ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಸೂರು ಮತ್ತು ಹಸಿರು

Last Updated 24 ಮೇ 2012, 19:30 IST
ಅಕ್ಷರ ಗಾತ್ರ

`ಪರಿಸರ ಕಾಳಜಿಯನ್ನು ಬಿಂಬಿಸುವ ಕಥೆಯನ್ನು ಕಮರ್ಷಿಯಲ್ ಮಾದರಿಯಲ್ಲಿ ಹೇಳುವ ಪ್ರಯತ್ನವಿದು~ - ಚಿತ್ರತಂಡ ಒಕ್ಕೊರಲಿನಿಂದ ಹೇಳಿಕೊಂಡಿತು.

`ಇಲ್ಲಿ ಪ್ರೀತಿ ಪ್ರೇಮದ ಕಥೆಯಿಲ್ಲ. ಬದಲಾಗಿ ಜನರಿಗೆ ನೀರು, ಸೂರು, ಆಹಾರ ಸರಿಯಾಗಿ ಲಭಿಸುವಂತಾಗಬೇಕು. ಇದಕ್ಕೆ ಪರಿಸರ ಉಳಿಸುವ ಅಗತ್ಯ ಎಷ್ಟಿದೆ ಎಂಬ ಸಂದೇಶ ಚಿತ್ರದಲ್ಲಿದೆ. ಪರಿಸರ ರಕ್ಷಣೆಯೇ ಈ ಆಶಾಕಿರಣ~ ಎಂದರು ನಿರ್ದೇಶಕ ಜಿ.ವಿ.ರಾಮರಾವ್.

ದಾವಣಗೆರೆಯ ಡಿ. ಲಕ್ಷ್ಮಣ್ ನಾಯಕ್ ಎನ್ನುವವರು ಬರೆದ ಅಪ್ರಕಟಿತ ಕಾದಂಬರಿಯ ಆಧಾರಿತ ಚಿತ್ರ `ಆಶಾಕಿರಣಗಳು~ ಬಿಡುಗಡೆಗೆ ಸಿದ್ಧವಾಗಿದೆ. ದೀರ್ಘಕಾಲದಿಂದ ತೆರೆಯ ಮೇಲೆ ಕಾಣಿಸಿಕೊಳ್ಳದಿದ್ದ ದುನಿಯಾ ರಶ್ಮಿ ಪರಿಸರ ಕಾಳಜಿಯುಳ್ಳ ಶಾಲಾ ಶಿಕ್ಷಕಿಯಾಗಿ ನಟಿಸಿದ್ದಾರೆ. ಅವರಿಗೆ `ಇದ್ರೆ ಗೋಪಿ ಬಿದ್ರೆ ಪಾಪಿ~ ಎಂಬ ಚಿತ್ರದಲ್ಲಿ ನಟಿಸಿದ್ದ ಜಗದೀಶ್ ರಾಜ್ ಜೋಡಿ. ಹರೀಶ್ ರೈ ದೊಂಬರಾಟ ಆಡುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

`ದುನಿಯಾದ ಆ ರಶ್ಮಿಗಿಂತ ಈ ರಶ್ಮಿ ತುಂಬಾ ಬದಲಾಗಿದ್ದಾಳೆ~ ಎಂದು ನಕ್ಕರು ನಟಿ ರಶ್ಮಿ. ಮೂರು ವರ್ಷದ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಅವಧಿಯಲ್ಲಿ ಅವರು ಬಿಕಾಂ ಮುಗಿಸಿದ್ದಾರೆ. ಜೊತೆಗೆ ತೆಳ್ಳಗಾಗಿದ್ದಾರೆ. ದುನಿಯಾ ಚಿತ್ರದ ರೀತಿಯ ಪಾತ್ರಕ್ಕಾಗಿ ತಾವು ಕಾಯುತ್ತಿರುವುದಾಗಿ ಹೇಳಿದ ಅವರು ಈ ನಡುವೆ ತೆಲುಗು ಚಿತ್ರವೊಂದಕ್ಕೆ ಒಪ್ಪಿಕೊಂಡಿರುವುದನ್ನು ಹೇಳಿದರು. `ಆಶಾಕಿರಣಗಳು~ ಚಿತ್ರದ ಪಾತ್ರ ಖುಷಿ ಕೊಟ್ಟಿದೆ ಎಂದರು.

ಚಿತ್ರದಲ್ಲಿ ಐದು ಮಂದಿ ಮಕ್ಕಳೂ ನಟಿಸಿದ್ದಾರೆ. ಅರಸೀಕೆರೆ, ಬಸವಾಪಟ್ಟಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ನಾಲ್ಕು ಹಾಡುಗಳಿಗೆ ಸಾಯಿ ಗುರುನಾಥ್ ಸಂಗೀತ ನೀಡಿದ್ದಾರೆ.

ರಾಜಕಾರಣಿಯಾಗಿರುವ ಲಕ್ಷ್ಮಣ್ ನಾಯಕ್ ಈ ಹಿಂದೆ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದವರು. ಚಿತ್ರಕ್ಕೆ ಬಂಡವಾಳವನ್ನೂ ಅವರೇ ಹೂಡಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸಬೇಕು ಎಂಬ ಉದ್ದೇಶದಿಂದ ತಮ್ಮ ಪ್ರಕಟವಾಗದ ಕಾದಂಬರಿಯನ್ನು ಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡರು.

ಚಿತ್ರೀಕರಣ ಮುಗಿಸಿದ್ದು ಸಂಕಲನ ಕಾರ್ಯ ನಡೆಯುತ್ತಿದೆ. ಆಗಸ್ಟ್ 15ರ ಒಳಗೆ ಬಿಡುಗಡೆ ಮಾಡುವುದು ಚಿತ್ರತಂಡದ ಉದ್ದೇಶ.

ಸಂಭಾಷಣಾಕಾರ ಬಿ.ಆರ್.ನರಸಿಂಹಮೂರ್ತಿ, ನಟಿ ಜಯಲಕ್ಷ್ಮಿ, ನಟ ಚಿಕ್ಕ ಹೆಜ್ಜಾಜಿ ಮಹದೇವ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT