ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠೆಗೆ ಬಲ.. ಅಣ್ಣಾಗೆ ಬೆಂಬಲ... ಹೀಗೊಬ್ಬ ಭಾಗಶಃ ಉಪವಾಸ ಸತ್ಯಾಗ್ರಹಿ

Last Updated 22 ಆಗಸ್ಟ್ 2011, 4:30 IST
ಅಕ್ಷರ ಗಾತ್ರ

ಬಳ್ಳಾರಿ: ಪ್ರಚಾರದ ಹುಚ್ಚು ಹೆಚ್ಚಿದ್ದರಿಂದ ಪ್ರತಿಭಟನೆಗಳು ಅರ್ಥ ಕಳೆದುಕೊಂಡು, ಸತ್ಯಾಗ್ರಹ, ಚಳವಳಿಗಳು ಸತ್ತು ಹೋಗಿ, ಬೇಡಿಕೆಗಳ ಪಟ್ಟಿ ಹೆಚ್ಚಿ, ಧ್ವನಿಗಳೆಲ್ಲ ಅಡಗಿ, ಪ್ರತಿ ಕ್ಷೇತ್ರದಲ್ಲೂ ಭ್ರಷ್ಟಾಚಾರ ಮೇರೆ ಮೀರಿ, ಲಂಚಕ್ಕೆ ಮುಂದೆ ಚಾಚಿಕೊಳ್ಳುವ ಕೈಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ ದೇಶದಾದ್ಯಂತ ಸಂಚಲನ ಮೂಡಿಸಿರುವವರು ಅಣ್ಣಾ ಹಜಾರೆ.

ಭ್ರಷ್ಟಾಚಾರವನ್ನು ಹತ್ತಿಕ್ಕುವ ಹಿರಿದಾದ ಆಸೆಯೊಂದಿಗೆ ಸತ್ಯಾಗ್ರಹಕ್ಕೆ ಧುಮುಕಿ,  ಕೆಲವು ದಿನಗಳಿಂದ ದೇಶದಾದ್ಯಂತ ಸುದ್ದಿಗೆ ಒಳಗಾಗಿರುವ ಅಣ್ಣಾ ಹಜಾರೆ, ಪ್ರಬಲ ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ನವದೆಹಲಿಯಲ್ಲಿ ನಡೆಸಿರುವ ಉಪವಾಸಕ್ಕೆ, ತೋರಿಕೆಯ ಬೆಂಬಲ ಸೂಚಿಸಿದವರೇ ಅಧಿಕ.

ಹೀಗೆ ಬಂದು, ಘೋಷಣೆ ಕೂಗಿ, ರೋಷಾವೇಶ ಪ್ರದರ್ಶಿಸಿ, ಬಾವುಟವನ್ನು ಬಾನಿಗೆ ಹಾರಿಸಿ, ಫೋಟೊಗೆ ಫೋಸ್ ನೀಡಿ, ಟಿವಿ ಕ್ಯಾಮೆರಾದೆದುರು ಒಂದೆರಡು ಭಾಷಣ ಬಿಗಿದು ಹೋಗುತ್ತಿರುವವರೇ ಹೆಚ್ಚು.

ಆದರೆ, ಪ್ರಚಾರದ ಸಹವಾಸವೇ ಬೇಡ ಎನ್ನುತ್ತ, ಅಣ್ಣಾ ಹಜಾರೆ ಅವರ ಶಾಂತ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ನೀಡಿ, ಯಾರ ಸಹಕಾರವನ್ನೂ ನಿರೀಕ್ಷಿಸದ ವ್ಯಕ್ತಿಯೊಬ್ಬರು ನಗರದಲ್ಲಿ ಆರು ದಿನಗಳಿಂದ ಭಾಗಶಃ ಉಪವಾಸ ನಡೆಸುತ್ತ ಕುಳಿತಿದ್ದಾರೆ.

ಮೂರು ವರ್ಷಗಳ ಹಿಂದೆ `ಸನಾತಬಂಧು~ ಎಂಬ ಪಕ್ಷ ಹುಟ್ಟುಹಾಕಿದ್ದಾಗಿ ಹೇಳುವ ಇವರ ಹೆಸರು ಉದಯ ಅಗಸನೂರ.

ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಉಪವಾಸ ಆಚರಿಸುತ್ತಿರುವ 48ರ ಹರೆಯದ ಈ ವ್ಯಕ್ತಿ ತಣ್ಣಗೆ ಪ್ರತಿಭಟನೆ ನಡೆಸುತ್ತಿದ್ದು, ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ತನ್ನದೊಂದು `ಅಳಿಲು ಸೇವೆ~ ಎನ್ನುತ್ತ, ಅಣ್ಣನ ಹೋರಾಟ ಖಂಡಿತ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ.

ವೃತ್ತಿಯಲ್ಲಿ ಅರ್ಚಕರಾಗಿರುವ ಉದಯ ಅವರು, ನಗರದ ಕೌಲ್‌ಬಜಾರ್ ಬಳಿಯ ಗೊಲ್ಲರ ಬೀದಿಯಲ್ಲಿರುವ ಲಕ್ಷ್ಮಿನಾರಾಯಣ ಸಹಿತಿ ಅಷ್ಟಲಕ್ಷ್ಮಿ ದೇವಸ್ಥಾನದ ಪೂಜೆ ಮಾಡುತ್ತ ಜೀವನ ನಡೆಸುತ್ತಿದ್ದು, ಕೆಲವು ವರ್ಷಗಳ ಹಿಂದೆ `ಭಾರತಪುತ್ರ~ ಎಂಬ ಪತ್ರಿಕೆಯನ್ನೂ ಆರಂಭಿಸಿದ್ದವರು.

10 ದಿನಗಳಿಗೊಮ್ಮೆ ಪ್ರಕಟವಾಗುತ್ತಿದ್ದ ಈ ಪತ್ರಿಕೆಗೆ `ದಶಿಕ~ (ದೈನಿಕ, ಪಾಕ್ಷಿಕ, ಮಾಸಿಕ ಎಂಬಂತೆ) ಎಂದು ಕರೆದುಕೊಳ್ಳುತ್ತಿದ್ದ ಇವರು, 2008ರಲ್ಲಿ ಜನರಿಂದ ಜನರಿಗಾಗಿ, ಜನರಿಗೋಸ್ಕರವಾಗಿ ಎಂಬ ಧ್ಯೇಯೋದ್ದೇಶದೊಂದಿಗೆ ಸನಾತಬಂಧು ಪಕ್ಷ ಆರಂಭಿಸಿದ್ದಾರೆ.

`ನಾನು ಏಕಾಂಗಿ. ನನ್ನ ಆಶಯ, ಉದ್ದೇಶ ಭ್ರಷ್ಟಾಚಾರವನ್ನು ವಿರೋಧಿಸುವುದೇ ಆಗಿದೆ. ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಆಗಸ್ಟ್ 16ರಿಂದಲೇ ಉಪವಾಸ ಕುಳಿತಿದ್ದೇನೆ. ಬೆಳಿಗ್ಗೆ 10ಕ್ಕೆ ತಿಂಡಿ ತಿಂದು ಬಂದು ಸತ್ಯಾಗ್ರಹ ಆರಂಭಿಸುತ್ತೇನೆ. ರಾತ್ರಿ 8ರವರೆಗೆ ಇಲ್ಲೇ ಇರುತ್ತೇನೆ ಮಧ್ಯೆ ಒಮ್ಮೆ ಮಾತ್ರ ಚಹ ಕುಡಿಯುತ್ತೇನೆ ಅಷ್ಟೇ~ ಎನ್ನುವ ಇವರು, `ಅಲ್ಲಿ ಅಣ್ಣಾ ಹಜಾರೆ ಸತ್ಯಾಗ್ರಹ ಮುಕ್ತಾಯ ಮಾಡುವವರೆಗೂ ನಾನು ಇಲ್ಲಿ ಸತ್ಯಾಗ್ರಹ ಮುಂದುವರಿಸುತ್ತೇನೆ~ ಎಂದು ಹೇಳುತ್ತಾರೆ.

`ಲೋಕಪಾಲ ಮಸೂದೆ ಜಾರಿಯಾದರೆ ಭ್ರಷ್ಟಾಚಾರ ಒಮ್ಮೆಲೇ ಕೊನೆಯಾಗುತ್ತದೆ ಎಂದಲ್ಲ. ಬದಲಿಗೆ, ನೂರು ರೂಪಾಯಿ ಲಂಚ ತಿನ್ನುವವನನ್ನೂ ಜೈಲಿಗೆ ಕಳುಹಿಸುವಂತಾಗಬೇಕು. ಕೇವಲ ಸರ್ಕಾರಿ ಸಿಬ್ಬಂದಿ ಅಲ್ಲಲ್ಲಿ ಲಂಚ ತಿಂದಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ಮಾಡಿ ಹಿಡಿಯುವುದನ್ನು ನೋಡುತ್ತೇವೆ. ಆದರೆ, ಹಾಗೆ ಸಿಕ್ಕವರಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗುತ್ತದೆ ಎಂಬುದೂ ಮುಖ್ಯ. ಅತ್ಯಂತ ಬಿಗಿಯಾದ ಕಾನೂನು ಜಾರಿಗೆ ಬಂದರೆ ಮಾತ್ರ ರಾಜಕಾರಣಿಗಳು, ಗುತ್ತಿಗೆದಾರರು ಮತ್ತಿತರರು ನಡೆಸುವ ಭ್ರಷ್ಟಾಚಾರ ದೂರವಾಗಲು ಸಾಧ್ಯ~ ಎಂದೂ ಅವರು ಒತ್ತಿಹೇಳುತ್ತಾರೆ.

ಒಟ್ಟಾರೆ, ಭ್ರಷ್ಟಾಚಾರವನ್ನು ಹತ್ತಿಕ್ಕುವಂತೆ ಕೇಳಿ ಬರುತ್ತಿರುವ ಧ್ವನಿ ಹೀಗೇ ಮುಂದುವರಿಯಬೇಕು. ಒಂದಿಲ್ಲ ಒಂದು ದಿನ ಜಯ ದೊರೆಯುತ್ತದೆ. ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಆಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT