ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಿಡಲು ಆಗ್ರಹ: `ಕಾಡಾ' ಕಚೇರಿಗೆ ಮುತ್ತಿಗೆ

Last Updated 6 ಆಗಸ್ಟ್ 2013, 6:07 IST
ಅಕ್ಷರ ಗಾತ್ರ

ಮೈಸೂರು: ವರುಣಾ ನಾಲೆಗೆ ನೀರು ಬಿಡಲು ಆಗ್ರಹಿಸಿ ತಿ. ನರಸೀಪುರ ತಾಲ್ಲೂಕಿನ ಕುಪ್ಯಾ ಮತ್ತು ಮಾದವಗೆರೆ ಗ್ರಾಮಸ್ಥರು ನಗರದ `ಕಾಡಾ' ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ವರುಣಾ ನಾಲೆಗೆ ನೀರು ಬಿಡಲಾಗಿದೆ. ಆದರೂ ತಮ್ಮ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ. ನೀರು ಬಿಡದ ಕಾರಣ ರೈತರು ಕಂಗಾಲಾಗಿದ್ದಾರೆ. ಕೃಷಿಗೆ ನೀರು ಅಗತ್ಯವಾಗಿ ಬೇಕಾಗಿರುವುದರಿಂದ ಕೂಡಲೇ ನೀರನ್ನು ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣ ಅವರು ಪ್ರತಿಭಟನಾನಿರತ ರೈತರಿಂದ ಮನವಿ ಪತ್ರ ಸ್ವೀಕರಿಸಿ ಮೂರು ದಿನಗಳ ಒಳಗೆ ಕುಪ್ಯಾ ಮತ್ತು ಮಾದವಗೆರೆ ಗ್ರಾಮಕ್ಕೆ ನೀರು ಬಿಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ರಂಗಸ್ವಾಮಿ, ಮಾದಪ್ಪ, ಉದಯ್‌ಕುಮಾರ್ ನೇತೃತ್ವ ವಹಿಸಿದ್ದರು.

ದಲಿತ ಸಂಘರ್ಷ ಸಮಿತಿ
ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಉಪ ವಿಭಾಗಾಧಿಕಾರಿ ಬಸವರಾಜು ಅವರು ನಿವೇಶನ ಮಂಜೂರು ಮಾಡದೆ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ತಿ.ನರಸೀಪುರ ತಾಲ್ಲೂಕು ಮಾದಿಗಹಳ್ಳಿ ದಲಿತ ಜನಾಂಗದವರಿಗೆ 2010-11ನೇ ಸಮೀಕ್ಷೆಯಂತೆ ತಕ್ಷಣ ನಿವೇಶನ ಹಂಚಬೇಕು. ಭೂ ಸ್ವಾಧೀನ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಬಸವರಾಜು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಭೂ ಸ್ವಾಧೀನ ತಪ್ಪಿಸಲು ಖಾಸಗಿ ವ್ಯಕ್ತಿಗಳಿಗೆ ಜಮೀನು ಮಾರಾಟ ಮಾಡುತ್ತಿರುವುದನ್ನು ಮತ್ತು ಮನೆಗಳನ್ನು ನಿರ್ಮಿಸುತ್ತಿರುವುದನ್ನು ಕೂಡಲೇ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಮುಖಂಡರಾದ ಮಹದೇವಯ್ಯ, ಶ್ರೀನಿವಾಸ್, ಹನುಮಂತು ಬೆಲವತ್ತ, ಪುಟ್ಟಸ್ವಾಮಿ, ರಾಜೇಶ್, ಸೋಮಣ್ಣ, ವೆಂಕಟರಾಮ್, ಕುಮಾರ್, ದೇವರಾಜ್ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

ಕಂದಾಯ ಬಡಾವಣೆ ಸಕ್ರಮಕ್ಕೆ ಆಗ್ರಹ
ಮುಂಬರುವ ಲೋಕಸಭಾ ಚುನಾವಣೆ ಒಳಗೆ ಎಲ್ಲ ಕಂದಾಯ ಬಡಾವಣೆಗಳನ್ನು ಸಕ್ರಮಗೊಳಸಿಬೇಕು ಎಂದು ಆಗ್ರಹಿಸಿ ಸರ್ವಜನಾಂಗ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ನಗರದಲ್ಲಿ 4 ಲಕ್ಷ ಕಂದಾಯ ನಿವೇಶನಗಳಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಯಾರೂ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು. ಲೋಕಸಭಾ ಚುನಾವಣೆ ಒಳಗೆ ಕಂದಾಯ ಬಡಾವಣೆಗಳನ್ನು ಸಕ್ರಮಗೊಳಿಸದೇ ಇದ್ದರೆ ಮುಂದೆ ಪೊರಕೆ ಚಳವಳಿ ನಡೆಸಲಾಗುವುದು ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಕೂಡಲೇ ಸಚಿವ ಸಂಪುಟ ಸಭೆ ಕರೆದು ಕಂದಾಯ ಬಡಾವಣೆಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲಕ್ಕೇಗೌಡ, ಲಕ್ಷ್ಮಣ್‌ರಾಜ್, ವಜ್ರೇಗೌಡ, ಪ್ರಭುದೇವ್, ನಿಂಗೇಗೌಡ, ಸಿದ್ದಯ್ಯ, ಹೊನ್ನಪ್ಪಾಚಾರ್ ಇತರರು ಭಾಗವಹಿಸಿದ್ದರು.

ಅರ್ಜಿ ಆಹ್ವಾನ
ಮೈಸೂರು: ಜಿ.ಆರ್.ಎನ್. ಅಕಾಡೆಮಿಯು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅನುಮತಿಯಲ್ಲಿ, ಖಾಸಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೇರ ದ್ವಿತೀಯ ಪಿಯು ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಿದೆ. ವಾಣಿಜ್ಯ(ಜಿ.ಇ.ಬಿ.ಎ), ಕಲಾ (ಎಚ್.ಇ.ಪಿ.ಜಿ) ಕನ್ನಡ ಮತ್ತು ಇಂಗ್ಲಿಷ್ ಭಾಷಾ ವಿಷಯಗಳಲ್ಲಿ ಶೈಕ್ಷಣಿಕ ತರಬೇತಿಯನ್ನು ನೀಡಲಾಗುತ್ತದೆ. ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾದ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಮಾಹಿತಿಗಾಗಿ ಮೊ: 95351 61811, 94486 01454 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT