ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸಮಸ್ಯೆ ನಿವಾರಣೆಗೆ ಹೊಸ ಯೋಜನೆ

Last Updated 9 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಕೋಲಾರ: ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಯರಗೋಳು ಯೋಜನೆಯ ಜೊತೆಗೆ ಹೊಸದೊಂದು ಯೋಜನೆಯನ್ನು ಜಿಲ್ಲೆಗೆ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಬೆಂಬಲಿಗರೊಡನೆ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದರಿಂದ ಅಭಿವೃದ್ಧಿ ಕೆಲಸಗಳು ಸುಗಮವಾಗಿ ನಡೆಯಲಿವೆ. ಜಿಲ್ಲೆಯಲ್ಲಿ ಅನುಮೋದನೆ ದೊರಕಬೇಕಾಗಿರುವ, ಟೆಂಡರ್ ಕರೆಯಲಾಗಿರುವ, ಅನುಷ್ಠಾನದ ಹಂತದಲ್ಲಿರುವ ಎಲ್ಲ ಯೋಜನೆಗಳೂ ಕ್ಷಿಪ್ರಗತಿಯಲ್ಲಿ ಶುರುವಾಗಲಿವೆ ಎಂದರು.

ಜಿಲ್ಲೆಯಲ್ಲಿ ಯಾವ ಕೊರತೆಯೂ ಆಗದಂತೆ ಕಾರ್ಯನಿರ್ವಹಿಸುವೆ. ಜಿಲ್ಲಾಡಳಿತ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡಲಾಗುವುದು ಎಂದರು.ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಈ ಮಂಗಳವಾರ ಬಿಜೆಪಿಗೆ ಶುಭದಿನ. ಮೊದಲ ಬಾರಿಗೆ ಪಕ್ಷವು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಶಕ್ತಿಯಾಗಿ ಹೊರಹೊಮ್ಮಿದೆ. ಶಾಸಕ ವರ್ತೂರು ಪ್ರಕಾಶರು ನೀಡಿದ ವಿಶೇಷ ಸಹಕಾರವೂ ಸಂತೋಷ ತಂದಿದೆ. ಮುಖ್ಯಮಂತ್ರಿಗಳ ಭರವಸೆ ಮೇರೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಜಾರಿಗೊಳ್ಳಲಿವೆ ಎಂದರು.

ಶಾಸಕ ಆರ್.ವರ್ತೂರು ಪ್ರಕಾಶ್ ಮಾತನಾಡಿ, ಚುನಾವಣೆಯಲ್ಲಿ ಸಹಕರಿಸಿದ ಎಂ.ಎಸ್.ಆನಂದ್, ಭಾರತಿ ಮತ್ತು ಸೀಮೌಲ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಜಿಲ್ಲೆಯ ಅಭಿವೃದ್ಧಿಯ ಕುರಿತು ಸೋಮವಾರವಷ್ಟೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಹೊಸ ನೀರಾವರಿ ಯೋಜನೆಯೊಂದು ಜಾರಿಗೆ ಬರಲಿದೆ ಎಂದರು.ನನ್ನ ಬಣದಲ್ಲಿರುವ ಸದಸ್ಯರಿಗೆ ನನ್ನ ವಿರುದ್ಧ ಕೆಲಸ ಮಾಡುವಂತೆ ಚುನಾವಣೆಯ ಕೊನೆ ಕ್ಷಣದವರೆಗೂ ಪ್ರೇರೇಪಿಸಿದ ಕೆ.ಎಚ್. ಮುನಿಯಪ್ಪನವರ ತಂತ್ರ ದೇವರ ದಯದಿಂದ ಫಲಿಸಿಲ್ಲ ಎಂದ ಅವರು, ತಿರುಪತಿಯ ದೇವರನ್ನು ಉಲ್ಲೇಖಿಸಿದ್ದು ವಿಶೇಷವಾಗಿತ್ತು. ಜಿಲ್ಲೆ ಕಂಡ ಬೇರೆಲ್ಲ ಸಚಿವರಿಗಿಂತಲೂ ಎ.ನಾರಾಯಣಸ್ವಾಮಿ ನೂರು ಪಾಲು ಉತ್ತಮ ಎಂದು ಹೊಗಳಿದರು. 20 ತಿಂಗಳ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಅಧಿಕಾರ ಚುಕ್ಕಾಣಿ ನಮ್ಮದೇ ಆಗಲಿದೆ ಎಂದರು.

ಶಾಸಕ ವರ್ತೂರರಿಗೆ ಸಚಿವ ಸ್ಥಾನ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ  ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ವರ್ತೂರು ಬೆಂಬಲಿಗ ಬೆಗ್ಲಿ ಸೂರ್ಯಪ್ರಕಾಶ್ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ, ಬಿಜೆಪಿ ಪ್ರಮುಖ ವೈ.ಸುರೇಂದ್ರಗೌಡ ವೇದಿಕೆಯಲ್ಲಿದ್ದರು. ಯುವಮೋರ್ಚಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಧ್ಯಮ ಪ್ರಮುಖ ಸತ್ಯನಾರಾಯಣರಾವ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT