ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ವಿಕೃತ ಕೃತ್ಯಗಳ ಸರಣಿ

ಚಿತ್ರ: ಉಮೇಶ್‌
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕರು: ಪ್ರೇಮಕುಮಾರ್‌, ಅಶೋಕಕುಮಾರ್‌
ನಿರ್ದೇಶಕ: ಅಶೋಕಕುಮಾರ್‌
ತಾರಾಗಣ: ಜಿತೇಂದ್ರ ಸೈಮನ್‌, ಜೋಸೈಮನ್‌, ನೀಪೋಪರ್‌, ವಯಾಲಾ


ಮಹಿಳೆಯರ ಸರಣಿ ಕೊಲೆಗಾರ, ವಿಕೃತಕಾಮಿ ಉಮೇಶ ಎಂಬಾತ ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರನ್ನು ಕಾದು ಕೊಲೆ ಮಾಡುವ ಮತ್ತು ಅವರ ಒಳಉಡುಪುಗಳನ್ನು ಹಾಕಿಕೊಂಡು ಆನಂದಪಡುವ ವಿಕೃತಜೀವಿ. ಅಂಥ ಅಪರಾಧಿಯೊಬ್ಬನ ಜೀವನ ವಿವರಗಳನ್ನು ಇಟ್ಟುಕೊಂಡು ’ಉಮೇಶ್‌’ ಎಂಬ ಈ ಸಿನಿಮಾ ಮಾಡಲಾಗಿದೆ.

ಆರಂಭದಲ್ಲಿ ಕೊಂಚ ಕುತೂಹಲ ಹುಟ್ಟಿಸುವ ಈ ಸಿನಿಮಾವನ್ನು ಅಶೋಕಕುಮಾರ್‌ ನಿರ್ದೇಶಿಸಿದ್ದಾರೆ. ಇದು ಅಪರಾಧಿಯೊಬ್ಬನ ಕೃತ್ಯಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರದ ಮಾದರಿಯಲ್ಲಿದೆ. ಅವನು ಅಪರಾಧ ಎಸಗುವ ರೀತಿ, ಅವನ ಜೈಲುವಾಸ, ಅವನ ಕ್ರೂರವಾದ ಮನಃಸ್ಥಿತಿ ಇತ್ಯಾದಿ ವಿವರಗಳನ್ನು ಹೆಣೆದು ಕಥೆ ಮಾಡಲಾಗಿದೆ. ಸಿನಿಮಾದಲ್ಲಿ ಕುತೂಹಲ ಹುಟ್ಟಿಸಲು ಅಮೆರಿಕ ವಿಶ್ವವಿದ್ಯಾಲಯವೊಂದರಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಅವನ ಕುರಿತಂತೆ ಅಧ್ಯಯನ ಮಾಡಲು ಬರುತ್ತಾರೆ. ಅವರಲ್ಲಿ ಒಬ್ಬಳು ಅಲ್ಲಿನದೇ ವಿದ್ಯಾರ್ಥಿನಿ, ಇನ್ನೊಬ್ಬಳು ಭಾರತೀಯ ವಿದ್ಯಾರ್ಥಿನಿ.

ಅವರಿಬ್ಬರೂ ಅವನನ್ನು ಜೈಲಿನಲ್ಲಿ ಭೇಟಿ ಮಾಡಿ ಅವನ ಕೃತ್ಯಗಳ ಕುರಿತ ವಿವರಗಳನ್ನು ಕಲೆಹಾಕುತ್ತಾರೆ. ಅವನು ಜೈಲಿನಿಂದ ತಪ್ಪಿಸಿಕೊಂಡು ಹೋಗುವುದು, ಅದಕ್ಕೆ ಇನ್ನಷ್ಟು ಮಹಿಳೆಯರು ಬಲಿಯಾಗುವುದು ಈ ಸಿನಿಮಾದ ಮತ್ತೊಂದು ಘಟ್ಟ. ಆ ಬಳಿಕವೂ ಅದೇ ಅದೇ ಅಪರಾಧಗಳನ್ನು ಅವನು ಎಸಗುತ್ತ ಹೋಗುತ್ತಾನೆ. ಅದರಲ್ಲಿ ವಿಶೇಷವೇನಿಲ್ಲ. ಸಿನಿಮಾ ಆರಂಭವಾಗುವುದೇ ಸರಣಿ ಹಂತಕರ ಇತಿಹಾಸದಿಂದ. ಹಾಗಾಗಿ ಇದು ಸರಣಿ ಹಂತಕರ ಸಾಕ್ಷ್ಯ್ಯಚಿತ್ರವಾಗಿ ಚಿತ್ರಿತವಾಗಿದೆ. 

ಭೀಕರ ಕೃತ್ಯಗಳನ್ನು ಎಸಗಿದ ವ್ಯಕ್ತಿಯ ನೈಜಜೀವನದ ವಿವರಗಳನ್ನು ಸಿನಿಮಾ ಮಾಡಬೇಕು, ಜನರ ಕಲ್ಪನೆಗಳನ್ನು ಪ್ರಚೋದಿಸಿ ಲಾಭ ಮಾಡಿಕೊಳ್ಳಬೇಕು ಎಂಬ ವ್ಯಾಪಾರಿ ಮನೋಭಾವವೊಂದು ಇಲ್ಲಿ ಕೆಲಸ ಮಾಡಿದಂತಿದೆ. ಮತ್ತು ಇಲ್ಲಿ ಸಾಮಾಜಿಕಬದ್ಧತೆ ಎಂಬುದು ಗೈರುಹಾಜರಾಗಿದೆ. ಸಿನಿಮಾದ ಚಿತ್ರಕಥೆಗೊಂದು ದಿಕ್ಕುದೆಸೆ ಇಲ್ಲ. ಜೈಲಿನಿಂದ ಬಹುಸುಲಭವಾಗಿ ತಪ್ಪಿಸಿಕೊಂಡ ಈ ವಿಕೃತಕಾಮಿ ಪೊಲೀಸರ ಕೈಗೆ ಸಿಗದೆ ಅದೇ ಕೃತ್ಯಗಳನ್ನು ಮುಂದುವರಿಸುವಲ್ಲಿ ಸಿನಿಮಾ ಮುಗಿಯುತ್ತದೆ.

ಈ ಬಗೆಯ ಸಿನಿಮಾವನ್ನು ಯಾಕೆ ಮಾಡಬೇಕು, ಅದರಿಂದ ಜನರಿಗೆ ಏನನ್ನು ಹೇಳುತ್ತಿದ್ದೇವೆ ಎಂಬ ಖಬರು ಇದರ ನಿರ್ದೇಶಕರಿಗಾಗಲೀ, ನಿರ್ಮಾಪಕರಿಗಾಗಲೀ ಇದ್ದಂತೆ ಕಾಣುವುದಿಲ್ಲ. ಇದ್ದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಮಹಿಳೆಯರನ್ನು ಎಚ್ಚರಿಸಲು ಇದನ್ನು ಮಾಡಿದ್ದರೆ ಈ ಬಗೆಯಲ್ಲಿ  ಮಾಡುವ ಅಗತ್ಯವಿರಲಿಲ್ಲ; ಅದಕ್ಕೆ ಬೇರೆ ಮಾಧ್ಯಮಗಳು ಇದ್ದವು.

ಸಿನಿಮಾ ಬಸವನಹುಳುವಿನ ರೀತಿಯಲ್ಲಿ ತೆವಳುವುದರಿಂದಾಗಿ ಕುತೂಹಲಿ ಪ್ರೇಕ್ಷಕರ ಸಿಟ್ಟನ್ನು ಮಾತ್ರ ಅತ್ಯಂತ ವೇಗವಾಗಿ ಹೆಚ್ಚಿಸುತ್ತದೆ. ಕನ್ನಡದ ಹಿರಿಯ ನಿರ್ದೇಶಕ ಜೋಸೈಮನ್ ಮತ್ತು ಅವರ ಮಗ ಜಿತೇಂದ್ರ ಸೈಮನ್‌, ನೀಪೋಪರ್‌, ವಯಾಲಾ ಇದರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಕ್ರಿಯಾಶೀಲ ಅಂಶಗಳಿಲ್ಲದ, ವಿಕೃತಿಗಳ ದಾಖಲೆಯಾದ ಈ ಸಿನಿಮಾ ಏನನ್ನು ಹೇಳಹೊರಟಿದೆ ಎಂಬುದು ಕೊನೆಯ ಕ್ಷಣದವರೆಗೂ ಪ್ರೇಕ್ಷಕರಿಗೆ ಗೊತ್ತಾಗುವುದಿಲ್ಲ. ಬಹುಶಃ ಇದೇ ಇದರ ಕುತೂಹಲಕರ ಅಂಶವಿರಬೇಕು! ಅಸಹಜ ವ್ಯಕ್ತಿಯೊಬ್ಬನ ಜೀವವಿರೋಧಿ ಕೃತ್ಯಗಳನ್ನು ತೋರಿಸುವಲ್ಲೇ ನಿರ್ದೇಶಕರ ಶ್ರಮ ವ್ಯಯವಾಗಿದೆ. ನಿರ್ದೇಶಕ ಅಶೋಕಕುಮಾರ್ ಅವರ ಈ ಕೆಲಸ ಈಗಾಗಲೇ ಇಂಥ ಸಿನಿಮಾಗಳಿಂದ ನೊಂದಿರುವ ಪ್ರೇಕ್ಷಕರ ತಲೆನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದಷ್ಟೆ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT