ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಗೊಂದಲ: ದೇಗುಲ ತೆರವು ವಿವಾದ

Last Updated 1 ಜೂನ್ 2013, 11:08 IST
ಅಕ್ಷರ ಗಾತ್ರ

ತಿಪಟೂರು: ನಗರದ ಎಪಿಎಂಸಿ ಪಕ್ಕದ ಕೆಂಪಮ್ಮ ಬಡಾವಣೆಯಲ್ಲಿದ್ದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಜಾಗ ತಮ್ಮದೆಂದು ಹೇಳಿಕೊಂಡವರು ಶುಕ್ರವಾರ ತೆರವುಗೊಳಿಸಲು ಪ್ರಯತ್ನಿಸಿದ್ದರಿಂದ ವಿವಾದ, ವಾಗ್ವಾದಕ್ಕೆ ಕಾರಣವಾಯಿತು.

ಹತ್ತು ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಆಕಸ್ಮಿಕವಾಗಿ ಕೋತಿಯೊಂದು ಮೃತಪಟ್ಟಿತ್ತು. ಆಸಕ್ತರು ಸೇರಿ ಬಡಾವಣೆಗೆ ಹೊಂದಿಕೊಂಡ ಖಾಲಿ ಜಮೀನಿನಲ್ಲಿ ಅದರ ಅಂತ್ಯ ಸಂಸ್ಕಾರ ಮಾಡಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದೇ ಜಾಗದಲ್ಲಿ ಆಂಜನೇಯ ಸ್ವಾಮೀಯ ಪುಟ್ಟ ದೇವಾಲಯವೊಂದನ್ನು ನಿರ್ಮಿಸಿದ್ದರು. ಆ ಜಾಗ ಯಾರಿಗೆ ಸೇರಿದ್ದೆಂದು ಯಾರಿಗೂ ಸ್ಪಷ್ಟವಾಗಿ ತಿಳಿದಿರಲಿಲ್ಲ.

ಈಚೆಗೆ ತಾಲ್ಲೂಕಿನ ಸೂಗೂರಿನ ವ್ಯಕ್ತಿಯೊಬ್ಬರು ಬಂದು ಈ ಜಮೀನು ತಮ್ಮ ಕುಟುಂಬಕ್ಕೆ ಸೇರಿದ್ದೆಂದು ಹೇಳಿಕೊಂಡಿದ್ದರು. ಇಲ್ಲಿ ಲೇಔಟ್ ಮಾಡುವ ಉದ್ದೇಶ ಇದೆ. ದೇವಸ್ಥಾನ ಮಧ್ಯದಲ್ಲಿರುವುದರಿಂದ ನಿವೇಶನ ಮತ್ತು ರಸ್ತೆ ವಿಂಗಡಣೆಗೆ ತೊಡಕಾಗುತ್ತದೆ.

ತಮ್ಮ ಜಮೀನಲ್ಲಿಯೇ ಬದಲಿ ಜಾಗದಲ್ಲಿ ದೇಗುಲ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸುತ್ತೇವೆ. ನಂತರ ಹಾಲಿ ದೇವಸ್ಥಾನ ತೆರೆವುಗೊಳಿಸುತ್ತೇವೆ ಎಂದು ಆ ವ್ಯಕ್ತಿ ಭರವಸೆ ನೀಡುವ ಮೂಲಕ ಸ್ಥಳೀಯರಿಂದ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ.

ಆದರೆ ಅವರು ಶುಕ್ರವಾರ ಏಕಾಏಕಿ ಜೆಸಿಬಿ ತಂದು ದೇಗುಲವನ್ನು ಹಿಂಬದಿಯಿಂದ ಕೆಡವಲು ಮುಂದಾದರು. ನಿವೇಶನ ಮಾಲೀಕರೆಂದು ಹೇಳಿಕೊಂಡ ಆ ವ್ಯಕ್ತಿ ಗುರುವಾರವೇ ಮೂರ್ತಿಯನ್ನು ಗುಟ್ಟಾಗಿ ಕಿತ್ತು ಸಮೀಪದ ಅರಳಿ ಮರದ ಕೆಳಗೆ ಇಟ್ಟಿದ್ದರು ಎಂದು ದೂರಿದ ಸ್ಥಳೀಯರು ದೇಗುಲ ತೆರವುಗೊಳಿಸುವುದನ್ನು ವಿರೋಧಿಸಿದರು. ಅಷ್ಟರಲ್ಲಾಗಲೇ ಅರ್ಧ ದೇಗುಲ ಕೆಡವಿದ್ದ ಜೆಸಿಬಿ ವಾಪಸ್ ಹೋಯಿತು. ಜನ ಗುಂಪು ಗೂಡಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿದರು.

ನಿವೇಶನದ ಮಾಲೀಕರೆನ್ನಲಾದ ವ್ಯಕ್ತಿ ಕರೆಸಿ ಜನರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು. ವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಎಪಿಎಂಸಿ ಅರಳಿ ಮರದ ಕೆಳಗಿದ್ದ ಆಂಜನೇಯ ಮೂರ್ತಿಯನ್ನು ಸ್ಥಳೀಯರು ಆಟೊದಲ್ಲಿ ತಂದು ಮತ್ತೆ ಅರ್ಧ ಕೆಡವಿದ ದೇಗುಲದಲ್ಲೇ ಇಟ್ಟು ಪೂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT