ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆಯಿಂದ ನಲುಗುತ್ತಿರುವ ಕೆಂ‘ಭಾವಿ’

Last Updated 10 ಡಿಸೆಂಬರ್ 2013, 9:48 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚುತ್ತಲೆ ಇದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಸದ್ಯಕ್ಕೆ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಬಾವಿಗೆ ನೀರಿನ ಕೊರತೆ ಇಲ್ಲ. ಆದರೆ ಲಭ್ಯವಿರುವ ನೀರಿನಿಂದ ನಿತ್ಯ ಎಲ್ಲೆಡೆಯೂ ನೀರು ಪೂರೈಸಲು ಮಾತ್ರ ಸಾಧ್ಯವಾಗುತ್ತಿಲ್ಲ.

ಪಟ್ಟಣದ ಬಹುತೇಕ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದ್ದೇ ಇದೆ. ಸಂಜೀವ ನಗರ, ಸೊನ್ನದ ಬಡಾವಣೆ, ಗೌಡರ ಓಣಿ, ಲಕ್ಷ್ಮಿನಗರ, ಕೆಳಗೇರಿ ಬಡಾವಣೆಗಳಲ್ಲಿ ಇಂದಿಗೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ಬಡಾವಣೆಯ ಜನರು. ಇದರಿಂದಾಗಿ ಕೊಳವೆ ಬಾವಿಯಿಂದ ನೀರು ತರಲು ಸರದಿಯಲ್ಲಿ ನಿಲ್ಲುವುದು ತಪ್ಪಿಲ್ಲ.

ನೀರು ಸರಬರಾಜು ಮಾಡುವ ಎಪಿಎಂಸಿ ಬಾವಿಯು, ಕಾಲುವೆಯಲ್ಲಿ ನೀರು ಸ್ಥಗಿತ­ಗೊಂಡ ಬಹುತೇಕ ಬತ್ತಿ ಹೋಗುತ್ತದೆ. ಇದಕ್ಕಾಗಿಯೇ ಕೆಂಭಾವಿ ಸಮೀಪದ ಹಳ್ಳದ ಪಕ್ಕದಲ್ಲಿ ಮತ್ತೊಂದು ಬಾವಿಯನ್ನು ತೆಗೆಯಲಾಗಿದ್ದು, ಇದರಿಂದ ಟ್ಯಾಂಕ್‌ಗೆ ನೀರು ಪೂರೈಸುವ ಕಾಮಗಾರಿ ಬಹುತೇಕ ಪೂರ್ಣ­ಗೊಂಡಿದೆ. ಆದರೆ ಟ್ಯಾಂಕ್‌ಗೆ ಪೈಪ್‌ಲೈನ್‌ ವ್ಯವಸ್ಥೆ ಇಲ್ಲದಿರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.

ಪ್ರತಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಸದಸ್ಯರು ತಮ್ಮ ಬಡಾವಣೆಯ ನೀರಿನ ಸಮಸ್ಯೆ­ಗಳ ಬಗ್ಗೆ ಹೇಳಿದರೂ, ಅವು ಪರಿಹಾರವಾಗದೇ ಉಳಿಯುತ್ತಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಾಹೇರಪಾಶಾ ಖಾಜಿ ಹೇಳುತ್ತಾರೆ. ಚರಂಡಿ ನೀರು ರಸ್ತೆಯ ಮೇಲೆ ಹರಿದಾಡುವುದರಿಂದ ಬಡಾವಣೆಯ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಆಗಬೇಕಿದೆ. ಮುಖ್ಯ ಬಜಾರ್‌ ಹನುಮಾನ ದೇವಸ್ಥಾನದ ಮುಂದೆ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ.

ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದು, ಪಾದಚಾರಿಗಳ ಗೋಳು ಕೇಳುವವರಿಲ್ಲ. ಕುಡಿಯುವ ನೀರು, ರಸ್ತೆ ಚರಂಡಿ ವ್ಯವಸ್ಥೆ ಮಾಡಬೇಕು ಎನ್ನುವುದು ಇಲ್ಲಿಯ ಜನರ ಒತ್ತಾಯ. ಜಲ ನಿರ್ಮಲ ಯೋಜನೆಯಡಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಪಟ್ಟಣಕ್ಕೆ ನೀರಿನ ಸಮಸ್ಯೆ ಉದ್ಭವವಾಗಿದೆ. ನಮ್ಮ ಬಡಾವಣೆಗೆ ನೀರು ಕೊಡಿ ಎಂದು ಕಳೆದ ಆರು ತಿಂಗಳಿಂದ ಕೇಳುತ್ತಿದ್ದರೂ ಯಾರೊಬ್ಬರೂ ಗಮನಿಸುತ್ತಿಲ್ಲ.

ಇಂದಿಗೂ ಬಡಾವಣೆಯ ಜನ ದೂರದಿಂದ ನೀರು ತರುವುದು ತಪ್ಪಿಲ್ಲ. ಶೀಘ್ರ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆನಂದ ಆಸಿಂಗಾಲ ಒತ್ತಾಯಿಸಿದ್ದಾರೆ.
–ಪವನ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT