂಗೊಳಿಸುತ್ತಿದ್ದರೆ ಮೂಡಿಗೆರೆ ಕ್ಷೇತ್ರದ ರಸ್ತೆಗಳ ಬಗ್ಗೆ ಮಾತ್ರ ಸರ್ಕಾರಕ್ಕೆ ಅಸಡ್ಡೆ ಯಾಕೆ ಎಂಬ ಮತದಾರರ ಅನುಮಾನವನ್ನು ಇಲ್ಲಿನ ಶಾಸಕರೇ ಪರಿಹರಿಸಬೇಕು.       

    

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT