ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಅಭಾವ: ಮಕ್ಕಳ ಬಿಸಿಯೂಟಕ್ಕೂ ಪರದಾಟ!

Last Updated 4 ಜನವರಿ 2013, 6:37 IST
ಅಕ್ಷರ ಗಾತ್ರ

ಹಲಗೂರು: ಇಲ್ಲಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೀರಿನ ತೊಂದರೆ ಅಧಿಕವಾಗಿದೆ. ನೀರು ಪೂರೈಕೆಗೆ ಅಳವಡಿಸಿದ ಕಿರು ನೀರು ಯೋಜನೆಯ ತೊಂಬೆ ಉದ್ಘಾಟನೆಗೊಂಡರೂ ನೀರು ಸರಬರಾಜು ಆಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ವಿದ್ಯಾರ್ಥಿಗಳು ಶಾಲೆ ಆವರಣದ ಕೈಪಂಪ್ ಅವಲಂಬಿಸಿದ್ದರು. ಈಚಿನ ವರ್ಷಗಳಲ್ಲಿ ನೀರು ಬತ್ತಿ ಅದು ಸ್ಥಗಿತಗೊಂಡಿದೆ. 2011-12ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ 5 ಲಕ್ಷ ಅನುದಾನದಲ್ಲಿ ಶಾಲೆ ಆವರಣದಲ್ಲಿ ಕಿರು ನೀರು ಯೋಜನೆಯ ತೊಂಬೆ ನಿರ್ಮಿಸಲಾಗಿದೆ. ವಳಗೆರೆದೊಡ್ಡಿ ಗ್ರಾಮದಿಂದ ಈ ತೊಂಬೆಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಕಿರುನೀರು ಸರಬರಾಜು ಯೋಜನೆ ಉದ್ಘಾಟನೆಯಾಗಿ ವರ್ಷ ಕಳೆದಿದೆ. ಆದರೂ ನೀರು ಪೂರೈಕೆಯಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ಹಲಗೂರು-ವಳಗೆರೆದೊಡ್ಡಿ ಗ್ರಾಮ ವ್ಯಾಪ್ತಿಯಿಂದ ದೂರದಲ್ಲಿ ಶಾಲೆ ಇದೆ. ಬಸ್ಸಿನಿಂದ ಇಳಿದು ದೂರ ಕ್ರಮಿಸಬೇಕು. ವಿದ್ಯುತ್ ಇದ್ದಾಗ ಸಮೀಪದ ತೋಟದಿಂದ ನೀರು ತರುತ್ತೇವೆ. ಇದು ತುಂಬಾ ಶ್ರಮದಾಯಕ. ಬಿಸಿಯೂಟಕ್ಕೂ ಇಲ್ಲಿಂದಲೇ ನೀರು ತರಬೇಕು. ವಿದ್ಯುತ್ ಕೈಕೊಟ್ಟರೆ ಕುಡಿಯುವ ನೀರಿಗೆ ಅಲೆಯಬೇಕಾಗುತ್ತದೆ. ಊಟ ಮಾಡಿ ನೀರಿಲ್ಲದೆ ಬಳಲಿದ ಉದಾಹರಣೆಗಳಿವೆ. ಶಾಲಾ ಆವರಣದಲ್ಲಿನ ಗಿಡಗಳು ಒಣಗುತ್ತಿವೆ. ಸಭೆ, ಸಮಾರಂಭ ನಡೆಸಲು ನೀರಿನ ಕೊರತೆ ಉಂಟಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಪಕ್ಕದ ಹಳ್ಳಿಯಲ್ಲಿ ನೀರು ಸಮೃದ್ಧವಾಗಿದೆ. ನೀರು ಚರಂಡಿಯಲ್ಲಿ ಹರಿಯುವ ದೃಶ್ಯವನ್ನು ಕಂಡಿದ್ದೇವೆ. ಅಲ್ಲಿಂದಲೇ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ. ಆದರೂ ನೀರು ಹರಿಸುವ ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಿಸುತ್ತಾರೆ ವಿದ್ಯಾರ್ಥಿಗಳಾದ ಮಹೇಶ್, ಸುರೇಶ್, ಲಕ್ಷ್ಮಿ ಇತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT