ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಿವೃತ್ತ ಪೊಲೀಸರಿಗೆ ಗೌರವ ಸಲ್ಲಿಕೆ ಅಗತ್ಯ'

Last Updated 3 ಏಪ್ರಿಲ್ 2013, 6:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸದಾ ಸಾರ್ವಜನಿಕರ ರಕ್ಷಣೆಯಲ್ಲಿ ಬದುಕು ಸವೆಸುವ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿವೃತ್ತಿಯ ನಂತರ ಆತಂಕವಿಲ್ಲದೇ ಜೀವನ ಸಾಗಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜಕ್ಕೆ ಸೇರಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಹೇಳಿದರು.

ಇಲ್ಲಿನ ಗೋಕುಲ ಗ್ರಾಮದ ಹೊಸ ಸಿಎಆರ್ ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್‌ಧ್ವಜಗಳ ಮಾರಾಟದಿಂದ ಬಂದ ಹಣವನ್ನು ಪೊಲೀಸರು ನಿವೃತ್ತರಾದ ನಂತರ ಅವರ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯಗಳನ್ನು ನೀಡಲು ಬಳಸಲಾಗುತ್ತಿದೆ. ಧ್ವಜಗಳನ್ನು ಖರೀದಿಸುವ ಮೂಲಕ ಸಾರ್ವಜನಿಕರು ಪೊಲೀಸರ ಕರ್ತವ್ಯವನ್ನು ಗೌರವಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿದ ನಿವೃತ್ತ ಡಿಸಿಪಿ ಎಸ್.ಎಂ.ಪ್ರತಾಪನ್ ಮಾತನಾಡಿ, ಪೊಲೀಸ್ ಕೆಲಸ ಸಾರ್ವಜನಿಕರ ಸೇವೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಕಿರಿಯರು ಅದರ ಸದುಪಯೋಗಪಡಿಸಿಕೊಂಡು ಉತ್ತಮ ಹೆಸರು ಪಡೆಯುವಂತೆ ಸಲಹೆ ನೀಡಿದರು.

1965ರಿಂದ ಪ್ರತೀ ವರ್ಷ ಏಪ್ರಿಲ್ 2ರಂದು ಪೊಲೀಸ್ ಧ್ವಜ ದಿನಾಚರಣೆ ಆಚರಿಸಿ ಕರ್ತವ್ಯ ನಿಷ್ಠ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ ಸ್ವಾಗತಕೋರಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ಪಡೆದ ಕಮೀಷನರೇಟ್ ವ್ಯಾಪ್ತಿಯ ಐವರು ಪೊಲೀಸರ ಹೆಸರುಗಳನ್ನು ಪ್ರಕಟಿಸಿದರು.

ಅಪರಾಧ ವಿಭಾಗದ ಡಿಸಿಪಿ ಶ್ರೀನಾಥ ಜೋಶಿ ವಂದನಾರ್ಪಣೆ ಮಾಡಿದರು. ಉದ್ಯಮಿ ಬಿ.ಎಸ್.ವಿ.ಪ್ರಸಾದ್ ಎಂಬುವವರು ಇದೇ ಸಂದರ್ಭದಲ್ಲಿ 25 ಸಾವಿರ ರೂಪಾಯಿ ಮೊತ್ತದ ಚೆಕ್ಕನ್ನು ಪೊಲೀಸ್ ಕಲ್ಯಾಣ ನಿಧಿಗೆ ನೀಡಿದರು.

`ಪೊಲೀಸರಿಗೆ ಸವಲತ್ತು ನೀಡಿ'
ಧಾರವಾಡ
: ಜನರ ಪ್ರಾಣ, ಆಸ್ತಿ ರಕ್ಷಣೆ ಮಾಡುವ ಪೊಲೀಸರಿಗೆ ಸರ್ಕಾರ ಹೆಚ್ಚು ಸೌಲಭ್ಯಗಳನ್ನು ನೀಡಬೇಕು. ಈಗ ವೃತ್ತಿ ಯಲ್ಲಿರುವ ಪೊಲೀಸರಿಗೆ ನೀಡಲಾಗುತ್ತಿರುವ `ಆರೋಗ್ಯ ಭಾಗ್ಯ' ಯೋಜನೆಯನ್ನು ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ವಿಸ್ತರಿಸಬೇಕು ಎಂದು ನಿವೃತ್ತ ಪಿಎಸ್‌ಐ ವೈ.ಎಂ.ಹಾಲರ್ ಮನವಿ ಮಾಡಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, `ರಜೆ ಪಡೆಯದೇ ಕಾರ್ಯನಿರ್ವಹಿಸುವ ಪೊಲೀಸರಿಗೆ ನೀಡಲಾಗುತ್ತಿರುವ 100 ರೂಪಾಯಿ ಭತ್ಯೆಯನ್ನು 500ಕ್ಕೆ ಹೆಚ್ಚಿಸಬೇಕು' ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪಿ.ಏಕನಾಥಪ್ಪ ಹಾಗೂ ತಂಡದವರು ಗೌರವ ರಕ್ಷೆ ನೀಡಿದರು.ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್‌ಪಿ ಎಚ್.ಎ.ದೇವರಹೊರು ಸ್ವಾಗತಿಸಿದರು. ಕಲಘಟಗಿ ಪಿಎಸ್‌ಐ ಅಮರೇಶ ಬಾರಕೇರ ವಂದಿಸಿದರು. ಎನ್.ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯ ಪ್ರಾಚಾರ್ಯ ಡಾ.ವೈ.ಪಿ.ಕಲ್ಲನಗೌಡರ ನಿರೂಪಿಸಿದರು.ಶಿವಾನಂದ ಜಿ.ಸಿ. ಪರೇಡ್ ಕಮಾಂಡರ್ ಆಗಿ ಪಥ ಸಂಚಲನದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT