ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠುರವಾದಿ ಪಿಣರಾಯಿ

ವ್ಯಕ್ತಿ
Last Updated 21 ಮೇ 2016, 19:51 IST
ಅಕ್ಷರ ಗಾತ್ರ

ನಗುಮೊಗವಿಲ್ಲದ ರಾಜಕಾರಣಿ ಎಂದೇ ಜನಜನಿತರಾಗಿರುವ ಪಿಣರಾಯಿ ವಿಜಯನ್‌ ಸದ್ಯದಲ್ಲೇ ‘ದೇವರ ಸ್ವಂತ ನಾಡು’ ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಿಣರಾಯಿ ವಿಜಯನ್‌, ಕೇರಳದ ಕಣ್ಣೂರು ಜಿಲ್ಲೆಯ ಮುಂಡಯಿಲ್‌ ಕೋರನ್‌ ಹಾಗೂ ಕಲ್ಯಾಣಿ ಅವರ ಪುತ್ರರಾಗಿ 1944ರ ಮಾರ್ಚ್‌ 21ರಂದು ಜನಿಸಿದರು. ಸೇಂದಿ ಇಳಿಸುವುದು ತಂದೆ ಕೋರನ್‌ ಅವರ ವೃತ್ತಿ. ಅತ್ಯಂತ ಬಡತನದಲ್ಲಿ ಬಾಲ್ಯವನ್ನು ಕಳೆದ ವಿಜಯನ್‌, ಕಣ್ಣೂರು ಜಿಲ್ಲೆಯಲ್ಲಿ ಆಗತಾನೇ ಬಲ ವೃದ್ಧಿಸಿಕೊಳ್ಳುತ್ತಿದ್ದ ಎಡಪಂಥೀಯ ವಿಚಾರಧಾರೆಗಳಿಂದ ಆಕರ್ಷಿತರಾದರು.

ತಲಶ್ಶೇರಿಯಲ್ಲಿ ಬಿ.ಎ. (ಅರ್ಥಶಾಸ್ತ್ರ) ವ್ಯಾಸಂಗ ಮಾಡುತ್ತಿದ್ದಾಗಲೇ ಅವರು ಕೇರಳ ವಿದ್ಯಾರ್ಥಿ ಫೆಡರೇಶನ್‌ನ (ನಂತರ ಇದೇ ಎಸ್‌ಎಫ್‌ಐ ಆಯಿತು) ಕಣ್ಣೂರು ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬಿ.ಎ. ವ್ಯಾಸಂಗ ಮುಗಿದ ಕೂಡಲೇ ಜೀವನಕ್ಕಾಗಿ ಒಂದು ಕೈಮಗ್ಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಒಂದು ವರ್ಷ ಹೀಗೆ ಕೆಲಸ ಮಾಡಿದ ವಿಜಯನ್‌ ನಂತರ ಉನ್ನತ ಶಿಕ್ಷಣಕ್ಕೆ ಮುಂದಾದರು. ಶಿಕ್ಷಣದ ಜೊತೆ ಜೊತೆಗೆ ಸಂಘಟನೆಯ ಕೆಲಸವನ್ನೂ ಮುಂದುವರಿಸಿದರು. ವಿದ್ಯಾರ್ಥಿ ಫೆಡರೇಶನ್‌ನ ರಾಜ್ಯ ಘಟಕದ ಕಾರ್ಯದರ್ಶಿಯಾದರು. (ಈ ಸಂಘಟನೆ ನಂತರ ಡಿವೈಎಫ್‌ಐ ಆಯಿತು) ನಂತರ ಕೆಲಕಾಲ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಇದರ ಜೊತೆಜೊತೆಯಲ್ಲೇ ಸಿಪಿಎಂನ ಕಣ್ಣೂರು ಜಿಲ್ಲಾ ಘಟಕದಲ್ಲೂ ಪದಾಧಿಕಾರಿಯಾಗಿ ಕೆಲಸ ಮಾಡಿದರು. ಸಂಘಟನೆಯ ಈ ಅನುಭವ ಅವರ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಸತತವಾಗಿ ಸಂಘಟನೆಯಲ್ಲಿ ತೊಡಗಿಕೊಂಡ ಪರಿಣಾಮ ಸಿಪಿಎಂ  ಪಕ್ಷ ಅವರಿಗೆ 1970ರಲ್ಲಿ ಕೂತ್ತುಪರಂಬು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಕೊಟ್ಟಿತು. ಮೊದಲ ಚುನಾವಣೆಯಲ್ಲೇ ಅವರು ತಾಯತ್ತ ರಾಘವನ್‌ ಅವರನ್ನು 743 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಅವರು ಮೊದಲ ಬಾರಿ ಶಾಸಕರಾದಾಗ ಅವರ ವಯಸ್ಸು
ಕೇವಲ 26.

ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚತುರ ಎನಿಸಿಕೊಂಡಿದ್ದ ವಿಜಯನ್‌ ರಾಜಕೀಯ ಪ್ರವೇಶದ ನಂತರವೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಾ ಹೋದರು. 1977 ಹಾಗೂ 1991ರಲ್ಲೂ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಪ್ರತಿಬಾರಿಯೂ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿದ್ದರು. ಇದರಿಂದಾಗಿ ಸಿಪಿಎಂನಲ್ಲಿ ಅವರ ಹಿಡಿತವೂ ಗಟ್ಟಿಯಾಗುತ್ತಾ ಹೋಯಿತು. ಸಣ್ಣ ವಯಸ್ಸಿನಲ್ಲೇ ವಿಜಯನ್‌ ರಾಜ್ಯದ ನಾಯಕನಾಗಿ ಬೆಳೆಯುವ ಲಕ್ಷಣ ಕಾಣಿಸಿತು. 1996ರಲ್ಲಿ ಪಯ್ಯನ್ನೂರು ಕ್ಷೇತ್ರದಿಂದ ಹಾಗೂ ಈ ಬಾರಿ ಧರ್ಮಾಡಂ ಕ್ಷೇತ್ರದಿಂದ ಅವರು ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ ಆಗಲೇ ಶಕ್ತಿ ಬೆಳೆಸಿಕೊಂಡಿದ್ದ ಕಮ್ಯುನಿಸ್ಟ್‌ ಪಕ್ಷ, ಕಾಂಗ್ರೆಸ್‌ನ ನೀತಿಗಳ ವಿರುದ್ಧ ಬೀದಿಗಿಳಿದು ಹೋರಾಟಗಳನ್ನು ಹಮ್ಮಿಕೊಳ್ಳುತ್ತಿತ್ತು. ಪ್ರತಿ ಹೋರಾಟದಲ್ಲೂ ವಿಜಯನ್‌ ಮುಂಚೂಣಿಯಲ್ಲಿರುತ್ತಿದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಪಿಣರಾಯಿ ವಿಜಯನ್‌ ಅವರನ್ನೂ ಬಂಧಿಸಲಾಯಿತು. ಒಂದೂವರೆ ವರ್ಷ ಅವರು ಜೈಲಿನಲ್ಲಿ ಇರಬೇಕಾಯಿತು. 1975ರ ಸೆಪ್ಟೆಂಬರ್‌ 28ರಂದು ಆರು ಮಂದಿ ಕಾನ್‌ಸ್ಟೆಬಲ್‌ಗಳು ಜೈಲಿನಲ್ಲಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.

1977ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಬಂದಿದ್ದ ವಿಜಯನ್‌ ವಿಧಾನಸಭೆಯಲ್ಲಿ ಮಾಡಿದ ಭಾಷಣ ಇಡೀ ರಾಷ್ಟ್ರದ ಗಮನ ಸೆಳೆಯಿತು. ಹಿಂದೆ ಜೈಲಿನಲ್ಲಿದ್ದಾಗ ಪೊಲೀಸರು ಹಿಂಸೆ ಕೊಟ್ಟ ಸಂದರ್ಭದಲ್ಲಿ ತಾವು ಧರಿಸಿದ್ದ ಅಂಗಿಯನ್ನು ರಕ್ತಸಿಕ್ತವಾಗಿದ್ದ ಸ್ಥಿತಿಯಲ್ಲೇ ಕಾಯ್ದಿಟ್ಟುಕೊಂಡು ವಿಧಾನಸಭೆಗೆ ತಂದಿದ್ದ ವಿಜಯನ್‌, ಅದನ್ನು ಪ್ರದರ್ಶಿಸಿ ಸುದೀರ್ಘ ಭಾಷಣ ಮಾಡಿದರು. ಅಂದಿನ ಗೃಹ ಸಚಿವರಾಗಿದ್ದ ಕೆ.ಕರುಣಾಕರನ್‌ ಹಾಗೂ ಕಾಂಗ್ರೆಸ್‌ನ ಎಲ್ಲ ಮುಖಂಡರು ಈ ಭಾಷಣದಿಂದ ತೀವ್ರ ಮುಜುಗರ ಅನುಭವಿಸಬೇಕಾಗಿ ಬಂದಿತ್ತು.

ಪಿಣರಾಯಿ ವಿಜಯನ್‌ ಮುಖದಲ್ಲಿ ನಗು ಕಾಣುವುದು ವಿರಳ, ಮಾತೂ ಕಡಿಮೆ. ಕಠಿಣ ನಿಲುವು ಹಾಗೂ ನಿರ್ಧರಿಸಿದ್ದನ್ನು ಸಾಧಿಸಿ ತೋರಿಸುವ ಛಲದ ವಿಜಯನ್‌ ಮಾಧ್ಯಮದವರಿಂದಲೂ ದೂರವೇ ಉಳಿಯುತ್ತಾರೆ. ಅದಕ್ಕೇ ಕಮ್ಯುನಿಸ್ಟ್‌ ನಾಯಕರೂ ವಿಜಯನ್‌ ಅವರನ್ನು ಕಂಡರೆ ಸ್ವಲ್ಪ ಹೆದರುತ್ತಾರೆ. ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದಾಗ ‘ವಿಜಯನ್‌ ಕಮ್ಯುನಿಸ್ಟ್‌ ತತ್ವ ಸಿದ್ಧಾಂತಗಳಿಂದ ದೂರ ಸರಿಯುತ್ತಿದ್ದಾರೆ’ ಎಂದು ಕೆಲವು ಮುಖಂಡರೇ ಅವರ ವಿರುದ್ಧ ಆರೋಪಿಸಿದ್ದಿದೆ.

ಆದರೆ ವಿಜಯನ್‌ ಇಂಥ ಟೀಕೆಗೆ ಜಗ್ಗದೆ ಸಂಘಟನೆಯನ್ನು ಬಲಪಡಿಸುತ್ತಾ ಹೋದರು. ತಾವು ಪಕ್ಷದ ಉನ್ನತ ಹುದ್ದೆಯಲ್ಲಿದ್ದ 16 ವರ್ಷಗಳ ಕಾಲವೂ ಪಕ್ಷದ ಮೇಲೆ ಅವರು ಬೇರೆ ಯಾವ ನಾಯಕರಿಗೂ ಇಲ್ಲದಂಥ ಹಿಡಿತ ಹೊಂದಿದ್ದರು. ಈ ಶಕ್ತಿಯೇ ಅವರನ್ನು 72ನೇ ವಯಸ್ಸಿನಲ್ಲೂ ಮುಖ್ಯಮಂತ್ರಿ ಹುದ್ದೆಗೇರುವಂತೆ ಮಾಡಿದೆ. ಪಕ್ಷದ ಮೇಲೆ ವಿಜಯನ್‌ ಸಾಧಿಸಿದ್ದ ಹಿಡಿತದಿಂದ ಇರುಸುಮುರುಸಾಗಿದ್ದು ಇನ್ನೊಬ್ಬ ಕಮ್ಯುನಿಸ್ಟ್‌ ಮುಖಂಡ ವಿ.ಎಸ್‌.ಅಚ್ಯುತಾನಂದನ್‌ ಅವರಿಗೆ.

ಪಿಣರಾಯಿ ವಿಜಯನ್‌ ಅವರಿಗಿಂತಲೂ ಹಿರಿಯರಾದ ಅಚ್ಯುತಾನಂದನ್‌ ಸಹ ಕಷ್ಟಪಟ್ಟು ಕೇರಳದಲ್ಲಿ ಜನನಾಯಕರಾಗಿ ರೂಪುಗೊಂಡ ವ್ಯಕ್ತಿ. ಪಕ್ಷದಲ್ಲಿ ವಿಜಯನ್‌ ಹಿಡಿತ ಬಲಗೊಳ್ಳುತ್ತಿದ್ದಂತೆ ಅಚ್ಯುತಾನಂದನ್‌ ಅವರ ಅಸಹನೆಯೂ ಹೆಚ್ಚುತ್ತಾ ಹೋಯಿತು. 1990ರ ದಶಕದಿಂದ ಇಬ್ಬರ ನಡುವೆ ಶೀತಲ ಸಮರ ಆರಂಭವಾಗಿತ್ತು. 2006ರಲ್ಲಿ ಅದು ತಾರಕಕ್ಕೇರಿ ಪರಸ್ಪರರ ವಿರುದ್ಧ ಮುಕ್ತವಾಗಿಯೇ ಟೀಕೆಗಳನ್ನು ಮಾಡಲಾರಂಭಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಹೈಕಮಾಂಡ್‌ ಇಬ್ಬರನ್ನೂ ಪಕ್ಷದ ಪಾಲಿಟ್‌ಬ್ಯೂರೊದಿಂದ ಅಮಾನತು ಮಾಡಿತು.

ನಂತರ ವಿಜಯನ್‌ ಅವರನ್ನು ಮತ್ತೆ ಪಾಲಿಟ್‌ಬ್ಯೂರೊಗೆ ಸೇರಿಸಿದರೂ, ಅಚ್ಯುತಾನಂದನ್‌ ಅವರನ್ನು ಕೇಂದ್ರ ಸಮಿತಿ ಸದಸ್ಯರನ್ನಾಗಿಸಿ ಪಕ್ಷ ಇಬ್ಬರು ಹಿರಿಯ ರಾಜಕಾರಣಿಗಳನ್ನೂ ಸಮಾಧಾನಪಡಿಸಲು ಪ್ರಯತ್ನಿಸಿತು. ಆದರೆ ಶೀತಲ ಸಮರ ಮುಂದುವರಿದೇ ಇತ್ತು. ಈ ಬಾರಿ ಎಲ್‌ಡಿಎಫ್‌ ಗೆಲ್ಲುತ್ತಿದ್ದಂತೆ ಮತ್ತೆ 92 ವರ್ಷದ ಅಚ್ಯುತಾನಂದನ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಹಟ ಬಿಡದ ಸ್ವಭಾವದ ವಿಜಯನ್‌ ಅವರು ಅಚ್ಯುತಾನಂದನ್‌ ವಿರುದ್ಧವೂ ಗೆಲುವು ಸಾಧಿಸಿದರು.

ಕೇರಳದಲ್ಲಿ ಇ.ಕೆ.ನಯನಾರ್‌ ಮುಖ್ಯಮಂತ್ರಿಯಾಗಿದ್ದಾಗ 1996ರಿಂದ 98ರ ನಡುವಿನ ಅವಧಿಯಲ್ಲಿ ವಿಜಯನ್‌ ರಾಜ್ಯದ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈ ಎರಡು ವರ್ಷ ಕೇರಳ ವಿದ್ಯುತ್‌ ಉತ್ಪಾದನೆ ಹಾಗೂ ವಿತರಣೆಯಲ್ಲಿ ದೊಡ್ಡ ಸಾಧನೆ ಮಾಡಿತ್ತು. ಎರಡು ವರ್ಷಗಳ ಸಣ್ಣ ಅವಧಿಯಲ್ಲೇ ವಿಜಯನ್‌ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ದೀರ್ಘ ಕಾಲದ ರಾಜಕೀಯ ಜೀವನ ನಡೆಸಿರುವ ವಿಜಯನ್‌ ಅವರನ್ನೂ ವಿವಾದಗಳು ಬಿಟ್ಟಿಲ್ಲ.

ಅವರು ಸಚಿವರಾಗಿದ್ದ ಕಾಲದಲ್ಲಿ ರಾಜ್ಯದ ಮೂರು ಜಲ ವಿದ್ಯುತ್‌ ಯೋಜನೆಗಳ ನವೀಕರಣ ಗುತ್ತಿಗೆಯನ್ನು ಕೆನಡಾದ ಎಸ್‌ಎನ್‌ಸಿ ಲಾವಲಿನ್‌ ಕಂಪೆನಿಗೆ ಕೊಟ್ಟ ವಿಚಾರದಲ್ಲಿ ರಾಜ್ಯಕ್ಕೆ ₹ 375 ಕೋಟಿ ನಷ್ಟವಾಗಿದೆ ಎಂಬ ವಿವಾದ ಇವರನ್ನು ಸುತ್ತುವರಿಯಿತು. ತನಿಖೆಯಿಂದ ಅವರು ನಿರಪರಾಧಿ ಎಂಬುದು ಸಾಬೀತಾಯಿತು. ಇದಲ್ಲದೆ 2012ರಲ್ಲಿ ಕೋಯಿಕ್ಕೋಡ್‌ನಲ್ಲಿ ನಡೆದ, ಸಿಪಿಎಂನ ಮಾಜಿ ಮುಖಂಡ ಟಿ.ಪಿ.ಚಂದ್ರಶೇಖರನ್‌ ಹತ್ಯೆ ಘಟನೆಯೂ ವಿಜಯನ್‌ ಅವರ ಘನತೆಯನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT