ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಸೋರಿಕೆ ಪರಿಹಾರ ದೂರ

Last Updated 28 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ಉಲ್ಬಣಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಅಸಮರ್ಪಕ ನಿರ್ವಹಣೆ ಮತ್ತು ದೂರದೃಷ್ಟಿಯ ಕೊರತೆಯೇ ಪ್ರಮುಖ ಕಾರಣ. ಪ್ರಸರಣ ಮತ್ತು ವಿತರಣಾ ನಷ್ಟದ ಅಂಕಿ-ಅಂಶಗಳು ಹಾಗೂ ಅನುಷ್ಠಾನಗೊಳ್ಳದ ಯೋಜನೆಗಳೇ ಇದನ್ನು ದೃಢಪಡಿಸುತ್ತವೆ.

 ಕಳೆದ ಮೂರು ವರ್ಷಗಳಿಂದ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಇದರಿಂದಾಗಿ ರೈತಾಪಿ ವರ್ಗ, ಕೈಗಾರಿಕೆಗಳು ಅಷ್ಟೇ ಅಲ್ಲದೆ ಸಾಮಾನ್ಯ ಜನರು ವಿದ್ಯುತ್‌ಗಾಗಿ ಪರದಾಡುವಂತಾಗಿದೆ. ಆದರೆ ಸರ್ಕಾರ ಮಾತ್ರ ಕೊಟ್ಟ ಮಾತಿನಂತೆ ನಷ್ಟವನ್ನು ಕಡಿಮೆ ಮಾಡಿಲ್ಲ. ಪ್ರಸರಣ ಮತ್ತು ವಿತರಣಾ ನಷ್ಟ ಶೇ 22.82ರಷ್ಟಿದೆ. ಅಲ್ಲದೆ ಶಂಕುಸ್ಥಾಪನೆ ನೆರವೇರಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನವೂ ಆಗಿಲ್ಲ.

2008ರ ಜುಲೈನಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾದ ಪರಿಣಾಮ ಸರ್ಕಾರ ಖರೀದಿಗೆ ಮುಂದಾಯಿತು. ಆಗಿನಿಂದ ಬಹುತೇಕ ನಿರಂತರವಾಗಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಹಲವು ಹೊಸ ಯೋಜನೆಗಳನ್ನು ಘೋಷಿಸಿ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ.

ರಾಜ್ಯದಲ್ಲಿನ ಒಟ್ಟು ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ 10,640 ಮೆಗಾವಾಟ್(ಕೇಂದ್ರ ಸರ್ಕಾರದ ಘಟಕಗಳಿಂದ ಬರುವ ಪಾಲು ಸೇರಿದಂತೆ ಎಲ್ಲ ಮೂಲಗಳಿಂದ). ಒಟ್ಟು ಸ್ಥಾಪಿತ ಸಾಮರ್ಥ್ಯದಷ್ಟು ಉತ್ಪಾದನೆ ಆಗುವುದಿಲ್ಲವಾದರೂ ಕನಿಷ್ಠ 6,371 ಮೆಗಾವಾಟ್ ಉತ್ಪಾದನೆಯಾಗಬೇಕು. ಆದರೆ ಮಂಗಳವಾರ ಉತ್ಪಾದನೆಯಾಗಿರುವುದು 5,804 ಮೆಗಾವಾಟ್ ಮಾತ್ರ. ಸದ್ಯ 6,800 ಮೆಗಾವಾಟ್ ವಿದ್ಯುತ್ ಬೇಡಿಕೆ ಇದ್ದು, ಪೂರೈಕೆ ಮತ್ತು ಬೇಡಿಕೆ ನಡುವೆ ಒಂದು ಸಾವಿರ ಮೆಗಾವಾಟ್ ಅಂತರ ಇದೆ.

ರಾಜ್ಯವು ಜಲ ಮತ್ತು ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮೇಲೆ ಹೆಚ್ಚಿನ ಅವಲಂಬನೆಯಾಗಿದೆ. ಶಾಖೋತ್ಪನ್ನ ಘಟಕಗಳಿಂದ ಒಟ್ಟು 2,220 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಬೇಕು. ಆದರೆ ಮಂಗಳವಾರ 993 ಮೆಗಾವಾಟ್ ಮಾತ್ರ ಉತ್ಪಾದನೆಯಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎಂಟು ಘಟಕಗಳಿಂದ ಒಟ್ಟು 1,720 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಬೇಕು. ಸದ್ಯ ಅಲ್ಲಿ ಐದು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದಲೂ ಪೂರ್ಣ ಪ್ರಮಾಣದ ವಿದ್ಯುತ್ ಲಭ್ಯವಾಗುತ್ತಿಲ್ಲ.

ಆರ್‌ಟಿಪಿಎಸ್‌ನ ಮೂರು ಘಟಕಗಳು ಸ್ಥಗಿತಗೊಂಡಿವೆ. ಎರಡು ಘಟಕಗಳನ್ನು ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಲಾಗಿದೆ. ಒಂದು ಘಟಕವನ್ನು ತಾಂತ್ರಿಕ ಕಾರಣಕ್ಕಾಗಿ ನಿಲ್ಲಿಸಲಾಗಿದೆ. ಕಳೆದ ವಾರ ಸ್ವಲ್ಪ ಮಟ್ಟಿಗೆ ಒಣ ಕಲ್ಲಿದ್ದಲಿನ ಕೊರತೆ ಇತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ತಲಚೇರ್ ಮತ್ತು ವೆಸ್ಟ್‌ಕೋಲ್ ಮೈನ್‌ನಿಂದ ನಿತ್ಯ ನಾಲ್ಕು ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಇದಲ್ಲದೆ 1.63 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ `ಪ್ರಜಾವಾಣಿ~ಗೆ ತಿಳಿಸಿದರು.

15 ದಿನಕ್ಕೆ ಸಂಗ್ರಹ: ಆರ್‌ಟಿಪಿಎಸ್‌ನಲ್ಲಿ 15 ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲಿನ ಸಂಗ್ರಹ ಮಾಡಿಕೊಳ್ಳಬಹುದು. ಈಗ ಹತ್ತು ದಿನಕ್ಕೆ ಸಾಕಾಗುವಷ್ಟು ಸಂಗ್ರಹವಿದೆ. ಆಂಧ್ರಪ್ರದೇಶದ ಸಿಂಗರೇಣಿಯಿಂದ ಕೆಲ ದಿನಗಳಿಂದ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯವಾಗದ ಕಾರಣ ಸ್ವಲ್ಪಮಟ್ಟಿನ ಸಮಸ್ಯೆ ಇದೆ. ಆದರೆ ಇದೇ ಕಾರಣಕ್ಕೆ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತಹ ಸ್ಥಿತಿ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೂರು ಮತ್ತು ಏಳನೇ ಘಟಕಗಳು ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಂಡಿದ್ದು, ಕ್ರಮವಾಗಿ ಅಕ್ಟೋಬರ್ 10 ಮತ್ತು 15ರಂದು ಪುನಃ ಆರಂಭವಾಗಲಿವೆ. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವ 8ನೇ ಘಟಕ 3-4 ದಿನಗಳಲ್ಲಿ ಶುರುವಾಗಲಿದೆ ಎಂದರು.

ಮೀನಮೇಷ: ಆರ್‌ಟಿಪಿಎಸ್‌ನ ಎರಡು ಘಟಕಗಳು ಅತ್ಯಂತ ಹಳೆಯದಾಗಿದ್ದು, ಅವುಗಳ ಬದಲಾವಣೆಗೆ ವರ್ಷದ ಹಿಂದೆಯೇ ತೀರ್ಮಾನಿಸಿದ್ದರೂ, ಇದುವರೆಗೂ ಕಾರ್ಯಗತಗೊಂಡಿಲ್ಲ. ವರ್ಷದ ಹಿಂದೆಯೇ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನ ಸಭೆಯಲ್ಲಿಯೇ ಈ ಬಗ್ಗೆ ಹೇಳಿಕೆ ನೀಡಿದ್ದರು. ಆ ನಂತರ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಆಗಿಲ್ಲ.

ಹಳೆಯ ಘಟಕಗಳು ಮತ್ತು ಗುಣಮಟ್ಟದ ಕಲ್ಲಿದ್ದಲಿನ ಕೊರತೆಯಿಂದಾಗಿ ಅಲ್ಲಿನ ಘಟಕಗಳಲ್ಲಿ ಸ್ಥಾಪಿತ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ.

ಇದಲ್ಲದೆ ಬಳ್ಳಾರಿ ಘಟಕದಲ್ಲಿ ಆಗಿಂದಾಗ್ಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ಶಾಶ್ವತವಾಗಿ ಸರಿಪಡಿಸುವ ಕೆಲಸ ಆಗಿಲ್ಲ. ಹಳೆಯ ಘಟಕಗಳ ಯಂತ್ರಗಳನ್ನು ಬದಲಾಯಿಸಿ ಶಾಖೋತ್ಪನ್ನ ಘಟಕಗಳಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ ಖರೀದಿ ಪ್ರಶ್ನೆಯೇ ಬರುವುದಿಲ್ಲ.
ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಸದ್ಯ ಗರಿಷ್ಠ 50ದಶಲಕ್ಷ ಯೂನಿಟ್ ಜಲವಿದ್ಯುತ್ ಉತ್ಪಾನೆಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಉತ್ಪಾದನೆ ಮುಂದುವರಿದರೆ ನೀರಿನ ಪ್ರಮಾಣ ಕಡಿಮೆಯಾಗಿ ಬರುವ ಬೇಸಿಗೆಯಲ್ಲಿ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ.

ತಪ್ಪದ ನಷ್ಟ
ವಿದ್ಯುತ್ ಪ್ರಸರಣ ಮತ್ತು ವಿತರಣಾ ನಷ್ಟ ಕಡಿಮೆ ಮಾಡುವುದಾಗಿ ಸರ್ಕಾರ ಹೇಳುತ್ತಿದ್ದರೂ, ವಾಸ್ತವವಾಗಿ ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. 2008-09ರಲ್ಲಿ ಶೇ 4.30ರಷ್ಟಿದ್ದ ಪ್ರಸರಣ ನಷ್ಟ ಈಗ ಶೇ 3.82ರಷ್ಟಿದೆ. ಶೇ 19.26ರಷ್ಟಿದ್ದ ವಿತರಣಾ ನಷ್ಟ ಈಗ ಶೇ 19ರಷ್ಟಿದೆ. ಇಲಾಖೆ ಹಾಕಿಕೊಂಡಿದ್ದ ಗುರಿ ಪ್ರಕಾರ 2009-10ರಲ್ಲಿಯೇ ವಿತರಣಾ ನಷ್ಟ ಶೇ 17.51ಕ್ಕೆ ಇಳಿಯಬೇಕಾಗಿತ್ತು.

ಇದಲ್ಲದೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶೇ 2ರಿಂದ 3ರಷ್ಟು ವಿದ್ಯುತ್ ಕಳ್ಳತನವಿದೆ. ವಾಸ್ತವವಾಗಿ ನೋಡಿದರೆ ಕಳ್ಳತನ ಪ್ರಮಾಣ ಇದಕ್ಕಿಂತ ಹೆಚ್ಚಾಗಿದೆ.

ನೀರಿನ ಮಟ್ಟ
ಪ್ರಮುಖ ಜಲವಿದ್ಯುತ್ ಉತ್ಪಾ ದನಾ ಜಲಾಶಯಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಮಾಣಿಯಲ್ಲಿ ನಿತ್ಯ 28.85 ದಶಲಕ್ಷ ಯೂನಿಟ್‌ನಂತೆ ಬರುವ ಜೂನ್‌ವರೆಗೆ 7962 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 6623 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿತ್ತು. ಲಿಂಗನಮಕ್ಕಿಯಲ್ಲಿ ಶೇ 96.27, ಸೂಪಾದಲ್ಲಿ ಶೇ 84 ಮತ್ತು ಮಾಣಿಯಲ್ಲಿ ಶೇ 94.66ರಷ್ಟು ನೀರಿನ ಸಂಗ್ರಹವಿದೆ.

ಹೀಗಾಗಿ ಬರುವ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿಗೆ ಕಾಡಲಾರದು. ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕಾಗಿಯೇ ಅಕ್ಟೋಬರ್‌ನಿಂದಲೇ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಮಂಗಳವಾರ 52.23 ದಶಲಕ್ಷ ಯೂನಿಟ್ ಜಲವಿದ್ಯುತ್ ಉತ್ಪಾದನೆಯಾಗಿದೆ. ಶರಾವತಿ, ವಾರಾಹಿ ಸೇರಿದಂತೆ ಜಲವಿದ್ಯುತ್ ಉತ್ಪಾದನಾ ಘಟಕಗಳಿಂದ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಖರೀದಿಯೂ ಸೇರಿದಂತೆ ಎಲ್ಲ ಮೂಲಗಳಿಂದ ಒಟ್ಟಾರೆ 142 ದಶಲಕ್ಷ ಯೂನಿಟ್ ಪೂರೈಕೆಯಾಗಿದೆ. ಬೇಡಿಕೆ ಪ್ರಮಾಣ 160 ದಶಲಕ್ಷ ಯೂನಿಟ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT