ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘಿಸಿದ ಎಚ್‌ಡಿಕೆ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಧಾರವಾಡ:  ತಾಲ್ಲೂಕಿನ ಗರಗ ಗ್ರಾಮದಲ್ಲಿ ಬುಧವಾರ ರಾತ್ರಿ ಧಾರವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮೃತ ದೇಸಾಯಿ ಪರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನಿಗದಿತ ಸಮಯ ಮೀರಿ ಭಾಷಣ ಮುಂದುವರಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ಸಂಘಟಕರ ವಿರುದ್ಧ ದಾಖಲಿಸಿದೆ.

ಕಾರ್ಯಕ್ರಮ ಸಂಜೆ 6ಕ್ಕೇ ನಿಗದಿಯಾಗಿತ್ತಾದರೂ ಕಲಘಟಗಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಗರಗ ಗ್ರಾಮಕ್ಕೆ ಬರುವ ವೇಳೆಗೆ ರಾತ್ರಿ 9.50 ಆಗಿತ್ತು. ಬಹಿರಂಗ ಸಭೆಯನ್ನು ಉದ್ಘಾಟಿಸಿದ ಕುಮಾರಸ್ವಾಮಿ 9.53ಕ್ಕೆ ಭಾಷಣ ಆರಂಭಿಸಿ 10.02ಕ್ಕೆ ಮುಗಿಸಿದರು.

ಅದಾದ ಬಳಿಕವೂ ಸುಮಾರು 10 ನಿಮಿಷಗಳವರೆಗೆ ನಾಯಕರೊಂದಿಗೆ ಚರ್ಚೆ ನಡೆಸುತ್ತ ವೇದಿಕೆಯಲ್ಲೇ ಉಳಿದ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿ ಅಕ್ಕೂರ ಅವರು ಮುಂದಿನ ಕ್ರಮದ ಬಗ್ಗೆ ನಿರ್ದೇಶನ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರಿಗೆ ಕರೆ ಮಾಡಿದರು. ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕಾರ್ಯಕ್ರಮ ಆಯೋಜನೆಗೆ ಅನುಮತಿ ಪಡೆದ ಸಂಘಟಕರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಶುಕ್ಲಾ ಸೂಚನೆ ನೀಡಿದರು.

`ಕಾರ್ಯಕ್ರಮದ ಆಯೋಜಕರು 9.30ಕ್ಕೆ ಕಾರ್ಯಕ್ರಮ ಮುಗಿಸಿ ಅಲ್ಲಿಂದ ತೆರಳಬೇಕಿತ್ತು. ಆದರೆ ಕುಮಾರಸ್ವಾಮಿ ಅವರು ಬರುವುದೇ ತಡವಾದ್ದರಿಂದ ನಿಗದಿತ ಸಮಯ ಮೀರಿದೆ. ಹಾಗಾಗಿ, ಸಮಯ ಮೀರಿಯೂ ಕಾರ್ಯಕ್ರಮ ಮುಂದುವರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಸಿಪಿಐ ರಾಮನಗೌಡ ಹಟ್ಟಿ `ಪ್ರಜಾವಾಣಿ'ಗೆ ತಿಳಿಸಿದರು.

ಸಿಂದಗಿ ವರದಿ:
ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ತಡವಾಗಿ ವೇದಿಕೆಗೆ (ರಾತ್ರಿ 10.15) ತಲುಪಿದ್ದರಿಂದ ಅವರಿಗೆ ಭಾಷಣ ಮಾಡಲು ಅಧಿಕಾರಿಗಳು ಅನುಮತಿ ನೀಡಲಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸಿದ್ದರಾಮಯ್ಯ ಭಾಷಣ ಮಾಡದೇ ಹಾಗೆಯೇ ಹೋಗಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT