ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೆಪ್ಪರ್‌ಮಿಂಟ್ ತಾತಾ' ಮಾಸ್ತಿ: ನೆನಪು ಹಂಚಿಕೊಂಡ ನಿಸಾರ್ ಅಹಮದ್

Last Updated 3 ಮೇ 2020, 10:31 IST
ಅಕ್ಷರ ಗಾತ್ರ

[ಪ್ರಜಾವಾಣಿ ನೆನಪಿನಂಗಳದಿಂದ: ಕನ್ನಡದ ಮತ್ತೊಬ್ಬ ಮಹಾನ್ ಚೇತನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ 2016ರ ಜೂನ್ 6ರಂದು ಕವಿ ನಿಸಾರ್ ಅಹಮದ್ ಅವರು ಮಾಸ್ತಿಯವರೊಂದಿಗಿನ ಒಡನಾಟವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಹಂಚಿಕೊಂಡಿದ್ದರು. ಅದು ಇಲ್ಲಿದೆ.]

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿ ಹುಟ್ಟಿದರೂ ಅವರ ಜೀವಿತದ ಬಹುಭಾಗ ಕಳೆದದ್ದು ಬೆಂಗಳೂರಿನಲ್ಲಿಯೇ. 2016 ಜೂನ್ 6ಕ್ಕೆ ಮಾಸ್ತಿ ಅವರ 125ನೇ ಜನ್ಮದಿನೋತ್ಸವ. ಅನೇಕ ಪ್ರತಿಭಾವಂತರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕೀರ್ತಿ ಅವರದು. ಮಾಸ್ತಿ ಅವರ ಜತೆಗಿನ ಒಡನಾಟವನ್ನು ಕವಿ ಕೆ.ಎಸ್. ನಿಸಾರ್ ಅಹಮದ್ ಇಲ್ಲಿ ನೆನಪಿಸಿಕೊಂಡಿದ್ದಾರೆ. ಅವರ ಮಾತುಗಳನ್ನು ಮಂಜುಶ್ರೀ ಎಂ.ಕಡಕೋಳ ನಿರೂಪಿಸಿದ್ದಾರೆ.

ಮಾಸ್ತಿಯವರ ವ್ಯಕ್ತಿತ್ವ ಮತ್ತು ಬರವಣಿಗೆ ಬಗ್ಗೆ ನನಗೆ ಮೊದಲಿನಿಂದಲೂ ಆಕರ್ಷಣೆ. ನಾನು ಹೊಸಕೋಟೆಯ ಶಾಲೆಯಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದೆ. ಆಗ... ಎನ್‌ಕೆಎಸ್‌ ಎನ್ನುವ ನಮ್ಮ ಗಣಿತ ಮೇಷ್ಟ್ರು ‘ಸುಬ್ಬಣ್ಣ’ ಕಥೆ ಹೇಳಿದ್ದರು. ಇದನ್ನು ಬರೆದವರು ಮಾಸ್ತಿ ಕಣ್ರೋ ಅಂತ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ.

ಆಗಲೇ ನಾನು ಮೊದಲ ಬಾರಿಗೆ ಮಾಸ್ತಿ ಅವರ ಹೆಸರು ಕೇಳಿದ್ದು. ನಾನು ಬೆಂಗಳೂರಿನಲ್ಲಿ ಇಂಟರ್ ಮೀಡಿಯಟ್ ಓದುತ್ತಿದ್ದಾಗ ಅಲ್ಲಿ ಶಾಲೆಯ ಹತ್ತಿರದ ಸಾರ್ವಜನಿಕ ವಾಚನಾಲಯದಲ್ಲಿ ‘ಜೀವನ’ ಪತ್ರಿಕೆ ಬರುತ್ತಿತ್ತು. ಅದನ್ನು ಓದುತ್ತಿದ್ದೆ. ಆ ಮೂಲಕ ಮಾಸ್ತಿ ಹೆಚ್ಚು ಪರಿಚಯವಾದರು.

1954ರಲ್ಲಿ ಮೊದಲ ಬಾರಿಗೆ ಮಾಸ್ತಿ ಅವರನ್ನು ಕಾರ್ಯಕ್ರಮವೊಂದರಲ್ಲಿ ನಾನು ಮತ್ತು ನನ್ನ ಸ್ನೇಹಿತ ಚಂದ್ರಶೇಖರ ಭೇಟಿಯಾದೆವು. ಆಗಿನ್ನೂ ನಾನು ವಿದ್ಯಾರ್ಥಿ. ನಾಲ್ಕೈದು ವರ್ಷಗಳ ನಂತರ ಮಾಸ್ತಿ ಅವರ ಜತೆ ಆಪ್ತತೆ ಬೆಳೆಯಿತು. ಮಧ್ಯೆ ಮಧ್ಯೆ ಕಾರ್ಯಕ್ರಮಗಳಲ್ಲಿ ನಿರಂತರ ಭೇಟಿ ನಡೆಯುತ್ತಿತ್ತು.

ಪದವಿ ಓದುತ್ತಿದ್ದಾಗ ಅವರ ‘ಜೀವನ’ ಪತ್ರಿಕೆಗೆ ಕವಿತೆ ಕಳುಹಿಸಿದ್ದೆ. ಅದು ಪ್ರಕಟವಾಗಿತ್ತು. ಕವಿತೆ ಪ್ರಕಟವಾದ ಎಷ್ಟೋ ವರ್ಷಗಳ ನಂತರ ಒಂದು ದಿನ (ಆಗ ಮಾಸ್ತಿಗೆ ನಾನು ಆಪ್ತನಾಗಿದ್ದೆ) ‘ಏನ್ಸಾರ್ ‘ಜೀವನ’ದಲ್ಲಿ ನನ್ನ ಪದ್ಯ ಪ್ರಕಟಿಸಿದ್ದೀರಿ. ನನ್ನ ಪರಿಚಯ ಇರಲಿಲ್ಲವಲ್ಲ ಆಗ ಎಂದೆ. ಅದಕ್ಕೆ ಅವರು ‘ಪರಿಚಯ ಬೇಕಿಲ್ಲ ಕಣಯ್ಯಾ, ನಿನ್ನ ಕವಿತೆಯಲ್ಲಿ ಸತ್ವ ಇತ್ತು ಅದಕ್ಕೆ ಹಾಕಿದೆ’ ಎಂದು ತುಂಬಾ ಮುಗ್ಧವಾಗಿ, ಸರಳವಾಗಿ ಉತ್ತರಿಸಿದರು.

ಇದು ಮಾಸ್ತಿ ಅವರ ವ್ಯಕ್ತಿತ್ವದ ಒಂದು ಸಣ್ಣ ಪರಿಚಯ. ಯಾರೇ ಪ್ರತಿಭಾವಂತರಿರಲಿ ಅವರ ಹಿನ್ನೆಲೆ ಇತ್ಯಾದಿ ಏನನ್ನೂ ನೋಡದೆ ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ಗಾಂಧಿ ಬಜಾರಿನಲ್ಲಿ...
ಅಂದಿನ ಗಾಂಧಿ ಬಜಾರ್ ಈಗಿಲ್ಲ. ಅಂದಿನ ಗಾಂಧಿ ಬಜಾರಿಗೆ ಒಂದು ರೀತಿಯ ಸಾಂಸ್ಕೃತಿಕ, ಸಾಹಿತ್ಯಿಕ, ಸಂಗೀತದ ಸ್ಪರ್ಶ ಇತ್ತು. ಅದೊಂದು ‘ಸಾಂಸ್ಕೃತಿಕ ಕಾಶಿ’ ಆಗಿತ್ತು. ವೈಎನ್‌ಕೆ, ಎಚ್‌. ನರಸಿಂಹಯ್ಯ, ನವರತ್ನ ರಾಮರಾಯರು, ಅ.ನ. ಸುಬ್ಬರಾಯರು, ಎ.ಎಸ್‌. ಮೂರ್ತಿ, ಎಂ.ಬಿ. ಸಿಂಗ್ ಅಂಥವರು ಇದ್ದರು. ಒಂದು ರೀತಿ ಕಲಾವಿದರ, ಸಾಹಿತಿಗಳ, ಪತ್ರಕರ್ತರ ಮೇಳವೇ ಇರುತ್ತಿತ್ತು ಅಲ್ಲಿ. ಆಗ ಅಲ್ಲಿಗೆ ಹೋದರೆ ಮಾರ್ಕೆಟ್‌ ಅನುಭವ ಆಗುತ್ತಿರಲಿಲ್ಲ. ಈಗ ‘ಮಾರ್ಕೆಟ್‌ತನ’ ಬಂದಿದೆ.

ತಲೆ ಮೇಲೆ ಟೋಪಿ, ಕಂದು ಇಲ್ಲವೇ ಗ್ರೇ ಕಲರ್ ಕೋಟ್‌. ಟ್ರೌಷರ್‌, ಇಲ್ಲ ಕಚ್ಚೆ ಪಂಚೆ, ಕೈಯಲ್ಲಿ ಯಾವಾಗಲೂ ಕೊಡೆ ಹಿಡ್ಕೊಂಡು ಮಾಸ್ತಿ ಗಾಂಧಿ ಬಜಾರಿನಲ್ಲಿ ಎದುರಾಗುತ್ತಿದ್ದರು. ಆಗ ಅವರೊಂದಿಗೆ ಗಂಟೆಗಟ್ಟಲೆ ಹರಟಿದ್ದೇನೆ. ಚರ್ಚೆ ಮಾಡಿದ್ದೇನೆ. ಅದೆಲ್ಲಾ ಈಗ ನೆನಪು...

ಮಡಿವಂತ ಅಲ್ಲ...
ಮಾಸ್ತಿ ತುಂಬಾ ಲೆಕ್ಕಾಚಾರದ ಮನುಷ್ಯ. ಆದರೆ, ಅವರ ಮನೆಯಲ್ಲಿ ಅಷ್ಟೇ ಆತಿಥ್ಯ ದೊರೆಯುತ್ತಿತ್ತು. ಯಾರೇ ಹೋಗಲಿ ಮಾಸ್ತಿ ಅವರ ಮನೆಯಲ್ಲಿ ಆತಿಥ್ಯ ಇದ್ದೇ ಇರುತ್ತಿತ್ತು.

‘ನೋಡಿ ನಿಸಾರ್ ನನಗೆ ತುಂಬಾ ಮಡಿವಂತ ಅಂತಾರೆ. ನಾನು ಗಾಂಧಿ ಜತೆ ಮದ್ರಾಸ್‌ಗೆ ಹೋದಾಗ ಹರಿಜನರ ಜತೆ ಪಕ್ಕದಲ್ಲೇ ಕುಳಿತು ಊಟ ಮಾಡಿದ್ದೇನೆ. ನಾನು ಪಂಕ್ತಿಭೇದ ಮಾಡಿಲ್ಲ ನಿಸಾರ್...’ ಎಂದು ಮಾಸ್ತಿ ಹೇಳಿಕೊಂಡಿದ್ದರು ನನ್ನ ಬಳಿ.

ಸನ್ಮಾನ...
ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂತು. ಮಾಸ್ತಿ ಅವರಿಗೆ ಸನ್ಮಾನ ಮಾಡಬೇಕೆಂದು ಅವರ ಅನುಮತಿ ಪಡೆಯಲು ಹೋದೆ. ‘ಸರ್ಕಾರದ ಕಾರ್ಯಕ್ರಮಕ್ಕೆ ಬರೋದಿಲ್ಲ ನಿಸಾರ್’ ಅಂದ್ರು. ‘ಸಾರ್ ಅಕಾಡೆಮಿ ಸ್ವಾಯತ್ತ ಸಂಸ್ಥೆ’ ಎಂದು ಹೇಗೋ ಒಪ್ಪಿಸಿದೆ.

ಕತ್ರಿಗುಪ್ಪೆಯ ಬಳಿ ಒಳ್ಳೆಯ ವಾಲಗದವರು ಇದ್ದರು. ಮಾಸ್ತಿಯವರನ್ನು ಸ್ವಾಗತಿಸಲು ಅವರನ್ನು ವ್ಯವಸ್ಥೆ ಮಾಡಿದ್ದೆ. ಅದನ್ನು ಯಾರೋ ಮಾಸ್ತಿಗೆ ಹೇಳಿಬಿಟ್ಟಿದ್ದಾರೆ. ಅವರು ನನಗೆ ದೂರವಾಣಿ ಕರೆ ಮಾಡಿ ‘ನಿಸಾರ್ ನಾನು ಬರೋದಿಲ್ಲ. ನೀವು ಬಾಜಾ–ಭಜಂತ್ರಿ ಇಟ್ಟುಕೊಂಡರೆ ನಾನು ಬರೋದಿಲ್ಲ. ನನಗೆ ಸರಳವಾಗಿ ಇರಬೇಕು’ ಎಂದರು ಎಷ್ಟು ಒಪ್ಪಿಸಿದರೂ ಒಪ್ಪಲಿಲ್ಲ. ಕೊನೆಗೆ ವಾಲಗದವರನ್ನು ವಾಪಸ್ ಕಳುಹಿಸಿದೆ.

ಪೆಪ್ಪರ್ ಮೆಂಟ್‌ ತಾತಾ
ಮಾಸ್ತಿ ಯಾವತ್ತೂ ಜೇಬಲ್ಲಿ ಪೆಪ್ಪರ್ ಮೆಂಟ್ ಇಟ್ಟುಕೊಂಡಿರುತ್ತಿದ್ದರು. ಅದನ್ನು ಪುಟ್ಟ ಮಕ್ಕಳಿಗೆ ಕೊಡುತ್ತಿದ್ದರು. ಆ ಮಕ್ಕಳು ಅಂಕಲ್ ಅಂದರೆ, ಅಂಕಲ್‌ ಅಲ್ಲ. ತಾತಾ ಅನ್ನು ಅನ್ನುತ್ತಿದ್ದರು. ಮಾಸ್ತಿ ಅವರ 96 ವರ್ಷದ ತುಂಬು ಜೀವನದಲ್ಲಿ ಸರಳತೆ, ಸುಲಭ ಲಭ್ಯತೆ ಎದ್ದು ಕಾಣುತ್ತಿತ್ತು.

ಸಂಧ್ಯಾ ವಂದನೆ ಬಿಟ್ಟೇನು, ಕ್ಲಬ್‌ ಬಿಡೋಲ್ಲ

ಇನ್ನೇನು ಮಾಸ್ತಿ ಅವರು ತೀರಿಕೊಳ್ಳುವ ಎರಡು ತಿಂಗಳ ಮುನ್ನ ಅನ್ಸುತ್ತೆ. ಆಗ ಪ್ರತಿದಿನ ಸಂಜೆ ತಪ್ಪದೇ ಕ್ಲಬ್ಬಿಗೆ ಹೋಗುತ್ತಿದ್ದರು. ವಯಸ್ಸಾದ ಮೇಲೆ ಅಧ್ಯಾತ್ಮ ಅಂತ ಭಗವದ್ಗೀತೆ ಹಿಡ್ಕೊಂಡು ಮುಳುಗುವ ಬದಲು ಅವರು ಕ್ಲಬ್ಬಿಗೆ ಹೋಗೋರು.

ಕಣ್ಣಿಗೆ ಮಂಜು ಹೋಗಬೇಡಿ ಅಂದರೆ, ಮಂಜೋ ಏನಿಲ್ಲವಲ್ಲ ಅಂತ ಉತ್ತರಿಸುತ್ತಿದ್ದರು. ವಯಸ್ಸಾಗಿದೆ ಒಬ್ಬರೇ ಹೋಗುತ್ತಿರಲ್ಲ ಅಂದ್ರೆ... ‘ಅಭ್ಯಾಸ ಆಗಿದೆ ಅಭ್ಯಾಸ ಆಗಿದೆ’ ಅನ್ನುತ್ತಾ ಇದ್ದರು.

ಸ್ವಾಮಿ ಈ ವಯಸ್ಸಿನಲ್ಲಿ ಯಾಕೆ ಕ್ಲಬ್‌ಗೆ ಹೋಗ್ತೀರಿ ಮನೆಯಲ್ಲಿ ಆರಾಮಾಗಿ ಇರಿ ಎಂದು ವೈದಿಕರೊಬ್ಬರು ಹೇಳಿದಾಗ, ‘ಸಂಧ್ಯಾವಂದನೆ ಬಿಟ್ಟೇನೂ ಆದರೆ, ಕ್ಲಬ್ಬಿಗೆ ಹೋಗೋದು ಬಿಡೋಲ್ಲ’ ಅಂದಿದ್ದರು ಮಾಸ್ತಿ. ಧರ್ಮ ನಿಷ್ಠೆ ಇದ್ದರೂ, ಲೌಕಿಕವಾದ ಜೀವನ ಪ್ರೀತಿ ಬಿಟ್ಟಿರಲಿಲ್ಲ ಅವರು.

ನಾಟಕ ನೋಡಿದ್ದು...
ನನ್ನ ‘ಮಿಡ್ ಸಮ್ಮರ್ ನೈಟ್‌ ಡ್ರೀಮ್ಸ್‌’ ನಾಟಕವನ್ನು ಸಿ.ಆರ್. ಸಿಂಹ ‘ನಟರಂಗ’ ದ ಮೂಲಕ ಸ್ಟೇಜ್ ಮಾಡಿದ್ದ. ಅದನ್ನು ವೀಕ್ಷಿಸಲು ಮಾಸ್ತಿ ಅವರನ್ನು ಆಹ್ವಾನಿಸುವಂತೆ ಸಿಂಹ ಕೋರಿದ್ದ. ಕ್ಲಬ್‌ಗೆ ಹೋಗಿ ಮಾಸ್ತಿ ಅವರನ್ನು ಕಂಡು ಹೇಗೋ ಒಪ್ಪಿಸಿದೆ.

ಐದು ನಿಮಿಷ ಮಾತ್ರ ನೋಡುವುದಾಗಿ ಮಾಸ್ತಿ ಭರವಸೆ ನೀಡಿದ್ದರು. ಆದರೆ, ಆ ನಾಟಕ ಪೂರ್ತಿ ನೋಡಿದ್ದ ಮಾಸ್ತಿ ಅದರ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅದನ್ನು ಪುಸ್ತಕ ರೂಪದಲ್ಲಿ ತಂದಾಗ ಮುನ್ನುಡಿ ಬರೆಯಬೇಕೆಂದರೆ ನಾನು ಸಂತೋಷವಾಗಿ ಬರೆಯುವೆ ಎಂದರು.

ಎಂಥ ದೊಡ್ಡವರು ಹೋಗಿ ಬೇಡಿಕೊಂಡರೂ ಮುನ್ನುಡಿ ಬರೆಯದ ಮಾಸ್ತಿ ಅಂದು ತಾವೇ ಮುನ್ನುಡಿ ಬರೆಯುವೆ ಎಂದಾಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ.

>> ನಿಸಾರ್‌ ವಾಚಿಸಿದ ಮಾಸ್ತಿ ಪದ್ಯ ಕೇಳಲು ಇಲ್ಲಿ ಕ್ಲಿಕ್ಕಿಸಿ

*
ಮಾಸ್ತಿ–125:
ಪೀಠದ ಶಾಂತಿ ಮಂತ್ರ–ದಿನದ ಸಂಭ್ರಮ, ಶುಭ ಹಾರೈಕೆ– ಜಿ. ವೆಂಕಟಸುಬ್ಬಯ್ಯ. ಸನ್ಮಾನ– ‘ಕಾಕನಕೋಟೆ’ ನಾಟಕದ ಕಲಾವಿದರು ಮತ್ತು ನಟ ಶ್ರೀನಾಥ್, ಚಂದ್ರನಾಥ ಆಚಾರ್ಯ ಮತ್ತು ಸುಧಾಕರ ದರ್ಬೆ.

ಮಾಸ್ತಿ ನಿಲುವು ಚಿತ್ರ ಅನಾವರಣ ಮತ್ತು ಅಧ್ಯಕ್ಷತೆ– ಸ್ವಾಮಿ ಹರ್ಷಾನಂದಜಿ ಮಹಾರಾಜ್‌. ಲೋಕಾರ್ಪಣೆ– ‘ಸಾಹಿತ್ಯ ಪ್ರೇರಣೆ’ ಹಾಗೂ ಇತರ ಮೂರು ಕೃತಿಗಳು.

ಧನ್ಯವಾದ ಸಮರ್ಪಣೆ– ಪಿ.ಎನ್. ಸದಾಶಿವ, ಎಂ. ರಂಗಶಾಯಿ, ಎಲ್. ಶಿವಶಂಕರ್, ಕರಿನಂಜಯ್ಯ ಅವರಿಗೆ. ಆಯೋಜನೆ–ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್‌, ಮಾಸ್ತಿ ಅಧ್ಯಯನ ಪೀಠ,

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ. ಸ್ಥಳ– ಡಿ.ವಿ.ಜಿ. ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಎನ್. ಆರ್. ಕಾಲೊನಿ, ಬಸವನಗುಡಿ. ಸಂಜೆ– 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT