ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಬಗ್ಗೆ ಬೂಟಾಟಿಕೆ ಪ್ರೀತಿ: ಲೇವಡಿ

Last Updated 12 ಏಪ್ರಿಲ್ 2013, 9:00 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಿಪಿಎಂನ ಪ್ರತಿಸ್ಪರ್ಧಿ ಎಂದು ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರಿರಾಮರೆಡ್ಡಿ ಹೇಳಿದರು.
ತಾಲ್ಲೂಕಿನ ಸದ್ದಪಲ್ಲಿ ಗ್ರಾಮದಲ್ಲಿ ಮಂಗಳವಾರ ಚುನಾವಣೆ ಪ್ರಚಾರ ಮಾಡಿದ ನಂತರ ಮಾತನಾಡಿ, ಈ ಸಲದ ಚುನಾವಣೆ ಸವಾಲಿನ ಪ್ರಶ್ನೆಯಾಗಿದೆ. ಸಮಾಜ ಸೇವಕರು ಹಾಗೂ ರಾಜಕೀಯ ಗಂಧ ಇಲ್ಲದ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಶಾಶ್ವತ ನೀರಾವರಿ ಹೋರಾಟ ಮೊದಲು ಆರಂಭವಾದದ್ದು ಸಿಪಿಎಂ ನೇತೃತ್ವದಲ್ಲಿ. ನಂತರ ಸ್ವಾರ್ಥ ಹಾಗೂ ಮತ ಗಳಿಕೆಗೆ ಕಾಂಗ್ರೆಸ್, ಜೆಡಿಎಸ್, ಸಮಾಜ ಸೇವಕರು ಶಾಶ್ವತ ನೀರಾವರಿ ಬಗ್ಗೆ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ಪರಮಶಿವಯ್ಯ ವರದಿ ಅವೈಜ್ಞಾನಿಕ ಎಂದಿದ್ದರು. ಆದರೆ ಈಗ ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀರಾವರಿ ಕಲ್ಪಿಸಲಾಗುವುದು ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ.

ಧರಂಸಿಂಗ್, ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಈ ವಿಚಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಕೈಬಿಡುವ ಹಂತದಲ್ಲಿ ಇದ್ದಾರೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ಮೇವು-ನೀರು ಇಲ್ಲ. ಈ ಬಾರಿ ಆಯ್ಕೆಯಾದರೆ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ರಸ್ತೆ ಹಾಗೂ ಮನೆ-ನಿವೇಶನ ಕಲ್ಪಿಸಲಾಗುವುದು ಎಂದರು.

ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮತಗಳನ್ನು ಮಾರಾಟಕ್ಕೆ ಇಡದೆ, ನಿಷ್ಠಾವಂತ ಹಾಗೂ ಅಭಿವೃದ್ಧಿಪರ ನಾಯಕರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ಜಿಲ್ಲಾ ಮುಖಂಡ ಚನ್ನರಾಯಪ್ಪ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರರೆಡ್ಡಿ, ಕಾರ್ಯದರ್ಶಿ ಮಂಜುನಾಥರೆಡ್ಡಿ, ಮುಖಂಡರಾದ ಡಾ.ಅನಿಲ್ ಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಂಕರರೆಡ್ಡಿ, ಪುರಸಭೆ ಸದಸ್ಯ ಮಹದ್ ಅಕ್ರಂ, ಗ್ರಾಮಸ್ಥರಾದ ನರಸಿಂಹರೆಡ್ಡಿ, ವೇಣುಗೋಪಾಲ, ಅಶ್ವಥರೆಡ್ಡಿ, ನಾರಾಯಣ ನಾಯಕ್, ಚನ್ನರಾಯಪ್ಪ, ಓಬಳರೆಡ್ಡಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT