ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಂಪರ್ಕ ಸೃಷ್ಟಿಸಿದ ಮನಸ್ತಾಪ !

Last Updated 17 ಜನವರಿ 2011, 9:05 IST
ಅಕ್ಷರ ಗಾತ್ರ

ಕೋಲಾರ: ನಗರದ 3ನೇ ವಾರ್ಡಿಗೆ ಸೇರಿದ ಕೋಟೆಯ 2ನೇ ಮುಖ್ಯರಸ್ತೆಯ 1ನೇ ಕ್ರಾಸ್‌ನಲ್ಲಿರುವ ನಿವಾಸಿಗಳಲ್ಲಿ ಕಳೆದ ಮೂರು ತಿಂಗಳಿಂದ ಮನಸ್ತಾಪ ಹೊಗೆಯಾಡುತ್ತಿದೆ. ಅದಕ್ಕೆ ಕಾರಣವಾಗಿರುವುದು ಅದೇ ರಸ್ತೆಯ ನಿವಾಸಿಯೊಬ್ಬರು ಅಲ್ಲಿ ಕೆಲವು ದಿನಗಳಿಂದ ನಲ್ಲಿ ನೀರಿನ ಸಂಪರ್ಕ ಪಡೆಯುವುದಕ್ಕಾಗಿ ಸಿಮೆಂಟ್ ರಸ್ತೆಯನ್ನು ಅಲ್ಲಲ್ಲಿ ಅಗೆಸುತ್ತಿರುವುದು. ಒಂದು ಮನೆಯ ಅನುಕೂಲಕ್ಕಾಗಿ ಸಿಮೆಂಟ್ ರಸ್ತೆಯನ್ನು ಅಗೆಸುವುದು ಎಷ್ಟು ಸರಿ ಎಂಬುದು ನಿವಾಸಿಗಳ ಪ್ರಶ್ನೆ. ಮನೆ ಮುಂದಿರುವ ಪೈಪ್‌ಲೈನ್‌ನಿಂದ ಸಂಪರ್ಕ ಪಡೆಯಲು ಅನುಮತಿ ಪಡೆದಿರುವ ನಿವಾಸಿ ಮುಖ್ಯಪೈಪ್‌ಲೈನ್‌ನಿಂದಲೇ ಅನಧಿಕೃತವಾಗಿ ಸಂಪರ್ಕ ಪಡೆಯಲು ಯತ್ನಿಸುತ್ತಿದ್ದಾರೆ ಎಂಬುದು ಅವರ ಆರೋಪ. ಅದೇ ಕಾರಣದಿಂದ ಕೆಲವೇ ದಿನದ ಹಿಂದೆ ಇಲ್ಲಿ ಬೀದಿ ಜಗಳವೂ ನಡೆದಿದೆ. ಆ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಗರಸಭೆ ಅಧಿಕಾರಿಗಳೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಬಿಟ್ಟರೆ ಬೇರೆ ಪ್ರಯೋಜನವಾಗಿಲ್ಲ. ರೈಸಿಂಗ್ ಪೈಪ್‌ಲೈನ್‌ನಿಂದ ನಿವಾಸಿಯೊಬ್ಬರು ನೇರ ಸಂಪರ್ಕ ಪಡೆಯಬಹುದೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.

ಇಲ್ಲಿ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿನ ಬಹುತೇಕರು ಹೇಳುವ ಪ್ರಕಾರ, ಎರಡು ವರ್ಷದಿಂದ ನಗರಸಭೆ ನೀರು ಸಮರ್ಪಕವಾಗಿ ಹರಿದು ಬಂದಿಲ್ಲ. ಬರುವ ಅತ್ಯಲ್ಪ ನೀರಿನ ಜೊತೆಗೆ, ಅವರೆಲ್ಲರೂ ಖಾಸಗಿ ಟ್ಯಾಂಕರ್‌ಗಳಿಗೆ ಎರಡು-ಮೂರು ದಿನಕ್ಕೊಮ್ಮೆ ದುಡ್ಡು ಕೊಟ್ಟು ನೀರು ಪಡೆಯುತ್ತಿದ್ದಾರೆ. ನೀರು ಕೊಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸ್ಥಳೀಯರ ದೂರು.

ಇಂಥ ವೇಳೆಯಲ್ಲಿಯೇ ಇಲ್ಲಿನ ನಿವಾಸಿ ಎಸ್.ರಾಜೇಶ್ವರಿ ಮತ್ತು ಇತರೆ ನಿವಾಸಿಗಳ ನಡುವೆ ಮನಸ್ತಾಪ ಎದ್ದಿದೆ. ನಿವಾಸಿಗಳು ಆರೋಪಿಸುವ ಪ್ರಕಾರ, ರಾಜೇಶ್ವರಿಯವರು ಬೋರ್ ಬದಲಾವಣೆಗೆ ಅನುಮತಿ ಪಡೆದು ಅನಧಿಕೃತವಾಗಿ ರಸ್ತೆಯನ್ನೆಲ್ಲ ಅಗೆಯುತ್ತಿದ್ದಾರೆ. ಅವರ ಮನೆಯ ಅನುಕೂಲಕ್ಕಾಗಿ ಸಿಮೆಂಟ್ ರಸ್ತೆಯನ್ನೆಲ್ಲ ಅಗೆಯಲಾಗಿದೆ. ಮನೆ ಮುಂದಿನ ಉಪಮುಖ್ಯ ನಲ್ಲಿಯಿಂದ ಸಂಪರ್ಕ ಪಡೆಯುವ ಬದಲು ರೈಸಿಂಗ್ ಪೈಪ್‌ನಿಂದ ಅನಧಿಕೃತವಾಗಿ ಅವರು ಸಂಪರ್ಕ ಪಡೆಯುತ್ತಿದ್ದಾರೆ. ನಿವಾಸಿಗಳೆಲ್ಲರೂ ನೀರಿಗಾಗಿ ಪರದಾಡುತ್ತಿರುವಾಗ ಅವರಿಗೆ ಮಾತ್ರ ವಿಶೇಷ ಸೌಕರ್ಯ ಏಕೆ? ಎಂಬುದು ಅವರ ಪ್ರಶ್ನೆ.

ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಡನೆ ಮಾತನಾಡಿದ ನಿವಾಸಿಗಳು, ‘ಅನಧಿಕೃತ ನೀರಿನ ಸಂಪರ್ಕದ ವಿರುದ್ಧ ಕ್ರಮ ಕೈಗೊಳ್ಳಲು ಕಳೆದ ಅಕ್ಟೋಬರ್ 1ರಂದೇ ನಗರಸಭೆಗೆ ದೂರು ನೀಡಲಾಗಿತ್ತು. ಆಗ ಕಾಮಗಾರಿ ಆರಂಭವಾಗಲಿಲ್ಲ. ಆದರೆ ಕೆಲವು ದಿನಗಳಿಂದ ಮತ್ತೆ ಕಾಮಗಾರಿ ಆರಂಭವಾಗಿದೆ. ಒಂದೇ ಮನೆಗೆ ಅನುಕೂಲ ಕಲ್ಪಿಸುವ ಬದಲು, ರಸ್ತೆಯಲ್ಲಿರುವ ಎಲ್ಲ ನಾಗರಿಕರಿಗೂ ನೀರು ದೊರಕುವಂತೆ ಸಂಪರ್ಕವನ್ನು ನೀಡಲಿ’ ಎಂದರು.

ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ನಿವಾಸಿ ರಾಜೇಶ್ವರಿ ‘ನಾವು ಕೂಡ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದೇವೆ. ಈಗ ನೀರಿನ ಸಂಪರ್ಕ ಪಡೆಯಲು ರಸ್ತೆ ಕಟಿಂಗ್ ಫೀಸ್ ಎಂದು ರೂ 1,800 ರೂಪಾಯಿ ಶುಲ್ಕವನ್ನು ನಗರಸಭೆಗೆ ಸಂದಾಯ ಮಾಡಿದ ಬಳಿಕವೇ ಸಂಪರ್ಕ ಪಡೆಯಲು ರಸ್ತೆಯನ್ನು ಅಗೆಸಲಾಗುತ್ತಿದೆ. ಅಗೆದ ರಸ್ತೆಯನ್ನು ಮುಚ್ಚುವ ಜವಾಬ್ದಾರಿಯನ್ನು ನಾನೇ ಹೊತ್ತಿರುವೆ’ ಎಂದರು.

‘ಪ್ರಮುಖ ಪೈಪ್‌ಲೈನ್‌ನಿಂದ ಸಂಪರ್ಕ ಪಡೆಯುತ್ತಿದ್ದಾರೆ ಎಂದು ನನ್ನ ವಿರುದ್ಧ ಆರೋಪಿಸುವವರಲ್ಲಿ ಹಲವರು ಕೂಡ ಹಾಗೆಯೇ ಸಂಪರ್ಕ ಪಡೆದಿದ್ದಾರೆ. ನಮ್ಮದು ರಸ್ತೆಯಲ್ಲಿ ಕೊನೇ ಮನೆ. ಬೇರೆ ಕಡೆಯಿಂದ ಸಂಪರ್ಕ ಪಡೆಯಲು ಮಾರ್ಗವೇ ಇಲ್ಲ.

 ಇಡೀ ರಸ್ತೆಯಲ್ಲಿ ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯ ಟೆಂಡರ್ ಕೂಡ ನಗರಸಭೆ ಕರೆದಿದೆ. ಅದರಲ್ಲಿಯೂ ತಮ್ಮ ಪಾತ್ರ ಹೆಚ್ಚಿದೆ. ಮುಂದೆ ಆ ಕಾಮಗಾರಿ ಶುರುವಾದರೆ ಇಡೀ ರಸ್ತೆಯನ್ನೆ ಪೂರ್ಣ ಅಗೆಯಬೇಕಾಗುತ್ತದೆ. ಅದನ್ನೂ ಇಲ್ಲಿನ ನಿವಾಸಿಗಳು ತಡೆಯುವರೆ’ ಎಂದು ಪ್ರಶ್ನಿಸಿದರು.

‘ಕಟ್ಟಿರುವ ಶುಲ್ಕದ ಪ್ರಕಾರ 20 ಅಡಿಯಷ್ಟು ಉದ್ದ ನೆಲವನ್ನು ಅಗೆಯಬಹುದು. ಅಷ್ಟನ್ನು ಅಗೆದು, ಸಂಪರ್ಕ ಪಡೆಯುವ ಸಲುವಾಗಿ ಅಲ್ಲಲ್ಲಿ ರಸ್ತೆ ಅಗೆಯಲಾಗಿದೆ ಅಷ್ಟೆ’ ಎಂಬುದು ಗುತ್ತಿಗೆದಾರ ನಾಗೇಶ್ ನುಡಿ.

ಇಲ್ಲಿನ ಎಲ್ಲ ನಿವಾಸಿಗಳೂ ನೀರಿಗಾಗಿ ಪರದಾಡುತ್ತಿರುವವರೇ. ಈಗ ಒಬ್ಬರಿಗೆ ಮಾತ್ರ ವಿಶೇಷ ಸೌಕರ್ಯ ದೊರಕಲಿದೆ; ಅದಕ್ಕೆ ಸಿಮೆಂಟ್ ರಸ್ತೆಯನ್ನು ಅಗೆಯಲಾಗುತ್ತಿದೆ ಎಂಬುದು ಹಲವರಲ್ಲಿ ತೀವ್ರವಾದ ಅಸಮಾಧಾನ, ಆಕ್ಷೇಪಣೆಯ ಭಾವವನ್ನು ಮೂಡಿಸಿದೆ.ಎಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆಯನ್ನು ರೂಪಿಸಿ ಎಂಬುದೇ ಅವರ ಆಗ್ರಹ.
ಅಧಿಕೃತ, ಅನಧಿಕೃತ ಎಂಬ ಪ್ರಶ್ನೆ, ಆರೋಪಗಳಿಗೆ ನಗರಸಭೆ ಅಧಿಕಾರಿಗಳು ಸ್ಪಷ್ಟನೆ ನೀಡುವುದರ ಜೊತೆಗೆ, ನಿವಾಸಿಗಳ ಮನಸ್ತಾಪ ತಾರಕಕ್ಕೆ ಏರದಂತೆ ಕ್ರಮ ಕೈಗೊಳ್ಳುವುದು ಇಂದಿನ ಸನ್ನಿವೇಶದಲ್ಲಿ ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT