ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಲೆಫ್ಟಿನೆಂಟ್ ಜನರಲ್ ಬ್ರಾರ್ ಮೇಲೆ ದಾಳಿ: 12 ಆರೋಪಿಗಳ ಸೆರೆ, ತನಿಖೆ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ಬ್ಲೂ ಸ್ಟಾರ್~ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಸ್. ಬ್ರಾರ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ.

 ಗುರುವಾರ 40 ವರ್ಷದ ಮಹಿಳೆ ಹಾಗೂ ಇತರ ಮೂವರನ್ನು ಬಂಧಿಸಲಾಗಿತ್ತು . ಶುಕ್ರವಾರ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಎಂಟು ಜನರನ್ನು ಭಯೋತ್ಪಾದನೆ ನಿಗ್ರಹ ಕಮಾಂಡ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

`ಸೆಪ್ಟೆಂಬರ್ 30ರಂದು ಕೇಂದ್ರ ಲಂಡನ್ನಿನಲ್ಲಿ ಬ್ರಾರ್ ಮೇಲೆ ನಡೆದ ದಾಳಿ ಸಂಬಂಧ, ಹತ್ಯೆ ಮಾಡಲು ಯತ್ನಿಸಿದ ಸಂಶಯದ ಮೇಲೆ ಶುಕ್ರವಾರ ಮತ್ತೆ ಎಂಟು ಜನರನ್ನು ಬಂಧಿಸಲಾಗಿದೆ~  ಎಂದು ಮೆಟ್ರೊಪಾಲಿಟನ್ ಪೊಲೀಸ್ ಸೇವೆಗಳ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

`ಹಿಲ್ಲಿಂಗ್ಡನ್ ಬೊರೊದಲ್ಲಿರುವ ನಿವಾಸವೊಂದರಲ್ಲಿ 38 ವರ್ಷದ ಮಹಿಳೆ ಮತ್ತು 42 ವರ್ಷ  ವ್ಯಕ್ತಿಯೊಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ. ದಾಳಿ ನಡೆಸಿದ ಆರೋಪಿಯೊಬ್ಬನಿಗೆ ನೆರವು ನೀಡಿದ ಆರೋಪದಲ್ಲಿ ವ್ಯಕ್ತಿಯನ್ನು ಮತ್ತು  ಹತ್ಯೆ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ~ ಎಂದು ಹೇಳಿಕೆ ತಿಳಿಸಿದೆ.

`ಬಂಧಿತರನ್ನು ಕೇಂದ್ರ ಲಂಡನ್ನಿನಲ್ಲಿರುವ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ~ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಪತ್ನಿಯೊಂದಿಗೆ ಲಂಡನ್‌ಗೆ ಖಾಸಗಿ ಭೇಟಿ ನೀಡಿದ್ದ ಬ್ರಾರ್ ಮೇಲೆ ಸೆಪ್ಟೆಂಬರ್ 30ರಂದು ಆಕ್ಸ್‌ಫರ್ಡ್ ರಸ್ತೆ ಸಮೀಪದ ಹಳೆಯ ಕ್ಯುಬೆಕ್ ರಸ್ತೆಯಲ್ಲಿರುವ ಹೋಟೆಲೊಂದರ ಮುಂಭಾಗದಲ್ಲಿ ನಾಲ್ವರು  ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಬ್ರಾರ್ ಅವರ ಕುತ್ತಿಗೆಯನ್ನು ಚೂರಿಯಿಂದ ಇರಿಯಲಾಗಿತ್ತು.

ತಮ್ಮನ್ನು ಹತ್ಯೆ ಮಾಡಲು ನಡೆಸಿದ ಯತ್ನ ಇದಾಗಿದೆ ಎಂದು ಬ್ರಾರ್ ದಾಳಿಯನ್ನು ಬಣ್ಣಿಸಿದ್ದರು.
ಖಾಲಿಸ್ತಾನದ ಕುರಿತು ಸಹಾನುಭೂತಿ ಉಳ್ಳವರು ಈ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

 ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಸಿಖ್ ಭಯೋತ್ಪಾದಕರ ವಿರುದ್ಧ 1984ರಲ್ಲಿ ನಡೆದಿದ್ದ `ಬ್ಲೂ ಸ್ಟಾರ್~ ಕಾರ್ಯಾಚರಣೆಯ ನೇತೃತ್ವವನ್ನು ಬ್ರಾರ್ ವಹಿಸಿದ್ದರು.

ಈ ಮಧ್ಯೆ, ವಲಸೆ ವಿಚಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಸ್ಕಾಟ್ಲೆಂಡ್ ಪೊಲೀಸರು ಬಂಧಿಸಿದ್ದಾರೆ. ಬ್ರಾರ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೆಲವು ಶಂಕಿತರು ನೆಲೆಸಿದ್ದ ಸ್ಥಳದಲ್ಲಿ ಇವರೂ ವಾಸವಾಗಿದ್ದರು.

~ಇದೊಂದು ಹೇಯ ಕೃತ್ಯ~
ಬ್ರಾರ್ ಅವರ ಮೇಲಿನ ದಾಳಿಯನ್ನು `ಹೇಯ ಕೃತ್ಯ ಮತ್ತು ಸ್ವೀಕಾರ್ಹವಲ್ಲ~ ಎಂದು ಬ್ರಿಟನ್ ಹೇಳಿದೆ.

`ಇದು ಅತ್ಯಂತ ಆತಂಕದ ವಿಚಾರ.  ಉಗ್ರವಾದದ ನಿಲುವುಗಳನ್ನು ಹೊಂದಿರುವ ಇಂಥವರು ನಮ್ಮ ದೇಶದಲ್ಲಿರುವುದನ್ನು ನಾವು ಬಯಸುವುದಿಲ್ಲ. ಇವರು ನಮ್ಮ ದೇಶದ ಜನರಿಗೆ ದೊಡ್ಡ ಬೆದರಿಕೆಯಾಗಿದ್ದಾರೆ~ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ  ಹ್ಯೂಗೊ ಸ್ವೈರ್ ಹೇಳಿದ್ದಾರೆ.

`ಈ ದಾಳಿ ಖಂಡನೀಯ. ಭಾರತದಲ್ಲಿ ಜನರು ಭಾವಿಸಿದಂತೆ ನಾವು ಕೂಡ ಇದನ್ನು ಹೇಯ ಕೃತ್ಯವೆಂದೇ ಕರೆಯುತ್ತೇವೆ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರು ಯಾರು ಎಂಬುದು ಇನ್ನೂ ದೃಢಪಡದೇ ಇರುವುದರಿಂದ ಈಗಲೇ ಪ್ರತಿಕ್ರಿಯೆ  ನೀಡುವುದು ತಪ್ಪಾಗುತ್ತದೆ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT