ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಂದ್ ಇಂದು: ಆತಂಕದಲ್ಲಿ ರೈತರು

Last Updated 25 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿ ತೀವ್ರ ನೀರಿನ ಕೊರತೆ ಹಾಗೂ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ಕಾಲುವೆಗಳಿಗೂ ನೀರು ಹರಿಸುವ ಪ್ರಕ್ರಿಯೆ ಇದೇ 25ರ ಮಧ್ಯರಾತ್ರಿಯಿಂದ ಬಂದ್ ಆಗಲಿದೆ.

ಈ ಬಾರಿ ಹಿಂಗಾರಿ ಮಳೆ ಸಂಪೂರ್ಣ ಕೈಕೊಟ್ಟಿದ್ದರ ಫಲವಾಗಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಇದೇ ಮೊದಲ ಬಾರಿ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ ಎಂದು ಕೆ.ಬಿ.ಜೆ.ಎನ್‌ಎಲ್. ಮೂಲಗಳು ತಿಳಿಸಿವೆ.

ಇದೇ ಮೊದಲ ಬಾರಿಗೆ ನೀರು ಬಿಡುವ ಅವಧಿಯನ್ನು 30ರಿಂದ 45 ದಿನಗಳ ಕಾಲ ಮೊಟಕು ಗಳಿಸಲಾಗಿದೆ. ಪ್ರತಿ ವರ್ಷವೂ ಮಾರ್ಚ್ 31ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನ ಕೈಗೊಳ್ಳುತ್ತಿತ್ತು. ಆದರೂ ನೀರಿನ ಲಭ್ಯತೆಯ ಆಧಾರದ ಮೇಲೆ 15 ದಿನಗಳ ಕಾಲ ಮತ್ತೇ ಹೆಚ್ಚುವರಿಯಾಗಿ ನೀರನ್ನು ಕಾಲುವೆಗೆ ಹರಿಸಲಾಗುತ್ತಿತ್ತು.

ಈ ಬಾರಿ ಮುಂಗಾರು ಮಳೆ ನೆರೆಯ ಆತಂಕ ಸೃಷ್ಟಿಸಿದರೇ, ಹಿಂಗಾರು ಮಳೆ ಮಾತ್ರ ಸಂಪೂರ್ಣ ಕೈಕೊಟ್ಟಿತು. ಇದರಿಂದಾಗಿ 519.6 ಮೀ. ಎತ್ತರದ ಆಲಮಟ್ಟಿ ಜಲಾಶಯದಲ್ಲಿ 510.45 ಮೀ. ವರೆಗೆ ಮಾತ್ರ ನೀರಿನ ಸಂಗ್ರಹವಿದೆ.

ಅಂದರೇ 123 ಟಿ.ಎಂ.ಸಿ. ಅಡಿಯಷ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 32.14 ಟಿ.ಎಂ.ಸಿ. ಅಡಿಯಷ್ಟು ನೀರು ಇದ್ದು, ಅದರಲ್ಲಿ 17 ಟಿ.ಎಂ.ಸಿ ಅಡಿಯಷ್ಟು ನೀರು ಡೆಡ್ ಸ್ಟೋರೇಜ್ ನೀರಿದ್ದು, ಕುಡಿಯುವ ನೀರು ಹಾಗೂ ನೀರಾವರಿ ಸೇರಿದಂತೆ ಉಪಯೋಗಕ್ಕೆ ಕೇವಲ 14 ಟಿ.ಎಂ.ಸಿ ಅಡಿಯಷ್ಟು ನೀರು ಲಭ್ಯವಿದೆ.

ವಿಜಾಪುರ ನಗರ ಸೇರಿದಂತೆ ಕೃಷ್ಣಾ ತೀರ ವ್ಯಾಪ್ತಿಯ ಗ್ರಾಮಗಳು, ರಾಯಚೂರ ಥರ್ಮಲ್ ಕೇಂದ್ರ, ನಾರಾಯಣಪುರ ಜಲಾಶಯ ವ್ಯಾಪ್ತಿಯ ತೀರ ಪ್ರದೇಶದ ಗ್ರಾಮಗಳು ಸೇರಿ ಎಲ್ಲೆಡೆಯೂ ಕುಡಿಯುವ ನೀರು ಅಗತ್ಯವಿದೆ. ಜೂನ್ ಅಂತ್ಯದವರೆಗಾದರೂ ನೀರು ಅಗತ್ಯವಾಗಿ ಜಲಾಶಯದಲ್ಲಿ ಸಂಗ್ರಹವಾಗಿರಬೇಕು. ಡೆಡ್ ಸ್ಟೋರೇಜ್ ನೀರಂತೂ ಜಲಚರ ಪ್ರಾಣಿಗಳ ಜೀವಿಸಲು ಹಾಗೂ ಆ ನೀರನ್ನು ಉಪಯೋಗಿಸಲು ಅಸಾಧ್ಯ ಎಂದು ಪರಿಗಣಿಸಲಾಗುತ್ತದೆ.

ಆತಂಕ ಸೃಷ್ಟಿ: ಇದರಿಂದಾಗಿ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಆಲಮಟ್ಟಿ ಎಡದಂಡೆ, ಆಲಮಟ್ಟಿ ಬಲದಂಡೆ, ಮುಳವಾಡ ಪೂರ್ವ ಮತ್ತು ಮುಳವಾಡ ಪಶ್ಚಿಮ ಕಾಲುವೆ ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿದೆ.
ಕಾಲುವೆಯ ನೀರನ್ನು ನಂಬಿ ಹಿಂಗಾರು ಬೆಳೆಯಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಶೇಂಗಾ, ಮೆಕ್ಕೆಜೋಳ, ಅಲಸಂಧಿ ಮೊದಲಾದ ಬೆಳೆಗಳನ್ನು ರೈತರು ಬೆಳೆದಿದ್ದಾರೆ.

ಆ ಎಲ್ಲಾ ಬೆಳೆಗೆ ಕಾಲುವೆಯ ನೀರಿನಿಂದ ಸಮೃದ್ಧಿಯಾಗಿ ಬೆಳೆಯುತ್ತಿವೆ. ಈ ಎಲ್ಲ ಬೆಳೆಗಳಿಗೆ ಕನಿಷ್ಠವಾದರೂ 30 ದಿನವಾದರೂ ನೀರು ಅಗತ್ಯ ಎಂದು ವಂದಾಲದ ರೈತ ಎಸ್.ಎಸ್. ಹೆಬ್ಬಾಳ ಹಾಗೂ ಮುದ್ದಾಪೂರದ ಎಸ್.ವಿ. ದಳವಾಯಿ ಅಭಿಪ್ರಾಯ ಪಡುತ್ತಾರೆ.

ಮುಂಗಾರು ಬೆಳೆಯಾಗಿ ಸೂರ್ಯಕಾಂತಿ, ತೊಗರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ರೈತರು, ಹಿಂಗಾರಿ ಬೆಳೆಯಾಗಿ ಶೇಂಗಾ ಹೆಚ್ಚಾಗಿ ಬೆಳೆಯುತ್ತಾರೆ. ಜನವರಿಯಲ್ಲಿ ಹಿಂಗಾರಿ ಬೆಳೆಯನ್ನು ನಾಟಿ ಮಾಡಿ ಏಪ್ರಿಲ್‌ನಲ್ಲಿ ಫಸಲು ಪಡೆಯುತ್ತಾರೆ. ಹೀಗಾಗಿ ನೀರಿನ ಅಗತ್ಯ ಈಗ ಹೆಚ್ಚು. ಬಿಸಿಲಿನ ಪ್ರಖರತೆ ಈ ಭಾಗದಲ್ಲಿ ಈಗಲೇ ಹೆಚ್ಚಾಗಿದ್ದು, ಇನ್ನೂ ಏಪ್ರಿಲ್, ಮೇ ದಲ್ಲಂತೂ ಬಿಸಿಲು ಹೆಚ್ಚಾಗಿ ಬೆಳೆ ಒಣಗುವ ಭೀತಿ ಆವರಿಸಿದೆ.

ಈಚೆಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸಲು ಆಗ್ರಹಿಸಿ ಕೃಷ್ಣಾ ಕಣಿವೆ ರೈತರು ಹೋರಾಟ ನಡೆಸಿ, ಶಾಸಕ ಎಸ್.ಕೆ. ಬೆಳ್ಳುಬ್ಬಿ ಅವರ ಭರವಸೆ ಮೇರೆಗೆ ಹಿಂದಕ್ಕೆ ಪಡೆದಿದ್ದಾರೆ. ಆದರೇ ಹೆಚ್ಚುವರಿಯಾಗಿ ನೀರು ಹರಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ.
 
ಜೂನ್ ಅಂತ್ಯದವರೆಗೆ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಪೂರೈಕೆ ಗಮನದಲ್ಲಿಟ್ಟುಕೊಂಡು ಜಲಾಶಯದಿಂದ ನೀರು ಬಿಡಬೇಕಾಗಿದೆ. ಈಗಲೂ ರೈತರ ಬೆಳೆ, ನೀರಿನ ಲಭ್ಯತೆ ನೋಡಿಕೊಂಡು ಕೇವಲ 8ರಿಂದ 10 ದಿನ ಹೆಚ್ಚುವರಿಯಾಗಿ ನೀರು ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT