ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದ ಕುಸುರಿ ಯೊಸೆಮಿಟಿ

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಅಂಕುಡೊಂಕು ಹಾದಿ, ಇಕ್ಕೆಲಗಳಲ್ಲಿ ಮುಗಿಲು ಚುಂಬಿಸುವ ಬೃಹದಾಕಾರದ ಗ್ರಾನೈಟ್ ಶಿಲಾ ಪರ್ವತ ಶ್ರೇಣಿ, ಮಧ್ಯದ ಕಣಿವೆಯಲ್ಲಿ ಕಣ್ಣಿಗೆ ತಂಪು ನೀಡುವ ಎತ್ತರದ ಮರಗಳು, ಹಸಿರು ಹುಲ್ಲುಗಾವಲು, ಕಂಡಲ್ಲೆಲ್ಲ ಒಂದಲ್ಲ ಒಂದು ವೈಭವದ ಜಲಪಾತ, ಜುಳುಜುಳು ಹರಿವ ನೀರು.

ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಸುಮಾರು 3 ಸಾವಿರ ಕಿ.ಮೀ. ವಿಸ್ತಾರದ `ಯೊಸೆಮಿಟಿ~ ಎಂಬ ಈ ನಿಸರ್ಗ ಉದ್ಯಾನದಲ್ಲಿ ಇಷ್ಟೇ ಅಲ್ಲ, ಕಣ್ಣಿಗೆ ಮನಸ್ಸಿಗೆ ಮುದ ನೀಡುವ ಇನ್ನೂ ಅನೇಕ ಸ್ಥಳ, ಸಂಗತಿಗಳಿವೆ. ಇಲ್ಲಿ ಪ್ರಕೃತಿ ಮಾತೆಗೆ ನಿತ್ಯವೂ ಉತ್ಸವ.
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ವರ್ಷ 35 ಲಕ್ಷಕ್ಕೂ ಹೆಚ್ಚು ಪ್ರವಾಸಿಗಳು ಭೇಟಿ ಕೊಡುತ್ತಾರೆ. ನಿಸರ್ಗ ವಿಹಾರ, ಚಾರಣ, 1000- 1200 ಮೀಟರ್‌ನಷ್ಟು ಎತ್ತರದ ಬಂಡೆಗಳ ಮೇಲೆ ಶಿಲಾರೋಹಣ, ಸಸ್ಯ- ಜೀವಿ ಅಧ್ಯಯನ, ಹಿಮಚ್ಛಾದಿತ ಕಾಲದಲ್ಲಿ ಹಿಮ ಸಾಹಸ ಕ್ರೀಡೆ...
 
ಹೀಗೆ ವರ್ಷದುದ್ದಕ್ಕೂ ಇಲ್ಲಿ ಒಂದ್ಲ್ಲಲಾ ಒಂದು ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಆದರೆ ಇವೆಲ್ಲ ಸುಮಾರು 18- 20 ಚದರ ಕಿ.ಮೀ. ಪ್ರದೇಶಕ್ಕೆ ಸೀಮಿತ.
ಕಡಿದಾದ ಟಾರ್ ರಸ್ತೆಯಲ್ಲಿ ನೀವು ಹೋಗುತ್ತಿದ್ದರೆ ದಿಢೀರನೆ ಹಸಿರು ಕಣಿವೆ ಗೋಚರಿಸುತ್ತದೆ. ಅಲ್ಲಿಂದ ಕಾಣುವ ಕಣಿವೆಯ ನೋಟ ನಯನಮನೋಹರ. ಹಾಗೆಯೇ ಇಳಿಯುತ್ತ ಕಣಿವೆಯ ತಳ ತಲುಪಿದರೆ ನಿಮ್ಮೆದುರು ರಮ್ಯ ಹಸಿರು ಲೋಕ ತೆರೆದುಕೊಳ್ಳುತ್ತದೆ.

ಇಲ್ಲಿ ತಂಗುವವರಿಗಾಗಿ ಪ್ರವಾಸಿ ಕಾಟೇಜ್‌ಗಳು, ರೆಸ್ಟೊರೆಂಟ್‌ಗಳು ಇವೆ. ಹೈಕಿಂಗ್, ಬೋಟಿಂಗ್, ರ‌್ಯಾಫ್ಟಿಂಗ್‌ಗೆ ಬೇಕಾದ ಅನುಕೂಲತೆಗಳಿವೆ. ಯೊಸೆಮಿಟಿಯ ಪ್ರಮುಖ ತಾಣಗಳನ್ನು ಸುತ್ತಿಸುವ ಬಸ್ ಸೌಕರ್ಯವಿದೆ.

ಬೃಹತ್ ಬಂಡೆಯ ತುದಿ ಭಾಗವನ್ನು ಬರೋಬ್ಬರಿ ಅರ್ಧಕ್ಕೆ ಸೀಳಿದಂತಹ ಆಕಾರದ ಹಾಫ್ ಡೋಮ್, ಗ್ರಾನೈಟ್ ಶಿಲೆಗಳ ಸೆಂಟಿನಲ್ ಡೋಮ್, ನಾರ್ತ್ ಡೋಮ್‌ಗಳ ಭವ್ಯತೆ ಬೆರಗುಗೊಳಿಸುತ್ತದೆ. ವಿವಿಧ ಕಡೆ ನಿರ್ಮಿಸಿರುವ ವೀಕ್ಷಣಾ ಗೋಪುರಗಳು, ಅಲ್ಲಲ್ಲಿ ಅಳವಡಿಸಿರುವ ದೂರದರ್ಶಕ ಉಪಕರಣಗಳ ಮೂಲಕ ಕಾಣುವ ದೃಶ್ಯ ಇಡೀ ಯೋಸಿಮಿಟಿಯ ಚೆಲುವನ್ನು ತೆರೆದಿಡುತ್ತದೆ.

ಅತ್ಯಂತ ಕಡಿಮೆ ಪ್ರದೇಶದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿದ ಖ್ಯಾತಿ ಯೊಸಿಮಿಟಿಯದು. ಇಡೀ ಉತ್ತರ ಅಮೆರಿಕದ ಅತಿ ಎತ್ತರದ ಜಲಪಾತ ಯೊಸೆಮಿಟಿ ಫಾಲ್ಸ್ (2425 ಅಡಿ), ಪಾಶ್ಚಾತ್ಯ ಮದುವೆ ಹೆಣ್ಣಿನ ಪಾರದರ್ಶಕ ಮುಖಗವುಸಿನಂತೆ ಕಾಣುವ ಬ್ರೈಡಲ್ ವೇಲ್, 1612 ಅಡಿ ಎತ್ತರದಿಂದ ಒಂದೇ ಧಾರೆಯಾಗಿ ದುಮ್ಮಿಕ್ಕುವ ರಿಬ್ಬನ್ ಫಾಲ್ಸ್, ಎಫೆಮೆರಲ್ ಫಾಲ್ಸ್ ಮುಂತಾದವು ಇಲ್ಲಿನ ಆಕರ್ಷಣೆಯನ್ನು ಹೆಚ್ಚಿಸಿವೆ.

ಕಾಡಿನ ಮಧ್ಯೆ ತಲೆತಲಾಂತರದಿಂದ ವಾಸವಾಗಿದ್ದ ಅವಾನಿಚಿ ಬುಡಕಟ್ಟು ಜನರನ್ನು ಬಿಳಿ ಅಮೆರಿಕನ್ನರ ಶಸ್ತ್ರಸಜ್ಜಿತ ಸೇನೆ ಭೀಕರ ಯುದ್ಧದಲ್ಲಿ ಕೊಂದು ಕಣಿವೆಯನ್ನು ಪ್ರವೇಶಿಸಿದ್ದು 1851ರಲ್ಲಿ. ಅಲ್ಲಿವರೆಗೂ ಹೊರ ಪ್ರಪಂಚಕ್ಕೆ ಅಪರಿಚಿತವಾಗಿದ್ದ ಈ ಸ್ಥಳ ಮುಂದೆ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿ ಬೆಳೆಯಿತು. ಯುದ್ಧ ಶುರುವಾದ ಸ್ಥಳವನ್ನು ಈಗಲೂ ಅತ್ಯಂತ ಜತನದಿಂದ ಕಾಪಾಡಿದ್ದಾರೆ.

ಪ್ರವಾಸಿ ಋತುವಿನ ಅವಧಿಯಲ್ಲಂತೂ ಯೋಸೆಮಿಟಿ ಗಿಜಿಗಿಜಿ ದಟ್ಟಣೆಯಿಂದ ಕೂಡಿರುತ್ತದೆ. ವಾಹನ ಪಾರ್ಕಿಂಗ್‌ಗೆ ಜಾಗ ಹುಡುಕುವುದೇ ದೊಡ್ಡ ಸವಾಲು. ಅನೇಕ ಸಲ ಹತ್ತಾರು ಕಿ.ಮೀ. ಸುತ್ತು ಹೊಡೆದರೂ ಒಂದೇ ಒಂದು ಕಡೆ ವಾಹನ ನಿಲುಗಡೆಗೆ ಸ್ಥಳ ಸಿಗದೇ ಇರಬಹುದು. ದೂರದಲ್ಲಿ ವಾಹನ ನಿಲ್ಲಿಸಿ ಉಚಿತ ಶಟಲ್ ಸೇವೆ ಬಳಸಿಕೊಳ್ಳಬೇಕಾಗುತ್ತದೆ. ಆದರೂ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಣೆ ಇದಕ್ಕಿದೆ. 

ಸ್ಯಾನ್‌ಫ್ರಾನ್ಸಿಸ್ಕೊ ನಗರದಿಂದ 4 ತಾಸು ಪ್ರಯಾಣದಷ್ಟು ದೂರದಲ್ಲಿರುವ ಈ ಸ್ಥಳ ನಿಸರ್ಗವನ್ನು ಪ್ರೀತಿಸುವವರಿಗಂತೂ ಸುಗ್ಗಿಯಿದ್ದಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT