ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇದಿತಾ ಕನವರಿಕೆ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಾಲೇಜು ದಿನಗಳಲ್ಲೇ ರ್‍ಯಾಂಪ್‌ ವಾಕ್‌ ಮಾಡುತ್ತಿದ್ದ ಇವರು ಮುಂದೊಂದು ದಿನ ರೂಪದರ್ಶಿಯಾಗಬೇಕೆಂಬ ಕನಸು ಕಟ್ಟಿಕೊಂಡವರು. ಅವರ ಕನಸೀಗ ನನಸಾಗಿದೆ. ಸೆ.21ರಂದು ನಡೆಯುವ ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಫ್ಯಾಷನ್‌ ಶೋನ ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆಯಾದ 17 ಮಂದಿಯಲ್ಲಿ ಒಬ್ಬರಾಗಿದ್ದಾರೆ. 

ನೀಳಕಾಯದ ಈ ರೂಪದರ್ಶಿಯ ಹೆಸರು ನಿವೇದಿತಾ. ‘ನನಗೆ ಎತ್ತರವೇ ವರದಾನ’ ಎಂದು ಹೇಳಿಕೊಳ್ಳುವ ಇವರು ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಪೂರ್ವಭಾವಿ ಪ್ರದರ್ಶನದಲ್ಲಿ ಹೆಜ್ಜೆ ಹಾಕಿದರು. ಆದರೆ ಕೊಂಚ ನರ್ವಸ್‌ ಆದರಂತೆ. ತಮ್ಮ ಮಾಡೆಲಿಂಗ್‌ ಅಭಿರುಚಿಯ ಬಗ್ಗೆ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದರು.

‘ಬಸವೇಶ್ವರನಗರದ ಅರಬಿಂದೋ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮುಗಿಸಿದ್ದೇನೆ. ವಿದ್ಯಾರ್ಥಿಗಳು ವಿನ್ಯಾಸ ಮಾಡಿದ ಉಡುಪುಗಳನ್ನು ಧರಿಸಿ ರ್‍ಯಾಂಪ್‌ ವಾಕ್‌ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಇಂಥ ದೊಡ್ಡ ಅವಕಾಶ ಸಿಕ್ಕಿದೆ. ಮಾಡೆಲಿಂಗ್ ನನ್ನ ಕನಸಾಗಿತ್ತು. ಈ ಕ್ಷೇತ್ರಕ್ಕೆ ಫಿಟ್‌ ಆಗ್ತೀನಿ ಎಂಬ ವಿಶ್ವಾಸವೂ ಇದೆ’ ಎನ್ನುತ್ತಾರೆ ನಿವೇದಿತಾ.

ರೂಪದರ್ಶಿಯರು ತುಂಡುಡುಗೆ ಹಾಕಿಕೊಳ್ಳುವ ಕುರಿತು ಅವರ ಅಭಿಪ್ರಾಯ ಹೀಗಿದೆ: ‘ನಾವು ಯಾವ ಬಟ್ಟೆ ಹಾಕಿಕೊಳ್ಳುತ್ತೇವೆ ಎನ್ನುವುದಕ್ಕಿಂತ ಅದನ್ನು ಧರಿಸಿದ ಮೇಲೆ ಹೇಗೆ ಪ್ರಕಟಗೊಳ್ಳುತ್ತೇವೆ ಎಂಬುದು ಮುಖ್ಯ’.

ಮಾಡೆಲಿಂಗ್‌ ಹೊರತಾಗಿ ಅವರು ಬಿಡುವಿನ ವೇಳೆಯಲ್ಲಿ ನಾಯಿಗಳನ್ನು ಸಾಕುತ್ತಾರಂತೆ. ಅಲ್ಲದೆ ದತ್ತು ತೆಗೆದುಕೊಂಡು ಹಾರೈಕೆ ಮಾಡುವುದು ಇವರ ಹವ್ಯಾಸಗಳಲ್ಲಿ ಒಂದು. ಮನೆಯಲ್ಲಿ ಮೂರು ನಾಯಿಗಳನ್ನು ಸಾಕಿದ್ದಾರಂತೆ.

ಉಳಿದಂತೆ ದಿನಕ್ಕೆ ಎರಡು ಗಂಟೆ ವರ್ಕೌಟ್‌ ಮಾಡಿ, ದೇಹಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ ನಿವೇದಿತಾ. ಊಟದಲ್ಲಿ ಮಿತವ್ಯಯ ಎನ್ನುವ ಮಾತೇ ಇಲ್ಲ. ಇಷ್ಟವಾದದ್ದನ್ನು ಚೆನ್ನಾಗಿ ತಿನ್ನಬೇಕು ಎಂಬುದು ಪಾಲಿಸಿ.

‘ಆಹಾರದಲ್ಲಿ ಪಥ್ಯ ಮಾಡುತ್ತಾ ಹೋದರೆ ತೀರ ಸಣ್ಣಗಾಗುತ್ತೇವೆ. ಚೆನ್ನಾಗಿ ತಿನ್ನಬೇಕು. ಆಗ ಶಕ್ತಿಯೂ ಹೆಚ್ಚುತ್ತದೆ. ಬಿ.ಕಾಂ ಮಾಡುತ್ತಿರುವಾಗ ಕನ್ನಡ ಸಿನಿಮಾ ಒಂದರಲ್ಲಿ ಅಭಿನಯಿಸುವ ಅವಕಾಶ ಒದಗಿಬಂದಿತ್ತು. ಆದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳಲಿಲ್ಲ. ಮುಂದೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ.

‘ಮನೀಷ್‌ ಮಲ್ಹೋತ್ರಾ, ರಮೇಶ್‌ ದೆಂಬ್ಲಾ ಅವರ ವಿನ್ಯಾಸಗಳು ಇಷ್ಟವಾಗುತ್ತವೆ. ಅದರಲ್ಲೂ ಮಲ್ಹೋತ್ರಾ ಅವರ ಸಂಗ್ರಹ ಅದ್ಭುತವಾಗಿರುತ್ತದೆ. ಇತ್ತೀಚೆಗೆ ಮಾಡೆಲಿಂಗ್‌ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಟ್ರೆಂಡ್‌ ಬದಲಾದಂತೆ ಸ್ಪರ್ಧೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆ ನಾವು ಎಲ್ಲರಿಗಿಂತ ಉತ್ತಮ ಎಂದುಕೊಳ್ಳಬೇಕು. ಆತ್ಮವಿಶ್ವಾಸ ಹೆಚ್ಚಾಗಿ ಇರಬೇಕು. ಅದು ನಮ್ಮ ಮುಖದಲ್ಲೇ ಅಭಿವ್ಯಕ್ತಗೊಳ್ಳುತ್ತದೆ’ ಎಂಬುದು ನಿವೇದಿತಾ ಅಭಿಮತ.

‘ಮಾಡೆಲಿಂಗ್‌ ನನ್ನ ಆಸಕ್ತಿ, ವಿದ್ಯಾಭ್ಯಾಸ ನನ್ನ ಜೀವನ’ ಎಂದು ಹೇಳುವ ಇವರು ‘ಮ್ಯಾಕ್ಸ್‌ ಮಿಸ್‌ ಬೆಂಗಳೂರು 2013’ ಸ್ಪರ್ಧೆಗೆ ಎರಡು ವಾರಗಳಿಂದ ತಯಾರಿ ನಡೆಸಿದ್ದಾರೆ. ಹೇಗೆ ನಡೆಯಬೇಕು ಎಂಬುದರ ಜೊತೆಗೆ ವ್ಯಕ್ತಿತ್ವ ವಿಕಸನ ಕಲೆಯನ್ನು ಅಭ್ಯಸಿಸುತ್ತಿದ್ದಾರೆ. ಈ ಎಲ್ಲಾ ಚಟುವಟಿಕೆಗಳಿಗೂ ಪೋಷಕರ ಬೆಂಬಲ ಇದ್ದೇ ಇದೆ ಎನ್ನುವ ನಿವೇದಿತಾ ಮುಖದಲ್ಲಿ ಗೆಲುವಿನ ನಗು ಮನೆಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT