ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಹೋರಾಟ ಮುಂದೇನು?

Last Updated 26 ಡಿಸೆಂಬರ್ 2012, 6:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಸಂಸ್ಥೆಗಳು ಕೈಗೊಂಡ 65 ದಿನಗಳ ಅನಿರ್ದಿಷ್ಟಾವಧಿ ಧರಣಿಯಿಂದ ಹೆಚ್ಚು ಪ್ರಯೋಜನವಾಗಿಲ್ಲ ಎಂದು ಮಾತುಗಳು ಕೇಳಿ ಬರುತ್ತಿರುವ ಬೆನ್ನಿನಲ್ಲೇ ಕೆಲವಾರು ಅನಿರೀಕ್ಷಿತ ಬೆಳವಣಿಗೆಗಳು ಕಂಡು ಬರುತ್ತಿವೆ.

ವಿವಿಧ ಸಂಘಸಂಸ್ಥೆಗಳ ನೇತೃತ್ವದ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಇತ್ತೀಚೆಗೆ ಕೃತಜ್ಞತಾ ಕಾರ್ಯಕ್ರಮವೊಂದನ್ನು ಆಯೋಜಿಸಿ ಧರಣಿಯಲ್ಲಿ ಪಾಲ್ಗೊಂಡವರಿಗೆ ಅಭಿನಂದಿಸಿ, ತನ್ನ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಿತು. ದಿಢೀರ್‌ನೇ ಹೋರಾಟ ಹಿಂಪಡೆದಿರುವ ಕುರಿತು ಸಮಿತಿಯಲ್ಲಿನ ಕೆಲ ಸದಸ್ಯರಿಗೆ ಬೇಸರವೂ ಆಯಿತು.

ಇದರ ನಡುವೆ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದ ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಈಗ ಮತ್ತೆ ಕಾರ್ಯಪ್ರವೃತ್ತಗೊಂಡಿದ್ದು, ಎಲ್ಲ ಬಯಲುಸೀಮೆ ಜಿಲ್ಲೆಗಳಲ್ಲಿ ಜಾಗೃತಿ ಸಮಾವೇಶ ನಡೆಸಲು ಮುಂದಾಗಿದೆ. ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಸಮಾವೇಶಗಳನ್ನು ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದೆ.

ಎರಡೂ ಹೋರಾಟ ಸಮಿತಿಗಳು ತಮ್ಮ ತಮ್ಮ ನಿರ್ಣಯಗಳನ್ನು ಆಧರಿಸಿಕೊಂಡು ಮುಂದಿನ ಹೆಜ್ಜೆಯಿಡುತ್ತಿದ್ದರೆ, ಭಿನ್ನವಾಗಿ ಆಲೋಚಿಸುವ ಕೆಲ ಹೋರಾಟಗಾರರು `ಕರ್ನಾಟಕ ನೀರಾವರಿ ವೇದಿಕೆ' ಎಂಬ ಸಂಘಟನೆ ಹುಟ್ಟುಹಾಕುವ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ. ವೈಜ್ಞಾನಿಕ ತಳಹದಿಯ ಮೇಲೆ ಅಭಿಯಾನ ಕೈಗೊಳ್ಳಲು ಮುಂದಾಗಿದ್ದಾರೆ.

ನೀರಾವರಿ ಹೋರಾಟವು ಒಂದೊಂದು ಸ್ವರೂಪ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜ್ಯದ ರಾಜಕೀಯ ವಿದ್ಯಮಾನದಲ್ಲಿ ಹಲವಾರು ಏರಿಳಿತಗಳು ಕಂಡು ಬರುತ್ತಿದ್ದು, ಇದು ಕೆಲವರಿಗೆ ಆತಂಕ ಉಂಟು ಮಾಡಿದೆ.  ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕಾರವಧಿಯಲ್ಲೇ ಯೋಜನೆಗೆ ಚಾಲನೆ ದೊರೆಯುವುದೇ ಎಂಬ ಚಿಂತೆ ಕೆಲವರಿಗೆ ಕಾಡುತ್ತಿದೆ.

`ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ನಡೆದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡ ಕೆಲವರಲ್ಲಿ ಆತಂಕ ಕಾಡುವುದು ಸಹಜ. ಜಗದೀಶ ಶೆಟ್ಟರ್ ಅವರು ಬಾಯಿಮಾತಿನ ಭರವಸೆ ನೀಡಿದ್ದಾರೆಯೇ ಹೊರತು ಯಾವುದೇ ರೀತಿಯ ಲಿಖಿತ ಮತ್ತು ಖಚಿತ ಭರವಸೆ ನೀಡಿಲ್ಲ. ತೀವ್ರಗೊಳ್ಳುವ ಮತ್ತು ದೀರ್ಘವಾಗಿ ನಡೆಯುವ ಹೋರಾಟವನ್ನು ಶಮನಗೊಳಿಸಲು ಮುಖ್ಯಮಂತ್ರಿಗಳು ತಕ್ಷಣಕ್ಕೆ ಭರವಸೆ ನೀಡುತ್ತಾರೆ. ಆದರೆ ಭರವಸೆ ಅನುಷ್ಠಾನಕ್ಕೆ ಕಾಲಮಿತಿಯಾಗಲಿ ಅಥವಾ ಸಾಧ್ಯಾಸಾಧ್ಯತೆಗಳ ಬಗ್ಗೆಯಾಗಲಿ ನಿಖರ ಮಾಹಿತಿ ನೀಡುವುದಿಲ್ಲ' ಎಂದು ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಮತ್ತು ಮಾಜಿ ಶಾಸಕಿ ಜ್ಯೋತಿರೆಡ್ಡಿ ಎನ್ನುತ್ತಾರೆ.

`ಅಂತರ್ಜಲ ಮರುಪೂರಣವಾಗಬೇಕು ಎಂದು ಪ್ರಮುಖ ಬೇಡಿಕೆಯೊಂದಿಗೆ ಅನಿರ್ದಿಷ್ಟಾವಧಿ ಧರಣಿಯು ಕೆಲವೇ ದಿನಗಳಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಆದ್ಯತೆ ನೀಡಿತು. ಯೋಜನೆಗೆ ಶಂಕುಸ್ಥಾಪನೆ ಆಗುವವರೆಗೆ ಮತ್ತು ಪಶ್ಚಿಮಘಟ್ಟದಿಂದ ಜಿಲ್ಲೆಗೆ ನೀರು ಹರಿಯುವವರೆಗೆ ಹೋರಾಟ ಸ್ಥಗಿತಗೊಳಿಸುವುದಿಲ್ಲ ಎಂದು ಹೋರಾಟಗಾರರು ಭಾವಪರವಶವಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿಯವರು ಭರವಸೆ ನೀಡಿದ ಕೆಲವೇ ನಿಮಿಷಗಳಲ್ಲಿ ಹೋರಾಟಗಾರರು ತಮ್ಮ ನಿರ್ಣಯ ಬದಲಿಸಿಬಿಟ್ಟರು. ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಮತ್ತು ಜನರು ಹೋರಾಟದಲ್ಲಿ ಭಾಗವಹಿಸಿದ್ದರು.

ಹೋರಾಟ ಹಿಂಪಡೆಯುವ ಮುನ್ನ ಆಯಾ ಸಂಘಟನೆಗಳ ಪ್ರತಿನಿಧಿಗಳ ಅನಿಸಿಕೆ, ಅಭಿಪ್ರಾಯ ಕೇಳಲಿಲ್ಲ. ತಕ್ಷಣವೇ ಹೋರಾಟ ಹಿಂಪಡೆದು, ಸರ್ಕಾರಕ್ಕೆ ನಿರಾಳ ಮಾಡಿಕೊಟ್ಟರು' ಎಂದು ಹೋರಾಟಗಾರರೊಬ್ಬರು ತಿಳಿಸಿದರು.
`ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸುವ ಹೋರಾಟ ಸಮಿತಿಯವರು ಪುನಃ ಹೋರಾಟ ಆರಂಭಿಸಿದರೆ, ಮತ್ತೆ ಎಷ್ಟು ಜನರು ಮತ್ತು ಸಂಘಸಂಸ್ಥೆಗಳು ಬರುತ್ತವೆ ಎಂಬುದನ್ನು ಕಾದು ನೋಡಬೇಕು.

ಭಾರಿ ಜನಬೆಂಬಲ ವ್ಯಕ್ತವಾಗುತ್ತಿದ್ದಾಗ ಮತ್ತು ಹೋರಾಟಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತಿದ್ದ ವೇಳೆ ಹೋರಾಟ ಹಿಂಪಡೆಯಲಾಯಿತು. ಈಗ ಅನಿವಾರ್ಯವಾಗಿ ಹೋರಾಟ ಪುನರಾರಂಭಿಸವ ಪರಿಸ್ಥಿತಿ ಎದುರಾದರೆ, ಹೋರಾಟ ಮತ್ತೆ ಅದೇ ಕಾವು  ಪಡೆದುಕೊಳ್ಳುವುದೇ ಎಂಬುದು ಕಾಲಕ್ಕೆ ಬಿಟ್ಟ ವಿಷಯ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT