ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಅನುಷ್ಠಾನಕ್ಕೆ ಮಾ. 6ರಂದು ರ್‍ಯಾಲಿ

Last Updated 28 ಫೆಬ್ರುವರಿ 2012, 9:45 IST
ಅಕ್ಷರ ಗಾತ್ರ

ತಾಳಿಕೋಟೆ: ಸಮಗ್ರ ಜಿಲ್ಲೆಯ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಮಾರ್ಚ್ 6ರಂದು ಮಧ್ಯಾಹ್ನ 3ಗಂಟೆಗೆ ತಾಳಿಕೋಟೆಯಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ಮತ್ತು ರೈತರ ಸಮಾವೇಶ ನಡೆಸಲಾಗುವುದು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಕೆ ನೀಡಿದರು.

ಅವರು ಶ್ರಿ ವಿಠ್ಠಲಮಂದಿರದಲ್ಲಿ ಸೋಮವಾರ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ 20ಕ್ಕೂ ಅಧಿಕ ಹಿಂದು ಮಠಾಧೀಶರು ಹಾಗೂ  ಮುಸ್ಲಿಂ ಸಮುದಾಯದ ಧರ್ಮಗುರುಗಳು ಭಾಗವಹಿಸುವರು. ಜಿಲ್ಲೆಯ ರೈತರು ಹೆಚ್ಚಿನ  ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಡಹಳ್ಳಿ ಮನವಿ ಮಾಡಿದರು
ಜಿಲ್ಲೆಯಲ್ಲಿ ನಿರ್ಮಿಸಿದ ಎರಡು ಬೃಹತ್ ಅಣೆಕಟ್ಟುಗಳು ಜಿಲ್ಲೆಯ ಜನರ ಹಾಗೂ ಭೂಮಿಯ ನೀರಿನ ಹಸಿವು ತಣಿಸುತ್ತಿಲ್ಲವೆಂದರೆ ಎಂಥ ವಿಚಿತ್ರ, ರೈತರು ಒಗ್ಗಟ್ಟಾಗದೆ ಒಂದು ಹನಿ ನೀರು ನಿಮ್ಮ ಪಾಲಿಗೆ ಬರದು ಅದಕ್ಕಾಗಿ ಎಲ್ಲರೂ ಎಚ್ಚರಾಗಿರಿ ಎಂದರು.

ಚಿಮ್ಮಲಗಿ, ಮುಳವಾಡ ಮತ್ತು ಪೀರಾಪುರ- ಬೂದಿಹಾಳ ಏತ ನೀರಾವರಿಗಳಿಗೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸಬೇಕು ಹಾಗೂ 5 ವರ್ಷಗಳಲ್ಲಿ  ಯೋಜನೆಗಳು ಪೂರ್ಣಗೊಂಡು ರೈತರ ಜಮೀನುಗಳು ಹಸಿರಾಗುವವರೆಗೆ ಜಿಲ್ಲೆಯ ರೈತಾಪಿಗಳು, ಜನಪ್ರತಿನಿಧಿಗಳು ಹೋರಾಡಬೇಕು ಎಂದು ಮನವಿ ಮಾಡಿದರು.

ಸರ್ಕಾರ ಮಂಡಿಸಲಿರುವ ಪ್ರತ್ಯೇಕ ಕೃಷಿ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ, ಆಡಳಿತಾತ್ಮಕ ಹಾಗೂ ಹಣಕಾಸಿನ ಮಂಜೂರಾತಿಯನ್ನು ಕೊಡಬೇಕು ಈ ಗುರಿ ಈಡೇರಿಸದಿದ್ದರೆ  ಜಿಲ್ಲೆಯ ಶಾಸಕರು ರಾಜೀನಾಮೆ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪೂರ್ವಭಾವಿ ಸಭೆಯಲ್ಲಿ  ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ ಯಾಳಗಿ, ತಾ.ಪಂ. ಸದಸ್ಯ ಮುತ್ತಣ್ಣ ಢವಳಗಿ, ಎಂ.ಜಿ. ಪಾಟೀಲ ಗುಂಡಕನಾಳ, ಪುರಸಭೆಯ ಸದಸ್ಯ ವಾಸುದೇವ ಹೆಬಸೂರ, ಕಾಶಿನಾಥ ಮುರಾಳ, ಮಾಸೂಮ ಕೆಂಭಾವಿ ಶಂಸುದ್ದೀನ್ ನಾಲಬಂದ, ಇಬ್ರಾಹಿಂ ಮನ್ಸೂರ, ಡಾ.ನಜೀರ್ ಕೋಳ್ಯಾಳ, ಕುಮಾರಗೌಡ ಪಾಟೀಲ, ಬಾಬು ಬಡಗಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೆಶಬಾಬು ಬಿರಾದಾರ  ಅಶೋಕ ಅಸ್ಕಿ,ರಾಜೂಗೌಡ ಗುಂಕನಾಳ, ಎಂ.ಎಂ. ಪಾಟೀಲ, ರಾಮನಗೌಡ ಬಂಟನೂರ, ಬಸನಗೌಡ ಪಾಟೀಲ, ಶಿವರೆಡ್ಡಿ ಐನಾಪುರ, ಬಸವರಾಜ ದೊಡಮನಿ, ಮಾಸೂಮಸಾ ಕೆಂಭಾವಿ ಸೇರಿದಂತೆ ಅನೇಕ ಹಳ್ಳಿಗಳ ರೈತ ಪ್ರಮುಖರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT