ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೇ ನಾವು ಬದುಕೋದು ಹೇಗೆ?

Last Updated 24 ಡಿಸೆಂಬರ್ 2013, 9:36 IST
ಅಕ್ಷರ ಗಾತ್ರ

ರಾಮದುರ್ಗ: ಇಬ್ಬರು ಸದಸ್ಯರನ್ನು ಒಳಗೊಂಡ ಬರ ಅಧ್ಯಯನ ತಂಡವು ಸೋಮವಾರ  ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಹಾನಿ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಸಮೀಕ್ಷೆ ನಡೆಸಿತು.

ಕೇಂದ್ರ ಪಶುಸಂಗೋಪನಾ ಇಲಾಖೆ ನಿರ್ದೇಶಕ ಕಾಳಸಿಂಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ವಿಜಯಕುಮಾರ್ ಬಾಥ್ಲಾ ಅವರು ತಾಲ್ಲೂಕಿನ ತೊಂಡಿ ಕಟ್ಟಿ, ಪಂಚಗಾಂವಿ, ಬೀಡಕಿ, ಸೊಪ್ಪಡ್ಲ ಮತ್ತು ಓಬಳಾಪುರ ಗ್ರಾಮಗಳ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

'ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಕಾಣಿಸಿಕೊಂಡಿದೆ. ಅಲ್ಪಸ್ವಲ್ಪ ಮಳೆಯಿಂದ ಬಿತ್ತಿದ ಬೆಳೆಗಳು ಕಮರಿ ಹೋಗುತ್ತಿವೆ. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ದನಕರುಗಳಿಗೆ ಮೇವಿನ ತೊಂದರೆ ಎದುರಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಮಳೆಗಾಲದಲ್ಲಿಯೇ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುಂದಿನ ಬೇಸಿಗೆ ವೇಳೆಗೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು    ಮಳೆಯನ್ನು ನಂಬಿದ ರೈತರು ಬಿತ್ತನೆ ಮಾಡಿದ ಬೆಳೆಗಳು ಚಿಗುರೊಡೆಯದೆ ಕಮರಿ ಹೋಗಿವೆ. ತೀವ್ರ ಮೇವಿನ ತೊಂದರೆ ಎದುರಾಗಿ ರೈತರಲ್ಲಿ ಇರುವ ದನಕರುಗಳನ್ನು ಕಸಾಯಿಖಾನೆಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ ಎಂದು ತೊಂಡಿಕಟ್ಟಿಯ ಪತ್ರೆಪ್ಪ ಕೊಪ್ಪದ ಅವಲತ್ತುಕೊಂಡರು.

ಕುಡಿಯುವ ನೀರಿಗಾಗಿ ನಿರ್ಮಿಸಿದ ಕೆರೆಗಳು ಬತ್ತಿ ಜನತೆ ಕಂಗಾಲಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗಳಿಗಾಗಿ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು. ಅಲ್ಲಿಯ ತನಕ ಅಧ್ಯಯನ ತಂಡಕ್ಕೆ ರಸ್ತೆ ಬಿಡುವುದಿಲ್ಲ ಎಂದು ದಾಡಿಭಾವಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವಗೌಡ ಪಾಟೀಲ ಈರಣ್ಣ ಮಾತನವರ ಅಧ್ಯಯನ ತಂಡಕ್ಕೆ ಬಿಸಿ ಮುಟ್ಟಿಸಿದರು.

ತಾಲ್ಲೂಕಿನ ದಾಡಿಭಾವಿ, ಸೊಪ್ಪಡ್ಲ, ಓಬಳಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಗುತ್ತಿಗೆದಾ­ರರು ಮತ್ತು ಪಂಚಾಯಿತಿ  ಮೂರು ದಿನಗಳಿಗೊಮ್ಮ ನೀರು ಪೂರೈಕೆ ಮಾಡು ತ್ತಿದ್ದಾರೆ. ಅಧ್ಯಯನ ತಂಡದ ಭೇಟಿಯ ಸುಳಿವು ಪಡೆದ ಅಧಿಕಾರಿಗಳು ಇಂದು ನೀರು ಪೂರೈಕೆಗೆ ಮುಂದಾಗಿದ್ದಾರೆ ಎಂದು ಜನ ಆರೋಪಿಸಿದರು.

'ಮೂರು ದಿನಕ್ಕೊಮ್ಮೆ ನೀರ್ ತಂದ್ ಕೊಟ್ರ ಬಡಿದಾಡಿ ಸಾಯುದಾಗೈತಿ, ದನಕ್ಕ್ ಮೇಂವ್ ಇಲ್ದ್ ಮಾರುದಾ­ಗೈತಿ. ಮಂದಿಗ ಕೆಲ್ಸಾ ಇಲ್ಲ. ಕೆಲ್ಸಾ ಹುಡಕ್ಕೊಂಡು ಬ್ಯಾರೆ ದೇಶಕ್ಕ ಗುಳೆ ಹೋಗೋದು ಬಾಕಿ ಐತ್ರಿ. ನಿಮಂಥ­ವರು ವರ್ಷಕ್ಕ ಒಮ್ಮೆ ನಮ್ಮೂರಿಗೆ ಬರತ್ತೀರಿ. ಆರಿಸಿ ಹೋದವ್ರು ಹೊಳ್ಳಿ ನೋಡಂಗಿಲ್ಲ. ಹಿಂಗಂದ್ರ ನಮ್ಮನ್ಯಾರ್ ಕಾಪಾಡ್ತಾರೋ ಗೊತ್ತಿಲ್ಲ’ ಎಂದು ಮಹಿಳೆಯರು ಅಂಗಲಾಚಿದರು.

ಜಿಲ್ಲಾಧಿಕಾರಿ ಎನ್‌. ಜಯರಾಂ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ   ದೀಪಾ ಚೋಳನ್‌,  ತಹಶೀಲ್ದಾರ್‌ ತುಕಾರಾಂ ಕಲ್ಯಾಣಕರ, ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಾ ಯಾದವಾಡ ಹಾಗೂ  ಅಧಿಕಾರಿಗಳು ಹಾಜರಿದ್ದರು.

ಖಾಲಿ ಕೊಡಗಳ ಸ್ವಾಗತ

ರಾಮದುರ್ಗ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ತಾಲ್ಲೂಕಿನ ದಾಡಿಭಾವಿ ಗ್ರಾಮಸ್ಥರು ಖಾಲಿ ಕೊಡಗಳನ್ನು ದಾರಿಗೆ ಅಡ್ಡವಾಗಿಟ್ಟು ಕೇಂದ್ರ ಬರ ಅಧ್ಯಯನ ತಂಡಕ್ಕೆ ಸೋಮವಾರ ಬಿಸಿ ಮುಟ್ಟಿಸಿದರು.

ತಾಲ್ಲೂಕಿನಲ್ಲಿ ಎದುರಾಗಿರುವ ಬರ ಕುರಿತು ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರದ ತಂಡವನ್ನು ಖಾಲಿ ಕೊಡಗಳಿಂದ ಸ್ವಾಗತಿಸಿ ಗ್ರಾಮದಲ್ಲಿ ಎದುರಾಗಿರುವ ಬವಣೆಯನ್ನು ಮುಂದಿಟ್ಟರು.

ತಾಲ್ಲೂಕಿನ ಶಾಸಕರು ಬೆಂಗಳೂರಿನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ ನೀವಾದರೂ ನಮಗೆ ಶುದ್ಧವಾದ ಕುಡಿಯುವ ನೀರು ಕೊಡಿ ಎಂದು ಗ್ರಾಮದ ಮಹಿಳೆಯರು ಅಧಿಕಾರಿಗಳ ವಾಹನಗಳನ್ನು ಅಡ್ಡಗಟ್ಟಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಜಯರಾಂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ದ್ಯಾಮನ್ನವರ ಮಧ್ಯ ಪ್ರವೇಶಿಸಿ ದಾಡಿಭಾವಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆಯ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿಯವರೆಗೆ ಟ್ಯಾಂಕರ್‌ ಮೂಲಕ ತಕ್ಷಣದಿಂದ ನೀರು ಪೂರೈಸುವ ಭರವಸೆ ನೀಡಿದರು.

ನಂತರ ಸೊಪ್ಪಡ್ಲ, ಓಬಳಾಪುರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT