ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್!

Last Updated 7 ಅಕ್ಟೋಬರ್ 2011, 9:00 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕಿನ 192 ಗ್ರಾಮಗಳಿಗೆ ಈಗಾಗಲೆ ಕೊಳವೆಬಾವಿ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಪೈಕಿ 16 ಗ್ರಾಮಗಳ ಕುಡಿಯುವ ನೀರಿನಲ್ಲಿ ಆರ್ಸೆನಿಕ್  ಹಾಗೂ 111 ಗ್ರಾಮಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದು ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಉಪ ವಿಭಾಗದ ಮೂಲಗಳು ದೃಢಪಡಿಸಿವೆ.

ಬಸ್ಸಾಪುರ, ಬುದ್ದಿನ್ನಿ, ಗೋನವಾರ, ಕಾಟಗಲ್ಲ, ಮಸ್ಕಿ, ಮುದಬಾಳ, ಸಾನಬಾಳ, ಸರ್ಜಾಪುರ, ವೆಂಕಟಾಪುರ, ಗೆಜ್ಜಲಗಟ್ಟಾ, ಯಲಗಟ್ಟಾ, ವೀರಾಪುರ, ಹುನಕುಂಟಿ, ಹಟ್ಟಿ, ಮೇದಿನಾಪುರ, ನಿಲೋಗಲ್ ಎಂದು ಗುರುತಿಸಲಾಗಿದ್ದು ಶುದ್ಧ ಹಾಗೂ ಶಾಶ್ವತ ಕುಡಿಯುವ ನೀರು ಪೂರೈಸಲು ಚಿಂತನೆ ನಡೆದಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.

ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ ಅವರು, ಒಟ್ಟು 36.81 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಕಾಣಿಸಿದ ಗ್ರಾಮಗಳು ಹಾಗೂ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸಿಕೊಂಡು ಪ್ರಾಥಮಿಕ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಆರ್ಸೆನಿಕ್ ಅಂಶ ಕಾಣಿಸಿಕೊಂಡ ಗ್ರಾಮಸ್ಥರು ಭಯಗೊಳ್ಳುವ ಅಗತ್ಯವಿಲ್ಲ. ಪೂರ್ವಭಾವಿಯಾಗಿ ಈ ಸಿದ್ಧತೆಗಳನ್ನು ಈಗ ಮಾಡಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಅರ್ಸೆನಿಕ್ ಮತ್ತು ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡುಬಂದಾಗ ಜನಸಾಮಾನ್ಯರಲ್ಲಿ ಕ್ಯಾನ್ಸರ್, ಚರ್ಮರೋಗ, ಎಲುಬುಸವೆತ, ಹಲ್ಲುಗಳ ಪಾಚಿಗಟ್ಟುವಿಕೆ ಸೇರಿದಂತೆ ಇತರೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಂತೆಯೇ ಮುಂಜಾಗ್ರತೆ ಕ್ರಮವಾಗಿ ಪರೀಕ್ಷೆ ನಡೆಸಿ ಶುದ್ಧ ಕುಡಿಯುವ ನೀರು ಪೂರೈಸಲು 22 ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಭೆಗೆ ಭರವಸೆ ನೀಡಿದರು.

ಆಗ್ರಹ: ಆನ್ವರಿ ಸೇರಿದಂತೆ ಇನ್ನೂ ಕೆಲ ಸಮಸ್ಯಾತ್ನಕ ಹಳ್ಳಿಗಳು ಕೂಡ ಇಂತಹ ಅಂಶಗಳಿಂದ ತೊಂದರೆ ಅನುಭವಿಸುತ್ತಿವೆ. ಅಂತಹ ಗ್ರಾಮಗಳನ್ನು ಪುನರ್ ಸರ್ವೆ ಮಾಡಿ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸಲು ಮುಂದಾಗುವಂತೆ ಜಿಲ್ಲಾ ಪಂಚಾಯಿಸಿ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT