ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಬಡಾವಣೆ: ಮೂಲ ಸೌಕರ್ಯದ್ದೇ ಕೊರತೆ

Last Updated 15 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಕೃಷ್ಣರಾಜಪುರ: ಹೊರಮಾವು ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ನಿಸರ್ಗ ಬಡಾವಣೆಯ ಬಹುತೇಕ ಅಡ್ಡರಸ್ತೆಗಳು ಕೆಲವು ಸಮಯದಿಂದ ದುರಸ್ತಿಯಾಗಿಲ್ಲ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿಕೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

`ನಿಸರ್ಗ ಬಡಾವಣೆ ಬಿಬಿಎಂಪಿಗೆ ಸೇರಿದ್ದರೂ ಅಗತ್ಯ ಮೂಲಸೌಕರ್ಯವನ್ನು ಇನ್ನೂ ಒದಗಿಸಿಲ್ಲ. ಇಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಇದ್ದಾಗ ಟ್ಯಾಂಕರ್ ಮೂಲಕ ಬಡಾವಣೆಗೆ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಈಗ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ~ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರೇವಣ್ಣ ದೂರಿದರು.

`ಬಡಾವಣೆಯಲ್ಲಿ 2000ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಕುಡಿಯುವ ನೀರಿಗಾಗಿ ತಿಂಗಳಿಗೆ 2500 ರೂಪಾಯಿ ಖರ್ಚು ಮಾಡಬೇಕಿದೆ. ಇದು ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ~ ಎಂದು ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜಾರ್ಜ್ ಬೇಸರ ವ್ಯಕ್ತಪಡಿಸಿದರು.

`ಬಡಾವಣೆಗೆ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಕಾವೇರಿ ನೀರು ಪೂರೈಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನಾವು ಶುಲ್ಕ ಭರಿಸಲು ಮುಂದಾಗಿದ್ದೆವು. ಆದರೆ, ಬಿಬಿಎಂಪಿಗೆ ಸೇರಿದ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಬಡಾವಣೆಯೂ ಒಂದಾಗಿರುವುದರಿಂದ ಕಾವೇರಿ ನೀರಿನ ಸಂಪರ್ಕಕ್ಕೆ ಅರ್ಹತೆ ಪಡೆದಿಲ್ಲ ಎಂಬುದು ತಿಳಿದುಬಂತು. ಈಗ ಟ್ಯಾಂಕರ್ ನೀರಿನ ಪೂರೈಕೆ ಆಗುತ್ತಿಲ್ಲ. ಕೊಳವೆ ಬಾವಿಗಳನ್ನೂ ಕೊರೆಸಿಲ್ಲ~ ಎಂದರು.

`ಒಂಬತ್ತು ಅಡ್ಡ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಮುಖ್ಯರಸ್ತೆಯ ಚರಂಡಿಯ ಕಲುಷಿತ ನೀರು ಬಡಾವಣೆಗಳ ರಸ್ತೆ ಬದಿಗೆ ಬಂದು ಸಂಗ್ರಹವಾಗುತ್ತಿದೆ. ಇದರಿಂದ ಶುಚಿತ್ವ, ನೈರ್ಮಲ್ಯ ಸಮಸ್ಯೆ ಉಂಟಾಗಿದೆ~ ಎಂದು ಸಂಘದ ಅಧ್ಯಕ್ಷರಾದ ಸಿ.ಎನ್. ರವೀಂದ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

`ಬಡಾವಣೆಯ ರಸ್ತೆಗಳು ತಗ್ಗುದಿಣ್ಣೆಗಳಿಂದ ಕೂಡಿದ್ದು ಮಳೆಗಾಲದಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆ. ಇಲ್ಲಿನ ಸಮಸ್ಯೆಗಳ ಬಗ್ಗೆ  ಬಗ್ಗೆ ಹಲವು ಬಾರಿ ಶಾಸಕರಿಗೆ, ಬಿಬಿಎಂಪಿ ಅಧಿಕಾರಿಗಳಿಗೆ, ಸದಸ್ಯೆಗೆ ಮನವಿ ಸಲ್ಲಿಸಿದ್ದೇವೆ. ರಸ್ತೆ ದುರಸ್ತಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದರೂ ಈ ವರೆಗೆ ಕಾಮಗಾರಿ ಆಗಿಲ್ಲ~ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT