ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ: ಮಳೆ ನೀರು ಸಂಗ್ರಹವೇ ಮದ್ದು

Last Updated 1 ಮೇ 2012, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬರಗಾಲದಿಂದಾಗಿ ಕುಡಿಯುವ ನೀರಿನ ಕೊರತೆಯೂ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಮಳೆ ನೀರು ಸಂಗ್ರಹಿಸುವುದೊಂದೇ ಪರಿಹಾರ ಎನ್ನುತ್ತಾರೆ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇ ಜಿನ ಸಹಾಯಕ ಪ್ರಾಧ್ಯಾಪಕ ಎಂ.ಆರ್. ಪಾಟೀಲ.

ಜಲ ಮೂಲಗಳಿಗೆ ಮರು ಜೀವ ತುಂಬುವುದೊಂದೇ ಉಪಾಯ ಎಂದು ಕಂಡುಕೊಂಡಿರುವ ಅವರು, ಕಳೆದ 10 ವರ್ಷಗಳಲ್ಲಿ ಧಾರವಾಡ ಜಿಲ್ಲೆಯಾದ್ಯಂತ 40 ಮನೆಗಳು ಹಾಗೂ 30 ಸಂಸ್ಥೆಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

ಪರಿಸರ ತಂತ್ರಜ್ಞಾನ ಕುರಿತು ಅದರಲ್ಲೂ ನೀರು ಹಾಗೂ ಬಳಕೆಯಾದ ನೀರಿನ ಶುದ್ಧೀಕರಣ ಕುರಿತು ಕಲಿತಿರುವ ಅವರು, ಈಗ ಅದನ್ನೇ ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. `7 ವರ್ಷಗಳ ಹಿಂದೆ ನಗರದಲ್ಲಿ ಬೋರ್‌ವೆಲ್ ಸಲುವಾಗಿ 350 ಅಡಿ ಭೂಮಿ ಕೊರೆದರೆ ನೀರು ಸಿಗುತ್ತಿತ್ತು. 4 ವರ್ಷಗಳ ಹಿಂದೆ 450 ಅಡಿ ಕೊರೆಯುವಂತಾಯಿತು.
 
ಈಗ 600 ಅಡಿ ಕೊರೆದಾಗ ಮಾತ್ರ ನೀರು ಸಿಗುತ್ತಿದೆ. ಇದರಿಂದ ಲವಣಾಂಶಗಳ ಜೊತೆಗೆ ಉಪ್ಪು ನೀರು ಸಿಗುತ್ತದೆ. ನೇರವಾಗಿ ಕುಡಿಯಲು ಆಗುವುದಿಲ್ಲ. ಇದಕ್ಕಾಗಿ ಮಳೆ ನೀರನ್ನು ಸಂಗ್ರಹಿಸುವುದರಿಂದ ಇತರ ಮೂಲಗಳಿಂದ ನೀರನ್ನು ಬಳಸುವುದು ಕಡಿಮೆಯಾಗುತ್ತದೆ. ಜೊತೆಗೆ ಅಂತರ್ಜಲ ಮರುಪೂರಣ ಆಗುತ್ತದೆ~ ಎನ್ನುತ್ತಾರೆ ಪಾಟೀಲ.

`ಏಪ್ರಿಲ್-ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ಬೀಳುವ ಮಳೆ ನೀರನ್ನು ಪ್ರತಿ ಮನೆ ಹಾಗೂ ಸಂಘ-ಸಂಸ್ಥೆಗಳು, ಕಂಪನಿಗಳು ಸಂಗ್ರಹಿಸಬಹುದು. ಇದಕ್ಕಾಗಿ ರೂ 20,000 ವೆಚ್ಚವಾಗುತ್ತದೆ. 5,000 ಲೀಟರ್ ಟ್ಯಾಂಕ್ ಇದ್ದರೆ ಕೇವಲ ರೂ 3-4 ಸಾವಿರ ಮಾತ್ರ ವೆಚ್ಚವಾಗುತ್ತದೆ. ಈ ಕುರಿತು ಜನರಲ್ಲಿ ಜಾಗೃತಿ ಅಗತ್ಯವಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಡಳಿತದ ಆಶ್ರಯದಲ್ಲಿ 200 ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳಿಗೆ ತರಬೇತಿ ನೀಡಿರುವೆ. ಪ್ರತಿ ವರ್ಷ ಕನಿಷ್ಠ 100 ಜನರಿಗೆ ತರಬೇತಿ ಕೊಡುತ್ತಿರುವೆ.

ಅಲ್ಲದೇ ನಮ್ಮ ಬಿವಿಬಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟ್ ಕೊಡುತ್ತೇವೆ. ಜೊತೆಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತೇವೆ~ ಎಂದು ಅವರು ಖುಷಿಯಾಗಿ ಹೇಳುತ್ತಾರೆ.

ಇದಲ್ಲದೇ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 30 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಿಸುವ ಟ್ಯಾಂಕ್‌ಕಟ್ಟಿದ್ದಾರೆ. ಜೊತೆಗೆ ದೇಶಪಾಂಡೆ ಫೌಂಡೇಶನ್ ನೆರವಿನಿಂದ ರೂ 8.5 ಲಕ್ಷ ವೆಚ್ಚದಲ್ಲಿ ಕೆರೆಯೊಂದನ್ನು ಕಟ್ಟಿಸಿದ್ದಾರೆ.  ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ ಎನ್ನುವ ಚಿಂತೆ ಅವರಿಗಿಲ್ಲ.
 
ಏಕೆಂದರೆ ಮಳೆ ನೀರೆಲ್ಲ ಇಂಗುತ್ತಿದೆ ಎನ್ನುವ ಖುಷಿ ಅವರಿಗಿದೆ. ಇದರೊಂದಿಗೆ ನಗರದ ಇಂದಿರಾ ಗಾಜಿನ ಮನೆ ಪಕ್ಕದಲ್ಲಿರುವ ಜಲಮಂಡಳಿ ಕಚೇರಿಗೆ 2 ವರ್ಷದ ಹಿಂದೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಇದೇ ರೀತಿ ಜಿಲ್ಲಾಡಳಿತದ ಎಲ್ಲ ಕಚೇರಿಗಳಲ್ಲೂ ಆಗಬೇಕು ಎನ್ನುವುದು ಅವರ ಆಗ್ರಹ.

ಅಲ್ಲದೇ ನೃಪತುಂಗ ಬೆಟ್ಟ ಹಾಗೂ ಇಂದಿರಾ ಗಾಜಿನ ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸುವ ಇಂಗುಗುಂಡಿಗಳನ್ನು ಮಾಡಿ, ಮಾಹಿತಿ ಫಲಕ ಹಾಕಬೇಕು. ಈ ಸಂಬಂಧ ಯೋಜನೆಯನ್ನು ಜಲಮಂಡಳಿಗೆ ಕೊಟ್ಟಿದ್ದೇವೆ. ಇದುವರೆಗೆ ಕಾರ್ಯಗತವಾಗಿಲ್ಲ ಎನ್ನುವ ಕೊರಗು ಅವರಿಗಿದೆ.

`ಅವಳಿನಗರದಲ್ಲಿ ಪ್ರತಿ ವರ್ಷ ಸರಾಸರಿ 80 ಸೆಂಟಿ ಮೀಟರ್ ಮಳೆ ಬೀಳುತ್ತದೆ. 1,000 ಚದರ ಅಡಿ ಕಟ್ಟಡದಲ್ಲಿ 1 ಲಕ್ಷ ಲೀಟರ್ ಮಳೆ ನೀರು ಸಂಗ್ರಹಿಸ ಬಹುದು. ಆಸ್ಪತ್ರೆ ಹಾಗೂ ಹೋಟೆಲ್ ಕಟ್ಟಡಗಳ ಮೇಲೆ ಸಂಗ್ರಹಿಸುವ ಮೂಲಕ ಆರ್ಥಿಕ ಮಿತವ್ಯಯ ಸಾಧಿಸಬಹುದು~ ಎನ್ನುತ್ತಾರೆ ಪಾಟೀಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT