ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ವಯೋಮಿತಿ : ಸರ್ಕಾರದ ವಿವೇಚನೆಯೇ ಅಂತಿಮ

Last Updated 1 ಜನವರಿ 2011, 10:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ):  ನಿವೃತ್ತಿ ವಯೋಮಿತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ನೌಕರರ ನಿವೃತ್ತಿಯ ವಯೋಮಿತಿ ನಿಗದಿಯಲ್ಲಿ ಸರ್ಕಾರದ ನಿರ್ಧಾರವೇ ಅಂತಿಮವಾಗಿದ್ದು ನ್ಯಾಯಾಲಯ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಜಿಲ್ಲಾ ನ್ಯಾಯಾಲಯಗಳ ಸರ್ಕಾರಿ ಅಭಿಯೋಜಕರ ನಿವೃತ್ತಿ ವಯಸ್ಸನ್ನು 60 ವರ್ಷಗಳ ಬದಲಾಗಿ 62 ವರ್ಷಗಳಿಗೆ ಉಳಿಸಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಮಾಯಾವತಿ ಸರ್ಕಾರಕ್ಕೆ ನೀಡಿದ ಮಧ್ಯಂತರ ಆದೇಶವನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಜೆ.ಎಂ. ಪಾಂಚಾಲ್, ದೀಪಕ್ ವರ್ಮಾ ಮತ್ತು ಬಿ.ಚೌಹಾಣ್ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ.

ನಿವೃತ್ತಿ ವಯಸ್ಸಿನ ಏರಿಕೆ ಅಥವಾ ಇಳಿಕೆ ನಿರ್ಧಾರ ಸರ್ಕಾರದ ವಿವೇಚನೆಗೆ ಸೇರಿದ್ದು ಎಂಬ ಸರ್ಕಾರದ ವಾದವನ್ನು ಒಪ್ಪಿದ ನ್ಯಾಯಮೂರ್ತಿಗಳು, ಸಂವಿಧಾನ ಬಾಹಿರ ನಿರ್ಧಾರಗಳ ಹೊರತಾಗಿ ಸರ್ಕಾರದ ಇಂತಹ ನೀತಿ ನಿರೂಪಣೆ ವಿಷಯಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಸಲ್ಲದು ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಸೇವಾ ನೀತಿ, ನಿಯಮಗಳು ಸಂವಿಧಾನದ ವ್ಯಾಪ್ತಿಯ ಅಡಿಯಲ್ಲಿಯೇ ರೂಪಗೊಂಡಿರುವ ಕಾರಣ ನಿವೃತ್ತಿ ವಯೋಮಿತಿ ಇಳಿಕೆ ಕಾನೂನು ಬಾಹಿರವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನಿವೃತ್ತಿ ವಯೋಮಿತಿಯನ್ನು 62 ವರ್ಷಗಳಿಂದ 60 ವರ್ಷಗಳಿಗೆ ಇಳಿಸುವ ಉತ್ತರ ಪ್ರದೇಶ ಸರ್ಕಾರದ ತಿದ್ದುಪಡಿ ನಿಯಮಾವಳಿ ಅನುಷ್ಠಾನದ ವಿರುದ್ಧ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. 62 ವರ್ಷ ವಯಸ್ಸಿಗೂ ಮೊದಲೇ ಸೇವೆಯಿಂದ ನಿವೃತ್ತರಾದ ಜಿಲ್ಲಾ ನ್ಯಾಯಾಲಯಗಳ ಸರ್ಕಾರಿ ಅಭಿಯೋಜಕರ ಸೇವಾವಧಿಯನ್ನು ಮರಳಿ ವಿಸ್ತರಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.  

ಸರ್ಕಾರಿ ನೌಕರರ ಸೇವಾ ನಿಯಮಾವಳಿ ಪ್ರಕಾರ ನಿವೃತ್ತರ ಸೇವಾವಧಿ ವಿಸ್ತರಣೆ ಅಥವಾ ಅವಧಿ ಪುನರ್ ನವೀಕರಣ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ ಎಂದೂ ನ್ಯಾಯಮೂರ್ತಿ ಚೌಹಾಣ್ ಆದೇಶಿಸಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT