ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸಮಸ್ಯೆ: ಜನಪ್ರತಿನಿಧಿಗಳು ಅಸಹಾಯಕರೆ?

Last Updated 21 ಫೆಬ್ರುವರಿ 2011, 7:05 IST
ಅಕ್ಷರ ಗಾತ್ರ

ಕೋಲಾರ:  ಡಿಸೆಂಬರ್-ಜನವರಿಯ ಚಳಿ ಮುಗಿದು, ಬೇಸಿಗೆಯ ಬಿಸಿಲು ಇಷ್ಟಿಷ್ಟೇ ಕಣ್ಣು ತೆರೆಯುತ್ತಿದೆ. ಮಾರ್ಚ್  ಹೊತ್ತಿಗೆ ನೀರಿನ ಸಮಸ್ಯೆ ಬಿಗಡಾಯಿಸುವ ಕುರಿತು ಸಾರ್ವಜನಿಕರಲ್ಲಿ ಆತಂಕ ಗೂಡು ಕಟ್ಟುತ್ತಿದೆ. ಇದೇ ಹೊತ್ತಿನಲ್ಲೆ, ನೀರು ಪೂರೈಕೆಗೆ ಆಗ್ರಹಿಸಿದ ನಗರಸಭೆ ಸದಸ್ಯರು ತಮ್ಮ ಮನವಿಗೆ ಕವಡೆ ಕಿಮ್ಮತ್ತು ದೊರಕದ ಹಿನ್ನೆಲೆಯಲ್ಲಿ ಧರಣಿಯ ನಿರ್ಧಾರ ಮಾಡಿದ ಬಳಿಕವಷ್ಟೆ ಅಧಿಕಾರಿಗಳು ಕ್ರಮಕ್ಕೆ ಮುಂದಾದ ಘಟನೆಯೂ ಶನಿವಾರ ನಡೆದಿದೆ.

ಆದದ್ದೇನು?
ನಗರದ ಕೋಲಾರಮ್ಮ ದೇವಾಲಯದ ಬಳಿ ಇರುವ ಕೋಲಾರಮ್ಮ ಕೆರೆ (ಅಮಾನಿ ಕರೆ) ಆವರಣದಲ್ಲಿ, ನಗರದ ಹಲವು ವಾರ್ಡ್‌ಗಳಿಗೆ ನೀರು ಪೂರೈಸುವ ಪಂಪ್‌ಹೌಸ್ ಇದೆ. ಅಲ್ಲಿನ ಹಲವು ಕೊಳವೆಬಾವಿಗಳ ಮೂಲಕವೇ ನೀರು ಪೂರೈಸಲಾಗುತ್ತದೆ.15 ದಿನಗಳಿಂದ 5 ಕೊಳವೆಬಾವಿಗಳು ಕೆಟ್ಟ ಪರಿಣಾಮ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಸಾಧ್ಯವಾದಷ್ಟು ಬೇಗ ರಿಪೇರಿ ಮಾಡುವಂತೆ ನಗರಸಭೆ ಸದಸ್ಯರಾದ ರವೀಂದ್ರ, ರಮೇಶ್, ರಘು ಮತ್ತಿತರೆ ಸದಸ್ಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಅಲ್ಲದಿದ್ದರೆ, ಒಂದೆರಡು ದಿನಗಳಲ್ಲಿ ಪರಿಹಾರವನ್ನು ನಿರೀಕ್ಷಿಸಿದ ಈ ಸದಸ್ಯರಿಗೆ ನಿರಾಶೆ ಎದುರಾಯಿತು. ಹಲವು ದಿನಗಳು ಕಾದ ಬಳಿಕ ಅವರು ಶನಿವಾರ ಬೆಳಿಗ್ಗೆ ನಗರಸಭೆ ಮುಂದೆ ಧರಣಿನಡೆಸುವ ನಿರ್ಧಾರ ಕೈಗೊಂಡರು. ಧರಣಿಯ ವಿಷಯ ತಿಳಿಯುತ್ತಿದ್ದಂತೆಯೇ ಚುರುಕಾದ ಅಧಿಕಾರಿಗಳು ಕೊಳವೆಬಾವಿಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಂಡರು. ಧರಣಿ ನಡೆಸುವ ನಗರಸಭೆ ಸದಸ್ಯರ ನಿಲುವು ಬದಲಾಯಿತು.

ಆದರೆ, ಜ.19ರಂದು ನಗರಸಭೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ವಾರ್ಡಿಗೆ ನೀರು ಪೂರೈಸಬೇಕೆಂದು ಆಗ್ರಹಿಸಿ 12ನೇ ವಾರ್ಡಿನ ಪ್ರತಿನಿಧಿ ರವೀಂದ್ರ ಮೌನ ಪ್ರತಿಭಟನೆ ನಡೆಸಿದ್ದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಅಂದು ಸಭೆಯಲ್ಲಿ ನಡೆದ ಗಲಾಟೆಯ ನಡುವೆ ಅವರ ಪ್ರತಿಭಟನೆಗೆ ನಿರೀಕ್ಷಿತ ಪ್ರತಿಕ್ರಿಯೆ ದೊರೆಯಲಿಲ್ಲ.

ಮೇಲುನೋಟಕ್ಕೆ ಇದೇನೂ ದೊಡ್ಡ ವಿಷಯವಲ್ಲ ಎಂದು ಅನಿಸಿದರೂ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕಾದ, ಅಧಿಕಾರಿಗಳಿಂದ ಕಾಲಕಾಲಕ್ಕೆ ಜನಸ್ನೇಹಿಯಾದ ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳೇ, ಸಾಮಾನ್ಯರಂತೆ ಧರಣಿ, ಪ್ರತಿಭಟನೆ ನಡೆಸಲು ಮುಂದಾಗುವುದು ಅವರ ಅಸಹಾಯಕತೆಯ ಕಡೆಗೆ ಬೆರಳು ಮಾಡುತ್ತದೆ. ವಿವಿಧ ಬಣಗಳ ನಡುವಿನ ರಾಜಕೀಯ ಮೇಲಾಟಗಳು ನಗರದ ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಲೋಭನೆಯನ್ನು ಸದಸ್ಯರಲ್ಲಿ ಹುಟ್ಟಿಸುವುದರ ಬದಲು, ಸಮಸ್ಯೆಗಳು ಹಾಗೇ ಇರುವಂಥ ಸನ್ನಿವೇಶ ನಿರ್ಮಾಣಕ್ಕೆ ಸ್ಫೂರ್ತಿಯಾಗುತ್ತಿವೆ.

ಶಾಸಕ ವರ್ತೂರು ಪ್ರಕಾಶ್, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಬಣಗಳಲ್ಲಿ ಹಂಚಿ ಹೋಗಿರುವ ಸದಸ್ಯರ ನಡುವೆ, ನಗರದ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಇರಬೇಕಾದ ಒಗ್ಗಟ್ಟು ಕಾಣುತ್ತಿಲ್ಲ. ತಮ್ಮ ಹಿಡಿತಕ್ಕೆ ನಗರಸಭೆ ಆಡಳಿತ ಸಿಕ್ಕಾಗ ಅಭಿವೃದ್ಧಿಯ ಮಾತನಾಡುವ ಮುಖಂಡರೂ ನಂತರದಲ್ಲಿ ನಿರ್ಲಿಪ್ತರಾಗುವುದೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆಂಬಂತೆ ಆಗಿದೆ ಎಂಬುದು ಹಲವು ನಿವಾಸಿಗಳ ಗಂಭೀರ ಆರೋಪ.

ಸಮಸ್ಯೆಗಳ ಪರಿಹಾರಕ್ಕೆ ನಿಷ್ಠುರವಾಗಿ ವರ್ತಿಸಬೇಕಾದ ಹಲವು ಸದಸ್ಯರು ಮುಖಂಡರನ್ನು ಓಲೈಸುವ ಕಾಯಕವನ್ನೆ ಹೆಚ್ಚು ಮಾಡಿಕೊಂಡಿರುವುದು ಮತ್ತು ಸ್ವಂತ ಲಾಭಕ್ಕಾಗಿ ಬೇನಾಮಿಯಾಗಿ ಕಾಮಗಾರಿಗಳ ನೇತೃತ್ವ ವಹಿಸಿರುವುದೂ ಈ ಸ್ಥಿತಿಗೆ ಕಾರಣ. ನಗರಸಭೆಯಲ್ಲಿರುವ ಬಣ ರಾಜಕಾರಣದ ಭರಾಟೆಯಲ್ಲಿ ಅಭಿವೃದ್ಧಿ ರಾಜಕಾರಣ ಹಿಂದೆ ಸರಿದಿದೆ. ಹೀಗಾಗಿಯೇ ಅಧಿಕಾರವುಳ್ಳ ಬಣದಲ್ಲಿ ಇಲ್ಲದ ನಗರಸಭೆ ಸದಸ್ಯರ ಮನವಿಗಳಿಗೆ ನಿರೀಕ್ಷಿತ ಸ್ಪಂದನವೂ ದೊರಕುತ್ತಿಲ್ಲ ಎನ್ನುತ್ತಾರೆ ಸದಸ್ಯರೊಬ್ಬರು.2010ರಲ್ಲಿ: ಕಳೆದ ವರ್ಷ ಫೆಬ್ರುವರಿಯಲ್ಲೂ ಇಂಥದ್ದೇ ಸನ್ನಿವೇಶ ಏರ್ಪಟ್ಟಿತ್ತು. ನಗರದ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ ಎಂದು ಕೆಲವು ನಗರಸಭೆ ಸದಸ್ಯರು ನೇರವಾಗಿ ಜಿಲ್ಲಾಧಿಕಾರಿಗಳಿಗೇ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಫೆ.16ರಂದು ಅಂದಿನ ಜಿಲ್ಲಾಧಿಕಾರಿ ಎನ್.ಪ್ರಭಾಕರ್ ನಗರಸಭೆಗೆ ದಿಢೀರನೆ ಭೇಟಿ ನೀಡಿ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದ್ದರು.
ಇದೀಗ ಈ ವರ್ಷ ಮತ್ತೆ ಅಂಥದ್ದೇ ಸಮಸ್ಯೆ ಮರುಕುಳಿಸಿದೆ. ಸದಸ್ಯರು ಅಸಹಾಯಕರಾಗಿದ್ದಾರೆ.ನೀರಿನ ಪೂರೈಕೆಯಲ್ಲಿ ತಾರತಮ್ಯ ನೀತಿಯನ್ನು ವಿರೋಧಿಸಿದ್ದಾರೆ.ಸದಸ್ಯರು ಪ್ರತಿಭಟಿಸಿದರೆ ಮಾತ್ರ ವಾರ್ಡಿನ ಸಮಸ್ಯೆಗಳಿಗೆ ನಗರಸಭೆಯಲ್ಲಿ ಪರಿಹಾರ ಕಾರ್ಯ ಶುರುವಾಗುತ್ತದೆ ಎಂಬುದು ಸದ್ಯಕ್ಕೆ ಸಾರ್ವಜನಿಕ ಚರ್ಚೆಗೆ ಅರ್ಹವಾದ ಪ್ರಮುಖ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT