ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ವಾಂತಿ, ಭೇದಿ: 425 ಗಡಿ ದಾಟಿದ ಸಂಖ್ಯೆ

Last Updated 12 ಜನವರಿ 2012, 6:10 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಕಲುಷಿತ ನೀರು ಸೇವನೆಯಿಂದ ಉಲ್ಬಣಗೊಂಡ ವಾಂತಿ, ಭೇದಿಯ ಪ್ರಕರಣಗಳಲ್ಲಿ ಬುಧವಾರ ಮತ್ತೆ 60 ಪ್ರಕರಣಗಳು ಪತ್ತೆಯಾಗಿದ್ದು, ಒಂದು ವಾರದಲ್ಲಿ ವಾಂತಿ, ಭೇದಿಯಿಂದ ಬಳಲಿದವರ ಸಂಖ್ಯೆ 425ರ ಗಡಿ ದಾಟಿದೆ. ತೀವ್ರವಾಗಿ ಅಸ್ವಸ್ಥಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ.

ವಾಂತಿ,ಭೇದಿಯಿಂದ ಬಳಲಿ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದಾಖಲಾದ ರೋಗಿಗಳಲ್ಲಿಯೂ ವಾಂತಿ, ಭೇದಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಯ ಹಾಸಿಗೆಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಿದ್ದು, ಬುಧವಾರ ಹೆಚ್ಚುವರಿಯಾಗಿ 10 ಹಾಸಿಗೆಗಳನ್ನು ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಮಾಳವದೆ ತಿಳಿಸಿದ್ದಾರೆ. 

ಹೆಚ್ಚುತ್ತಿರುವ ಪ್ರಕರಣಗಳು: ಪಟ್ಟಣದಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದು ವಾಂತಿ ಭೇದಿ ಪ್ರಕರಣಗಳು ದಾಖಲಾಗುತ್ತಿದ್ದರೂ ಜ.5ರಿಂದ ವಾಂತಿ, ಭೇದಿಯಿಂದ ಬಳಲುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ವಾಂತಿ,ಭೇದಿಯಿಂದ ಬುಧವಾರ ದಾಖಲಾದ ರೋಗಿಗಳು ಸೇರಿ ಈವರೆಗೆ ಚಿಕಿತ್ಸೆ ಪಡೆದವರ ಸಂಖ್ಯೆ 400ರ ಗಡಿ ದಾಟಿದೆ. ಇದರಲ್ಲಿ  ಶೇ 85 ರಷ್ಟು ಮಹಿಳೆಯರೇ ಇರುವುದು ವಿಶೇಷ.

ಮಾತ್ರೆ ವಿತರಣೆ: ವಾಂತಿ,ಭೇದಿ ನಿಯಂತ್ರಣಕ್ಕೆ ಬಾರದಿರುವುದರಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಠಿಕಾಣಿ ಹೂಡ್ದ್ದಿದಾರೆ. ಜನರಿಗೆ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಸಲಹೆ ಮಾಡಲಾಗಿದೆಯಲ್ಲದೇ, ನೀರಿನಲ್ಲಿ ಹಾಕುವ ಹಾಲೋಜೆನ್ ಮಾತ್ರೆಗಳ ವಿತರಣೆ ಮಾಡುತ್ತಿದೆ.  ಹೆಚ್ಚುವರಿ ಯಾಗಿ 1 ಲಕ್ಷ ಮಾತ್ರೆಗಳನ್ನು ತರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಈಶ್ವರ ಮಾಳೋದೆ ತಿಳಿಸಿದ್ದಾರೆ.

ಕಾಲರಾ ಅಲ್ಲ: ಪಟ್ಟಣದಲ್ಲಿ ಕಾಣಿಸಿಕೊಂಡಿರುವುದು ಕೇವಲ ವಾಂತಿ ಭೇದಿಯೇ ಹೊರತು ಕಾಲರಾ ಅಲ್ಲ ಎಂಬುದನ್ನು ಹುಬ್ಬಳ್ಳಿ ಕಿಮ್ಸ ವೈದ್ಯರು ದೃಢಪಡಿಸಿದ್ದಾರೆ. 

ನೀರು ಪರೀಕ್ಷೆಗೆ: ರಸ್ತೆ ಬದಿಯಲ್ಲಿನ ತಿಂಡಿ ತಿನ್ನದಂತೆ, ಹೋಟೆಲ್‌ಗಳಲ್ಲಿ ತಿಂಡಿಯನ್ನು ತೆರೆದು ಇಡದಂತೆ ಹಾಗೂ ಕಾಯಿಸಿ ಆರಿಸಿದ ನೀರನ್ನು ಸೇವಿಸುವಂತೆ ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತದೆ.  ನಾಗನೂರು ಕೆರೆಯಿಂದ ಸರಬ ರಾಜು ಆಗುವ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸ ಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸುರೇಶ ಇಟ್ನಾಳ ತಿಳಿಸುತ್ತಾರೆ.

ಡಿಎಚ್‌ಓ ಜತೆ ವಾಗ್ವಾದ: ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಔಷಧಿಯನ್ನು ಹೊರಗೆ ತರಲು ಹೇಳುತ್ತಿದ್ದಾರೆ. ಆರಾಮಾಗದೇ ಇದ್ದ ರೋಗಿಗಳನ್ನು ಆರಾಮಾಗಾಗಿದೆ ಎಂದು ಮನೆಗೆ ಕಳುಹಿಸಲಾಗುತ್ತದೆ. ಮನೆಗೆ ಹೋದವರು ಮತ್ತೆ ಆಸ್ಪತ್ರೆಗೆ ಬರುವ ರೋಗಿಗಳಿಗೆ 20 ರೂ. ಶುಲ್ಕ ವಿಧಿಸುತ್ತಾರೆ ಎಂದು ರೋಗಿಯೊಬ್ಬರು ಆರೋಪಿಸಿ ಡಿಎಚ್‌ಓ ಡಾ.ಈಶ್ವರ ಮಾಳವದೆ ಜತೆ ವಾಗ್ವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT