ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಮಕ್ಕಳು-ಮಹಿಳೆಯರೂ ಕೆಸರಿಗಿಳಿದರು!

ಎಡನೀರು ಚೆಂಬೈಲ್ ಪರಿಶಿಷ್ಟ ಜಾತಿ ಕಾಲೊನಿಗೆ ನೀರಿಲ್ಲ
Last Updated 17 ಏಪ್ರಿಲ್ 2013, 13:07 IST
ಅಕ್ಷರ ಗಾತ್ರ

ಕಾಸರಗೋಡು: ಇಲ್ಲಿನ ಎಡನೀರು ಸಮೀಪದ ಚೆಂಬೈಲ್ ಪರಿಶಿಷ್ಟ ಜಾತಿ ಕಾಲೊನಿಯ ಜನರು ಕಳೆದ ಎರಡು ದಿನಗಳಿಂದ ಕುಡಿಯುವ ನೀರಿಲ್ಲದೆ ಒದ್ದಾಡಿದರೂ ಸಂಬಂಧಪಟ್ಟವರು ಕಣ್ಣಿದ್ದೂ  ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ.

ಚೆಂಗಳ ಗ್ರಾಮ ಪಂಚಾಯಿತಿನ 2ನೇ ವಾರ್ಡ್‌ನಲ್ಲಿ ಚೆಂಬೈಲ್ ಪರಿಶಿಷ್ಟ ಜಾತಿ ಕಾಲೊನಿ ಇದೆ. ಈ ಕಾಲೊನಿ  ಜನರ ಬವಣೆಗಳನ್ನು ಕೇಳುವವರೇ ಇಲ್ಲ. ಹೀಗಾಗಿ ಕಾಲೊನಿಯ ಸುಮಾರು 20 ಮಂದಿ ಮಕ್ಕಳು, ಸ್ತ್ರೀಯರು, ಪುರುಷರು ಎಡನೀರು ಮಠ ಬಸ್ ನಿಲ್ದಾಣದ ಬಳಿ ಗದ್ದೆ ಬದಿ ಪಾಳು ಬಿದ್ದ ಕೆರೆಗಿಳಿದಿದ್ದಾರೆ. ಮೈಯೆಲ್ಲಾ ಕೆಸರು. ಒರತೆಯನ್ನು ಅರಸಿ ಅವರೆಲ್ಲಾ ಬಸವಳಿದಿದ್ದರು. ರಸ್ತೆ ಬದಿಯಲ್ಲೇ ಇಂಥ ಘಟನೆ ನಡೆದರೂ ಪಂಚಾಯಿತಿಗೆ ಕಾಲೊನಿಯ ಜನರ ನೋವು ತಟ್ಟಿಲ್ಲ.

ಕಳೆದ ಒಂದು ವಾರದಿಂದ ಕಾಸರಗೋಡಿನಲ್ಲಿ ಬಿಸಿಲ ತಾಪ ದಾಖಲೆ ಮೀರಿ ಏರುತ್ತಿದೆ. ಇಂಥ ದಾರುಣ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ತತ್ತರಿಸುತ್ತಿರುವ ಜನರ ಹಾಹಾಕಾರ ಜನಪ್ರತಿನಿಧಿಗಳನ್ನು ತಟ್ಟದಿರುವುದು ವಿಪರ್ಯಾಸವಾಗಿದೆ ಎನ್ನುತ್ತಾರೆ ಪರಿಸರದವರು.
ಸಮಸ್ಯೆಯ ಬಗ್ಗೆ ಪಂಚಾಯಿತಿ ಸದಸ್ಯ ಸಿ.ವಿ.ಕೃಷ್ಣನ್ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ, `ಕಾಲೊನಿಯಲ್ಲಿ ಸುಮಾರು 25ರಷ್ಟು ಮನೆಗಳಿದ್ದು, ಸುಮಾರು 100 ಮಂದಿ ವಾಸವಿದ್ದಾರೆ. ಕಳೆದ ಎರಡು  ದಿನಗಳ ಹಿಂದೆ ಕಾಲೊನಿ ನಿವಾಸಿ ಗೋಪಾಲ ಎಂಬವರು ನೀರಿನ ಸಮಸ್ಯೆಯ ಬಗ್ಗೆ ತಮಗೆ ತಿಳಿಸಿದ್ದಾರೆ' ಎಂದು ಒಪ್ಪಿಕೊಂಡರು.

`ಚೆಂಬೈಲ್ ಪರಿಶಿಷ್ಟ ಕಾಲೊನಿಯಲ್ಲಿ ನೀರಿನ ಹಾಹಾಕಾರದ ಬಗ್ಗೆ ಪಂಚಾಯಿತಿಗೆ ಇದುವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ. ಪಂಚಾಯಿತಿಯ ಕುಡಿಯುವ ನೀರು ಇನ್ನೂ ಆರಂಭವಾಗಿಲ್ಲ. ಇದೇ 18ರಂದು ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅವರು ಕಾಸರಗೋಡಿಗೆ ಬರುತ್ತಿದ್ದು, ಈ ಸಂದರ್ಭ ನಡೆಯುವ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಲಾಗುವುದು. ಕಾಲೊನಿಯ ಕುಡಿಯುವ ನೀರಿನ ಸಮಸ್ಯೆಯನ್ನು ಪತ್ರಿಕೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಕಚೇರಿಯ ನೌಕರರನ್ನು ಸ್ಥಳಕ್ಕೆ ಕಳುಹಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಚೆಂಗಳ ಗ್ರಾಮ ಪಂಚಾಯಿತಿ ಕಚೇರಿಯ ಕಾರ್ಯದರ್ಶಿ ಜಯನ್ `ಪ್ರಜಾವಾಣಿ'ಗೆ ತಿಳಿಸಿದರು.   

`ನೀರಿಗಾಗಿ ಜನರು ಗೋಳಿಟ್ಟರೂ ಈ ಸದಸ್ಯ ಮಹಾಶಯ ಪಂಚಾಯಿತಿಯ ಗಮನಕ್ಕೇ ತಂದಿಲ್ಲ. ಕಾಲೊನಿಯಲ್ಲಿ ಪ್ರತ್ಯೇಕ ಪಂಪ್ ವ್ಯವಸ್ಥೆ ಇದೆ. ಇದುವರೆಗೆ ಇದರಿಂದಲೇ ನೀರು ಪೂರೈಕೆಯಾಗುತ್ತದೆ. ನೀರಿನ ಸಮಸ್ಯೆಯೋ, ಪಂಪ್ ಕೆಟ್ಟಿದೆಯೋ ಎಂಬ ಬಗ್ಗೆ ವಾರ್ಡಿನ ಸದಸ್ಯ ಹಾಗೂ ಪಂಚಾಯಿತಿ ತಲೆಕೆಡಿಸಿಕೊಳ್ಳುತ್ತಿಲ್ಲ' ಎಂದು ಕಾಲೊನಿ ನಿವಾಸಿ ಗೋಪಾಲ ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT