ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ನೀರು: ತಣಿಯದ ಹೋರಾಟದ ಕಿಚ್ಚು

Last Updated 8 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಮಂಡ್ಯ: ಹಸುಗಳ ಮೆರವಣಿಗೆ, ಪಾದಯಾತ್ರೆ, ಖಾಲಿ ಕೊಡಗಳ ಪ್ರದರ್ಶನ, ಹೋಮ-ಹವನ, ಬೈಕ್ ರ‌್ಯಾಲಿ ಸೇರಿದಂತೆ ಹಲವು ಭಿನ್ನ ಮಾದರಿ ಪ್ರತಿಭಟನೆಗಳು ಭಾನುವಾರವೂ ಸಹ ನಗರದಲ್ಲಿ ನಡೆದವು.

ತಮಿಳುನಾಡಿಗೆ ಬಿಡುತ್ತಿರುವ, ಕಾವೇರಿ ನದಿ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ನಿರಂತರ ಪ್ರತಿಭಟನೆ 24ನೇ ದಿನವೂ ಮುಂದುವರೆದಿದ್ದರೆ, 4ನೇ ದಿನಕ್ಕೆ ಕಾಲಿಟ್ಟಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ 
ಸಿ.ಡಿ.ಗಂಗಾಧರ್, ಬೇಲೂರು ಸೋಮಶೇಖರ್, ಕಾಡೇನಹಳ್ಳಿ ನಾಗಣ್ಣ, ನೆಲ್ಲಿಗೆರೆ ಬಾಲಕೃಷ್ಣ, ಸುದರ್ಶನ್ ಉಪವಾಸ ಮಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ತೆಂಡೆಕೆರೆ ಗಂಗಾಧರಸ್ವಾಮಿ, ಶಶಿಕುಮಾರಸ್ವಾಮೀಜಿ, ಕುಂದೂರು ಮಠದ ಶಿವಕುಮಾರ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಅವರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಸಂಘಟನೆಗಳು: ಮಂಡ್ಯ ಜಿಲ್ಲಾ ಕ್ರೈಸ್ತ ಒಕ್ಕೂಟ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ, ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘ, ಜಿಲ್ಲಾ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ, ಮಂಡ್ಯ ನೆಹರು ನಗರದ ತಮಿಳು ಕಾಲೊನಿ ನಿವಾಸಿಗಳ ಸಂಘ, ರಾಜ್ಯ ಆರಾಧ್ಯ ಯುವಜನ ಸಮಿತಿ ಜಿಲ್ಲಾ ಘಟಕ, ಮಂಡ್ಯದ 2ನೇ ವಾರ್ಡ್‌ನ ಸಾರ್ವಜನಿಕರು, ಜಿಲ್ಲಾ ಕರಾಟೆ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು, ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ, ಜಿಲ್ಲಾ ಗಂಗಾಮತಸ್ಥ (ಬೆಸ್ತರ್) ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾಯಕರ ಒಕ್ಕೂಟ, ಹೊಳಲು ಗ್ರಾಮದ ಗಂಗಾಪರಮೇಶ್ವರಿ ಸ್ತ್ರೀ ಶಕ್ತಿ ಸಂಘ, ಮಂಡ್ಯ ನಗರದ ಬ್ಯಾನರ್, ಪ್ರಿಂಟರ್ಸ್ ಹಾಗೂ ಕಟಿಂಗ್ಸ್ ಮಾಲೀಕರು ಚಳವಳಿಗೆ ಬೆಂಬಲ ಸೂಚಿಸಿದರು.

ಹೋಮ-ಹವನ: ರಾಜ್ಯ ಆರಾಧ್ಯ ಯುವಜನ ಸಮಿತಿ ಸದಸ್ಯರು, ಸುಮಾರು 2 ಗಂಟೆ ಕಾಲ ಹೋಮ-ಹವನ ನಡೆಸಿ ಸಂಕಷ್ಟ ನೀಗುವಂತೆ ದೇವರಲ್ಲಿ ಪ್ರಾರ್ಥಿಸಿದರು. ಜಿಲ್ಲಾ ಆರಾಧ್ಯ ಸಮಿತಿ ಅಧ್ಯಕ್ಷ ಅಶೋಕ್ ನೇತೃತ್ವದಲ್ಲಿ ಅರ್ಚಕರು ಹೋಮ, ಹವನ ಸೇರಿದಂತೆ ಇತರೆ ಪೂಜೆ ಕೈಂಕರ್ಯ ನಡೆಸಿದರು.

ಪಾದಯಾತ್ರೆ: ಮದ್ದೂರು ತಾಲ್ಲೂಕಿನ ಸಬ್ಬನಹಳ್ಳಿ, ಯಡಗನಹಳ್ಳಿ, ಗೋಪನಹಳ್ಳಿ ಹಾಗೂ ಮಂಡ್ಯ ತಾಲ್ಲೂಕಿನ ಜೀಗುಂಡಿಪಟ್ಟಣ ಗ್ರಾಮದ ನೂರಾರು ರೈತರು ಪಾದಯಾತ್ರೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು.

ಹಸುಗಳ ಮೆರವಣಿಗೆ: ಮಂಡ್ಯದ ಕಲ್ಲಹಳ್ಳಿ ವಿಶ್ವೇಶ್ವರಯ್ಯ ನಗರ ನಿವಾಸಿಗಳು ಚಳವಳಿ ಬೆಂಬಲಿಸಿ ಹಸುಗಳ ಮೆರವಣಿಗೆ ಹಾಗೂ ಖಾಲಿ ಕೊಡ ಪ್ರದರ್ಶಿಸಿದರು. ನೇಸರ ಟ್ರಸ್ಟ್ ಸದಸ್ಯರು, ಕಣ್ಣಿಗೆ ಕಪ್ಪುಪಟ್ಟಿ ಧರಿಸಿ, ಮೆರವಣಿಗೆ ನಡೆಸಿದರು.

ಬೈಕ್ ರ‌್ಯಾಲಿ: ಚನ್ನಪಟ್ಟಣ ತಾಲ್ಲೂಕಿನ ರೈತ ಸಂಘ ಮತ್ತು ಹಸಿರು ಸೇನೆ ಘಟಕ ಕಾರ್ಯಕರ್ತರು ಹಾಗೂ ಚನ್ನಪಟ್ಟದ ಜೆಡಿ(ಎಸ್) ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ ಬೆಂಬಲಿಸಿದರು. ಬೆಂಗಳೂರಿನ ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘಟನೆಯ ಸದಸ್ಯರು ಧರಣಿಯಲ್ಲಿದ್ದರು.

ಧರಣಿಯಲ್ಲಿ ಭಾಗಿ: ತಾಲ್ಲೂಕಿನ ಚಂದಗಾಲು, ಕುರಿಕೊಪ್ಪಲು, ವಡ್ಡರಹಳ್ಳಿ ಕೊಪ್ಪಲು, ಮಂಡ್ಯ ವಿನಾಯಕ ಬಡಾವಣೆ ನಿವಾಸಿಗಳು ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ, ನಗರದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಶಿವಳ್ಳಿ: ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲೂ ರೈತರು, ಗ್ರಾಮ ಪಂಚಾಯಿತಿ ಬಳಿ ಶನಿವಾರದಿಂದ ನಡೆಸುತ್ತಿರುವ ಸರದಿ ಧರಣಿ ಕಾರ್ಯಕ್ರಮ ಎರಡನೇ ದಿನಕ್ಕೆ ಕಾಲಿಟ್ಟಿದೆ. ಗ್ರಾಮದ ಹಲವರು ಧರಣಿಯಲ್ಲಿ ಪಾಲ್ಗೊಂಡು ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು. ಉಳಿದಂತೆ, ಹೆಮ್ಮಿಗೆ, ಮಾದರಹಳ್ಳಿ ಸೇರಿದಂತೆ ಅಲ್ಲಲ್ಲಿಯೇ ಗ್ರಾಮಸ್ಥರು ಧರಣಿ, ರಸ್ತತಡೆ ನಡೆಸುತ್ತಿದ್ದಾರೆ.

ರಸ್ತೆಯಲ್ಲೇ ಅಡುಗೆ: ಮಂಡ್ಯ ತಾಲ್ಲೂಕಿನ ಹೊನಗಹಳ್ಳಿ ಮಠದ ಗ್ರಾಮಸ್ಥರು, ಗ್ರಾಮದಿಂದ ಹನಕೆರೆ ವರೆಗೆ ಪಾದಯಾತ್ರೆ ನಡೆಸಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. ರಸ್ತೆಯಲ್ಲೇ ಅಡುಗೆ ಸಿದ್ಧಪಡಿಸಿ ಸೇವಿಸಿದರು. ಗ್ರಾಮದ ರಾಮಕೃಷ್ಣೇಗೌಡ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಸಂಕಷ್ಟ ಸೂತ್ರ ರಚಿಸಿ: ಪಾಟೀಲ್
ಮಂಡ್ಯ: ಕರ್ನಾಟಕ-ತಮಿಳುನಾಡು ರಾಜ್ಯಗಳು ಕಾವೇರಿ ನದಿ ನೀರನ್ನು ಸಂಕಷ್ಟ ಸಂದರ್ಭದಲ್ಲಿ ಬಳಸಿಕೊಳ್ಳಲು ಅನ್ವಯವಾಗುವಂತೆ `ಸಂಕಷ್ಟ ಸೂತ್ರ~ ರಚಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್ ಆಗ್ರಹಿಸಿದರು.
ನಗರದ ಕಾವೇರಿ ವನ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.

ಕಾವೇರಿ ನದಿ ನೀರು ರಾಜ್ಯದ ಜನರಿಗೆ ಬದುಕಿನ ಪ್ರಶ್ನೆಯಾಗಿದ್ದರೆ, ತಮಿಳುನಾಡಿಗೆ ರಾಜಕೀಯ ಪ್ರಶ್ನೆಯಾಗಿದೆ. ಇದು, ದುರ್ದೈವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ/ರಾಜ್ಯ ಸರ್ಕಾರದ ನಿರ್ಧಾರದಿಂದ ರೈತರಿಗೆ ನೋವಾಗಿದೆ. ರೈತರನ್ನು ನೋಯಿಸಿದ ಯಾವ ಪಕ್ಷಗಳೂ ಉಳಿಯುವುದಿಲ್ಲ. ಬೇಸಾಯಗಾರರಿಗೆ ನೋವುಣಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಕಾವೇರಿ: ತೆಪ್ಪದಲ್ಲಿ ಕುಳಿತು ಆಕ್ರೊಶ
ಮಳವಳ್ಳಿ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಭಾನುವಾರ ಮೀನುಗಾರರು ಪಟ್ಟಣದ ಕೆರೆಯಲ್ಲಿ ತೆಪ್ಪದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರೆ, ಅನಂತರಾಂವೃತ್ತದಲ್ಲಿ ಗಂಗಾಪರಮೇಶ್ವರಿ ದೊಡ್ಡಕುಲದ ಸಾವಿರಾರು ಜನರು ನೆರೆದು ಪ್ರತಿಭಟನೆ ನಡೆಸಿ ನಂತರ ತಾಲ್ಲೂಕು ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.

ಮೀನುಗಾರರು ಕೆರೆಯಲ್ಲಿ ತೆಪ್ಪದಲ್ಲಿ ಕುಳಿತು ಕೇಂದ್ರ ರಾಜ್ಯ ಸರ್ಕಾರ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ದ ಘೋಷಣೆಗಳನ್ನು ಕೂಗುತ್ತ ತೆಪ್ಪ ನಡೆಸುತ್ತಿದ್ದರು.

ಕಾವೇರಿ ಪ್ರಾಧಿಕಾರ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಪಾಲಿಸವಂತೆ ಸೂಚನೆ ನೀಡಿರುವುದು ರಾಜ್ಯದ ಜನರಿಗೆ ಕುಡಿಯುವ ನೀರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗಂಗಾಪರಮೇಶ್ವರಿ ದೊಡ್ಡಕುಲದ ಸಾವಿರಾರು ಮಂದಿ ಪಟ್ಟಣದ ಮಹದೇಶ್ವರಸ್ವಾಮಿ ದೇವಾಲಯದ ಬಳಿಯಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ನಂತರ ಅನಂತರಾಂ ವೃತ್ತದಲ್ಲಿ ಜಮಾವಣೆಗೊಂಡು ಕೆಲಸಮಯ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿ ನಂತರ ತಾಲ್ಲೂಕು ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.

ಯ.ಬಸಪ್ಪ, ಮಂಡಿಬಸಪ್ಪ, ಶಿವಮಾದಪ್ಪ, ಪುಟ್ಟಮಾದಪ್ಪ, ಹಿಮಂತ್‌ರಾಜ್, ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಕೆ.ಗಂಗರಾಜೇಅರಸು, ಪುರಸಭೆ ಮಾಜಿ ಸದಸ್ಯ ನಂಜುಂಡಯ್ಯ,ಬಸಪ್ಪ, ಪ್ರಭು. ಕೃಷ್ಣ, ಗಂಗಾಪರಮೇಶ್ವರಿ ಸೊಸೈಟಿ ಅಧ್ಯಕ್ಷ ಎಸ್.ಕಂಬರಾಜು, ಶಿವರಾಜು,ನಾರಾಯಣ, ಮಾದೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬೆಂಬಲ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಶನಿವಾರ ನಡೆದ ಬಂದ್‌ನಲ್ಲಿ ರಾಶಿರಾಪು ಸೇನಾ ಸಮಿತಿ, ಡಾ.ವಿಷ್ಣು ಅಭಿಮಾನಿಬಳಗ, ಅಂಬರೀಶ್ ಅಭಿಮಾನಿ ಬಳಗ ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ನೀರು ಬಿಡುಗಡೆ ಖಂಡಿಸಿ ಧರಣಿ
ಪಾಂಡವಪುರ: ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಿ ತಾಲ್ಲೂಕಿನ ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಮಿತಿ ಹಾಗೂ ದೇವೇಗೌಡನಕೊಪ್ಪಲು ಗ್ರಾಮದ ಜನರು ಭಾನುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಮಹಾಂಕಾಳೇಶ್ವರಿ ದೇವಸ್ಥಾನದ ಬಳಿಯಿಂದ ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಮಿತಿಯ ಸದಸ್ಯರು ಮೆರವಣಿಗೆ ಹೊರಟು ಡಾ.ರಾಜ್‌ಕುಮಾರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು.

ನಂತರ ಐದು ದೀಪ ವೃತ್ತ ತಲುಪಿ ರಸ್ತೆ ತಡೆ ನಡೆಸಿದರು. ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ `ಕುಡಿಯಲು ನಮಗೆ ನೀರಿಲ್ಲ, ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ~ ಎಂದು ಹರಿಹಾಯ್ದರು. ಕಾವೇರಿ ಹಿತರಕ್ಷಣಾ ಸಮಿತಿಯು ಅಧ್ಯಕ್ಷ ಸಿ.ಅಣ್ಣೇಗೌಡ ಅವರ ನೇತೃತ್ವದಲ್ಲಿ ನಿರಂತರವಾಗಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ವಿಶ್ವಕರ್ಮ ಕ್ಷೇಮಾಭಿವೃದ್ದಿ ಸದಸ್ಯರು ಭಾಗವಹಿಸಿದ್ದರು.

ಮುಖಂಡರಾದ ದೇವರಾಜು, ಭಾಸ್ಕರಚಾರಿ, ಶಿವಕುಮಾರ್, ನಿಂಗರಾಜು, ಇಂದುಮತಿ, ನಾಗಣ್ಣಚಾರಿ, ಸೋಮಶೇಖರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಜನರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ಸರ್ಕಾರವನ್ನು ಒತ್ತಾಯಿಸಿದರು. ನಂತರ ಐದು ದೀಪ ವೃತ್ತದಲ್ಲಿ ರಸ್ತೆ ತಡೆನಡೆಸಿ ತಮಿಳುನಾಡು ಮುಖ್ಯಮಂತ್ರಿ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ವಿಜಯಕುಮಾರ್, ಶ್ರೀಕಂಠೇಗೌಡ, ಬುಂಡಪ್ಪಗೌಡ, ದೇವರಾಜು, ನಿಂಗೇಗೌಡ, ಸಂತೋಷ, ಅರವಿಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.


ಕಾವೇರಿ: ವಿವಿಧ ಸಂಘಟನೆಗಳ ಪ್ರತಿಭಟನೆ
ಮದ್ದೂರು: ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ಖಂಡಿಸಿ ಪಟ್ಟಣದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಖಾಲಿ ಕೊಡಗಳ ಮೆರವಣಿಗೆ: ಪಟ್ಟಣದ ಹೊಳೆಬೀದಿ, ಹಳೇ ಒಕ್ಕಲಿಗರಬೀದಿ, ಕೋಟೆ ಬೀದಿ, ಕಲ್ಲೋಡಿ ಕಾಲೋನಿ, ಸೋಮೇಗೌಡರಬೀದಿ, ಶಿಕ್ಷಕರ ಬಡಾವಣೆಯ ಮಹಿಳೆಯರು ಪಟ್ಟಣದಲ್ಲಿ ಖಾಲಿ ಕೊಡಗಳ ಮೆರವಣಿಗೆ ನಡೆಸಿದರು. ಶಾಸಕಿ ಕಲ್ಪನ ಸಿದ್ದರಾಜು ಮೆರವಣಿಗೆಗೆ ಚಾಲನೆ ನೀಡಿದರು. ಪುರಸಭಾ ಅಧ್ಯಕ್ಷ ಅಂಕಪ್ಪ ಎ ಚಂದು, ಮಾಜಿ ಅಧ್ಯಕ್ಷ ಅಮರ್‌ಬಾಬು, ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳೀ ರಾಮಕೃಷ್ಣ, ಚಿದುಕುಮಾರ್, ಆದಿಲ್ ಆಲಿಖಾನ, ಪುಟ್ಟಸ್ವಾಮಿಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಎತ್ತಿನಗಾಡಿ ಮೆರವಣಿಗೆ: ಸಮೀಪದ ಸೊಳ್ಳೆಪುರ ಗ್ರಾಮಸ್ಥರು ಎತ್ತಿನಗಾಡಿ ಮೆರವಣಿಗೆ ಮೂಲಕ ಪಟ್ಟಣದ ಟಿಬಿ ವೃತ್ತಕ್ಕೆ ಆಗಮಿಸಿ ಹೆದ್ದಾರಿ ತಡೆ ನಡೆಸಿದರು. ಜಾನುವಾರುಗಳನ್ನು ಹೆದ್ದಾರಿಯಲ್ಲಿ ಕಟ್ಟಿ ಹೆದ್ದಾರಿ ತಡೆ ಮಾಡಿದರು. ರೈತಸಂಘದ ಅಧ್ಯಕ್ಷ ವಿಶ್ವನಾಥ್, ಸೊಳ್ಳೆಪುರ ಶಿವರಾಮು, ರಮೇಶ, ಶೋಭ, ಸಂದೇಶ್, ಸವಿತಾ, ಗಾಯತ್ರಿ, ಪ್ರೇಮ, ಲಕ್ಷ್ಮಮ್ಮ, ಪ್ರಕಾಶ್, ಶ್ರೀಧರ್, ಶಂಕರ್, ಅನಸೂಯ, ಸೇರಿದಂತೆ ಹಲವರು ಇದ್ದರು.

ಬೈಕ್ ರ‌್ಯಾಲಿ: ಬೆಂಗಳೂರಿನಲ್ಲಿ ವಾಸವಾಗಿರುವ ಮಂಡ್ಯ ಮೂಲ ನಿವಾಸಿಗಳ ಹಿತರಕ್ಷಣಾ ವೇದಿಕೆಯ ನೂರಾರು ಸದಸ್ಯರು ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಬೆಂಗಳೂರಿನಿಂದ ಪಟ್ಟಣಕ್ಕೆ ಬೈಕ್ ಹಾಗೂ ಆಟೋಗಳ ಮೂಲಕ ಆಗಮಿಸಿದರು.


ಆಗಮಿಸಿದ ನೂರಾರು ಪ್ರತಿಭಟನಾಕಾರರನ್ನು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ನಿಡಘಟ್ಟ ಗಡಿಯಲ್ಲಿ ಸ್ವಾಗತಿಸಿದರು. ನಂತರ ಅವರಿಗೆ ಟಿಬಿ ವೃತ್ತದ ಬಳಿ ಊಟದ ವ್ಯವಸ್ಥೆ ಕಲ್ಪಿಸಿ ಬಿಳ್ಕೋಟ್ಟರು. ಮುಖಂಡರಾದ ಕೆ.ದಾಸೇಗೌಡ, ನಾಗರಾಜು, ಶಿವನಂಜಪ್ಪ, ಕೆ.ಟಿ.ಸುರೇಶ್, ಚಿಕ್ಕಮರಿಯಪ್ಪ, ಮಹದೇವು, ಜಿಪಿ.ಯೋಗೇಶ್, ರವಿಚನ್ನಸಂದ್ರ ಸೇರಿದಂತೆ ಹಲವರು ಇದ್ದರು.

ಬಿಎಸ್‌ಆರ್ ಪಕ್ಷ: ಪಟ್ಟಣದ ಕೊಪ್ಪ ವೃತ್ತದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.

ಹೆದ್ದಾರಿಯಲ್ಲಿ ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಅಪ್ಪು ಪಿ.ಗೌಡ, ಸಿದ್ದರಾಜು, ಅಂಬರೀಷ್, ಚೇತನ್, ಪುಟ್ಟಸ್ವಾಮಿ, ಚಿಕ್ಕಸ್ವಾಮಿ, ಕೃಷ್ಣ ಶ್ರೇಯಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೆಸಗರಹಳ್ಳಿ: ಇಲ್ಲಿನ ಮಾನಸ ವಿದ್ಯಾಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಪ್ರಾಂಶುಪಾಲ ಚಂದ್ರಶೇಖರ್, ಮುಖ್ಯಶಿಕ್ಷಕರಾದ ತಿಮ್ಮಯ್ಯ, ಮಂಗಳಮ್ಮ, ಉಪನ್ಯಾಸಕರಾದ ಪ್ರವೀಣ್, ಬಸವರಾಜು, ಮೈತ್ರಿ ಹಲವರು ಇದ್ದರು.

ಗೆಜ್ಜಲಗೆರೆ: ಇಲ್ಲಿನ ಹೆದ್ದಾರಿಯಲ್ಲಿ ಇಂದೂ ಕೂಡ ರೈತನಾಯಕಿ ಸುನಂದ ಜಯರಾಂ ನೇತೃತ್ವದಲ್ಲಿ ಹೆದ್ದಾರಿ ಧರಣಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಚಾರಿ, ಸದಸ್ಯ ಸಾಯಿ ಪ್ರಸನ್ನ, ಸಾವಿತ್ರಮ್ಮ, ಮುಖಂಡರಾದ ಕಿಟ್ಟಿ, ಚಂದ್ರು, ಜಿ.ಎ.ಶಂಕರ್, ರೇವಣ್ಣ,   ಹರೀಶ್,ಸುನೀಲ್, ಅಭಿಲಾಷ್, ಜಿ.ಪಿ.ಯೋಗೇಶ್, ಮೋಹನ್ ಸೇರಿದಂತೆ ಹಲವರು ಇದ್ದರು.

ಜಯಲಲಿತಾ ಅಣಕು ಶವಯಾತ್ರೆ
ಭಾರತೀನಗರ: ವಿಶ್ವಕರ್ಮ ಮಹಾಸಭಾ ಸಿ.ಎ.ಕೆರೆ.ಹೋಬಳಿ ಘಟಕದ ವತಿಯಿಂದ ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಣುಕು ಶವಯಾತ್ರೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಮೆಳ್ಳಹಳ್ಳಿ ಗ್ರಾಮದಿಂದ ಜಯಲಲಿತಾ ಅಣುಕ ಶವವನ್ನು ಹೊತ್ತ ನೂರಾರು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ನಂತರ ಹಲಗೂರು ವೃತ್ತದಲ್ಲಿ ಜಮಾಯಿಸಿ ಪ್ರತಿಕೃತಿಯನ್ನು ಸುಟ್ಟುರು. ನಂತರ ಬೆಳ್ಳೂರು ಗ್ರಾಮದ ದೇವರಾಜಚಾರ್ ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಪ್ರತಿಭಟಿಸಿದರು.

ಮುಖಂಡರಾದ ಸಿ.ಎ.ಕೆರೆ. ಹೋಬಳಿ ಘಟಕದ ಅಧ್ಯಕ್ಷ ಚಿಕ್ಕಣ್ಣಚಾರ್, ಕಾರ್ಯದರ್ಶಿಕೆ.ಪುಟ್ಟಸ್ವಾಮಿ, ಕೆ.ಸಿ.ಪ್ರಕಾಶ್, ದೇವರಹಳ್ಳಿ ಪುಟ್ಟಸ್ವಾಮಾಚಾರ್, ಸುಂದರ್, ವೆಂಕಟೇಶ್, ಟಿ.ಎಸ್. ರವಿ, ಪುಟ್ಟಚೌಡಚಾರ್, ಹುಸ್ಕೂರುನಾಗರಾಜಚಾರ್, ಸೇರಿದಂತೆ ಇತರರು ಹಾಜರಿದ್ದರು.

ಆಲಭುಜನಹಳ್ಳಿ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೂಚಿಸಿರುವ ಸುಪ್ರೀಂಕೋರ್ಟ್ ಮತ್ತು ಕಾವೇರಿ ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಸಮೀಪದ ಆಲಭುಜನಹಳ್ಳಿ ಗ್ರಾಮಸ್ಥರು ಭಾನುವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.


ನಗರದ ಮಂಡ್ಯ ವೃತ್ತದಲ್ಲಿ ಜಮಾಯಿಸಿದ ನೂರಾರು ಗ್ರಾಮಸ್ಥರು ರಸ್ತೆಮಧ್ಯೆ ಕುಳಿತು ಧರಣಿ ನಡೆಸಿದರು.ಇದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು.


ಮುಖಂಡರಾದ ಹೇಮರಾಜು, ಅಕ್ಕಿಸ್ವಾಮಿ, ಚಂದ್ರು, ಜಯರಾಮು, ರಾಜಣ್ಣ, ಸುರೇಶ್, ಬೋರೇಗೌಡ, ಸ್ವಾಮಿ, ಎ.ಟಿ.ಪುಟ್ಟಸ್ವಾಮಿ, ವಿಷಕಂಠ, ಶರತ್, ರವಿ, ಚೇತನ್, ಪ್ರದೀಪ್ ಸೇರಿದಂತೆ ಇತರರು ಹಾಜರಿದ್ದರು.

ಚಂದಗಿರಿಕೊಪ್ಪಲು ರೈತರ ಮಂಡ್ಯ ಚಲೋ
ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದ ರೈತರು ಭಾನುವಾರ ಪಟ್ಟಣದಿಂದ ಮಂಡ್ಯದ ವರೆಗೆ ಪಾದಯಾತ್ರೆ ನಡೆಸಿದರು.

ಬಾಬುರಾಯನಕೊಪ್ಪಲು, ಕೆ.ಶೆಟ್ಟಹಳ್ಳಿ, ಗೌರಿಪುರ, ಗೌಡಹಳೀ, ಗಣಂಗೂರು, ಕೋಡಿಶೆಟ್ಟಿಪುರ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದರು. ದಾರಿಯುದ್ದಕ್ಕೂ ಕಾವೇರಿ ನದಿ ಪ್ರಾಧಿಕಾರಿ, ಪ್ರಧಾನಿ ಮನಮೋಹನಸಿಂಗ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು. ಕೆಲವರು ಬೈಕ್ ರ‌್ಯಾಲಿ ಕೂಡ ನಡೆಸಿದರು. ಕಾಂತರಾಜು, ಕುಮಾರ್, ಸಿ.ಕೆ.ದೀಪಕ್, ವೇಣುಗೋಪಾಲ್, ಚಂದ್ರನಾಗ, ಶ್ರೀನಿವಾಸ್, ಬೆಟ್ಟೇಗೌಡ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಚಂದಗಾಲು: ತಾಲ್ಲೂಕಿನ ಚಂದಗಾಲು ಗ್ರಾಮಸ್ಥರು ನಗುವನಹಳ್ಳಿ ಗೇಟ್‌ನಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಚಂದಗಾಲುವಿನಿಂದ ನಗುವನಹಳ್ಳಿ ಗೇಟ್ ವರೆಗೆ ಎತ್ತಿನ ಗಾಡಿಗಳ ಮೆರವಣಿಗೆ ನಡೆಸಿದರು. ಸುಮಾರು ಒಂದೂವರೆ ತಾಸು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಪಟ್ಟಣದ ವರೆಗೆ ತೆರಳಿ ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಯಜಮಾನ್ ನಾರಾಯಣಸ್ವಾಮಿ, ಶಂಕರ್, ಕೃಷ್ಣ, ಸೋಮಶೇಖರ್, ಕಿರಣ್, ಜಗದೀಶ್ ಇತರರು ಪಾಲ್ಗೊಂಡಿದ್ದರು.

 ಉಪವಾಸ: ತಾಲ್ಲೂಕಿನ ಕೆಆರ್‌ಎಸ್ ಗ್ರಾಮಸ್ಥರು ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿ ಭಾನುವಾರ ಕೆಆರ್‌ಎಸ್‌ನ ಅರಳಿಕಟ್ಟೆ ವೃತ್ತದಲ್ಲಿ ಉಪವಾಸ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಸಿ.ಮಂಜುನಾಥ್, ಎಂ.ಬಿ.ಕುಮಾರ್, ದಿನೇಶ್‌ಕುಮಾರ್, ನಾಗೇಂದ್ರಕುಮಾರ್, ಜಗದೀಶ್, ಎಚ್.ಎನ್.ಲೋಕೇಶ್, ಮಜ್ಜಿಗೆಪುರ ಕೆ.ಶಿವರಾಂ, ನಾರಾಯಣ ಇತರರು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಉಪವಾಸ ನಡೆಸಿದರು.

ಮೊಗರಹಳ್ಳಿಯಲ್ಲಿ ಕಲ್ಲು ತೂರಾಟ
ಶ್ರೀರಂಗಪಟ್ಟಣ: ಗಡಿ ಗ್ರಾಮದ ಮೊಗರಹಳ್ಳಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಡೆಸುತ್ತಿದ್ದ ಧರಣಿ ವಿಕೋಪಕ್ಕೆ ತಿರುಗಿ ಪ್ರತಿಭಟನಾಕಾರರು ಸಾರಿಗೆ ಸಂಸ್ಥೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಸಂಗ ಭಾನುವಾರ ನಡೆಯಿತು.

 ಬೆಳಿಗ್ಗೆ 11.30ರಲ್ಲಿ ಮೈಸೂರು- ಕೆಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ ವೇಳೆ ಮೈಸೂರು ನಗರ ಸಾರಿಗೆ ಬಸ್‌ಗೆ ಕಲ್ಲು ತೂರಲಾಯಿತು. ಬಸ್‌ನ ಗಾಜು ಪುಡಿಯಾಯಿತು. ಬಸ್‌ನ ಚಕ್ರದ ಗಾಳಿ ತೆಗೆಯುವ ಪ್ರಯತ್ನ ನಡೆಸಿದಾಗ ಪೊಲೀಸರು ತಡೆದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್, ಸೋಮು, ಮನು, ಅಭಿ, ಸಂದೇಶ್ ಸೇರಿ ಒಟ್ಟು 9 ಜನರ ವಿರುದ್ಧ ಕೆಆರ್‌ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿದ ಆರೋಪದ ಮೇಲೆ ಸೆ.143, 341, 427 ಹಾಗೂ 149ರ ಅಡಿ ಪ್ರಕರನ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಆರ್‌ಎಸ್‌ನಲ್ಲಿ ಪ್ರತಿಭಟನೆ: ಮೈಸೂರಿನ ಕುಂಬಾರಕೊಪ್ಪಲು ನಿವಾಸಿಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಭಾನುವಾರ ಕೆಆರ್‌ಎಸ್‌ನ ಬೃಂದಾವನಕ್ಕೆ ಹೋಗುವ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಡಿ.ಮಾದೇಗೌಡ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ನದಿಗೆ ಇಳಿಯುವ ಯತ್ನ ಮಾಡಿದಾಗ ಪೊಲೀಸರು ತಡೆದು ವಾಪಸ್ ಕಳುಹಿಸಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ರಾಜ್ಯ ಸರ್ಕಾರ, ತಮಿಳುನಾಡು ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಮೈಸೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಪೈ.ಅಯ್ಯ ಕುಮಾರ್, ಕೆ.ವಿ.ಪ್ರಕಾಶ್, ಭೈರಪ್ಪ, ಅಂಗಡಿ ಶಿವಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 
ಶಾಲಾ-ಕಾಲೇಜು ರಜೆ ಇಂದು
ಮಂಡ್ಯ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಬರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.8 ರಂದು ಜಿಲ್ಲೆಯಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಆದೇಶ ಹೊರಡಿಸಿದ್ದಾರೆ.

ಎಸ್.ಎಂ.ಕೃಷ್ಣ ಪ್ರಧಾನಿ ಭೇಟಿ ಇಂದು
ಮಂಡ್ಯ: ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಕೆಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅ.8 ರಂದು ಭೇಟಿ ಮಾಡಿ ಕಾವೇರಿ ನೀರು ಬಿಡುಗಡೆ ವಿಚಾರ ಕುರಿತು ಚರ್ಚಿಸಲಿದ್ದಾರೆ.

ಈ ನಿಯೋಗದಲ್ಲಿ ಜಿಲ್ಲೆಯ ಶಾಸಕ ಕೆ. ಸುರೇಶಗೌಡ, ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ ಸೇರಿದಂತೆ ರಾಜ್ಯದ ಹತ್ತು ಮಂದಿ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸತ್ಯಾನಂದ ತಿಳಿಸಿದ್ದಾರೆ.

ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ
ಗರಿಷ್ಠ ಮಟ್ಟ -124.80 ಅಡಿ
ಇಂದಿನ ಮಟ್ಟ - 105.52 ಅಡಿ
ಒಳ ಹರಿವು -  7,298 ಕ್ಯೂಸೆಕ್
ಹೊರ ಹರಿವು - 11,851 ಕ್ಯೂಸೆಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT