ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ: ಮಾಧ್ಯಮಗಳ ಮೇಲೆ ಕಣ್ಗಾವಲು - ಡಿ.ಸಿ

ಚುನಾವಣೆ ನಂತರವೂ ಸ್ಮಾರ್ಟ್‌ಫೋನ್ ಬಳಕೆಗೆ ಕ್ರಮ
Last Updated 8 ಏಪ್ರಿಲ್ 2013, 8:57 IST
ಅಕ್ಷರ ಗಾತ್ರ

ಮಂಗಳೂರು:  ಪಾರದರ್ಶಕತೆ ಹಾಗೂ ಕಾನೂನು ಸಮ್ಮತವಾಗಿ ಚುನಾವಣೆ ನಡೆಸುವ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುವ ಹಾಗೂ ಪ್ರಕಟವಾಗುವ ಜಾಹೀರಾತು ಮತ್ತು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ ಎಂದು ಹರ್ಷ ಗುಪ್ತ ಹೇಳಿದರು.

ಚುನಾವಣಾ ಸಂಬಂಧಿ ಜಾಹೀರಾತುಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ರಾಜಕಾರಣಿಗಳು ಯತ್ನಿಸುವುದರ ಮೇಲೆ ಕಣ್ಣಿಡಲು ಈ ರೀತಿಯ ಜಾಹೀರಾತುಗಳು ಯಾವ ರೀತಿ ಇವೆ ಎಂಬುದನ್ನು ಜಿಲ್ಲೆಯ ಮುಖ್ಯ ಚುನಾವಣಾ ಅಧಿಕಾರಿಯ ಗಮನಕ್ಕೆ ತಂದ ನಂತರವೇ ಪ್ರಕಟಿಸಬೇಕು.

ಯಾವ ಮಾಧ್ಯಮ, ಎಷ್ಟು ವೆಚ್ಚವಾಗಲಿದೆ, ದೃಶ್ಯ ಮಾಧ್ಯಮವಾದರೆ ಎಷ್ಟು ಬಾರಿ ಪ್ರಸಾರ ಮಾಡಲಾಗುತ್ತದೆ ಎಂಬುದರ ಮಾಹಿತಿಯನ್ನು ಮುಂಚಿತವಾಗಿ ನೀಡಬೇಕಾಗುತ್ತದೆ. ಇವುಗಳು ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡುವಲ್ಲಿ ಮತ್ತು ಖರ್ಚು ವೆಚ್ಚದ ಮಾಹಿತಿ ಪಡೆಯಲು ನೆರವಾಗಲಿದೆ ಎಂದು ಅವರು ಹೇಳಿದರು.

ಕೇಬಲ್ ಟಿ.ವಿ.ಮೇಲೆ ನಿಗಾ: ವಾರ್ತಾ ಭವನದಲ್ಲಿ ಎಂಟು ಕೇಬಲ್ ಟಿ.ವಿ.ಗಳ ಮೇಲೆ ನಿಗಾ ವಹಿಸಲು ಕೇಂದ್ರವೊಂದನ್ನು ಆರಂಭಿಸಲಾಗಿದೆ. ದಿನದ 24ಗಂಟೆ ಈ ಟೆಲಿವಿಷನ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಚುನಾವಣಾ ಸಂಬಂಧಿ ಸುದ್ದಿಗಳು, ಸುದ್ದಿ ತುಣುಕು (ಸ್ಕ್ರಾಲ್)ಗಳನ್ನು ಸಿಬ್ಬಂದಿ ದಾಖಲಿಸಿಕೊಳ್ಳುತ್ತಾರೆ. ಯಾವುದೇ ಚಾನಲ್ ಒಬ್ಬರೇ ರಾಜಕೀಯ ವ್ಯಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮ, ಸಂದರ್ಶನವನ್ನು ಪದೇ ಪದೇ ಪ್ರಸಾರ ಮಾಡುತ್ತಿದ್ದರೆ ಸಂಬಂಧಿಸಿದ ವ್ಯಕ್ತಿಗಳು ಪರಿಶೀಲನೆ ನಡೆಸಲಿದ್ದಾರೆ. ದೃಶ್ಯ ಮಾಧ್ಯಮಗಳಲ್ಲದೆ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಿಕಗಳಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತು, ಸುದ್ದಿಗಳ ಮೇಲೆ ಸಹ ನಿಗಾ ವಹಿಸಲಾಗುವುದು. ಚುನಾವಣೆ ನಂತರವೂ ರೆಕಾರ್ಡ್ ಮಾಡಲಾದ ಕಾರ್ಯಕ್ರಮವನ್ನು ಕೆಲವು ದಿನಗಳವರೆಗೆ ನೀಡಲಾಗುವುದು ಎಂದು ಅವರು ಹೇಳಿದರು.

ಎಸ್‌ಎಂಎಸ್, ಸಾಮಾಜಿಕ ಜಾಲ ತಾಣ: ಆಧುನಿಕ ಮಾಧ್ಯಮಗಳಾದ ಎಸ್‌ಎಂಎಸ್, ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವುದರ ಮೇಲೆ ಸಹ ಕಣ್ಣಿಡಲಾಗುವುದು. ಒಟ್ಟಾರೆ ಈ ಎಲ್ಲವುಗಳ ಮೂಲಕ ಜಾಹೀರಾತು ರೂಪದ ಸುದ್ದಿ ಹಾಗೂ ಹಣಪಡೆದು ಪ್ರಕಟಿಸುವ ಸುದ್ದಿಗಳ ಬಗ್ಗೆ ನಿಗಾ ವಹಿಸುವುದಾಗಿದೆ. ಒಂದು ವೇಳೆ ಅಭ್ಯರ್ಥಿ ಕಾನೂನು ಉಲ್ಲಂಘನೆ ಮಾಡಿದ್ದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ವಾಹನಗಳ ಮೇಲೆ ಕಣ್ಣು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಚಾರ ಕಾರ್ಯಕ್ಕೆ ಬಳಸುವ ವಾಹನಗಳ ಮೇಲೆ ನಿಗಾ ವಹಿಸಲಾಗುವುದು. ತೆರೆದ ವಾಹನದಲ್ಲಿ ಮತದಾರರನ್ನು ಕರೆದೊಯ್ಯವುದು, ವಾಹನಕ್ಕೆ ಧ್ವನಿವರ್ಧಕ ಕಟ್ಟಿ ಪ್ರಚಾರ ಮಾಡುವುದು, ಅನುಮತಿ ಪಡೆಯದೆ ರೋಡ್ ಶೋ ನಡೆಸುವುದಕ್ಕೆ ನಿರ್ಬಂಧವಿದೆ ಎಂದು ಅವರು ಹೇಳಿದರು.

ಚುನಾವಣೆ ನಂತರ ಸ್ಮಾರ್ಟ್ ಪೋನ್ ಬಳಕೆ: ಚುನಾವಣೆ ಪ್ರಕ್ರಿಯೆ ಮೇಲೆ ಹದ್ದಿನ ಕಣ್ಣಿಡಲು ಮತ್ತು ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಎಲ್ಲ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಸ್ಮಾರ್ಟ್ ಪೋನ್‌ಗಳನ್ನು ನೀಡಲಾಗಿದೆ. ಇವುಗಳ ಮೂಲಕ ನೀತಿ ಸಂಹಿತೆ ಉಲ್ಲಂಘನೆ, ಪೋಟೊ, ವೀಡಿಯೊ, ಸಾಕ್ಷ್ಯ ಸಂಗ್ರಹ, ಮತದಾನದ ಮುನ್ನಾದಿನದ ಸಿದ್ಧತೆ ಮುಂತಾದವುಗಳ ಬಗ್ಗೆ ತಿಳಿಯಲು ನೆರವಾಗುತ್ತದೆ. ಚುನಾವಣೆ ಮುಗಿದ ನಂತರ ಈ ಸ್ಮಾರ್ಟ್‌ಪೋನ್‌ಗಳು ಬಳಕೆಯಾಗಬೇಕು ಎಂದು ಜಿಲ್ಲಾಡಳಿತ ಬಳಸಿದೆ. ಇತರ ಇಲಾಖೆಗಳಿಗೂ ಇವುಗಳು ಉಪಯೋಗಕ್ಕೆ ಬರುವಂತೆ ಕಾರ್ಯಯೋಜನೆ ತಯಾರು ಮಾಡಬೇಕಾಗಿದೆ. ಶಾಲಾ ತನಿಖಾಧಿಕಾರಿಗಳು ಬಳಸಿ ಬೋಧನೆ ಹಾಗೂ ಮಕ್ಕಳ ಸಮಸ್ಯೆ ಬಗ್ಗೆ ಅರಿಯಲು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿ ಬಳಸಿ ಕಾಯಿಲೆ ಬಗ್ಗೆ ಅರಿಯಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀಕ್ಷಕರು ಬಳಸಿ ಅಂಗನವಾಡಿಗಳ ಸಮಸ್ಯೆ ತಿಳಿಯಲು ಸ್ಮಾರ್ಟ್‌ಪೋನ್ ಬಳಸಬಹುದು ಎಂದು ಅವರು ಹೇಳಿದರು.

ಚೆಕ್‌ಪೋಸ್ಟ್ ಮೇಲೆ ನಿಗಾ: ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಈಗಾಗಲೇ ಇರುವ ಚೆಕ್‌ಪೋಸ್ಟ್ ಅಲ್ಲದೆ ಇನ್ನಷ್ಟು ಚೆಕ್‌ಪೋಸ್ಟ್ ತೆರೆಯಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 3ರಂತೆ 24 ಚೆಕ್‌ಪೋಸ್ಟ್ ಆರಂಭವಾಗಲಿವೆ. ಚುನಾವಣೆ ಆಯೋಗದ ಸೂಚನೆಯಂತೆ ಗುಪ್ತದಳ ಜತೆಗೂಡಿ ಕಾರ್ಯನಿರ್ವಹಿಸಲಾಗುವುದು ಎಂದರು.

ಏಕಗವಾಕ್ಷಿ ಕೇಂದ್ರ: ಚುನಾವಣೆಗೆ ಸಂಬಂಧಿಸಿದಂತೆ ಏಕ ಗವಾಕ್ಷಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಚುನಾವಣಾ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳು ತಮಗೆ ಬೇಕಾದ ಮಾಹಿತಿ, ಪರವಾನಗಿ ಪಡೆಯಲು ಸಂಬಂಧಿಸಿದ ಇಲಾಖೆಗೆ ಅಲೆಯದೆ ಒಂದೇ ಕಡೆ 48 ಗಂಟೆಗಳಲ್ಲಿ ಮಾಹಿತಿ ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಪ್ರಚಾರ ಸಲ್ಲದು: ಹುಟ್ಟುಹಬ್ಬ ಆಚರಣೆ, ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಯಾವುದೇ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಸಂಬಂಧಿಕರು ಪ್ರಚಾರ ಮಾಡಿರುವ ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮದ್ಯ ಮಾರಾಟದ ಮೇಲೆ ಕಣ್ಣು
ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸರಬರಾಜು ಹಾಗೂ ಹಂಚಿಕೆ ಮೇಲೆ ಜಿಲ್ಲಾಡಳಿತ ಸೂಕ್ತ ನಿಗಾ ವಹಿಸಲಿದೆ. ಯಾವುದೇ ಮದ್ಯದ ಅಂಗಡಿಗಳಲ್ಲಿ ಅತಿ ಹೆಚ್ಚು ಮದ್ಯ ವ್ಯಾಪಾರವಾಗುವ ಮಾಹಿತಿ ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅಬಕಾರಿ ಇಲಾಖೆ ನೆರವು ಪಡೆಯಲಾಗುದು ಎಂದು ಹೇಳಿದರು.

ಅಧಿಕಾರಿಗಳ ಬದಲಾವಣೆ: ಅಭ್ಯರ್ಥಿಗಳ ಸಂಬಂಧಿಯಾಗಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದಾರೆ ಎಂಬ  ದೂರು ಇದೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ತಿಳಿಸಲಾಗಿದೆ. ಸಂಬಂಧಿಕರು ಪ್ರಚಾರದಲ್ಲಿ ಭಾಗಿಯಾಗಬಾರದು. ಹಲವು ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಚುನಾವಣೆ ಕಾರಣಕ್ಕೆ ಒಂದೇ ಸಾರಿ ಬದಲಾಯಿಸಲು ಸಾಧ್ಯವಿಲ್ಲ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎನ್. ವಿಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT