ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ವಿಚಾರ: ಆಂಧ್ರದ ಕ್ರಮಕ್ಕೆ ಅಸಮಾಧಾನ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡಕ್ಕೆ ತುಂಗಭದ್ರಾ ನದಿಯಿಂದ ನೀರು ನೀಡುವಂತೆ ಕೋರಿರುವ ಅರ್ಜಿಗೆ ಸ್ಪಂದಿಸದ ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಆಂಧ್ರಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದ್ದರೂ ಅದನ್ನು ಪ್ರತಿನಿಧಿಸಲು ವಕೀಲರು ಹಾಜರಾಗದೇ ಇದ್ದುದರಿಂದ ಕೋಪಗೊಂಡ ಕೋರ್ಟ್, `ಹೀಗೆ ಮುಂದುವರಿದರೆ ಆಂಧ್ರಕ್ಕೆ ತುಂಗಭದ್ರಾ ನದಿಯಿಂದ ಪೂರೈಕೆ ಆಗುತ್ತಿರುವ ನೀರಿನ ಸರಬರಾಜನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯಕ್ಕೆ ಆದೇಶಿಸದೇ ಬೇರೆ ವಿಧಿ ಇರುವುದಿಲ್ಲ~ ಎಂದು ಎಚ್ಚರಿಕೆ ನೀಡಿದೆ.

ಪಾವಗಡ ತಾಲ್ಲೂಕಿಗೆ ಈ ನದಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲು ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚಿಸಲು ಕರ್ನಾಟಕ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ `ಕರ್ನಾಟಕ ರಾಷ್ಟ್ರೀಯ ಕಿಸಾನ್ ಸಂಘ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ.ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

`ಪಾವಗಡಕ್ಕೆ ಕಲುಷಿತ ನೀರು ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೋರ್‌ವೆಲ್‌ನಿಂದ ನೀರನ್ನು ಪೂರೈಸಲಾಗುತ್ತಿದೆ. ಆದರೆ ಅದು ಕೂಡ ಕಲುಷಿತವಾಗಿರುವ ಕಾರಣದಿಂದ ಇಲ್ಲಿಯ ಜನರು ಹಲವು ರೋಗಕ್ಕೆ ತುತ್ತಾಗುತ್ತಿದ್ದಾರೆ.

ಆಂಧ್ರಪ್ರದೇಶದಿಂದ `ನೀಲಕಂಠಾಪುರ ಶ್ರೀರಾಮ ರೆಡ್ಡಿ ಕುಡಿಯುವ ನೀರು~ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ತುಂಗಭದ್ರಾ ನದಿಯ ನೀರನ್ನು ಆಂಧ್ರದ ಕೆಲವು ಗ್ರಾಮಗಳಿಗೆ ಪೂರೈಸುವ ಯೋಜನೆ ಇದಾಗಿದೆ.

ಸುಮಾರು 10 ಕಿ.ಮೀ. ಉದ್ದದ ಪೈಪ್‌ಲೈನ್ ಪಾವಗಡದ ಮೂಲಕ ಹಾದುಹೋಗಿದೆ. ಆದುದರಿಂದ ಈ ನೀರನ್ನು ತಮ್ಮ ಗ್ರಾಮಕ್ಕೂ ಸರಬರಾಜು ಮಾಡಲು ಆದೇಶಿಸಬೇಕು~ ಎಂದು ಅರ್ಜಿದಾರರು ಕೋರಿದ್ದಾರೆ.
ಈ ಹಿಂದೆ ಎರಡು ಬಾರಿ ಆಂಧ್ರಪ್ರದೇಶ ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೆ ಅದನ್ನು ಪ್ರತಿನಿಧಿಸಲು ವಕೀಲರು ಬಂದಿಲ್ಲ. ಇದು ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.

`ನೀರು ಮೂಲ ಅಗತ್ಯಗಳಲ್ಲಿ ಒಂದು. ಆದರೆ ಇಂತಹ ಅಗತ್ಯಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೂ ವಕೀಲರು ಗೈರುಹಾಜರಿ ಆಗಿರುವುದನ್ನು ನಾವು ಸಹಿಸುವುದಿಲ್ಲ~ ಎಂದು ಪೀಠ ತಿಳಿಸಿತು.
 
`ಪಾವಗಡ ಆಂಧ್ರಪ್ರದೇಶದ ಗಡಿ ಭಾಗದಲ್ಲಿದೆ. ನೀರಿನ ಪೈಪ್‌ಲೈನ್ ಪಾವಗಡದಿಂದ ಹಾದು ಹೋಗಿದೆ. ನಿಮ್ಮ ಮನೆಗೆ ವಸ್ತು ತಂದು ನಿಮ್ಮ ಮಕ್ಕಳಿಗೆ ಕೊಡದೆ ಪಕ್ಕದ ಮನೆ ಮಕ್ಕಳಿಗೆ ಕೊಟ್ಟರೆ ಹೇಗಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT