ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್-ಕೇಂದ್ರದ ನಿರ್ಧಾರ ಮುಂದಕ್ಕೆ

Last Updated 14 ಜನವರಿ 2011, 6:10 IST
ಅಕ್ಷರ ಗಾತ್ರ

ಹೈದರಾಬಾದ್:ವೈದ್ಯಕೀಯ ಕೋರ್ಸ್‌ಗಳಿಗೆ ಏಕರೂಪದ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಬಹುತೇಕ ಎಲ್ಲ ರಾಜ್ಯಗಳೂ ತಾತ್ವಿಕವಾಗಿ ಒಪ್ಪಿದ್ದರೂ ತಮಿಳುನಾಡು ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರಿಂದಾಗಿ ಈ ವಿಚಾರದಲ್ಲಿ ಸರ್ವಸಮ್ಮತ ಏರ್ಪಡುವ ತನಕ ಉದ್ದೇಶಿತ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬಗ್ಗೆ ನಿರ್ಧಾರ ಕೈಗೊಳ್ಳದಿರಲು ಕೇಂದ್ರ ತೀರ್ಮಾನಿಸಿದೆ.

ಇಲ್ಲಿ ಗುರುವಾರ ಕೊನೆಗೊಂಡ ಆರೋಗ್ಯ ಸಚಿವರು ಮತ್ತು ಕಾರ್ಯದರ್ಶಿಗಳ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ತಮಿಳುನಾಡು ಉದ್ದೇಶಿತ ‘ನೀಟ್’ ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿತು. ಪಶ್ಚಿಮ ಬಂಗಾಳ ತಟಸ್ಥವಾಗಿರಲು ನಿರ್ಧರಿಸಿದರೆ, ಉಳಿದ ರಾಜ್ಯಗಳು ಆಡಳಿತ ವರ್ಗ ಮತ್ತು ಎನ್‌ಆರ್‌ಐ ಕೋಟಾಗಳನ್ನು ಸೂಕ್ತವಾಗಿ ಸೇರಿಸಿಕೊಳ್ಳುವುದಕ್ಕೆ ಕೆಲವು ಬದಲಾವಣೆಗಳನ್ನು ಸೂಚಿಸಿದವು.

ಈ ಪರೀಕ್ಷೆಯ ಉಪಯೋಗದ ಬಗ್ಗೆ ತಮಿಳುನಾಡಿನ ಮನವೊಲಿಕೆಗೆ ಸಮಾವೇಶದಲ್ಲಿ ಯತ್ನಿಸಿದರೂ ಅದಕ್ಕೆ ಯಶಸ್ಸು ಸಿಗಲಿಲ್ಲ.  ತಮ್ಮ ಭಾಷಣವನ್ನು ಓದಿ ಹೇಳಿದ ತಮಿಳುನಾಡಿನ ಆರೋಗ್ಯ ಸಚಿವ ಎಂ. ಆರ್. ಕೆ. ಪನ್ನೀರ್‌ಸೆಲ್ವಂ ಅವರು, ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ, ಇಂತಹ ಪರೀಕ್ಷೆಯಿಂದ ಶ್ರೀಮಂತ ವರ್ಗಕ್ಕೆ ಮಾತ್ರ ಅನುಕೂಲ ಎಂಬ ಭಾವನೆ ಸರ್ಕಾರದ್ದು. ಹೀಗಾಗಿ ಉದ್ದೇಶಿತ ‘ನೀಟ್’ ಪರೀಕ್ಷೆಯಿಂದ ರಾಜ್ಯವನ್ನು ಹೊರಗಿಡಬೇಕು ಎಂದು ಕೇಳಿಕೊಂಡರು.

ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಆಡಳಿತ ಮಂಡಳಿಯ (ಬೋರ್ಡ್ ಆಫ್ ಗವರ್ನರ್ಸ್‌) ಅಧ್ಯಕ್ಷರಾದ ಡಾ. ಎಸ್. ಕೆ. ಸರಿನ್ ಅವರು ‘ನೀಟ್’ನ ಪ್ರಯೋಜನವನ್ನು ವಿವರಿಸಿ ಹೇಳಿದ್ದರು. ತಮಿಳುನಾಡಿನಲ್ಲಿ ಇರುವಂತಹ ಮೀಸಲಾತಿ ಪದ್ಧತಿ ಮುಂದೆಯೂ ಹಾಗೆಯೇ ಇರಲಿದೆ, ನಾವು ಕೇವಲ ರ್ಯಾಂಕ್‌ಗಳನ್ನಷ್ಟೇ ನೀಡುತ್ತೇವೆ ಎಂದು ಅವರು ಹೇಳಿದ್ದರು. ಆದರೂ ಈ ವಾದವನ್ನು ಒಪ್ಪಿಕೊಳ್ಳಲು ತಮಿಳುನಾಡು ನಿರಾಕರಿಸಿತು. ಹೀಗಾಗಿ ಸಮ್ಮೇಳನದ ಕೊನೆಯಲ್ಲಿ ಎಲ್ಲಾ ರಾಜ್ಯಗಳೂ ‘ನೀಟ್’ ವಿಚಾರದಲ್ಲಿ ಸರ್ವಸಮ್ಮತ ನಿರ್ಧಾರಕ್ಕೆ ಬರುವ ತನಕ ಈ ವಿಷಯವನ್ನು ಬದಿಗಿಡಲು ನಿರ್ಧರಿಸಲಾಯಿತು.

ಆಯುರ್ವೇದ, ಯುನಾನಿಯಂತಹ ಭಾರತೀಯ ಮೂಲದ ವೈದ್ಯಕೀಯ ಶಿಕ್ಷಣ ಕ್ರಮದಲ್ಲೂ ಏಕರೂಪದ ಪ್ರವೇಶ ಪರೀಕ್ಷೆ ನಡೆಸುವ ಸಂಬಂಧ ಇದೇ ರೀತಿಯ ಸಮ್ಮೇಳನವನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತು. ಇಂತಹ ಸಮ್ಮೇಳನದ ಆತಿಥ್ಯ ವಹಿಸುವ ಇಚ್ಛೆಯನ್ನು ಕರ್ನಾಟಕ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT