ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿಸಂಹಿತೆ ಅಭಿವೃದ್ಧಿಗೆ ಅಡ್ಡಿಯೇ?

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಂಸದೀಯ ಪ್ರಜಾಸತ್ತೆಯ ಯಶಸ್ಸಿನಲ್ಲಿ ಚುನಾವಣೆಗಳನ್ನು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಚುನಾವಣಾ ಆಯೋಗದ ಪಾತ್ರ ಮಹತ್ವದ್ದು. ಇದನ್ನು ಮನಗಂಡೇ ಚುನಾವಣಾ ಆಯೋಗವನ್ನು ಸಂವಿಧಾನಬದ್ದ ಅಧಿಕಾರ ಇರುವ ಸ್ವಾಯತ್ತ ಸಂಸ್ಥೆಯನ್ನಾಗಿ ಅಸ್ತಿತ್ವಕ್ಕೆ ತರಲಾಗಿದೆ.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವ ಕ್ರಮಗಳಲ್ಲಿ ರಾಜಕೀಯ ಪಕ್ಷಗಳು ಚರ್ಚೆ ನಡೆಸಿ ಅಂಗೀಕರಿಸಿದ ಮಾದರಿ ನೀತಿ ಸಂಹಿತೆಯೂ ಒಂದಾಗಿದ್ದು, ಇದನ್ನು ಚುನಾವಣೆ ಸಂದರ್ಭದಲ್ಲಿ ಜಾರಿಗೊಳಿಸುವ ಹೊಣೆ ಚುನಾವಣಾ ಆಯೋಗದ್ದಾಗಿದೆ.

ಮಾದರಿ ನೀತಿ ಸಂಹಿತೆ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯುವುದರಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತಿರುವುದು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಿಗೆ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕೇಂದ್ರ ಸಚಿವರನ್ನೂ ಬಾಧಿಸಿದ್ದುಂಟು. ನೀತಿ ಸಂಹಿತೆಯ ಅನುಷ್ಠಾನದಲ್ಲಿ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಆಯೋಗದ ಕೆಂಗಣ್ಣಿಗೆ ಗುರಿಯಾದವರಿಗೆ ಅಪಥ್ಯವಾಗಿರುವುದು ಸಹಜ.
 
ಈ ಕಾರಣದಿಂದಲೇ ಚುನಾವಣೆ ಸಂದರ್ಭದ ಮಾದರಿ ನೀತಿ ಸಂಹಿತೆಗೆ ಶಾಸನ ಬದ್ಧ ಸ್ವರೂಪ ನೀಡಿ ಅದನ್ನು ಚುನಾವಣಾ ಆಯೋಗದ ವ್ಯಾಪ್ತಿಯಿಂದ ಮುಕ್ತಗೊಳಿಸಬಹುದೆಂಬ ಯೋಚನೆ ಕೇಂದ್ರ ಸಚಿವರಲ್ಲಿ ಬಂದಿರುವ ಸಾಧ್ಯತೆ ಇದೆ.

ಮಾದರಿ ನೀತಿ ಸಂಹಿತೆಗೆ ಶಾಸನಬದ್ಧ ಸ್ವರೂಪ ನೀಡುವುದರಿಂದ ಅದರ ಉಲ್ಲಂಘನೆಯ ಪ್ರಶ್ನೆ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತದೆ; ಇದು ಚುನಾವಣಾ ಆಯೋಗದ ಅಧಿಕಾರವನ್ನು ಮೊಟಕುಗೊಳಿಸುವ ಯತ್ನವೆಂಬ ತೀವ್ರ ಪ್ರತಿಕ್ರಿಯೆ ವಿರೋಧ ಪಕ್ಷಗಳಿಂದ ವ್ಯಕ್ತವಾಗಿದೆ.
 
ಸರ್ಕಾರ ಇಂಥ ಪ್ರಸ್ತಾಪ ಪರಿಶೀಲನೆಯಲ್ಲಿ ಇರುವುದನ್ನು ನಿರಾಕರಿಸಿದೆಯಾದರೂ ಚುನಾವಣೆ ಆಯೋಗದ ಕಟ್ಟುನಿಟ್ಟಿನ ಕ್ರಮಗಳು, ಅದರಲ್ಲಿಯೂ ನೀತಿ ಸಂಹಿತೆಯ ಜಾರಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಲಿದೆ ಎಂಬ ಅಸಮಾಧಾನ ಕೆಲವು ಸಚಿವರಲ್ಲಿ ಮೂಡಿರುವುದನ್ನು ಅಲ್ಲಗಳೆದಿಲ್ಲ.
 
ಚುನಾವಣೆ ಘೋಷಣೆಯೊಂದಿಗೆ ಆರಂಭವಾಗುವ ಮೂರು ವಾರಗಳ ನೀತಿ ಸಂಹಿತೆ ಜಾರಿಯ ಅವಧಿ, ಯೋಜನೆಗಳು ನೆನೆಗುದಿಗೆ ಕಾರಣವಾಗುವುದೆಂಬ ಇಂಥ ಕಲ್ಪನೆಯೇ ನಗೆಪಾಟಲಿನದು. ಚುನಾವಣೆ ಪ್ರಕ್ರಿಯೆ ನಡೆದಿರುವಾಗ ಹೊಸ ಭರವಸೆಗಳನ್ನು ಪ್ರಕಟಿಸುವಂತಿಲ್ಲ ಎಂಬುದು ರಾಜಕೀಯ ಪಕ್ಷಗಳು ಒಪ್ಪಿಕೊಂಡ ನೀತಿ ಸಂಹಿತೆಯ ಅಂಶ.

ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗದೆಂಬ ನಿರ್ಬಂಧಗಳೇನೂ ನೀತಿ ಸಂಹಿತೆಯಲ್ಲಿಲ್ಲ. ಆದರೆ, ನಡೆಯುತ್ತಿರುವ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಬಿಂಬಿಸಿಕೊಳ್ಳುವುದಕ್ಕೆ ನಿರ್ಬಂಧ ಇದೆ. ಇದನ್ನೇ ಅಭಿವೃದ್ಧಿಗೆ ಅಡ್ಡಿ ಎಂದು ಹೇಳಿಕೊಳ್ಳುವುದು ಕುಂಟು ನೆಪ.
 
ಚುನಾವಣೆ ವ್ಯವಸ್ಥೆಯ ಸುಧಾರಣೆಗೆ ದಿನೇಶ್ ಗೋಸ್ವಾಮಿ ಆಯೋಗ, ಕಾನೂನು ಸಲಹಾ ಆಯೋಗ, ಇಂದ್ರಜಿತ್ ಗುಪ್ತ ಸಮಿತಿ ವರದಿಗಳು ಮಾಡಿರುವ ಸಲಹೆಗಳು ಇನ್ನೂ ನೆನೆಗುದಿಯಲ್ಲಿವೆ.

ನೀತಿ ಸಂಹಿತೆ ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಮತ್ತು ಹಣ, ಉಡುಗೊರೆಗಳನ್ನು ನೀಡಿ ಮತದಾರರನ್ನು ಭ್ರಷ್ಟರನ್ನಾಗಿಸುವ ಅಭ್ಯರ್ಥಿಗಳ ಯತ್ನಗಳನ್ನು ನಿಗ್ರಹಿಸುವುದಕ್ಕೆ  ಚುನಾವಣಾ ಆಯೋಗಕ್ಕೆ ಇನ್ನಷ್ಟು ಅಧಿಕಾರ ನೀಡುವುದರತ್ತ ಸರ್ಕಾರ ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT