ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ನೆರಳಿಲ್ಲದ ವಾರ್ಡಿನಲ್ಲಿ ಬಯಲೇ ಶೌಚಾಲಯ!

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ನೀರಿಗಾಗಿ ನಿತ್ಯ ಪರದಾಟ, ವಾರ ಕಳೆದರೂ ವಿಲೇವಾರಿಯಾಗದ ಕಸ, ಇನ್ನೂ ಕಾಣುವ ಗುಡಿಸಲು ಮನೆ, ರಸ್ತೆ, ಒಳ ಚರಂಡಿ ಹಾಗೂ ಶೌಚಾಲಯ ಸಮಸ್ಯೆ ಸೇರಿದಂತೆ ಹಲವು ಬಗೆಯ ಮೂಲ ಸೌಕರ್ಯದ ಸಮಸ್ಯೆಯನ್ನು ಈ ಭಾಗದ ಜನತೆ ಎದುರಿಸುತ್ತಿದ್ದಾರೆ.

ವಾರಕ್ಕೊಮ್ಮೆ ನೀರು ಸರಬರಾಜು ಮಾಡಿ ಕೈತೊಳೆದುಕೊಳ್ಳುವ ನಗರಸಭೆ, ಕಸ ವಿಲೇವಾರಿಯನ್ನೂ ಸರಿಯಾಗಿ ಮಾಡದೆ ಜನತೆಯ ಕೋಪಕ್ಕೆ ತುತ್ತಾಗಿದೆ.

- ಇದು ರಾಮನಗರ ನಗರಸಭೆ ವಾರ್ಡ್ ನಂ; 2ರ ಚಿತ್ರಣ. ಈ ಭಾಗದಲ್ಲಿ ಬರುವ ವಿನಾಯಕನಗರ, ವಿಜಯನಗರ, ತೆಂಗಿನತೋಪು, ಕೃಷ್ಣಪ್ಪನ ದೊಡ್ಡಿ, ಕೊಂಕಾಣಿ ದೊಡ್ಡಿ, ಮಾರುತಿ ನಗರ, ಅಂಬೇಡ್ಕರ್ ನಗರ, ವಿದ್ಯಾನಗರ, ಹಾಜಿನಗರ ಬಡಾವಣೆಗಳ ಜನತೆಯಂತೂ ನೀರಿನ ಸಮಸ್ಯೆಯಿಂದ ತತ್ತರಿಸಿದ್ದಾರೆ.

ಈ ವಾರ್ಡ್‌ಗೆ ಇದೀಗ ಉಪ ಚುನಾವಣೆ ನಿಗದಿಯಾಗಿದ್ದು, ಇದೇ 26 ಕ್ಕೆ ಮತದಾನ ಕೂಡ ಜರುಗಲಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಸ್ಪರ್ಧಿಸಿದ್ದಾರೆ.

ನಗರ- ಗ್ರಾಮ್ಯ ಮಿಶ್ರಣ: ನಗರಸಭೆಯ ಈ ಪ್ರದೇಶ ಹಳೆ ಮತ್ತು ಹೊಸ ಬಡಾವಣೆಗಳ ಮಿಶ್ರಣವಾಗಿದೆ. ಹಳೆ ಪ್ರದೇಶಗಳಾದ ಕೊಂಕಾಣಿ ದೊಡ್ಡಿ, ಕೃಷ್ಣಪ್ಪನ ದೊಡ್ಡಿ, ಅಂಬೇಡ್ಕರ್ ನಗರಗಳು ನಗರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮೀಣ ಪ್ರದೇಶದಂತೆಯೇ ಇವೆ.

ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಈ ಭಾಗದಲ್ಲಿ ಶೌಚಾಲಯದ ಸಮಸ್ಯೆ ತೀವ್ರವಾಗಿದೆ. ಇಲ್ಲಿನ ಕೆಲವು ನಿವಾಸಿಗಳಿಗೆ ವಾಸಿಸಲು ಯೋಗ್ಯವಾದ ಮನೆಯಿಲ್ಲ. ಗುಡಿಸಲುಗಳಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ರಾಮದೇವರ ಬೆಟ್ಟದ ರಸ್ತೆಯಲ್ಲಿ ಬರುವ ಕೊಂಕಾಣಿ ದೊಡ್ಡಿ, ಕೃಷ್ಣಾಪುರ ದೊಡ್ಡಿಗಳ ಬಹುತೇಕ ಜನತೆಗೆ ಬಯಲೇ ಶೌಚಾಲಯವಾಗಿದೆ. ಶುಚಿತ್ವ ಹಾಗೂ ನೈರ್ಮಲ್ಯತೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ನಗರಸಭೆ ಹಮ್ಮಿಕೊಂಡಿರುವ ಹಲವು ಕಾರ್ಯಕ್ರಮಗಳು ಈ ಭಾಗದ ಜನತೆಯನ್ನು ತಲುಪಿದಂತೆ ಕಾಣುವುದಿಲ್ಲ.

ಇನ್ನೂ ವಿನಾಯಕ ನಗರ, ವಿಜಯನಗರ, ವಿದ್ಯಾನಗರ, ಮಾರುತಿನಗರ ಬಡಾವಣೆಗಳು ನೂತನ ಬಡಾವಣೆಗಳಾಗಿದ್ದು, ಉತ್ತಮ ಕಟ್ಟಡಗಳು ತಲೆಯೆತ್ತಿವೆ. ತಕ್ಕ ಮಟ್ಟಿಗೆ ಸುಧಾರಿತ ರಸ್ತೆ, ಚರಂಡಿ ಸೌಲಭ್ಯ ಹೊಂದಿವೆ. ಆದರೆ ಈ ಭಾಗದ ಜನತೆಯೂ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ.

ವಾರ್ಡ್ 2ರ ವ್ಯಾಪ್ತಿಯ ಜನತೆಗೆ ಅರ್ಕಾವತಿ ನೀರನ್ನು ನಗರಸಭೆ ಪೂರೈಸುತ್ತಿದೆ. ಅರ್ಕಾವತಿಯಲ್ಲಿ ನೀರಿಲ್ಲದ ಕಾರಣ ಮೂರು- ನಾಲ್ಕು ತಿಂಗಳಿಂದ ವಾರಕ್ಕೊಮ್ಮೆ ಸರಬರಾಜು ಮಾಡುತ್ತಿದೆ ಎಂದು ಮತದಾರರು ಹೇಳುತ್ತಾರೆ.

 ಉಪ ಚುನಾವಣೆ ಗಮ್ಮತ್ತು: ನಗರಸಭೆ ವಾರ್ಡ್ ನಂ 2ಕ್ಕೆ ಉಪ ಚುನಾವಣೆ ಘೋಷಣೆಯಾದಾಗಿನಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಈ ಭಾಗಕ್ಕೆ ನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ನೀರಿನ ಹಬ್ಬ ಈ ಭಾಗದಲ್ಲಾವರಿಸಿದೆ ಎಂದು ಜನತೆ ದೂರುತ್ತಾರೆ.

`ನಮ್ಮ ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆ ಇವೆ. ಇಲ್ಲಿ ನೀರು, ಕಸ, ರಸ್ತೆ, ಶೌಚಾಲಯದ ಸಮಸ್ಯೆ ಇದೆ. ಇಡೀ ಗ್ರಾಮದಲ್ಲಿ ಐದಾರು ಮನೆ ಬಿಟ್ಟರೆ ಬೇರೆ ಮನೆಗಳಲ್ಲಿ ಶೌಚಾಲಯಗಳೇ ಇಲ್ಲ. ಮಹಿಳೆಯರೂ ಸಹ ಬಯಲಿನಲ್ಲಿಯೇ ಶೌಚಕ್ಕೆ ಹೋಗಬೇಕಾದ ಸ್ಥಿತಿ ಇದೆ. ಗ್ರಾಮದ ನಾಲ್ಕು ರಸ್ತೆಗಳಿಗೆ ಡಾಂಬರು ಹಾಕಬೇಕಿದೆ. ಕಸವನ್ನು ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ. ಗ್ರಾಮದ ಶಾಲೆಗೆ ಕಾಂಪೌಂಡ್ ಇಲ್ಲ. ಗ್ರಾಮದಲ್ಲಿ 10ರಿಂದ 15 ಗುಡಿಸಲುಗಳು ಇವೆ~ ಎಂದು ಗ್ರಾಮದ ಗೃಹಿಣಿ ರಾಜೇಶ್ವರಿ ವಿವರಿಸುತ್ತಾರೆ.

`ಐದಾರು ದಿನಕ್ಕೊಮ್ಮೆಯೂ ನೀರು ಬಿಡುವುದಿಲ್ಲ. ಇದೀಗ ಚುನಾವಣಾ ಸಮಯವಾದ್ದರಿಂದ ಕೆಲವರು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದಾರೆ. ಚುನಾವಣೆ ಮುಗಿದರೆ ಪುನಃ ನಮಗೆ ನೀರಿಗೆ ಹಾಹಾಕಾರ ಉಂಟಾಗುತ್ತದೆ~ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಇದೇ ಸ್ಥಿತಿ ಕೃಷ್ಣಪ್ಪನ ದೊಡ್ಡಿಯಲ್ಲೂ ಇದೆ.

`ಹಾಜಿ ನಗರದಲ್ಲೂ ಆರು ದಿನಕ್ಕೊಮ್ಮೆ ನಗರಸಭೆ ನೀರು ಪೂರೈಸುತ್ತಿದೆ. ಈ ಭಾಗದಲ್ಲಿ ಚರಂಡಿ ಶುಚಿಗೊಳಿಸುವ ಕಾರ್ಯ ಅಷ್ಟಾಗಿ ನಡೆಯುವುದೇ ಇಲ್ಲ. ಪ್ರತಿ ಬಾರಿಯೂ ನಗರಸಭೆಗೆ ಹೋಗಿ ದೂರು ನೀಡಬೇಕು. ಆದರೂ ಅಷ್ಟಾಗಿ ಪ್ರಯೋಜನ ಆಗುವುದಿಲ್ಲ~ ಎಂದು ಹಾಜಿ ನಗರದ ನಿವಾಸಿ ಸೈಯದ್ ಖಲೀಲ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣ: ಉಪ ಚುನಾವಣೆ ನಡೆಯಲಿರುವ ವಾರ್ಡ್ ನಂ 2, ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಕೆ.ಶೇಷಾದ್ರಿ ಬಿಜೆಪಿ ಸೇರಿ, ರಾಜೀನಾಮೆ ನೀಡಿದ್ದರಿಂದ ಎದುರಾಗಿರುವ ಈ ಚುನಾವಣೆಯಲ್ಲಿ ಮೂರು ಪಕ್ಷಗಳು ಪ್ರಬಲ ಪೈಪೋಟಿ ನೀಡಲಿವೆ.

ಜೆಡಿಎಸ್‌ನಿಂದ ರೈಡ್ ನಾಗರಾಜ್, ಕಾಂಗ್ರೆಸ್‌ನಿಂದ ವೆಂಕಟಾಚಲಯ್ಯ, ಬಿಜೆಪಿಯಿಂದ ಎಲ್. ಚಂದ್ರು ಈಗಾಗಲೇ ಉಮೇದುವಾರಿಕೆ ಸಲ್ಲಿಸಿ ಕಣದಲ್ಲಿ ಉಳಿದಿದ್ದಾರೆ. ಇವರೊಡನೆ ಪಕ್ಷೇತರರಾಗಿ ರಾಜು ಕಣದಲ್ಲಿ ಇದ್ದಾರೆ. ಈ ವಾರ್ಡ್ ಅನ್ನು ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಲು ಶಾಸಕ ಕೆ.ರಾಜು ಅವರಿಗೆ ಇದು ಪ್ರತಿಷ್ಠೆಯ ವಿಷಯವಾಗಿದ್ದರೆ, ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ತಮ್ಮ ವಾರ್ಡ್‌ನಲ್ಲಿ ಬಿಜೆಪಿ ಬಾವುಟ ಹಾರಿಸಿ, ಶಕ್ತಿ ಪ್ರದರ್ಶಿಸಬೇಕಿದೆ. ಜಿಲ್ಲೆಯ ಕಾಂಗ್ರೆಸ್ ಮುಖಂಡ ಮರಿದೇವರು ಅವರಿಗೂ ಇದು ಪ್ರತಿಷ್ಠೆಯ ಕಣವಾಗಿದೆ.

ಸುಮಾರು 3,332 ಮತದಾರರನ್ನು ಹೊಂದಿರುವ ಈ ಭಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಜನತೆಯ ಮತಗಳೇ ಹೆಚ್ಚಿವೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ಹಿಂದುಳಿದ ವರ್ಗದವರನ್ನೇ ಅಭ್ಯರ್ಥಿಯನ್ನಾಗಿಸಿವೆ. ಮೂವರೂ ಅಭ್ಯರ್ಥಿಗಳಿಗೆ ಈ ಭಾಗದ ಜನತೆಯ ಕುಡಿಯುವ ನೀರಿನ ಸಮಸ್ಯೆಯ ಅರಿವಿದೆ. ನೀರಿನ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವವರನ್ನು ಆರಿಸುವುದಾಗಿ ಈ ಭಾಗದ ಮತದಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT