ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದ ನದಿಯಲ್ಲಿ ಮತಕ್ಕಾಗಿ `ಗಾಳ'

Last Updated 21 ಏಪ್ರಿಲ್ 2013, 21:00 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಕಾವತಿ ನದಿ ಹೆಸರಿನಲ್ಲಿ ರಾಜಕಾರಣಿಗಳು ಪಾದಯಾತ್ರೆ ನಡೆಸುವ ಮೂಲಕ ನದಿ ಪಾತ್ರದಲ್ಲಿ ಮತಗಳಿಗೆ `ಗಾಳ' ಹಾಕುವ ಕೆಲಸ ಮಾಡಿದರೆ, ಸರ್ಕಾರಗಳು ವಿವಿಧ ಯೋಜನೆಗಳ ಅನುದಾನದ ಮೂಲಕ ಕಾಲುವೆಗಳಲ್ಲಿ ವ್ಯರ್ಥವಾಗಿ ಹಣ ಹರಿಸಿವೆ.
ಎಷ್ಟೇ ಪಾದಯಾತ್ರೆಗಳು ನಡೆದರೂ ಕೋಟಿ, ಕೋಟಿ ಲೆಕ್ಕದಲ್ಲಿ ಅನುದಾನ ಹರಿದರೂ ನದಿಯೊಳಗಿನ ಹೂಳು ಪೂರ್ಣವಾಗಿ  ಕರಗಿಲ್ಲ. ಅದರೊಳಗೆ ನೀರು ಕೂಡ ಹರಿದಿಲ್ಲ. ನದಿ ಮತ್ತೆ ಜೀವ ತಳೆಯಬೇಕು ಎಂಬ ಹಂಬಲವೂ ಈಡೇರಿಲ್ಲ.

`ಬತ್ತಿದ ಅರ್ಕಾವತಿಯನ್ನು ಕಂಡರೆ ಸರ್ಕಾರಗಳಿಗೆ ಎಲ್ಲಿಲ್ಲದ ಪ್ರೇಮ. ಒಂದೆಡೆ ಅದರ ಪುನರುಜ್ಜೀವನಕ್ಕೆ ಯೋಜನೆ ತೇಲಿ ಬಿಡುವ ನೇತಾರರು, ಇನ್ನೊಂದೆಡೆ ಅದರ ಒಡಲಲ್ಲಿ ಕೈಗಾರಿಕೆಗಳ ಸ್ಥಾಪನೆ ಇಲ್ಲವೆ ಕಟ್ಟಡ ನಿರ್ಮಾಣದ ಆದೇಶಕ್ಕೆ ಸಹಿ ಹಾಕುತ್ತಾರೆ' ಎನ್ನುವುದು ನದಿ ಪುನಶ್ಚೇತನ ಸಮಿತಿ ಸದಸ್ಯರ ದೂರಾಗಿದೆ.

`ಮಗುವನ್ನು ತಾವೇ ಚಿವುಟಿ ಬಳಿಕ ರಮಿಸುವಂತಹ ಕಾಯಕ ಇದಾಗಿದೆ. ನದಿ ಜತೆಗೆ ರಾಜಕೀಯ ತಳಕು ಹಾಕಿಕೊಂಡು ಹೆಚ್ಚು-ಕಡಿಮೆ ಮೂರೂವರೆ ದಶಕವೇ ಕಳೆದಿದೆ' ಎಂದೂ ಅವರು ಹೇಳುತ್ತಾರೆ.

ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿ ಆಗ್ದ್ದಿದ ದಿನಗಳಿಂದ ಇಲ್ಲಿವರೆಗೆ ನದಿ ಉಳಿಸುವ, ನೀರು ತರಿಸುವ `ನಾಟಕ'ಗಳು ನಡೆಯುತ್ತಲೇ ಇವೆ. ಗುಂಡೂರಾವ್ ಅವರ ಆಡಳಿತಾವಧಿ ದಿನಗಳಲ್ಲಿ ಮಳೆಯಿಲ್ಲದೆ ನೀರಿನ ಬರ ಅನುಭವಿಸಿದ್ದಾಗ ತಿಪ್ಪಗೊಂಡನಹಳ್ಳಿ ಕೆರೆ ಅಂಗಳದಲ್ಲಿ ಶಿವ ಬಾಲಯೋಗಿ ಎನ್ನುವ ಸ್ವಾಮೀಜಿಯೊಬ್ಬರು ಹೋಮ ಮಾಡಿದ್ದರು. ಇದು `ನದಿಯಲ್ಲಿ ಮಾಡುತ್ತಿರುವ ಹೋಮ' ಎನ್ನುವುದು ಚೆನ್ನಾಗಿ ಗೊತ್ತಿದ್ದರೂ ಆಗಿನ ಸರ್ಕಾರ ಸ್ವಾಮೀಜಿ ಬೆಂಬಲಕ್ಕೆ ನಿಂತಿತ್ತು.

ಬಳಿಕ ಬಂದ ರಾಮಕೃಷ್ಣ ಹೆಗಡೆ ಅವರ ಸರ್ಕಾರ ಖಾಸಗಿ ಸಂಸ್ಥೆಯೊಂದಕ್ಕೆ ಅರ್ಕಾವತಿ ಪಾತ್ರದಲ್ಲಿ ಜಾಗ ನೀಡಲು ಮುಂದಾದಾಗ ದೊಡ್ಡ ಹೋರಾಟ ಮೂಡಿಬಂದಿತ್ತು. ಸರ್ಕಾರ ಮುಂದಿಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಂಡು, ಆದೇಶವನ್ನು ರದ್ದುಗೊಳಿಸಿತು. ಎಸ್. ಸುರೇಶಕುಮಾರ್ 1996ರಲ್ಲಿ ತಿಪ್ಪಗೊಂಡನಹಳ್ಳಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುವ ಮೂಲಕ ಅರ್ಕಾವತಿ ಉಳಿಸಲು ಕೂಗು ಎಬ್ಬಿಸಿದರು. ನಂತರದ ಚುನಾವಣೆಗಳಲ್ಲಿ ಗೆದ್ದುಬಂದ ಅವರು, ಸರ್ಕಾರದಲ್ಲಿ ಸಚಿವರಾಗಿ ಜಲ ಮಂಡಳಿ ಸೇರಿದಂತೆ ಪ್ರಮುಖ ಹುದ್ದೆ ನಿಭಾಯಿಸಿದರು.

`ಶಾಸಕರಾಗುವ ಮುಂಚೆ ಅವರಿಗಿದ್ದ ಕಾಳಜಿ ಅಧಿಕಾರದ ಅವಧಿಯಲ್ಲಿ ಎಲ್ಲಿ ಮರೆಯಾಯಿತೋ ತಿಳಿಯಲಿಲ್ಲ. ನಮ್ಮ ಅರ್ಕಾವತಿ ಇಲ್ಲವೆ ತಿಪ್ಪಗೊಂಡನಹಳ್ಳಿ ಕೆರೆ ಪುನರುಜ್ಜೀವನ ಆಗುವಂತಹ ಯೋಜನೆಗಳು ಬರಲಿಲ್ಲ' ಎಂದು ನದಿ ಪುನಶ್ಚೇತನ ಸಮಿತಿ ಸದಸ್ಯರು ಸಿಟ್ಟು ವ್ಯಕ್ತಪಡಿಸುತ್ತಾರೆ.

ಶಾಸಕ ಎಸ್.ಆರ್. ವಿಶ್ವನಾಥ್ 2009ರಲ್ಲಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಕೆರೆವರೆಗೆ ನಡೆಸಿದ ಪಾದಯಾತ್ರೆ ವಿಷಯವಾಗಿ ಸಹ ಅವರು ತಮಾಷೆ ಮಾಡುತ್ತಾರೆ. `ತಮ್ಮದೇ ಸರ್ಕಾರ ಇದ್ದಾಗಲೂ ಅವರು ನಡೆಸಿದ ಪಾದಯಾತ್ರೆ ಯಾರ ವಿರುದ್ಧ? ಅದರ ಫಲಶ್ರುತಿ ಏನು? ಸರ್ಕಾರದ ಭಾಗವಾಗಿ ಇದ್ದುಕೊಂಡು ಆರ್. ಅಶೋಕ ಮತ್ತು ಸುರೇಶ್‌ಕುಮಾರ್ ಆ ಯಾತ್ರೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾಡಿದ್ದೇನು?' ಎನ್ನುವ ಸರಣಿ ಪ್ರಶ್ನೆಗಳನ್ನು ಅವರು ಹಾಕುತ್ತಾರೆ.

ಯಾತ್ರೆಯ ಸಂದರ್ಭದಲ್ಲಿ ಸಚಿವರು ಕೊಟ್ಟ ಭರವಸೆಗಳ ಕಡೆಗೆ ತಿಪ್ಪಗೊಂಡನಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಜನ ಬೊಟ್ಟು ಮಾಡಿ ತೋರಿಸುತ್ತಾರೆ. `ಪಾದಯಾತ್ರೆ ನಡೆಸಿದವರ ಅಬ್ಬರದ ಘೋಷಣೆಗಳು ಎಲ್ಲಿಹೋದವು' ಎಂಬ ಆಕ್ರೋಶವನ್ನೂ ಅವರು ಹೊರಹಾಕುತ್ತಾರೆ. ಆಗಲೂ ಹೋಮ ನಡೆದಿತ್ತು ಎಂದು ಹೇಳಲು ಗ್ರಾಮಸ್ಥರು ಮರೆಯುವುದಿಲ್ಲ.

ಚುನಾವಣೆ ಹೊಸ್ತಿಲಲ್ಲಿದ್ದಾಗ ಶಾಸಕ ನೆ.ಲ. ನರೇಂದ್ರಬಾಬು ನಡೆಸಿದ ಪಾದಯಾತ್ರೆಯನ್ನೂ ಕೂಡ ಅವರು ಗೇಲಿಮಾಡದೆ ಬಿಡುವುದಿಲ್ಲ. `ಈ ರಾಜಕೀಯ ನೇತಾರರಿಗೆಲ್ಲ ನೈಜ ಕಾಳಜಿ ಇದ್ದರೆ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡದೆ ನದಿಯ ಪುನರುಜ್ಜೀವನಕ್ಕೆ ಸುಸ್ಥಿರ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದರು. ಪಾದಯಾತ್ರೆಗೆ ಬಳಸಿದ ಹಣವನ್ನು ನದಿ ಪುನಶ್ಚೇತನಕ್ಕೆ ಬಳಸಿದ್ದರೆ ತುಸುವಾದರೂ ಅನುಕೂಲವಾಗುತ್ತಿತ್ತು' ಎಂದು ವಿವರಿಸುತ್ತಾರೆ.

ಜನಸಮುದಾಯದಿಂದ ಮತ್ತೊಂದು ಪಾದಯಾತ್ರೆ ನಡೆದಿದೆ. ನದಿ ಮೂಲವಾದ ನಂದಿಬೆಟ್ಟದಿಂದ ಅದು ಕಾವೇರಿಯಲ್ಲಿ ಲೀನವಾಗುವ ಸಂಗಮದವರೆಗೆ 190 ಕಿ.ಮೀ. ಉದ್ದದ ನದಿ ಸಂರಕ್ಷಣೆ ನಡಿಗೆ ಅದಾಗಿತ್ತು. 2007ರಲ್ಲಿ ನಡೆದ ಈ ಆಂದೋಲನದ ಕಾವು ವರ್ಷದಿಂದ ವರ್ಷಕ್ಕೆ ವ್ಯಾಪಿಸುತ್ತಲೇ ಹೋಯಿತು. ರಾಜೇಂದ್ರ ಸಿಂಗ್ ಬಂದು ಹೋರಾಟಕ್ಕೆ ಬಲ ತುಂಬಿದರು.

ಗುಂಡೂರಾವ್ ಅವರಿಂದ ಇದುವರೆಗೆ ರಾಜ್ಯ ಕಂಡ ಎಲ್ಲ ಮುಖ್ಯಮಂತ್ರಿಗಳು ಅರ್ಕಾವತಿ ಉದ್ಧಾರದ ಮಾತುಗಳನ್ನು ಆಡಿದ್ದಾರೆ. ನದಿಪಾತ್ರದ ಸುಮಾರು 26 ಜನ ಶಾಸಕರು ನದಿ ಪುನಶ್ಚೇತನಕ್ಕಾಗಿ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಅವರ ಪ್ರಯತ್ನ ಹೇಳಿಕೆ ದಾಖಲಿಸಲು ಸೀಮಿತವಾಗಿದೆಯೇ ಹೊರತು ನೈಜ ಕಳಕಳಿಯಾಗಿ ಹೊರಹೊಮ್ಮಿಲ್ಲ.

ನದಿಯ ವಿಷಯವಾಗಿ ನೈಜ ಕಾಳಜಿ ತೋರಿದ ಏಕೈಕ ರಾಜಕಾರಣಿ ಪ್ರೊ. ಎ.ಲಕ್ಷ್ಮಿಸಾಗರ್ ಎಂಬುದು ದೊಡ್ಡಿ ಶಿವರಾಂ ಅವರ ಬಹುಸ್ಪಷ್ಟ ಅಭಿಪ್ರಾಯ. ನದಿ ಪಾತ್ರದಲ್ಲಿ ನಡೆದಿದ್ದ ಗಣಿಗಾರಿಕೆ, ಅತಿಕ್ರಮಣ, ಮಾಲಿನ್ಯ ಮೊದಲಾದ ಅಕ್ರಮ ಚಟುವಟಿಕೆಗಳ ವಿರುದ್ಧ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಆದೇಶದ ಪರಿಣಾಮ ಸರ್ಕಾರದ ವಿವಿಧ ಇಲಾಖೆಗಳು ನದಿ ವಿಚಾರದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎನ್ನುವ ಸರ್ಕಾರಿ ಅಧಿಸೂಚನೆ 2003ರಲ್ಲಿ ಹೊರಬಿತ್ತು. ಈ ಆದೇಶ ಇದುವರೆಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವುದು ನದಿ ಸಂರಕ್ಷಣೆ ಹೋರಾಟಗಾರರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಸರ್ಕಾರ ಮಾಡಿದ್ದೇನು?
ಸ್ವಯಂಸೇವಾ ಸಂಸ್ಥೆಗಳು, ನದಿ ಮೇಲಿನ ಕಾಳಜಿ ಇರುವ ಜನರ ಹೋರಾಟದ ಪರಿಣಾಮ ಸರ್ಕಾರ ನದಿ ಪುನಶ್ಚೇತನಕ್ಕೆ ರೂ 22.43 ಕೋಟಿ ಹಣ ಬಿಡುಗಡೆ ಮಾಡಿತು. ಕಾವೇರಿ ನೀರಾವರಿ ನಿಗಮ ಕಾರ್ಯ ನಿರ್ವಹಣೆಯ ಹೊಣೆ ಹೊತ್ತುಕೊಂಡಿತು. ನಂದಿಬೆಟ್ಟದಿಂದ ಹೆಸರುಘಟ್ಟದವರೆಗೆ 107 ಕೆರೆಗಳಿಗೆ ನೀರು ತರುವ ಕಾಲುವೆಗಳ ದುರಸ್ತಿಗೆ 8.10 ಕೋಟಿ, ಕುಮುದ್ವತಿ ಉಗಮ ಸ್ಥಾನದಿಂದ ತಿಪ್ಪಗೊಂಡನಹಳ್ಳಿವರೆಗೆ 158 ಕೆರೆಗಳಿಗೆ ನೀರು ತರಲು 7.85 ಕೋಟಿ ಮತ್ತು ಹೆಸರುಘಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ 130 ಕೆರೆಗಳ ಪುನರುಜ್ಜೀವನಕ್ಕೆ 6.48 ಕೋಟಿ ಮೀಸಲು ಇಡಲಾಯಿತು.

ಬಹುತೇಕ ಕಾಲುವೆಗಳಲ್ಲಿ ಅಲ್ಪ ಪ್ರಮಾಣದ ಹೂಳು ಎತ್ತುವ ಕಾರ್ಯ ನಡೆದಿದೆ. `ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ' ಎನ್ನುವ ದೂರುಗಳು ಎಲ್ಲೆಡೆ ಸಾಮಾನ್ಯವಾಗಿವೆ. ಬೀಡಿಕೆರೆ, ಗೂಳ್ಯ, ಕುರುವಿಗೆರೆ, ಊದನಹಳ್ಳಿ, ಗುಂಡಾಪುರ, ಅಂತರಹಳ್ಳಿ, ಗಂಗಸಂದ್ರ ಸೇರಿದಂತೆ ಎಲ್ಲಿ ಹೋದರೂ ಅದೇ ದೂರುಗಳು ಕೇಳಿಬರುತ್ತಿವೆ. ಕೆರೆಗಳಲ್ಲಿ ಮರ ಕಡಿಯುವ ಪ್ರಸ್ತಾಪವೂ ಯೋಜನೆಯಲ್ಲಿ ಇತ್ತು. ಲೋಕ ಅದಾಲತ್‌ನಲ್ಲಿ ತಡೆ ಆದೇಶ ಹೊರಡಿಸ್ದ್ದಿದರಿಂದ ಮರ ಕಡಿಯಲಾಗಿಲ್ಲ.

(ನಾಳಿನ ಸಂಚಿಕೆ: ಅರ್ಕಾವತಿಗೆ ಹರಿಗೋಲು ಆಗೋಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT