ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮಹತ್ವ ಅರಿಯಲು ಸಲಹೆ

Last Updated 22 ಅಕ್ಟೋಬರ್ 2012, 4:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಂಬರುವ ದಿನಗಳಲ್ಲಿ ನೀರೂ ಕೂಡ ಸಿಗಲಾರದಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂದು ಮುರುಘಾಮಠದ ಶಿವಮೂರ್ತಿ ಮುರಘಾ ಶರಣರು ಎಚ್ಚರಿಕೆ ನೀಡಿದರು.

ಭಾನುವಾರದ ನಗರದ ಮುರುಘಾಮಠದ ಆವರಣದಲ್ಲಿ  ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ಕೃಷಿಮೇಳದಲ್ಲಿ ಮಾತನಾಡಿದ ಅವರು, ಯಾವುದೂ ಅಪವ್ಯಯ ಆಗಬಾರದೆಂದು ಲಿಂಗಪೂಜೆ ಸಂದರ್ಭದಲ್ಲಿ ಲಿಂಗಕ್ಕೆ ನೀರೆರೆಯುವುದನ್ನು ಬಿಟ್ಟಿದ್ದೇನೆ. ಯಾರಾದರೂ ಭಕ್ತರು ಕಾಲಿಗೆ ನೀರೆರೆಯಲು ಬಂದರೆ ನನ್ನ ಕಾಲುಗಳೇನು ಚಿಗುರುವುದಿಲ್ಲ, ಪಕ್ಕದ ಗಿಡಕ್ಕೆ ನೀರನ್ನು ಹಾಕಿ ಪೋಷಣೆ ಮಾಡಿ ಎಂದು ಹೇಳುತ್ತೇನೆ ಎಂದರು.

ರೈತರು ಇಂದು ಸಾವಿನ ಅಂಚಿಗೆ ಹೋಗುತ್ತಿದ್ದಾರೆ.  ಹೊಟ್ಟೆ ಪಾಡಿಗಾಗಿ ಜಮೀನು ಮಾರುವ ಹಂತಕ್ಕೆ ಬಂದಿದ್ದಾರೆ. ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.

ಕೃಷಿ ಮೇಳವನ್ನು ಸಸಿಗೆ ನೀರೆರೆಯುವ ಮೂಲಕ  ಉದ್ಘಾಟಿಸಿದ ತೋಟಗಾರಿಕಾ ಇಲಾಖೆ ಸಚಿವ ರವೀಂದ್ರನಾಥ್ ಪ್ರಸ್ತುತ ಕೃಷಿ ವಿಧಾನಗಳು ಮತ್ತು ಆಹಾರ ಭದ್ರತೆ ವಿಷಯ ಕುರಿತು ಮಾತನಾಡಿ, ರೈತರು ಇಂದು ವಾಣಿಜ್ಯಬೆಳೆಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರೈತರು ಎಲ್ಲ ಬೆಳೆಗಳನ್ನು ಬೆಳೆದು ಸಮತೋಲನ ಕಾಪಾಡಬೇಕು ಎಂದು ಸಲಹೆ ನೀಡಿದರು.

ಕೃಷಿಕರಿಗೆ ಹೆಣ್ಣು ಕೊಡಿ: ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆನಂದ ಮಾತನಾಡಿ, ಗ್ರಾಮದತ್ತ ಸಪ್ತಪದಿ ತುಳಿಯಬೇಕಾಗಿದೆ. ಕೃಷಿಕಷ್ಟ, ನೌಕರಿ ಸುಲಭ ಎನ್ನುವ ವಾತಾವರಣ ಬದಲಾಗಬೇಕು. ನಿಮ್ಮ ಮಗಳನ್ನು ಕೃಷಿಕನಿಗೆ ಮಾಡಿಸಿ. ಈ ಮೂಲಕ ಕಾಯಕ ಸಂಸ್ಕೃತಿಗೆ ಜೀವ ತುಂಬಬೇಕು ಎಂದು ಸಲಹೆ ನೀಡಿದರು.
ರಾಜ್ಯ ಜೈವಿಕ ಇಂಧನ ಸಮಿತಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಮಾತನಾಡಿ ಜಾಗತೀಕರಣ, ನಗರೀಕರಣ, ಕೈಗಾರಿಕೆಗಳ ಪ್ರಭಾವದಿಂದ ಕೃಷಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಹಾರ ಹೆಚ್ಚಿಸುವ ನೆಪದಲ್ಲಿ ಯಾಂತ್ರಿಕತೆಯ ಕಡೆಗೆ ನಾವು ವಾಲುತ್ತಿದ್ದೇವೆ ಎಂದರು

ಸಂಸ್ಕೃತಿ ಚಿಂತಕ ಬೈರಮಂಗಲ ಡಾ.ರಾಮೇಗೌಡ ಮುರುಘಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ,  ಶರಣಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷರಾದ ಜಯಕುಮಾರ್, ಕೃಷಿಮೇಳದ ಗೌರವ ಅಧ್ಯಕ್ಷರಾದ ಹೊಳಲ್ಕೆರೆ ಚಂದ್ರಪ್ಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಳಕಲ್‌ನ ಮಹಾಂತ ಅಪ್ಪಗಳು ಸೇರಿದಂತೆ ಏಳು ಜನರಿಗೆ  ಮುರುಘಾಶ್ರೀ ಪ್ರಶಸ್ತಿ  ನೀಡಿ ಸನ್ಮಾನಿಸಲಾಯಿತು.  ಪ್ರಶಸ್ತಿ ಪತ್ರ 10ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ಅಂಜನಾ ನೃತ್ಯ ಕಲಾತಂಡ, ಚಿತ್ರದುರ್ಗ ಹಾಗೂ ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯ, ಚಿತ್ರದುರ್ಗ ಇವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ ಸ್ವಾಗತಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.  ಸತೀಶ್ ಕುಮಾರ್ ಜಟ್ಟಿ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಸಿ.ಟಿ. ಜಯಣ್ಣ ಹಾಗೂ ಜಿ. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ಕೃಷಿ ಮೇಳದಲ್ಲಿ ಜಿಲ್ಲಾ ಜೈವಿಕ ಇಂಧನ ಮಾಹಿತಿ ಪ್ರಾತ್ಯಕ್ಷಿಕ ಕೇಂದ್ರ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯ್ತಿ, ಚಿತ್ರದುರ್ಗ, ಅರಣ್ಯ ಇಲಾಖೆ, ಚಿತ್ರದುರ್ಗ, ರೇಷ್ಮೆ ಇಲಾಖೆ, ಚಿತ್ರದುರ್ಗ, ಪಶುಪಾಲನ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆಯಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು

ಶರಣ ಸಂಸ್ಕೃತಿ ಉತ್ಸವದಲ್ಲಿ ಇಂದು
ಬಸವಕೇಂದ್ರ ಮತ್ತು ಮುರುಘಾಮಠ: ಮುರುಘಾಮಠದ ಅನುಭವಮಂಟಪದ ಶರಣ ಹರಳಯ್ಯ ಮಧುವಯ್ಯ ವೇದಿಕೆ. ಸಹಜ ಶಿವಯೋಗ. ನೇತೃತ್ವ: ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ವಿರಕ್ತಮಠದ ಚನ್ನಬಸವ ಸ್ವಾಮೀಜಿ. ಅತಿಥಿಗಳು: ಗುಂಡ್ಲುಪೇಟೆ ಶಾಸಕ ಎಚ್.ಎಸ್. ಮಹಾದೇವಪ್ರಸಾದ್, ಬಿಜಾಪುರ ಜಿಲ್ಲೆ ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಮಾಜಿ ಶಾಸಕ ವಿನಯ ಕುಲಕರ್ಣಿ, ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ಸುಧಾ ಜಯರುದ್ರೇಶ್.

ಗೌರವಾರ್ಪಣೆ: ದಾವಣಗೆರೆ ಸಂಚಾರಿ ಕೆಬಿಆರ್ ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಶಂಭುಲಿಂಗಪ್ಪ, ಆಭರಣ ಕುಸುರಿ ಕೆಲಸಗಾರ ಎಂ. ಶಂಕರಮೂರ್ತಿ ವಿಶ್ವಕರ್ಮ. ಬೆಳಿಗ್ಗೆ 7.45ಕ್ಕೆ.

ಕೈಗಾರಿಕಾ ಮೇಳ: ವಿಷಯ: ಪ್ರಸ್ತುತ ಸಂದರ್ಭದ ಕೈಗಾರಿಕಾ ಅಭಿವೃದ್ಧಿ ಹಿನ್ನಡೆ-ಒಂದು ವಿಶ್ಲೇಷಣೆ. ನೇತೃತ್ವ: ಬೀದರ್‌ನ ಬಾತಂಬ್ರ ನಿರಂಜನ ಸಂಸ್ಥಾನ ಮಠದ ಶಿವಯೋಗೀಶ್ವರ ರಾಜಯೋಗೀಂದ್ರ ಸ್ವಾಮೀಜಿ. ಉದ್ಘಾಟನೆ: ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ. ಅತಿಥಿಗಳು: ಸಣ್ಣ ಕೈಗಾರಿಕೆ ಸಚಿವ ನರಸಿಂಹನಾಯಕ್, ಕೇರಳ ರಾಜ್ಯ ಸರ್ಕಾರದ ಗೃಹಮಂತ್ರಿ ತಿರುವಾಂಕೂರು ರಾಧಾಕೃಷ್ಣನ್, ವಿಧಾನ ಪರಿಷತ್ ಸದಸ್ಯ ಹಾಗೂ ಕೈಗಾರಿಕೋದ್ಯಮಿ ವಿಜಯ ಸಂಕೇಶ್ವರ, ಮಾಜಿ ಸಚಿವ ಎಚ್.ಕೆ. ಪಾಟೀಲ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಹೊಸದಿಂಗತ ಪತ್ರಿಕೆ ಕಾರ್ಯಪಾಲಕ ಸಂಪಾದಕ ಪಿ. ರಾಜೇಂದ್ರ.

ಗೌರವಾರ್ಪಣೆ: ರೇಣುಕಾ ಶುಗರ್ಸ್‌  ಅಧ್ಯಕ್ಷೆ ಡಾ. ವಿದ್ಯಾ ಮರಕುಂಬಿ, ಕೈಗಾರಿಕೋದ್ಯಮಿಗಳಾದ ಎಸ್. ರುದ್ರೇಗೌಡ, ಜೈನುಲಾಬ್ದೀನ್, ಕೆ.ವಿ. ರವಿಕುಮಾರ್. ಬೆಳಿಗ್ಗೆ 11ಕ್ಕೆ. ಮುರುಘಾಮಠದ ಅನುಭವಮಂಟಪದ ಶರಣ ಹರಳಯ್ಯ ಮಧುವಯ್ಯ ವೇದಿಕೆ. ಮಹಿಳಾ ಸಮಾವೇಶ. ವಿಷಯ: ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ. ನೇತೃತ್ವ: ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ.

ಮೈಸೂರಿನ ಜ್ಞಾನಯೋಗಶ್ರಮದ ಬಸವಾಂಜಲಿ. ಅತಿಥಿಗಳು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಕಳಕಪ್ಪ ಬಂಡಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಂಸತ್ ಸದಸ್ಯರಾದ ಜನಾರ್ದನಸ್ವಾಮಿ, ಜೆ. ಶಾಂತಾ, ಚಿತ್ರನಟಿ ಹಾಗೂ ಜೆಡಿಎಸ್ ಮಹಿಳಾ ಮುಖಂಡರಾದ ಪೂಜಾಗಾಂಧಿ, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ರಾಜ್ಯ ಹಕ್ಕಿಪಿಕ್ಕಿ ಸಮಾಜದ ಅಧ್ಯಕ್ಷೆ ಮಹಾದೇವಿ, ಕೇರಳದ ತಿರುವನಂತಪುರಂನ ಕೆಪಿಸಿಸಿ ಅಧ್ಯಕ್ಷ ರಮೇಶ್ ಚೆನ್ನಿತಾಲ, ಚಳ್ಳಕೆರೆ ಪುರಸಭೆ ಅಧ್ಯಕ್ಷ ಪಿ. ಶಂಶಾದ್ ಬಾಷ, ಅಂಡಮಾನ್ ಮತ್ತು ನಿಕೋಬಾರ್‌ನ ಆದಿವಾಸಿ ಮುಖಂಡ ಅನುರಾಧಾರಾವ್. ಸನ್ಮಾನ: ಮಹಾತ್ಮಗಾಂಧಿ ಮೊಮ್ಮಗಳಾದ ಸುಮಿತ್ರಾಗಾಂಧಿ ಕುಲಕರ್ಣಿ, ಬೆಂಗಳೂರಿನ ಬಿಎಂಟಿಸಿ ಚಾಲಕಿ ಪ್ರೇಮ. ಸಂಜೆ 6.30ಕ್ಕೆ . 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT