ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ: ವಿಜಾಪುರ ಜನತೆಗೆ ನಿರಾಶೆ.ಅನುದಾನ ಅತ್ಯಲ್ಪ; ಸಾಲದತ್ತ ಆಸೆಗಣ್ಣು!

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಜಾಪುರ: ಕೃಷ್ಣಾ ನ್ಯಾಯಮಂಡಳಿ ತೀರ್ಪು ಬಂದ ನಂತರ ಇನ್ನೇನು ತಮ್ಮ ಹೊಲಕ್ಕೆ ನೀರು ಹರಿದೇ ಬಿಡುತ್ತದೆ ಎಂದು ಸಂಭ್ರಮಿಸಿದ್ದ ಜಿಲ್ಲೆಯ ಜನತೆ, ರಾಜ್ಯ ಸರ್ಕಾರದ ಬಜೆಟ್‌ನಿಂದ ನಿರಾಶೆಗೊಂಡಿದ್ದಾರೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬಜೆಟ್‌ನಲ್ಲಿ ನೀರಾವರಿ ಕ್ಷೇತ್ರಕ್ಕೆ ಅನುದಾನವನ್ನು ಶೇ.50ರಷ್ಟು ಹೆಚ್ಚಿಸಿದ್ದರೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅಗತ್ಯದಷ್ಟು ಹಣ ನೀಡಿಲ್ಲ ಎಂಬುದು ಜನರ ನಿರಾಶೆಗೆ ಕಾರಣ.

ಆದರೂ, ‘ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುವುದು’ ಎಂದು ಸರ್ಕಾರ ನೀಡಿದ ಸುಳಿವು ಅವರಿಗೆ ಸ್ವಲ್ಪ ನೆಮ್ಮದಿ ತಂದಿದ್ದು, ಆ ‘ಸಾಲ’ದತ್ತಲೇ ಅವರೆಲ್ಲ ಆಸೆಗಣ್ಣು ಬೀರುವಂತಾಗಿದೆ.‘ಕೇವಲ ಸರ್ಕಾರದ ಅನುದಾನದಿಂದ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮ ಸ್ಥಾಪಿಸಿ ಬಾಂಡ್ ಮೂಲಕ ಸಾಲ ಪಡೆದಿದ್ದರಿಂದಾಗಿಯೇ ಇಷ್ಟೊಂದು ನೀರಾವರಿ ಕಾಮಗಾರಿ ಅನುಷ್ಠಾನಗೊಳಿಸಲು ಸಾಧ್ಯವಾಯಿತು. ಈಗಲೂ ಅಷ್ಟೇ. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತೆ ಬಾಂಡ್ ಮೂಲಕ ಅಥವಾ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಅನಿವಾರ್ಯ’ ಎಂಬುದು ಜಿಲ್ಲೆಯ ಬಹುತೇಕ ರೈತರು ನೀಡುತ್ತಿರುವ ಸಲಹೆ.

‘ಕೃಷ್ಣಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ಕನಿಷ್ಠ 25 ಸಾವಿರ ಕೋಟಿ ರೂಪಾಯಿ ಬೇಕಿದೆ. ಈ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು, ನೀರಾವರಿ ಹಾಗೂ ಪುನರ್ವಸತಿ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ವಿಶೇಷ ಪ್ಯಾಕೇಜ್ ಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಸರ್ಕಾರ ಕಡಿಮೆ ಅನುದಾನ ನೀಡಿದೆ. ಹೀಗಾದರೆ ಇನ್ನೂ 15-20 ವರ್ಷವಾದರೂ ಈ ಯೋಜನೆ ಪೂರ್ಣಗೊಳ್ಳಲು ಸಾಧ್ಯವಿಲ್ಲ’ ಎಂದು ನೀರಾವರಿ ತಜ್ಞ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಹೇಳುತ್ತಾರೆ.

‘ರಾಜ್ಯ ಸರ್ಕಾರ ಜಲಸಂಪನ್ಮೂಲ ಕ್ಷೇತ್ರಕ್ಕೆ 7800 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಷ್ಟು ಅನುದಾನ ದೊರೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ‘ಎ’ ಸ್ಕೀಂ ಯೋಜನೆಗಳಿಗೇ ಇನ್ನೂ 1600 ಕೋಟಿ ರೂಪಾಯಿಯ ಅಗ್ಯವಿದೆ. ಇನ್ನು ಬಿ ಸ್ಕೀಂ ಯೋಜನೆಗಳ ಪಾಡೇನು? ಅಗತ್ಯ ಅನುದಾನ ನೀಡಿಲ್ಲ. ನೀರಾವರಿ ದಶಕಕ್ಕೆ ಅರ್ಥವೇ ಉಳಿದಿಲ್ಲ’ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ನೀರಾವರಿ ಕಾಮಗಾರಿಗಳ ಅನುಷ್ಠಾನದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳು ನಮಗೆ ಮಾದರಿ. ಕೃಷ್ಣಾ ಎರಡನೆಯ ನ್ಯಾಯಮಂಡಳಿ ತೀರ್ಪು ಬರುವ ಮುನ್ನವೇ ನಮ್ಮೆಲ್ಲ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ‘ಬಿ’ ಸ್ಕೀಂ ಅನುಷ್ಠಾನಕ್ಕಾಗಿ ಇಂದಿನ ಲೆಕ್ಕದಲ್ಲಿ 25 ಸಾವಿರ ಕೋಟಿ ರೂಪಾಯಿ ಬೇಕು. ಹೀಗೆ ಪ್ರತಿ ವರ್ಷ 2-3 ಸಾವಿರ ಕೋಟಿ ಹಣ ನೀಡುತ್ತ ಹೋದರೆ ಇನ್ನೂ 20 ವರ್ಷವಾದರೂ ಈ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ದಿನಗಳೆದಂತೆ ಯೋಜನಾ ವೆಚ್ಚವೂ ದುಪ್ಪಟ್ಟಾಗುತ್ತದೆ.  ಈ ಅನ್ಯಾಯ ಸಹಿಸಲು ಸಾಧ್ಯವೇ ಇಲ್ಲ’ ಎಂಬುದು ವಿಜಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಶಿವಾನಂದ ಪಾಟೀಲರ ಗುಡುಗು.

‘ನ್ಯಾಯಮಂಡಳಿ ಅವಕಾಶ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತ ಸರ್ಕಾರ ಹತ್ತು ವರ್ಷ ಕಾಲಹರಣ ಮಾಡಿತು. ಈಗ ಕಾನೂನು ತೊಡಕು ನಿವಾರಣೆಯಾಗಿದ್ದರೂ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳಿಗಾಗಿಯೇ ಸರ್ಕಾರ ಸುಮಾರು 8-9 ಸಾವಿರ ಕೋಟಿ ರೂಪಾಯಿಯನ್ನು ಯೋಜನಾವಾರು ಮೀಸಲಿಡಬೇಕಿತ್ತು. ಇದು ದೊಡ್ಡ ಅನ್ಯಾಯ. ಜಿಲ್ಲೆಯ ಜನ ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಭೀಮಾ-ಕೃಷ್ಣಾ ಹೋರಾಟ ಸಮನ್ವಯ ಸಮಿತಿಯ ಮುಖಂಡ ಪಂಚಪ್ಪ ಕಲಬುರ್ಗಿ ಹೇಳಿದರು.

‘ರಾಜ್ಯ ಸರ್ಕಾರ ಈಗ ಯುಕೆಪಿಗೆ ನೀಡಿರುವ ಅನುದಾನ ಅತ್ಯಲ್ಪ. ನೀರಾವರಿ ದಶಕದ ಬದಲು ಪಂಚವಾರ್ಷಿಕ ಯೋಜನೆ ಹಾಕಿಕೊಂಡು ಅದಕ್ಕೆ ಪೂರಕವಾಗಿ ಅಗತ್ಯ ಹಣ ನೀಡಬೇಕು. ಪುನರ್ವಸತಿ-ಪುನರ್ ನಿರ್ಮಾಣ ಹಾಗೂ ನೀರಾವರಿ ಯೋಜನೆಗಳ ಕಾಮಗಾರಿ ಒಟ್ಟಾಗಿ ಆಗಬೇಕು. ಕೃಷಿಗೆ ನೀರೇ ಮೂಲ. ಕೃಷಿ ಬಜೆಟ್‌ನಲ್ಲಿ ನೀರಾವರಿಗೇ ಮೊದಲ ಆದ್ಯತೆ ಸಿಗಬೇಕಿತ್ತು’ ಎಂಬುದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT