ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ವಿಸ್ತರಣೆಗೆ ನೆರವಾಗುವಳೇ ಮಲಪ್ರಭೆ

Last Updated 1 ಜುಲೈ 2012, 9:55 IST
ಅಕ್ಷರ ಗಾತ್ರ

`ಮಲಪ್ರಭಾ ಬಲದಂಡೆ~ ಯೋಜನೆಯನ್ನು ತಾಲ್ಲೂಕಿನಾದ್ಯಂತ ವಿಸ್ತರಿಸುವ ಮೂಲಕ ತಾಲ್ಲೂಕಿನ ಕೃಷಿ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು ಎಂಬ ಮಾಜಿ ಸಚಿವ ದಿ.ಅಂದಾನಪ್ಪ ದೊಡ್ಡಮೇಟಿ ಅವರ ಕನಸು ಸಾಕಾರಗೊಳ್ಳುವತ್ತ ಸಾಗಿದೆ. ಶಾಸಕ ಕಳಕಪ್ಪ ಬಂಡಿ ಈ ಯೋಜನೆಯನ್ನು ವಿಸ್ತರಿಸಿ ರೈತಪರ ಕಾಳಜಿ ಮೆರೆದಿದ್ದಾರೆ.

ಮಳೆ ಆಶ್ರಿತವಾಗಿದ್ದ ತಾಲ್ಲೂಕಿನ ಕೃಷಿಯನ್ನು ಶ್ರೀಮಂತಗೊಳಿಸುವ ಸಲುವಾಗಿ ರೈತಪರ ಚಿಂತಕ ಅಂದಾನಪ್ಪ ದೊಡ್ಡಮೇಟಿ ಅವರು ಮುಂಬೈ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದಾಗ `ಮಲಪ್ರಭಾ ಬಲದಂಡೆ~ ಯೋಜನೆಯನ್ನು ಜಾರಿಗೊಳಿಸಿದರು. ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳು ವಿಳಂಬವಾಗಿಯಾದರೂ ಆರಂಭಗೊಂಡವು.

ಯೋಜನೆಗೆ ಬರ ಪ್ರೇರಣೆ: ರೋಣ ತಾಲ್ಲೂಕಿನಲ್ಲಿ 1961-62 ರಲ್ಲಿ ಭೀಕರ ಬರ ಎದುರಾದಾಗ ರೈತ ಸಮೂಹ ಕಂಗಾಲಾಗಿ ಹೋಗಿತ್ತು. ಈ ಸಂದರ್ಭ ಜನ ಎದುರಿಸಿದ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ಕಂಡಿದ್ದ ಸಚಿವ ಅಂದಾನಪ್ಪ ದೊಡ್ಡಮೇಟಿ ಸಣ್ಣ ನೀರಾವರಿ ಸಚಿವರಾದಾಗ ಯೋಜನೆ ಕನಸು ಸಾಕಾರಗೊಳಿಸಿದರು.

ತಾಲ್ಲೂಕಿನಲ್ಲಿ `ಮಲಪ್ರಭಾ ಬಲದಂಡೆ~ ಯೋಜನೆ ಜಾರಿಗೆ ಭೀಕರ ಬರ ಪ್ರೇರಣೆ ಎಂದರೆ ತಪ್ಪಾಗಲಾರದು.
35,765 ಹೆಕ್ಟೇರ್ ನೀರಾವರಿ: ಸವದತ್ತಿ ಬಳಿಯ ನವಿಲ ತೀರ್ಥ ಜಲಾಶಯದಿಂದ ನೀರು ಹರಿಸುವುದು ಯೋಜನೆ ಉದ್ದೇಶ. ಯೋಜನೆಯ ಮೊದಲ ಹಂತವಾಗಿ ರೋಣ ತಾಲ್ಲೂಕಿನ ಬೆಳವಣಿಕಿ, ಕೌಜಗೇರಿ, ಮಲ್ಲಾಪುರ, ಸವಡಿ, ಚಿಕ್ಕಮಣ್ಣೂರ, ಅರಹುಣಸಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿನ ಒಟ್ಟು 35,765 ಹೆಕ್ಟರ್ ಪ್ರದೇಶವನ್ನು ಯೋಜನೆಯಡಿ ನೀರಾವರಿಗೆ ಒಳಪಡಿಸಲಾಯಿತು. ಮಳೆ ಆಶ್ರಿತ ಬೇಸಾಯದಿಂದ ಬಳಲಿ ಬೆಂಡಾಗಿದ್ದ ಈ ಪ್ರದೇಶಗಳು `ಮಲಪ್ರಭಾ ಬಲದಂಡೆ~ ಯೋಜನೆಯಿಂದಾಗಿ ಕೃಷಿಯಲ್ಲಿ ಸಮೃದ್ದಿ ಸಾಧಿಸ ತೊಡಗಿದವು.

1,10,500 ಹೆಕ್ಟೇರ್ ಸಾಗುವಳಿ: ರೋಣ ತಾಲ್ಲೂಕು ಒಟ್ಟು 1,10,500 ಹೆಕ್ಟೇರ್ ಸಾಗುವಳಿ ಕ್ಷೇತ್ರವನ್ನು ಹೊಂದಿದೆ. ಇದರಲ್ಲಿ ಅಂದಾನಪ್ಪ ದೊಡ್ಡಮೇಟಿ ಸಚಿವರಾಗಿದ್ದ ವೇಳೆ ತಾಲ್ಲೂಕಿನ 35,765 ಹೆಕ್ಟೇರ್ ಮಾತ್ರ `ಮಲಪ್ರಭಾ ಬಲದಂಡೆ~ ಯೋಜನೆಗೆ ಒಳಪಟ್ಟಿತ್ತು. ಉಳಿದ 74,735 ಹೆಕ್ಟೇರ್ ಸಾಗುವಳಿ ಕೃಷಿ ಪ್ರದೇಶವನ್ನು ಯೋಜನೆಗೆ ಸೇರಿಸಬೇಕು ಎಂಬ ದೊಡ್ಡಮೇಟಿ ಅವರ ಬಯಕೆ ಫಲಿಸಿರಲಿಲ್ಲ. ಶಾಸಕ ಜ್ಞಾನದೇವ ದೊಡ್ಡಮೇಟಿ ಅವರು ಯೋಜನೆಯನ್ನು ವಿಸ್ತರಿಸುವ ಪ್ರಯತ್ನ ನಡೆಸಿದರಾದರೂ ಫಲ ನೀಡಲಿಲ್ಲ.

2005ರಲ್ಲಿ ಯೋಜನೆ ವಿಸ್ತರಣೆ: 2005ರಲ್ಲಿ ಶಾಸಕ ಕಳಕಪ್ಪ ಬಂಡಿ ಅವರು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟರು. ಪರಿಣಾಮ ಒಟ್ಟು 115 ರಿಂದ 142 ಕಿ.ಮೀ ವಿಸ್ತೀರ್ಣದ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿತು. ತಾಲ್ಲೂಕಿನ ಬೆಳವಣಿಕಿಯಿಂದ ಆರಂಭಗೊಳ್ಳುವ ಯೋಜನೆ ಎರಡು ವಿಭಾಗಗಳಾಗಿ ವಿಂಗಡನೆಯಾಗುತ್ತದೆ.

ಮೊದಲ ವಿಂಗಡನೆ 27 ಕಿ.ಮೀ ವಿಸ್ತೀರ್ಣದ್ದಾಗಿದೆ. ಇದರಲ್ಲಿ ತಾಲ್ಲೂಕಿನ ಕೃಷ್ಣಾಪುರ, ರೋಣ, ಕೊತಬಾಳ, ಹಿರೇಹಾಳ, ನೈನಾಪುರ, ಮಣ್ಣೇರಿ ಗ್ರಾಮಗಳು ಒಳಪಡುತ್ತವೆ. ಎರಡನೆಯ ವಿಂಗಡಣೆಯಲ್ಲಿ 25 ಕಿ.ಮೀ ವಿಸ್ತೀರ್ಣವಿದೆ. ಜಿಗಳೂರ, ಹೊಸಳ್ಳಿ, ಇಟಗಿ, ಅಳಗುಂಡಿ, ಸೂಡಿ ಗ್ರಾಮಗಳನ್ನು ಒಳಗೊಂಡಿದೆ.

ಎರಡನೆಯ ಹಂತದ ಯೋಜನೆ ವಿಸ್ತರಣೆಯಿಂದಾಗಿ 25,235 ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡುತ್ತದೆ.
ಎರಡನೆಯ ಹಂತದ ಯೋಜನೆ ಸಂಬಂಧಿಸಿದ ಪ್ರಮುಖ, ಉಪ ಕಾಲುವೆಗಳ ನಿರ್ಮಾಣ ಭಾಗಶ: ಪೂರ್ಣಗೊಂಡಿವೆ. ಆದರೆ, 13,548 ಹೆಕ್ಟೇರ್ ಪ್ರದೇಶದ ನೀರಾವರಿಗಾಗಿ ಹೊಗಾವಲು (ಬದುವು ಕಾಲುವೆ) ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿ 400 ಹೆಕ್ಟೇರ್ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ 900 ಹೆಕ್ಟೇರ್ ಕಾಮಗಾರಿ 2013 ರ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಮಲಪ್ರಭಾ ಬಲದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್‌ಪಾಳೆಗಾರ `ಪ್ರಜಾವಾಣಿ~ಗೆ ತಿಳಿಸಿದರು.

11,681 ಹೆಕ್ಟೇರ್ ನೀರಾವರಿ: 2005 ರಲ್ಲಿ ಆರಂಭಗೊಂಡ ಮಲಪ್ರಭಾ ಬಲದಂಡೆ ಯೋಜನೆಯ ಎರಡನೇ ಹಂತದ ಗ್ರಾಮಗಳಾದ ಮಾಳವಾಡ, ಸೋಮನಕಟ್ಟಿ ವ್ಯಾಪ್ತಿಯಲ್ಲಿನ 11,681 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆರಂಭಗೊಂಡಿದೆ. ಕಳೆದ ನಾಲ್ಕು ವರ್ಷದಿಂದ ಇಲ್ಲಿನ ರೈತರು ಯೋಜನೆಯಡಿಯಲ್ಲಿನ ನೀರು ಬಳಸಿಕೊಂಡು ನೀರಾವರಿ ಮೂಲಕ ಬೆಳೆ ಪಡೆದುಕೊಳ್ಳುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT