ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ನಿಲ್ಲಿಸದಿದ್ದರೆ ಹೋರಾಟದ ಸ್ವರೂಪ ಬದಲು

Last Updated 9 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ಮಂಡ್ಯ: ನೀರು ಬಿಡುವುದಿಲ್ಲ ಎಂದಿರುವ ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಹಿತರಕ್ಷಣಾ ಸಮಿತಿ ಹೋರಾಟ ಮುಂದುವರಿಸಲಿದೆ. ನೀರು ಬಿಟ್ಟರೆ, ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಎಚ್ಚರಿಸಿದ್ದಾರೆ.

ಸುಪ್ರೀಂಕೋರ್ಟ್ ವಿಚಾರಣೆಯ ನಂತರ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಬಿಡುವ ಬದಲು, ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸರ್ಕಾರದ ಸಚಿವರು ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಬೇಕು ಎಂದು ಆಗ್ರಹಿಸಿದರು.

ನೀರು ನಿಲ್ಲಿಸಲಾಗುತ್ತದೆಯೇ ಎಂಬುದನ್ನು ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ರೈತರು ಇಂದು ರಾತ್ರಿಯಿಂದಲೇ ಕಾವಲು ಕಾಯಲಿದ್ದಾರೆ. ನೀರು ಬಿಟ್ಟಿದ್ದೇ ಆದರೆ, ಜನರು ದಂಗೆ ಏಳಲಿದ್ದಾರೆ. ಸರ್ಕಾರದ ಯಾವ ಸಚಿವರನ್ನೂ ಜಿಲ್ಲೆ ಪ್ರವೇಶಿಸಲು ಬಿಡುವುದಿಲ್ಲ. ಆಯಾ ಕ್ಷೇತ್ರದ ಜನರು, ಶಾಸಕರ ಮನೆ ಮುಂದೆ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಲಿದ್ದಾರೆ ಎಂದರು.

ಜನಶಕ್ತಿ ದೊಡ್ಡದು. ಅದಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ನ್ಯಾಯಾಲಯ ಸೇರಿದಂತೆ ಎಲ್ಲರಿಗಿಂತ ದೊಡ್ಡ ಶಕ್ತಿ ಅದಕ್ಕಿದೆ ಎಂದು ಹೇಳಿದರು.

ರೈತ ಸಂಘದ ವರಿಷ್ಠ ಕೆ.ಎಎಸ್.ಪುಟ್ಟಣ್ಣಯ್ಯ ಮಾತನಾಡಿ, ಕಾವೇರಿ ನದಿ ಪ್ರಾಧಿಕಾರದ ಸೂಚನೆ ಜಾರಿಗೆ ತರಲು ಪ್ರಕರಣ ಮುಂದೂಡಲಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಸುಪ್ರೀಂಕೋರ್ಟ್‌ನ ಮುಂದಿನ ವಿಚಾರಣೆಯವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದರು.

ಶಾಸಕ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ನಿಲ್ಲಿಸುತ್ತಾರೆಯೋ, ಇಲ್ಲವೋ ಎಂಬುದನ್ನು ಕಾಯಲು ತಂಡವೊಂದನ್ನು ನಿಯೋಜಿಸಲಾಗಿದೆ. ಶಾಸಕ ಎಂ.ಶ್ರೀನಿವಾಸ್, ಬಿ. ರಾಮಕೃಷ್ಣ, ಕಲ್ಪನಾ ಸಿದ್ದರಾಜು, ಕೆ.ಬಿ. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಅಹೋರಾತ್ರಿ ರಸ್ತೆ ತಡೆ
ನೀರು ನಿಲ್ಲಿಸುವ ವರೆಗೂ ಜಿಲ್ಲೆಯ ಮದ್ದೂರು ಹಾಗೂ ಗೆಜ್ಜಲಗೆರೆ ಬಳಿ ಅಹೋರಾತ್ರಿ ರಸ್ತೆ ತಡೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿ. ಅಶೋಕ್ ತಿಳಿಸಿದ್ದಾರೆ.

ಗೆಜ್ಜಲಗೆರೆಯಲ್ಲಿ ರೈತ ನಾಯಕಿ ಸುನಂದಾ ಜಯರಾಮ್ ನೇತೃತ್ವದಲ್ಲಿ, ಮದ್ದೂರಿನಲ್ಲಿ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ರಸ್ತೆ ತಡೆ ಮಾಡಲಾಗುವುದು ಎಂದರು.

ನೀರು ನಿಲ್ಲಿಸದಿದ್ದರೆ ರಾತ್ರಿಯಿಂದಲೇ ಶ್ರೀರಂಗಪಟ್ಟಣದ ಬಳಿ ಇರುವ ವೆಲ್ಲೆಸ್ಲಿ ಸೇತುವೆ ಬಳಿ ಜಲ ಸತ್ಯಾಗ್ರಹ ಮಾಡುವುದಾಗಿ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್. ನಂಜುಂಡೇಗೌಡ ತಿಳಿಸಿದ್ದಾರೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಸ್ತೆ ತಡೆ, ರ‌್ಯಾಲಿ, ಧರಣಿ ಸೇರಿದಂತೆ ಹಲವು ಬಗೆಯ ಪ್ರತಿಭಟನೆಗಳು ಮುಂದುವರಿದಿವೆ. ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದಿರುವ ಸರದಿ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಗ್ರಾಮಸ್ಥರು ಹಾಗೂ ಸಂಘಟನೆಗಳು ಬೆಂಬಲ ಸೂಚಿಸಿವೆ.

ಮದ್ದೂರಿನಲ್ಲಿ ಸೋಮವಾರ ಸಂಜೆ ಅಂಬ್ಯುಲೆನ್ಸ್ ಮೇಲೆ ಕಲ್ಲು ತೂರಿ ಗಾಜು ಒಡೆದ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT