ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠುರ ಪತ್ರಕರ್ತರಾಗುವುದು ಕಷ್ಟಸಾಧ್ಯ

Last Updated 16 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಮಡಿಕೇರಿ: ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ನಿಷ್ಠುರ ಪತ್ರಕರ್ತರಾಗಿ ಕೆಲಸ ಮಾಡುವುದು ಕಷ್ಟಸಾಧ್ಯ ಎಂದು `ಪ್ರಜಾವಾಣಿ~ ಪತ್ರಿಕೆಯ ಸಹಾಯಕ ಸಂಪಾದಕ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ಭವನದ 11ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿಅವರು ಮಾತನಾಡಿದರು.

ಇಂದು ರಾಜ್ಯದಲ್ಲಿ ಕಾಣುತ್ತಿರುವ ರಾಜಕೀಯ ಅಸ್ಥಿರತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ  ಆರಂಭಿಸಿದ್ದ `ಆಪರೇಶನ್ ಕಮಲ~ವೇ ಕಾರಣ. ಪಕ್ಷಾಂತರ ಕಾಯ್ದೆಗೆ ಸವಾಲು ಹಾಕುವಂತೆ ಐದು ಜನ ಪಕ್ಷೇತರರ ಶಾಸಕರಿಂದ ರಾಜೀನಾಮೆ ಕೊಡಿಸಿ, ಬಿಜೆಪಿಯಿಂದ ಕಣಕ್ಕಿಳಿಸಲಾಯಿತು. ಸಂಸದೀಯ ವ್ಯವಸ್ಥೆಗೆ ಅತಂತ್ರತೆ ಒಡ್ಡುವ ಆ ವಿದ್ಯಮಾನಗಳ ವಿರುದ್ಧ ಪತ್ರಿಕೆಗಳು ಸಾಕಷ್ಟು ಬರೆದವು. ಆದರೆ, ನಂತರ ನಡೆದಿದ್ದೇ ಬೇರೆ ಎಂದು ಹೇಳಿದರು.

ದುಡ್ಡಿನ ಆಸೆಗಾಗಿಯೇ ಶಾಸಕರು ಪುನಃ ಚುನಾವಣೆ ಆಯ್ಕೆ ಬಯಸಿದ್ದಾರೆನ್ನುವುದು ಜಗಜ್ಜಾಹಿರಾದರೂ ಆ ಕ್ಷೇತ್ರದ ಮತದಾರರು ಪುನಃ ಅದೇ ಶಾಸಕರನ್ನು ಆರಿಸಿ ಕಳುಹಿಸಿದ್ದರು. ಇಂತಹ ಅಜಾಗೃತ ಸಮಾಜದಲ್ಲಿ ಪತ್ರಕರ್ತರು ನಿಷ್ಠುರವಾಗಿ ಕೆಲಸ ನಿರ್ವಹಿಸುವುದು ಕಷ್ಟ ಎಂದು ಹೇಳಿದರು.

ಕಳೆದ 30 ವರ್ಷಗಳಲ್ಲಿ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಮಾಧ್ಯಮ ಸಂಸ್ಥೆಗಳು, ಮಾಲೀಕರು ಹಾಗೂ ಅವರ ಜೊತೆ ಓದುಗರು ಕೂಡ ಬದಲಾಗಿದ್ದಾರೆ. ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಪತ್ರಿಕೆಗಳು ಈಗಾಗಲೇ ಮಾರಾಟವಾಗುತ್ತಿವೆ. ಇಷ್ಟಾಗಿಯೂ ಯಾವುದಾದರೊಂದು ಪತ್ರಿಕೆ 1 ರೂಪಾಯಿಗೆ ಬಂದರೆ ಅಥವಾ ಫಿನಾಯಿಲ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದರೆ ಸಾಕು ಓದುಗರು ಅತ್ತ ಧಾವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಪತ್ರಕರ್ತರು ಏನು ಮಾಡಿಯಾರು ಎಂದು ಅವರು ಪ್ರಶ್ನಿಸಿದರು. 

ಶತಮಾನಗಳ ಹಿಂದೆ ಪತ್ರಕರ್ತರನ್ನು ಸಮಾಜದ ಸುಧಾರಕ ಎನ್ನುವಂತೆ ಕಾಣಲಾಗುತ್ತಿತ್ತು. ಆದರೆ, ಇಂದು ಬದಲಾದ ಪರಿಸ್ಥಿತಿಯಲ್ಲಿ ಈ ನಿರೀಕ್ಷೆಗೆ ತಕ್ಕಂತೆ ಪತ್ರಕರ್ತರಿಗೆ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಸಮಾಜ ಎಷ್ಟೇ ಕೆಟ್ಟುಹೋಗಿದ್ದರೂ ಒಳ್ಳೆಯವರಿಗೆ ಬದುಕಲು ಒಂದಿಷ್ಟು ಅವಕಾಶ ಇದ್ದೇಇದೆ. ಅದರಂತೆ ಪತ್ರಿಕೋದ್ಯಮ ಎಷ್ಟೇ ಕೆಟ್ಟಿದ್ದರೂ ಒಳ್ಳೆಯ ಪತ್ರಕರ್ತರಾಗಲು ಅವಕಾಶ ಇದ್ದೇಇದೆ. ಇದಕ್ಕಾಗಿ ಪತ್ರಕರ್ತರು ಗಟ್ಟಿ ಮನಸ್ಸು ಮಾಡಬೇಕು ಎಂದು ನುಡಿದರು.

ಸಾಹಿತಿ, `ಸಂಕ್ರಮಣ~ ಮಾಸಪತ್ರಿಕೆ ಸಂಪಾದಕ ಚಂದ್ರಶೇಖರ್ ಪಾಟೀಲ ಮಾತನಾಡಿ, ಬೇರೆಲ್ಲ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.
ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT