ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ರೈತರ ಪ್ರತಿಭಟನೆ

Last Updated 21 ಅಕ್ಟೋಬರ್ 2011, 10:45 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ 98ನೇ  ವಿತರಣಾ ಕಾಲುವೆಯಲ್ಲಿ ಸರಿಯಾಗಿ ನೀರು ನಿರ್ವಹಣೆ ಮಾಡುವಂತೆ ಒತ್ತಾಯಿಸಿ ಗುರುವಾರ ಮಾನ್ವಿ ತಾಲ್ಲೂಕಿನ ಕಲ್ಲೂರು ಗ್ರಾಮದ ನೀರಾವರಿ ಇಲಾಖೆಯ ಉಪವಿಭಾಗ ಕಚೇರಿ ಎದುರು ಕಲ್ಲೂರು, ಕುರ್ಡಿ ಹಾಗೂ ಹೊಕ್ರಾಣಿ ಮತ್ತು ಅನ್ವರಿ ಕ್ಯಾಂಪ್‌ನ ರೈತರು ಪ್ರತಿಭಟನೆ ನಡೆಸಿದರು.

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಗೇಜ್ ನಿರ್ವಹಣೆ ಮಾಡದೇ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ರೈತರ ಬೆಳೆಗಳು ಒಣಗಿ ಹೋಗುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆಯ 98ನೇ ವಿತರಣಾ ಕಾಲುವೆಗೆ 4.1 ಅಡಿ ಪ್ರಮಾಣದಷ್ಟು ನೀರು ಹರಿಸಬೇಕು. ಆದರೆ, ವಾರಬಂದಿ ಆರಂಭಗೊಂಡು ಮೂರ‌್ನಾಲ್ಕು ದಿನ ಕಳೆದರೂ 4.1 ಅಡಿ ಪ್ರಮಾಣದಲ್ಲಿ ನೀರು ಹರಿಸಿಲ್ಲ. ಕೂಡಲೇ ಈ ಭಾಗಕ್ಕೆ ನಿಗದಿಪಡಿಸಿದ ನೀರಿನ ಪ್ರಮಾಣಕ್ಕೆ ತಕ್ಕಂತೆ ನೀರು ಬೀಡಬೇಕು,  ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿ ಹೇಳಿಕೆ: ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಿಂದ ಸರಿಯಾದ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೇಜ್ ನಿರ್ವಹಣೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ನೀರಾವರಿ ಇಲಾಖೆಯ ವಿಭಾಗ ಅಧಿಕಾರಿ ಸುಭಾಷ್ `ಪ್ರಜಾವಾಣಿ~ಗೆ ತಿಳಿಸಿದರು.

ರೈತ ಮುಖಂಡರಾದ ಲಿಂಗಯ್ಯಸ್ವಾಮಿ, ಮಲ್ಲಿಕಾರ್ಜುನ ಮ್ಯಾಗಳಮನಿ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಅಮರಪ್ಪಗೌಡ, ಸಂಗಪ್ಪಗೌಡ ಹೊಸೂರು, ವೈ.ವೆಂಕಟೇಶ, ಆಂಜನೇಯ, ರಮೇಶ ಭೋವಿ, ಜಾಫರ್‌ಸಾಬ್, ವೆಂಕಟೇಶ ರೆಡ್ಡಿ, ಹನುಮಂತರಾಯ ಪೂಜಾರಿ,ಉಪ್ಪಾರ ಶೇಖರಪ್ಪ, ಮುದುಕಪ್ಪ ಅಂಬಿಗೇರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT