ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸದ್ಬಳಕೆಯ ಸವಾಲು

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಈಗಿನ 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಲು ಕೃಷ್ಣಾ ನ್ಯಾಯಮಂಡಳಿ ಹಸಿರು ನಿಶಾನೆ ತೋರಿದೆ. ನ್ಯಾಯಮಂಡಳಿಯ ಈ ಸ್ಪಷ್ಟೀಕರಣ ಆದೇಶವು ಕೃಷ್ಣಾ ಕಣಿವೆಯ ಜನರಲ್ಲಿ ಹರ್ಷ ಮೂಡಿಸಿದೆ. ಇದರಿಂದ, ಕರ್ನಾಟಕ ನಾಲ್ಕು ದಶಕಗಳಿಂದ  ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ.

  ಆದರೆ ಸುಲಭವಾಗಿ ಪಟ್ಟು ಬಿಡದ  ಆಂಧ್ರಪ್ರದೇಶಕ್ಕೆ ಇದು ಬಿಸಿತುಪ್ಪದಂತೆ ಆಗಿದೆ. ಅದಕ್ಕೆಂದೇ ಅದು ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಉದ್ದೇಶಿಸಿದೆ. ಇದು ನಿರೀಕ್ಷಿತವೇ. ಆದರೆ ಅಲ್ಲಿಯೂ ನ್ಯಾಯ ಪಡೆಯಲು ಮತ್ತು ಪ್ರಕರಣದ ತ್ವರಿತ ಇತ್ಯರ್ಥಕ್ಕೆ ರಾಜ್ಯ ಸರ್ಕಾರ  ಶ್ರಮಿಸಬೇಕು.  ಕರ್ನಾಟಕ ಸರ್ಕಾರ, ಮೂಲ ಯೋಜನೆಯಂತೆ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಿತ್ತು. ಇದಕ್ಕೆ ಸಂವಾದಿಯಾಗಿ 26 ಕ್ರಸ್ಟ್ ಗೇಟುಗಳನ್ನು ಅದೇ ಎತ್ತರಕ್ಕೆ ಅಳವಡಿಸಿದಾಗ ಆಂಧ್ರ ತಕರಾರು ತೆಗೆಯಿತು. ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಗೇಟುಗಳನ್ನು 519.6 ಮೀಟರ್‌ಗೆ ಮಿತಿಗೊಳಿಸಬೇಕಾಯಿತು. ಆ ಅಡ್ಡಿ ಈಗ ನಿವಾರಣೆ ಆಗಿದೆ.

ನ್ಯಾಯಮಂಡಳಿ ತೀರ್ಪು ರಾಜ್ಯದ ಪರವಾಗಿದ್ದರೂ ಕೂಡಲೇ ಕ್ರಸ್ಟ್‌ ಗೇಟು­ಗಳನ್ನು ಎತ್ತರಿಸಿ ನೀರು ಸಂಗ್ರಹಿಸಿಕೊಳ್ಳಲು ನಮಗೆ ಸಾಧ್ಯವಿಲ್ಲ. ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 22 ಗ್ರಾಮಗಳು ಹಾಗೂ  ಸುಮಾರು ಲಕ್ಷ ಎಕರೆ ಜಮೀನು ಮುಳುಗಡೆ­ಯಾಗಲಿದೆ. ಆ ಗ್ರಾಮಗಳ ಜನರ ಮನವೊಲಿಸಿ, ಅವರನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು.

ನ್ಯಾಯಮಂಡಳಿಯ ತೀರ್ಪಿನ ಅನ್ವಯ ವಿಜಾಪುರ ಜಿಲ್ಲೆಗೆ 80 ಟಿ.ಎಂ.ಸಿ. ಅಡಿ ನೀರು ಲಭ್ಯವಾಗಲಿದೆ. ಈ ಜಿಲ್ಲೆಯಲ್ಲಿ ಒಟ್ಟು 8.20 ಲಕ್ಷ ಹೆಕ್ಟೇರ್‌ ಉಳುಮೆ ಯೋಗ್ಯ ಜಮೀನಿದ್ದು, ಈವರೆಗೆ ಎರಡು ಲಕ್ಷ ಹೆಕ್ಟೇರ್‌ಗಷ್ಟೇ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿದೆ. ಉಳಿದ ಪ್ರದೇಶಕ್ಕೆ ನೀರಾವರಿ ಒದಗಿಸುವ ಅವಕಾಶ ನ್ಯಾಯಮಂಡಳಿಯ ತೀರ್ಪನ್ನು ಅವಲಂಬಿಸಿತ್ತು. ಆ ಆತಂಕ ಈಗ ನಿವಾರಣೆಯಾಗಿದೆ. ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿದ ಮಾತ್ರಕ್ಕೆ ನೀರಿನ ಹಕ್ಕನ್ನು ರಕ್ಷಿಸಿದಂತೆ ಆಗುವುದಿಲ್ಲ.

ಸಂಗ್ರಹವಾದ ನೀರಿನ ಬಳಕೆಗೆ ಅಗತ್ಯವಾಗಿರುವ ಕಾಲುವೆ ನಿರ್ಮಾಣ ಶೀಘ್ರಗತಿಯಲ್ಲಿ ಆಗಬೇಕು. ಕೃಷ್ಣಾ ಕೊಳ್ಳದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲ ಯೋಜನೆಗಳನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು. ರಾಜಕೀಯ ಇಚ್ಛಾಶಕ್ತಿ ಜತೆಗೆ  ಸಂಪನ್ಮೂಲದ ಕೊರತೆ ಇಲ್ಲದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಇದನ್ನು ಸವಾಲಾಗಿ ಪರಿಗಣಿಸಿ ನಮ್ಮ ಪಾಲಿನ ನೀರನ್ನು ಬಳಸಲು ರಾಜ್ಯ ಪಣ ತೊಡಬೇಕು.

ಕೃಷ್ಣಾ ಕೊಳ್ಳದ ಹೆಚ್ಚುವರಿ ನೀರಿನ ಹಂಚಿಕೆ ವಿವಾದವನ್ನು ನ್ಯಾಯಮಂಡಳಿ ಈಗ ಮುಕ್ತವಾಗಿಟ್ಟಿದೆ. ರಾಜ್ಯದ ಹಕ್ಕು ಮಂಡಿಸಲು ಇದರಿಂದ ಅವಕಾಶ ದೊರೆತಿದೆ. ಇದೇ ವೇಳೆ ಕೃಷ್ಣಾ ನೀರಿನಿಂದ ನಾಲ್ಕು ಟಿ.ಎಂ.ಸಿ. ಅಡಿಗಳಷ್ಟು ನೀರನ್ನು ಖೋತಾ ಮಾಡಿ ರಾಜ್ಯದ ಹಿತಕ್ಕೆ ನ್ಯಾಯಮಂಡಳಿ ತುಸು ಹಾನಿ ಮಾಡಿದೆ. ಈ ಹಾನಿ ಸರಿಪಡಿಸಿಕೊಳ್ಳುವ ಕುರಿತು ಸರ್ಕಾರ ಚಿಂತನೆ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT