ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇದಿತಾ ನಡೆಗಳು

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಇಂಟರ್ನೆಟ್ಟೇ ಡಯಟೀಶಿಯನ್'
`ಮನುಷ್ಯನ ದೇಹಕ್ಕೆ ತುಪ್ಪ, ಎಣ್ಣೆ, ಬೆಣ್ಣೆ ಅಂಶಗಳು ಬೇಕು' ಎನ್ನುತ್ತಾರೆ ಚೆಲುವೆ ನಿವೇದಿತಾ. ಯೋಗ್ಯ ಮೈಕಟ್ಟಿಗಾಗಿ ಕಟ್ಟುನಿಟ್ಟಾಗಿ ಆಹಾರ ತ್ಯಜಿಸದ ಅವರು ದೇಹಕ್ಕೆ ಅಗತ್ಯ ಇರುವ ಪೋಷಕಾಂಶಗಳ ಕುರಿತು ಮಾತನಾಡುತ್ತಾರೆ. ಅಂದಹಾಗೆ, ಅವರ ಡಯಟೀಶಿಯನ್ ಇಂಟರ್ನೆಟ್ ಅಂತೆ.

`ಹೌದು, ನಾನು ಇಂಟರ್ನೆಟ್ ನೋಡಿಕೊಂಡೇ ನನ್ನ ಡಯಟ್ ನಿರ್ವಹಿಸುವುದು. ಒಬ್ಬ ಡಯಟೀಶಿಯನ್ ನೆರವು ಪಡೆದರೆ ನಮಗೆ ಕ್ರಾಸ್‌ಚೆಕ್ ಮಾಡುವ ಅವಕಾಶ ಇರುವುದಿಲ್ಲ. ಆದರೆ ಇಂಟರ್ನೆಟ್‌ನಲ್ಲಿ ಕ್ರಾಸ್‌ಚೆಕ್ ಮಾಡಬಹುದು. ಪ್ರತಿದಿನ ನನ್ನ ಆಹಾರದಲ್ಲಿ ಅಗತ್ಯ ವಿಟಮಿನ್, ಪ್ರೊಟೀನ್  ನ್ಯೂಟ್ರಿಶನ್‌ಗಳು ಇರುತ್ತವೆ. ಅಲ್ಲಿಂದ ಮಾಹಿತಿ ಪಡೆದುಕೊಂಡು ನಾನು ಸಮತೋಲನದ ಡಯಟ್ ಅನುಸರಿಸುತ್ತಿರುವೆ' ಎಂದು ಮುಗುಳ್ನಗುವ ಈ ಕೃಷ್ಣಸುಂದರಿ ಇಷ್ಟವಾಗುವ ಆಹಾರವನ್ನು ತಿನ್ನದೇ ಬಿಟ್ಟಿಲ್ಲ.

`ನಿಯಮಿತವಾಗಿ ವ್ಯಾಯಾಮ ಮಾಡುವವರಿಗೆ ಅವರ ದೇಹವೇ ಕೆಲವು ಆಹಾರಗಳ ಮೇಲೆ ನಿಷೇಧ ಹೇರುತ್ತದೆ. ಅಂಥ ಅನುಭವ ನನಗೆ ಆಗಿದೆ. ಆದರೂ ಕೆಲವೊಮ್ಮೆ ಇಷ್ಟವಾದ ತಿಂಡಿ ತಿನ್ನದೇ ಬಿಟ್ಟರೆ, ಅದು ಮನಸ್ಸಿನ ಮೇಲೆ ಒತ್ತಡ ಹೇರಿದಂತಾಗುತ್ತದೆ. ಅದರಿಂದ ಇಷ್ಟವಾದದ್ದನ್ನು ಕೆಲವೊಮ್ಮೆ ತಿನ್ನುತ್ತೇನೆ ಮತ್ತು ಅದನ್ನು ಕರಗಿಸುತ್ತೇನೆ' ಎನ್ನುತ್ತಾರೆ.

ಚಪಾತಿ, ಮುದ್ದೆ, ತರಕಾರಿ, ಹಣ್ಣು, ಕಾಳು, ಮೊಸರು, ಒಳಹಣ್ಣುಗಳು, ಕೊಂಚ ಅನ್ನ ಅವರ ಪ್ರತಿನಿತ್ಯದ ಆಹಾರದಲ್ಲಿ ಇರುತ್ತವೆ. ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುವ ನಿವೇದಿತಾ ಎರಡೂವರೆ ಗಂಟೆ ಜಿಮ್‌ನಲ್ಲಿ ಕಳೆಯುತ್ತಾರಂತೆ. ಅದಕ್ಕಿಂತ ಮುಂಚೆ ತಾಜಾಗಾಳಿಯಲ್ಲಿ ಜಾಗ್ ಮಾಡುತ್ತಾರಂತೆ. `ಜಿಮ್‌ನ ಥ್ರೆಡ್‌ಮಿಲ್‌ನಲ್ಲಿ ಓಡುವುದಕ್ಕಿಂತ ಹೊರಗಿನ ತಾಜಾಗಾಳಿಯಲ್ಲಿ ಓಡುವುದು ಉತ್ತಮ' ಎನ್ನುವ ನಿವೇದಿತಾ, ಜಿಮ್‌ನಲ್ಲಿ ಸೈಕ್ಲಿಂಗ್, ಆಬ್ಸ್, ವೈಟ್ಸ್, ಸ್ಟ್ರೆಚಸ್ ಮಾಡುವ ಅವರು ಸೂರ್ಯ ನಮಸ್ಕಾರ ಸಲ್ಲಿಸದೇ ಇರುವುದಿಲ್ಲ.

ಇನ್ನು ಡಾನ್ಸ್ ಮಾಡುವುದು ಅವರ ಮೆಚ್ಚಿನ ಹವ್ಯಾಸ. ತಾವೇ ಸಂಗೀತ ಗುನುಗುತ್ತಾ ಡಾನ್ಸ್ ಮಾಡುವ ನಿವೇದಿತಾ, ಅದು ಕೂಡ ತಮ್ಮ ಮೈಕರಗಿಸುವಲ್ಲಿ, ಮೈಕಟ್ಟು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ ಎನ್ನುತ್ತಾರೆ.`ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಮಾತ್ರವಲ್ಲ; ಪ್ರತಿಯೊಬ್ಬರಿಗೂ ಆರೋಗ್ಯಕರ ವ್ಯಾಯಾಮ, ಸೂಕ್ತ ಊಟದ ಅಗತ್ಯ ಇದೆ. ಆರೋಗ್ಯಕರ ಆಲೋಚನೆಗಳು, ಆರೋಗ್ಯಕರ ಮನಸ್ಸು, ಆರೋಗ್ಯಕರ ದೇಹ ಎಲ್ಲರಿಗೂ ಮುಖ್ಯ' ಎನ್ನುವ ಅವರು `ವ್ಯಾಯಾಮದ ನಂತರವೂ ದಿನವಿಡೀ ಚಟುವಟಿಕೆಯಿಂದ ಇರುವುದು ತುಂಬಾ ಮುಖ್ಯ' ಎನ್ನುವುದನ್ನು ಕಂಡುಕೊಂಡಿದ್ದಾರೆ.

`ಪರಿ', `ಕಿಲಾಡಿ ಕಿಟ್ಟಿ' ಚಿತ್ರಗಳ ನಂತರ ಹಿಂದಿ ಸಿನಿಮಾವೊಂದಕ್ಕೆ ರುಜು ಹಾಕಿದ್ದ ನಿವೇದಿತಾ, ಚಿತ್ರಗಳು ಅರ್ಧಕ್ಕೆ ನಿಂತು ಹೋದದ್ದನ್ನು ಬೇಸರದಿಂದ ಹೇಳಿಕೊಳ್ಳುತ್ತಾರೆ.ಸದ್ಯ ಸಮುದ್ರ ಖಣಿ ನಿರ್ದೇಶನದ `ಯಾರೇ ಕೂಗಾಡಲಿ'ಯಲ್ಲಿ ಅವರು ಅಭಿನಯಿಸಿದ್ದು, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಅವರ ಬಳಿಗೆ ಸ್ಕ್ರಿಪ್ಟ್ ಹಿಡಿದುಕೊಂಡು ಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲ. ಸಾಕಷ್ಟು ಚಿತ್ರಗಳ ಕತೆ ಕೇಳಿರುವ ಅವರು ಒಳ್ಳೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT