ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಳಿಸಿದ ದೂರುಗಳು...!

Last Updated 17 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

ರಾಯಚೂರು: ನಿವೇಶನ ಮಾರ್ಪಾಡು, ಹೈಕೋರ್ಟ್ ಆದೇಶ ಜಾರಿಗೆ ವಿಳಂಬ, ಅಕ್ರಮ ಕಟ್ಟಡ ತೆರವು, ಭೂ ಸ್ವಾಧೀನ ಪರಿಹಾರಧನ ವಿತರಣೆಯಲ್ಲಿ ವಿಳಂಬ, ಪಹಣಿ ವಿತರಣೆ, ವೇತನ ಪರಿಷ್ಕರಣೆ, ಕೆಎಟಿ ಆದೇಶ ಜಾರಿ, ವಿದ್ಯುತ್ ತಂತಿ ಸ್ಥಳಾಂತರ  ಸೇರಿದಂತೆ ಅನೇಕ ವಿಷಯಗಳ ಬಗ್ಗೆ ದೂರುಗಳ ಸುರಿಮಳೆ...!

  ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಲೋಕಾಯುಕ್ತ ಡಾ.ಶಿವರಾಜ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರಿಂದ ನೂರಾರು  ದೂರುಗಳು ಕೇಳಿಬಂದವು.

ಸುಗೂರೇಶ ರತ್ನಾಕರ, ಗೃಹ ಮಂಡಳಿಗೆ ಸಂಬಂಧಿಸಿದ ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಮಾಹಿತಿ ಕೇಳಿದರೂ ನಿಂದಿಸುತ್ತಾರೆ ಎಂದು ಆರೋಪಿಸಿದರು.

ಲೋಕಾಯುಕ್ತ ಡಾ.ಶಿವರಾಜ ಪಾಟೀಲ್, `ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಂವಿಧಾನದಲ್ಲಿ ಯಾವುದೇ ವ್ಯಕ್ತಿಗೆ ನಿಂದಿಸುವ ಅಧಿಕಾರ ಇಲ್ಲ. ನೀವು ಸಾರ್ವಜನಿಕರಿಗೆ ನಿಂದಿಸಿದಂತೆ ಸಾರ್ವಜಕರು ನಿಮ್ಮನ್ನು ನಿಂದಿಸಿದರೆ, ಕಚೇರಿಯಲ್ಲಿಯೇ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂಥ ಪ್ರಸಂಗಗಳು ನಡೆಯಬಾರದು~ ಎಂದು ಅಧಿಕಾರಿಗೆ ಎಚ್ಚರಿಸಿದರು.

ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ  ಆಶ್ರಯ ಯೋಜನೆಯಡಿ ಮನೆ ನಿರ್ಮಾಣವಾಗದೇ ಬಿಲ್ ಪಾವತಿಸಲಾಗಿದೆ. ಅಲ್ಲದೇ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ ಎಂದು ಸಿಂಧನೂರು ತಾಲ್ಲೂಕಿನ ಜೆ. ಹೊಸೂರ ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನ ವಿವರಣೆ ನೀಡಿದರು.

`ನೀವು ಸಲ್ಲಿಸಿದ ದೂರು ಸರಿಯಾಗಿದ್ದರೆ, ಸೋಮವಾರ ಸ್ಥಳ ಪರಿಶೀಲನೆ ಮಾಡಲಾಗುವುದು. ನೀವು ಅಲ್ಲಿಯೇ ಇರಬೇಕು. ದೂರು ದುರುದ್ದೇಶದಿಂದ ಕೂಡಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು~ ಎಂದು ಲೋಕಾಯುಕ್ತರು ತಿಳಿಸಿದರು.

`ಕಳೆದ 17 ವರ್ಷಗಳಿಂದಲೂ ಜಿಲ್ಲಾ ಕೇಂದ್ರ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಒಂದು ಸಾವಿರ ರೂಪಾಯಿ ಮಾತ್ರ ವೇತನ ನೀಡಲಾಗುತ್ತಿದೆ. ನನ್ನ ನಂತರ ನೇಮಕವಾದವರ ಸೇವೆಯನ್ನು ಕಾಯಂ ಮಾಡಲಾಗಿದೆ. ಅಲ್ಲದೇ ಕಳ್ಳತನ ಆರೋಪದ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಹುಸೇನಪ್ಪ ಆಶಾಣ್ಣ ತಮ್ಮ ಪತ್ನಿ, ಮಕ್ಕಳೊಂದಿಗೆ ಸಭೆಗೆ ಬಂದು ಅಳಲು ತೋಡಿಕೊಂಡರು.

ಗ್ರಂಥಾಲಯ ಇಲಾಖೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ವೇತನಕ್ಕೆ ಸಂಬಂಧಿಸಿದ ದೂರಿನ ಬಗ್ಗೆ ಸೋಮವಾರ ಕಚೇರಿಗೆ ಬರುವಂತೆ ಸೂಚಿಸಿದರು.

ಪೊಲೀಸ್ ಕಾನ್‌ಸ್ಟೇಬಲ್ ನೇಮಕದ ಆದೇಶಕ್ಕೆ ಸಂಬಂಧಿಸಿದಂತೆ ಕೆಎಟಿಯಿಂದ ತನ್ನ ಪರ ಆದೇಶ ಬಂದಿದ್ದರೂ ಜಾರಿಗೊಳಿಸಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಹೊನ್ನಟ್ಟಿಗಿ ಗ್ರಾಮ ಭೀಮರಾಯ ದೂರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು, ಈ ಆದೇಶ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಿವೇಶನದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಎರಡು ವರ್ಷದಿಂದ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹೇಶ ಎಂಬುವವರು ಹೇಳಿದರು. ಒಂದು ವಾರದೊಳಗಾಗಿ ವಿದ್ಯುತ್ ತಂತಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತರಿಗೆ ಜೆಸ್ಕಾಂನ ಅಧಿಕಾರಿಗಳು ತಿಳಿಸಿದರು.

ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ ಯುವತಿಯೊಬ್ಬರು, `ನನಗಿಂತ ಕಡಿಮೆ ಅಂಕಗಳಿಸಿದವರನ್ನು ನೇಮಕ ಮಾಡಲಾಗಿದೆ. ನಾನು ಅನಾಥಳಾಗಿದ್ದೇನೆ. ತಾರತಮ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಮನವಿ ಮಾಡಿದರು.

ನೇಮಕಾತಿ ಪ್ರಕರಣ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ. ಮಾನವೀತೆ ಹಿತದೃಷ್ಟಿಯಿಂದ ಅನಾಥ ಯುವತಿಗೆ ಸಹಾಯ ಮಾಡುವಂತೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿರಿ ಎಂದು ಲೋಕಾಯುಕ್ತರು ತಿಳಿಸಿದರು.

ಸರ್ಕಾರ ಭೂ ಸ್ವಾಧೀನಪಡಿಸಿಕೊಂಡ ಪರಿಹಾರ ದೊರೆಯದೇ ಅಲೆದಾಡುವ ಪರಿಸ್ಥಿತಿ ಬಂದಿದೆ.  ಸರ್ಕಾರ ಭೂ ಸ್ವಾಧೀನಪಡಿಸಿಕೊಂಡು ಕಳೆದ ಆರು ವರ್ಷಗಳು ಕಳೆದರೂ ಪರಿಹಾರ ಮಾತ್ರ ದೊರಕಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಹೆಗಡದಿನ್ನಿ ಗ್ರಾಮದ ರೈತರು ಸಮಸ್ಯೆಯನ್ನು ವಿವರಿಸಿದರು.

ಒಂದೆರಡು ದಿನಗಳಲ್ಲಿ ಪರಿಹಾರಧನ ವಿತರಣೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಉಜ್ಜಲ್ ಘೋಷ್ ಸಭೆಗೆ ತಿಳಿಸಿದರು.

ನಗರಸಭೆಯಿಂದ ನೂತನ ತರಕಾರಿ ಮಾರುಕಟ್ಟೆಯ ಕಾಮಗಾರಿ ಆರಂಭಿಸಬೇಕು ಎಂದು ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎನ್.ಮಹಾವೀರ ಲೋಕಾಯುಕ್ತರಿಗೆ ಮನವಿ ಮಾಡಿದರು.

ಟೆಂಡರ್ ಪ್ರಕ್ರಿಯೆ ಮುಗಿದಿದೆ. ಭೂಮಿಪೂಜೆಯನ್ನು ಮಾಡಲಾಗಿದೆ. ಆದರೆ, ನಗರಸಭೆಯ ಅಧಿಕಾರಿಗಳ ತಪ್ಪಿನಿಂದಾಗಿ ಕಾಮಗಾರಿ ಆರಂಭಕ್ಕೆ ವಿಳಂಬವಾಗುತ್ತಿದೆ ಎಂದು ಲೋಕಾಯುಕ್ತರಿಗೆ  ಜಿಲ್ಲಾಧಿಕಾರಿ ಅನ್ಬುಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT