ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ರೂಪಿಸಲು ದತ್ತಾಂಶ ಮಾಹಿತಿ ಕಡ್ಡಾಯ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆಡಳಿತದಲ್ಲಿ ಪಾರದರ್ಶಕತೆ ಸಾಧಿಸುವ ಸಲುವಾಗಿ ಯಾವುದೇ ನೀತಿ ರೂಪಿಸುವ ಮೊದಲು ಅಂತರಿಕ್ಷ ಸ್ಥಳ ಸಂಬಂಧಿತ ದತ್ತಾಂಶ (ಜಿಯೊ ಸ್ಪೇಷಿಯಲ್ ಡಾಟಾ) ಪಡೆಯುವುದನ್ನು ಕಡ್ಡಾಯಗೊಳಿಸಬೇಕು~ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಹೇಳಿದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಬೆಂಗಳೂರಿನ ಪ್ರೊ.ಸತೀಶ್ ಧವನ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಅಂತರಿಕ್ಷ ಸ್ಥಳ ಸಂಬಂಧಿ ದತ್ತಾಂಶ ಸೌಕರ್ಯ ಕುರಿತ ಹನ್ನೊಂದನೇ ವಿಚಾರ ಸಂಕಿರಣದಲ್ಲಿ ಅವರು ರಾಜ್ಯ ಅಂತರಿಕ್ಷ ಸ್ಥಳ ಸಂಬಂಧಿ ಪೋರ್ಟಲ್ ಉದ್ಘಾಟಿಸಿ ಮಾತನಾಡಿದರು.

`ಅಂತರಿಕ್ಷ ಸ್ಥಳ ಸಂಬಂಧಿ ದತ್ತಾಂಶವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು. ಯಾವುದಾದರೂ ನೀತಿ ರೂಪಿಸುವ ಮುನ್ನ ದತ್ತಾಂಶ ಮಾಹಿತಿ ಪಡೆಯುವುದನ್ನು ಕಡ್ಡಾಯ ಮಾಡಬೇಕು. ಹೀಗಾದಾಗ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಾಧ್ಯವಾಗುತ್ತದೆ. ದತ್ತಾಂಶವನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಬೇಕು. ಪರಿಷ್ಕರಣೆ ಆಗದ ದತ್ತಾಂಶದಿಂದ ಯಾವುದೇ ಲಾಭವಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದ ಮಾಹಿತಿಯನ್ನೂ ಪರಿಷ್ಕರಣೆ ಮಾಡಬೇಕು~ ಎಂದು ಅವರು ಅಭಿಪ್ರಾಯಪಟ್ಟರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಿದ್ಯಾಶಂಕರ್, ಬೆಂಗಳೂರಿನ ರಸ್ತೆಯೊಂದರಲ್ಲಿ ಈಗಾಗಲೇ ಕೊಳವೆ ಬಾವಿ ಕೊರೆಸಲಾಗಿದೆ ಎಂದಿಟ್ಟುಕೊಳ್ಳೋಣ. ಆ ಮಾಹಿತಿ ಸ್ಥಳ ಸಂಬಂಧಿ ದತ್ತಾಂಶದಲ್ಲಿ ದಾಖಲಾಗಿರುತ್ತದೆ. ಅದೇ ಸ್ಥಳದಲ್ಲಿ ಮತ್ತೊಮ್ಮೆ ಕೊಳವೆ ಬಾವಿ ಕೊರೆಸಲು ಯಾರಾದರೂ ಮುಂದಾದರೆ ಮಾಹಿತಿ ಸಿಗುತ್ತದೆ. ಅದಾಗಲೇ ಅಲ್ಲಿ ಕೊಳವೆ ಬಾವಿ ಇರುವುದು ಗಮನಕ್ಕೆ ಬರುತ್ತದೆ. ಈ ರೀತಿಯಲ್ಲಿ ದತ್ತಾಂಶವನ್ನು ಉಪಯೋಗಿಸಿಕೊಳ್ಳಬಹುದು ಎಂದರು.

ಮೊಬೈಲ್ ನೀತಿ: `ಮೊಬೈಲ್ ಪಾಲಿಸಿ ತರಲು ಇಲಾಖೆ ನಿರ್ಧರಿಸಿದೆ. ಉದಾಹರಣೆಗೆ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್‌ಗಾಗಿ ಕಾಯುತ್ತಿದ್ದಾನೆ ಅಂದುಕೊಳ್ಳಿ, ಬಸ್ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಆತ ಸಂಸ್ಥೆಗೆ ಎಸ್‌ಎಂಎಸ್ ಮಾಡಿ ತಿಳಿದುಕೊಳ್ಳುವಂತಹ ವ್ಯವಸ್ಥೆ ಇರಬೇಕು. ಇದೇ ರೀತಿ ಜಲಮಂಡಳಿ ಬಿಲ್ಲನ್ನು ಗ್ರಾಹಕರ ಮೊಬೈಲ್ ಫೋನ್‌ಗೆ ಕಳುಹಿಸಬೇಕು.

ಗ್ರಾಹಕರು ಸಹ ಮೊಬೈಲ್ ಮೂಲಕವೇ ಬಿಲ್ ಭರಿಸುವ ವ್ಯವಸ್ಥೆ ಮಾಡಬೇಕು. ಆಗ ಎಲ್ಲರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಕೆಲಸಗಳು ನಡೆಯುತ್ತಿವೆ. ಎಲ್ಲರೂ ಬಳಸುವ ಸಾಮಾನ್ಯ ಫೋನ್‌ಗಳಲ್ಲಿ ಇದು ಲಭ್ಯವಿರುವಂತೆ ಮಾಡಲಾಗುತ್ತದೆ. ಈ ರೀತಿ 39 ಕೆಲಸಗಳನ್ನು ಮೊಬೈಲ್ ಫೋನ್ ಮೂಲಕ ಸಾಧ್ಯವಾಗಿಸುವ ಉದ್ದೇಶ ಇದೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ, ಬೆಂಗಳೂರು) ನಿರ್ದೇಶಕ ಪ್ರೊ.ಪಿ.ಬಲರಾಮ್ ಮಾತನಾಡಿ, `ಆಡಳಿತದಲ್ಲಿ ಅಂತರಿಕ್ಷ ಸ್ಥಳ ಸಂಬಂಧಿತ ದತ್ತಾಂಶವನ್ನು ಬಳಸಿಕೊಳ್ಳಬೇಕು. ಮಾಹಿತಿಯನ್ನು ಪರಿಷ್ಕರಿಸಿ ನಿರ್ವಹಣೆ ಮಾಡುವುದು ಮತ್ತು ಅದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಕೆಲಸ ಸವಾಲಿನದ್ದು, ಅದನ್ನು ನಿರ್ವಹಿಸಬೇಕು~ ಎಂದರು.

ರಾಜ್ಯ ಅಂತರಿಕ್ಷ ಸ್ಥಳ ಸಂಬಂಧಿ ಪೋರ್ಟಲ್‌ನಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳ ಮಾಹಿತಿಯನ್ನು ನೀಡಲಾಗಿದೆ. www.karnatakageoportal ವೆಬ್‌ಸೈಟ್ ವಿಳಾಸದಲ್ಲಿ ಈ ಮಾಹಿತಿಯನ್ನು ನೋಡಬಹುದು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಶಿವಮೊಗ್ಗ ಜಿಲ್ಲೆಯ ಮಾಹಿತಿಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯದ ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ ಸರ್.ಎಂ.ವಿಶ್ವೇಶ್ವರಯ್ಯ ಅವರ ಪೀಠವನ್ನು ಐಐಎಸ್ಸಿಯಲ್ಲಿ ಆರಂಭಿಸುವ ಉದ್ದೇಶವನ್ನು ಇದೇ ವೇಳೆ ಪ್ರಕಟಿಸಲಾಯಿತು.

ಐಐಎಸ್ಸಿ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಮೋಹನ್‌ಕುಮಾರ್, ಸರ್ವೇಯರ್ ಜನರಲ್ ಆಫ್ ಇಂಡಿಯಾದ ಎಸ್.ಸುಬ್ಬರಾವ್, ರಾಷ್ಟ್ರೀಯ ಅಂತರಿಕ್ಷ ಸಂಬಂಧಿ ದತ್ತಾಂಶದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಶಿವಕುಮಾರ್, ಐಐಎಸ್ಸಿ ಭೂಮಿ ಮತ್ತು ಪರಿಸರ ವಿಜ್ಞಾನ ವಿಭಾಗದ ವಿಭಾಗೀಯ ಮುಖ್ಯಸ್ಥ ಪ್ರೊ.ಬಿ.ಎನ್.ರಘುನಂದನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT