ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಉಪ ನಿರ್ದೇಶಕರ ವಿರುದ್ಧ ತನಿಖೆ

ಮೈಸೂರು ಅರಮನೆ ಆಡಿಯೋ ಕಿಟ್‌ ಹಗರಣ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಅರಮನೆ ವೀಕ್ಷಿಸಲು ಆಗಮಿಸುವ ಪ್ರವಾಸಿ­ಗರಿಗೆ ಒದಗಿಸುತ್ತಿದ್ದ ಆಡಿಯೋ ಕಿಟ್‌ ಹಣ ಖಾಸಗಿ ಸಂಸ್ಥೆಯೊಂದರ ಪಾಲಾಗುತ್ತಿರುವುದು ಪತ್ತೆಯಾಗಿದೆ. ಇದಕ್ಕೆ ಕಾರಣರಾದ ಅರಮನೆ ಮಂಡಳಿ ನಿವೃತ್ತ ಉಪ ನಿರ್ದೇಶಕರ ವಿರುದ್ಧ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.

2008ರಿಂದ ಈವರೆಗೆ  ದೆಹಲಿ ಮೂಲದ ನ್ಯಾರೋಕ್ಯಾಸ್ಟರ್‌ ಸಂಸ್ಥೆಗೆ ರೂ 3 ಕೋಟಿಯಷ್ಟು ಹಣ ಸಂದಾಯವಾಗಿದೆ. ಒಪ್ಪಂದದ ಪ್ರಕಾರ ಇನ್ನೂ ₨ 3 ಕೋಟಿಯಷ್ಟು ಹಣ ಸಂಸ್ಥೆಗೆ ಸಂದಾಯ­ವಾಗಲಿದೆ.

ಸರ್ಕಾರಕ್ಕೆ ನಿರಂತರವಾಗಿ ನಷ್ಟವಾಗುತ್ತಿರುವುದನ್ನು ಗಮನಿಸಿದ ಅರ­ಮನೆ ಮಂಡಳಿ ಈಗ ಎಚ್ಚೆತ್ತುಕೊಂಡು ತನಿಖೆಗೆ ಮುಂದಾಗಿದೆ. ಯಾವುದೇ ಬಂಡವಾಳವಿಲ್ಲದೆ ಹಣ ಬರುತ್ತಿದ್ದರೂ ನ್ಯಾರೋಕ್ಯಾಸ್ಟರ್‌ ಸಂಸ್ಥೆ ಸರ್ಕಾರಕ್ಕೆ ರೂ 57 ಲಕ್ಷ ಸೇವಾ ತೆರಿಗೆ ಪಾವತಿ ಮಾಡದೇ ಇರು­ವುದು ಕೂಡ ಪತ್ತೆಯಾಗಿದೆ. ಇದನ್ನು ಈಗ ವಸೂಲು ಮಾಡಿ­ಕೊಳ್ಳಲಾಗಿದೆ.

ವಿವಾದದ ಮೂಲ: 13 ವರ್ಷ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ­ರಾಗಿದ್ದ ಪಿ.ವಿ.ಅವರಾದಿ ಅವರು ನಿವೃತ್ತಿಯ ನಂತರ  ನ್ಯಾರೋಕ್ಯಾಸ್ಟರ್‌ ಸಂಸ್ಥೆಯ ಪ್ರಾಂತೀಯ ಅಧಿಕಾರಿಯಾಗಿ ನೇಮಕ­ವಾಗಿದ್ದು  ವಿವಾದಕ್ಕೆ ಕಾರಣವಾಗಿದೆ.

ಅರಮನೆಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಅನುಕೂಲ­ವಾಗುವ ದೃಷ್ಟಿಯಿಂದ HARK (Handy Audio Research Kit)   ಕಿಟ್‌ ಸೌಲಭ್ಯ ಒದಗಿಸಲು ಅರಮನೆ ಮಂಡಳಿ ನಿರ್ಧರಿಸಿತ್ತು.

ಕೇಂದ್ರ ಸರ್ಕಾರದ I.T.D.C ಸಂಸ್ಥೆ N.I.I.T. ಸಹಕಾರದೊಂದಿಗೆ ಈ ಕಿಟ್‌ ಸಿದ್ಧಪಡಿಸಲು ಮಂಡಳಿಗೆ ಸೂಚಿಸಿತು. ಇದರ ವೆಚ್ಚ ₨ 35.93 ಲಕ್ಷ ಎಂದೂ ಹೇಳಿತು. ಆದರೆ ಅವರಾದಿ ಅವರು ಈ ಸಲಹೆ­ಯನ್ನು ತಿರಸ್ಕರಿಸಿ ದೆಹಲಿ ಮೂಲದ ನ್ಯಾರೋಕ್ಯಾಸ್ಟರ್‌ ಸಂಸ್ಥೆಗೆ ಆಡಿಯೋ ಕಿಟ್‌ ಒದಗಿಸುವ ಜವಾಬ್ದಾರಿಯನ್ನು ನೀಡಿದರು ಎಂದು ಆರೋಪಿಸಲಾಗಿದೆ.

ಇದಕ್ಕೂ ಮೊದಲು ಆಡಿಯೊ ಕಿಟ್‌ ಒದಗಿಸಲು ಟೆಂಡರ್‌ ಕರೆಯ­ಲಾಯಿತು. ಆಗ ನ್ಯಾರೋಕ್ಯಾಸ್ಟರ್‌ ಸಂಸ್ಥೆ ಮತ್ತು ಸುಹಾಸ್‌ ಗ್ರಾಫಿಕ್ಸ್‌ ಸಂಸ್ಥೆಯವರು ದರ ಪತ್ರವನ್ನು ನೀಡಿದವು. ಆದರೆ ಈ ಪತ್ರಗಳ ಮೇಲೆ ಯಾರ ಸಹಿಯೂ ಇರಲಿಲ್ಲ. ಆದರೂ ಅವರಾದಿ ಅವರು ನ್ಯಾರೋಕ್ಯಾಸ್ಟರ್‌ ಸಂಸ್ಥೆಯ ದರಪತ್ರವನ್ನು ಒಪ್ಪಿಕೊಂಡರು. ಟೆಂಡರ್‌ ಕರೆಯುವುದಕ್ಕೆ ಮೊದಲು ಕರಡು ಟೆಂಡರ್‌ಗೆ ಕಾಯನಿರ್ವಾಹಕ ಅಧಿಕಾರಿಯ ಒಪ್ಪಿಗೆ ಪಡೆಯಬೇಕು ಎನ್ನುವುದು ನಿಯಮ. ಆದರೆ ಅವರಾದಿ ಅವರು ಹಿರಿಯ ಅಧಿಕಾರಿ­ಗಳ ಅನು­ಮತಿ ಪಡೆಯದೆ ಟೆಂಡರ್‌ ಕರೆದರು. ಅಲ್ಲದೆ ಕಿಟ್‌ಗೆ ಬೇಕಾದ ಸಾಫ್ಟ್‌­ವೇರ್‌ ತಯಾರಿಸಲು ಬೇಕಾದ ವೆಚ್ಚವನ್ನು ಅರಮನೆ ಮಂಡಳಿಯೇ ಭರಿಸುತ್ತದೆ ಎಂಬ ನಿಯಮ­ವನ್ನೂ ಸೇರಿಸಿದರು. ಇದರಿಂದ ಅರಮನೆ ಮಂಡಳಿಗೆ ₨ 30 ಲಕ್ಷ ನಷ್ಟವಾಯಿತು ಎಂದೂ ದೂರಲಾಗಿದೆ.

ಟೆಂಡರ್‌ ಪ್ರಕ್ರಿಯೆ ಮುಗಿದ ನಂತರ 20–3–2008­ರಂದು ಅರಮನೆ ಮಂಡಳಿ ನ್ಯಾರೋಕ್ಯಾಸ್ಟರ್‌ ಸಂಸ್ಥೆ­ಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದದ ಪ್ರಕಾರ ಅರಮನೆಗೆ ಭೇಟಿ ನೀಡುವ ಎಲ್ಲ ವಿದೇಶಿ ಪ್ರವಾಸಿಗರು ಆಡಿಯೋ ಕಿಟ್‌ ಪಡೆಯುವುದು ಕಡ್ಡಾಯ. ಇದಕ್ಕಾಗಿ ಅವರು ನೀಡುವ ನೂರು ರೂಪಾಯಿಗಳಲ್ಲಿ 80 ರೂಪಾಯಿ ಸಂಸ್ಥೆಗೆ ಮತ್ತು 20 ರೂಪಾಯಿ ಅರಮನೆ ಮಂಡಳಿಗೆ ಹೋಗುತ್ತದೆ. ದೇಸಿ ಪ್ರವಾಸಿಗರು ಇಷ್ಟಪಟ್ಟರೆ ನೂರು ರೂಪಾಯಿ ನೀಡಿ ಆಡಿಯೋ ಕಿಟ್‌ ಸೌಲಭ್ಯ ಬಳಸಿಕೊಳ್ಳ­ಬಹುದು. ಇದರಲ್ಲಿ 75 ರೂಪಾಯಿ ಸಂಸ್ಥೆಗೆ ಹಾಗೂ 25 ರೂಪಾಯಿ ಅರಮನೆ ಮಂಡಳಿಗೆ ಹೋಗುತ್ತದೆ.

2008ರ ನವೆಂಬರ್‌ನಿಂದ 2013ರ ಮಾರ್ಚ್‌ವರೆಗೆ ಮೈಸೂರು ಅರಮನೆಗೆ 3,37,487 ವಿದೇಶಿಗರು ಭೇಟಿ ನೀಡಿದ್ದಾರೆ. ಇವರೆ­ಲ್ಲರೂ ಇಷ್ಟ ಇಲ್ಲದಿದ್ದರೂ ಕಡ್ಡಾಯವಾಗಿ ನೂರು ರೂಪಾಯಿ ಕೊಟ್ಟು ಆಡಿಯೋ ಕಿಟ್‌ ಸೌಲಭ್ಯ ಪಡೆದುಕೊಂಡಿದ್ದು ಅದರ ಬಾಬ್ತು 2,69,98,960 ರೂಪಾಯಿ ನ್ಯಾರೋಕ್ಯಾಸ್ಟರ್‌ ಸಂಸ್ಥೆಗೆ ಹೋಗಿದೆ. ಇದೇ ಅವಧಿಯಲ್ಲಿ 32,524 ಸ್ವದೇಶಿ ಪ್ರವಾಸಿಗರೂ ಕೂಡ ಈ ಸೌಲಭ್ಯ ಬಳಸಿಕೊಂಡಿದ್ದು ಅದರ ಬಾಬ್ತು 32,52,400 ರೂಪಾಯಿ ಸಂಸ್ಥೆಗೆ ಹೋಗಿದೆ. ಈ ಅವಧಿಯಲ್ಲಿ ಒಟ್ಟು 2,94,­38,260 ರೂಪಾಯಿ ಸಂಸ್ಥೆಯ ಪಾಲಾಗಿದೆ. 2018ರವರೆಗೂ ಈ ಒಪ್ಪಂದ ಚಾಲ್ತಿಯಲ್ಲಿರುವುದರಿಂದ ಇನ್ನೂ ಸುಮಾರು 3 ಕೋಟಿ ರೂಪಾಯಿ ನ್ಯಾರೋಕ್ಯಾಸ್ಟರ್‌ ಸಂಸ್ಥೆಗೆ ಹೋಗಲಿದೆ.

ಕಿಟ್‌ ಸಾಫ್ಟ್‌ವೇರ್‌ ಅಭಿವೃದ್ಧಿಗೆ ಅರಮನೆ ಮಂಡಳಿ 30 ಲಕ್ಷ ರೂಪಾಯಿ ನೀಡಿರುವುದರಿಂದ ಕಿಟ್‌ ಅರಮನೆ ಮಂಡಳಿಯ ಸ್ವತ್ತಾಗುವುದರ ಬದಲು ಅದು ಖಾಸಗಿ ಸಂಸ್ಥೆಯ ಸ್ವತ್ತಾಗಿದೆ. ಅಲ್ಲದೆ ಅದರ ನಿರ್ವಹಣೆ­­ಗಾಗಿ ಸಂಸ್ಥೆ ಬಹುಪಾಲು ಹಣವನ್ನೂ ಪಡೆದುಕೊಳ್ಳು­ತ್ತಿದೆ. ಈ ರೀತಿ ಒಪ್ಪಂದ ಮಾಡಿಕೊಂಡಿರುವ ಅವರಾದಿ ಅವರು ಈಗ ನ್ಯಾರೋ­ಕ್ಯಾಸ್ಟರ್‌ ಸಂಸ್ಥೆಯ ದಕ್ಷಿಣ ಭಾರತದ ಪ್ರಾಂತೀಯ ಅಧಿಕಾರಿ­ಯಾಗಿ ನೇಮಕಗೊಂಡಿದ್ದಾರೆ. ಇದು ಕನಾರ್ಟಕ ನಾಗರಿಕ ಸೇವಾ ನಿಯಮದ ಪ್ರಕಾರ ತಪ್ಪಾಗುತ್ತದೆ ಎಂದೂ ಆರೋಪಿಸಲಾಗಿದೆ.

ಅವರಾದಿ ನಿವೃತ್ತರಾದ ನಂತರ ಅರಮನೆ ಮಂಡಳಿ ಉಪ ನಿದೇರ್ಶಕರಾಗಿ ಬಂದ ಟಿ.ಎಸ್‌.ಸುಬ್ರಹ್ಮಣ್ಯ ಈ ಹಗರಣವನ್ನು ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆ ನಡೆಸಿ ವರದಿ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಅವರಾದಿ ಅವರು 13 ವರ್ಷ ಉಪ ನಿರ್ದೇಶಕರಾಗಿದ್ದ ಅವಧಿ­ಯಲ್ಲಿ ಅರಮನೆ ವಾಹನ ನಿಲುಗಡೆ ಶುಲ್ಕ 53 ಲಕ್ಷ ರೂಪಾಯಿ ಬಂದಿತ್ತು. ಈ ಬಾರಿ ಎ–ಟೆಂಡರ್‌ ಕರೆದಿದ್ದರಿಂದ ಒಂದೇ ವರ್ಷ ವಾಹನ ನಿಲುಗಡೆ ಶುಲ್ಕ 67,77,777 ರೂಪಾಯಿ ಬಂದಿದೆ. ಕಳೆದ 2 ವರ್ಷದಲ್ಲಿ ಅರಮನೆ ಮಂಡಳಿ ಸರ್ಕಾರಕ್ಕೆ 5 ಕೋಟಿ ರೂಪಾಯಿ ಆದಾಯವನ್ನೂ ನೀಡಿದೆ.

ಮೈಸೂರು ಅರಮನೆ ವೀಕ್ಷಿಸಲು ಆಗಮಿಸುವ ಪ್ರವಾಸಿ­ಗರಿಗೆ ಒದಗಿಸುತ್ತಿದ್ದ ಆಡಿಯೋ ಕಿಟ್‌ ಹಣ ಖಾಸಗಿ ಸಂಸ್ಥೆಯೊಂದರ ಪಾಲಾಗುತ್ತಿರುವುದು ಪತ್ತೆಯಾಗಿದೆ. ಇದಕ್ಕೆ ಕಾರಣರಾದ ಅರಮನೆ ಮಂಡಳಿ ನಿವೃತ್ತ ಉಪ ನಿರ್ದೇಶಕರ ವಿರುದ್ಧ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.

ಏನಿದು ಆಡಿಯೋ ಕಿಟ್‌
ಮೈಸೂರು ಅರಮನೆ ವೀಕ್ಷಿಸಲು ಆಗಮಿಸುವ ಪ್ರವಾಸಿ­ಗರಿಗೆ ಒದಗಿಸುತ್ತಿದ್ದ ಆಡಿಯೋ ಕಿಟ್‌ ಹಣ ಖಾಸಗಿ ಸಂಸ್ಥೆಯೊಂದರ ಪಾಲಾಗುತ್ತಿರುವುದು ಪತ್ತೆಯಾಗಿದೆ. ಇದಕ್ಕೆ ಕಾರಣರಾದ ಅರಮನೆ ಮಂಡಳಿ ನಿವೃತ್ತ ಉಪ ನಿರ್ದೇಶಕರ ವಿರುದ್ಧ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.

‘ರೂ 20 ಕೋಟಿ ಇತ್ತು’
‘ನಾನು ನಿವೃತ್ತಿಯಾಗುವಾಗ 20 ಕೋಟಿ ರೂಪಾಯಿ ಠೇವಣಿಯನ್ನು ಸರ್ಕಾರದಲ್ಲಿ ಇಟ್ಟಿದ್ದೆ. ಅರಮನೆ ಮಂಡಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರು. ಜಿಲ್ಲಾಧಿಕಾರಿ ಕಾರ್ಯನಿರ್ವಾಹಕ ಅಧಿಕಾರಿ. ಅವರೆಲ್ಲರ ಒಪ್ಪಿಗೆ ಪಡೆದೇ ಕಿಟ್‌ ಸೌಲಭ್ಯ ಒದಗಿಸಿದ್ದೇನೆ. ಇದರಲ್ಲಿ ಅವ್ಯವಹಾರ ನಡೆದಿಲ್ಲ. ತನಿಖೆ ನಡೆಸುವುದಾದರೆ ಇವರೆಲ್ಲರ ವಿರುದ್ಧ ತನಿಖೆ ನಡೆಸಬೇಕಾಗುತ್ತದೆ. ನಾನು ಅರಮನೆ ಮಂಡಳಿಯ ಉಪ ನಿರ್ದೇಶಕನಾಗಿದ್ದ ಅವಧಿಯಲ್ಲಿ ನಡೆದ ಎಲ್ಲ ಕೆಲಸಗಳ ಬಗ್ಗೆ ತನಿಖೆ ನಡೆಸಲಿ. ನಾನು ನ್ಯಾರೋಕ್ಯಾಸ್ಟರ್‌ ಸಂಸ್ಥೆಯ  ಉದ್ಯೋಗದಲ್ಲಿ ಇಲ್ಲ’
–ಪಿ.ವಿ.ಅವರಾದಿ, ಮೈಸೂರು ಅರಮನೆ ಮಂಡಳಿ ನಿವೃತ್ತ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT