ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರೇ ಇಲ್ಲದ ನಾಡಿನಲ್ಲಿ ಭಾರಿ ಮರಳು ದಂಧೆ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆಯಿಂದ  ಕೆರೆ-ಕಟ್ಟೆ ಪ್ರದೇಶಕ್ಕೆ ಅಷ್ಟೇ ಅಲ್ಲ, ಜನರ ಜೀವಗಳಿಗೂ ಕಂಟಕ ಎದುರಾಗಿದೆ. ಜಿಲ್ಲಾಡಳಿತ ಅಧಿಕೃತವಾಗಿ ಮರಳು ಸಾಗಣೆ, ಗಣಿಗಾರಿಕೆ ನಿಷೇಧಿಸಿದ್ದರೂ ಅದರಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ.

`ಜಿಲ್ಲಾಡಳಿತ ಮತ್ತು ಪೊಲೀಸರ ಬಗ್ಗೆ ಇಲ್ಲಿ ಕಿಂಚಿತ್ತೂ ಭಯವೂ ಇಲ್ಲ' ಎಂಬಂತೆ ಮರಳು ದಂಧೆಯಲ್ಲಿ ತೊಡಗಿಕೊಂಡವರು ಹಾಡಹಗಲೇ ಲೋಡುಗಟ್ಟಲೇ ಮರಳನ್ನು ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗಣೆ ಮಾಡಿ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕೆರೆಗಳು ಬತ್ತಿರುವುದು, ಗುಡ್ಡಗಾಡುಗಳಲ್ಲಿ ಮರಳು ಹೇರಳವಾಗಿ ಸಿಗುವುದನ್ನೇ ವರವಾಗಿಸಿಕೊಂಡಿರುವ ಮಾರಾಟಗಾರರು `ಬಗೆದಷ್ಟು ಬರಲಿ, ನಮಗೆ ಹಣ ಸಿಗಲಿ' ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬತ್ತಿರುವ ಕೆರೆ ದಂಡೆಗಳಲ್ಲಿ ಮತ್ತು ಗ್ರಾಮದ ಹೊರವಲಯದ ಗುಡ್ಡಗಾಡುಗಳಲ್ಲಿ ಸಾಲುಸಾಲಾಗಿ ಮರಳು ತುಂಬಿದ ಲಾರಿ, ಟ್ರ್ಯಾಕ್ಟರ್‌ಗಳು ನಿಂತಿರುತ್ತವೆ.

ಮುಂಜಾವು ಅಥವಾ ಮಧ್ಯ ರಾತ್ರಿಯಲ್ಲಿ ಮರಳು ಸಾಗಣೆ ಮಾಡುವುದನ್ನು ವಾಹನಗಳ ಚಾಲಕರು ಕರಗತ ಮಾಡಿಕೊಂಡಿದ್ದಾರೆ. ಮರಳು ಗಣಿಗಾರಿಕೆಗೆ ಪರಿಸರವಾದಿಗಳು ತೀವ್ರವಾಗಿ ವಿರೋಧಿಸುತ್ತಿದ್ದರೂ ಮತ್ತು ಜಿಲ್ಲಾ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಮರಳು ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ಬಗ್ಗೆ ಚರ್ಚೆಯಾಗುತ್ತಿದ್ದರೂ ಜಿಲ್ಲೆಯಲ್ಲಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕೇತೇನಹಳ್ಳಿ, ನಂದಿ, ಸೋಸೇಪಾಳ್ಯ ಮುಂತಾದ ಗ್ರಾಮಗಳ ಸುತ್ತಮುತ್ತ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಗುಮ್ಮನಾಯಕನಪಾಳ್ಯ, ಚೇಳೂರು ಸುತ್ತಮುತ್ತ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ಆಂಧ್ರಪ್ರದೇಶದ ನೋಂದಣಿಯುಳ್ಳ ವಾಹನಗಳಲ್ಲಿಯೂ ಸಹ ಬಾಗೇಪಲ್ಲಿ ತಾಲ್ಲೂಕಿನ ಮರಳನ್ನು ಸಾಗಿಸಲಾಗುತ್ತದೆ.

ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿಯೂ ನಿರಾತಂಕವಾಗಿ ಮರಳು ದಂಧೆ ನಡೆಯುತ್ತಿದೆ. ಅಧಿಕಾರಿಗಳು ಮತ್ತು ಪೊಲೀಸರ ಕಣ್ತಪ್ಪಿಸಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ದಂಧೆಯ ಹಿಂದೆ ಕೆಲ ಪ್ರಭಾವಿಗಳ ಕೈವಾ ಡವೂ ಇದೆ ಎಂದು ಹೇಳಲಾಗುತ್ತಿದೆ.

ಮರಳು ದಂಧೆಯ ಹಿಂದೆ ವ್ಯವಸ್ಥಿತ ಜಾಲವಿದೆ. ಹೇರಳವಾಗಿ ಮರಳು ಅಗೆದು ಮೊದಲು ಟ್ರ್ಯಾಕ್ಟರ್‌ನಲ್ಲಿ ತುಂಬಿಸಿಕೊಳ್ಳಲಾಗುತ್ತದೆ. ನಂತರ ಅದನ್ನು ನೀಲಗಿರಿ ತೋಪಿನಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಸುರಿಯಲಾಗುತ್ತದೆ.

ಮರಳಿನ ಅಗತ್ಯವಿರುವವರು ಗಣಿಗಾರಿಕೆ ಮಾಡಿರುವ ವ್ಯಕ್ತಿಗೆ ಇಂತಿಷ್ಟು ಹಣ ಪಾವತಿಸಬೇಕು. ವ್ಯವಹಾರ ಕುದುರದಿದ್ದಾಗ ಚೌಕಾಶಿಯು ಇಲ್ಲುಂಟು. ಇಂತಿಷ್ಟು ಹಣಕ್ಕೆ ಒಪ್ಪಂದವಾದ ನಂತರವಷ್ಟೇ, ಮರಳು ಖರೀದಿದಾರರು ತೋಪಿನಲ್ಲಿ ಸುರಿಯಲಾದ ಮರಳನ್ನು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಸುತ್ತಾರೆ.

`ರಾಜಧಾನಿ ಬೆಂಗಳೂರು ಸಮೀಪವಿರುವ ಕಾರಣ ಅಲ್ಲಿನ ಬಹುತೇಕ ಮಂದಿ ನಮ್ಮ ಜಿಲ್ಲೆಯಿಂದಲೇ ಮರಳನ್ನು ಖರೀದಿಸುತ್ತಾರೆ. ಪ್ರತಿಷ್ಠಿತರು ಮತ್ತು ರಿಯಲ್‌ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳೇ ಮರಳು ಖರೀದಿಸುತ್ತವೆಯಾದರೂ ಅದರ ಸುಳಿವು ಒಬ್ಬರಿಗೂ ಗೊತ್ತಾಗುವುದಿಲ್ಲ.

ಒಂದು ಟ್ರ್ಯಾಕ್ಟರ್ ಲೋಡಿನಷ್ಟು ಮಾತ್ರವೇ ಮರಳು ಖರೀದಿಸಿರುವುದಾಗಿ ಕೆಲವರು ಹೇಳಿಕೊಳ್ಳುತ್ತಾರೆಯಾದರೂ ಸುಮಾರು 8ರಿಂದ 10 ವಾಹನಗಳು ಒಂದೇ ಸ್ಥಳಕ್ಕೆ ಹೋಗುತ್ತವೆ. ಇಷ್ಟೆಲ್ಲ ನಡೆದರೂ ಅಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ಬರುವುದೇ ಇಲ್ಲ' ಎಂದು ಗ್ರಾಮಸ್ಥ ಮುನಿವೆಂಕಟಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

`ಇಲ್ಲಿ ದಂಧೆಕೋರರಿಗೆ ಭಯ ಎಂಬುದೇ ಇಲ್ಲ. ಪೊಲೀಸರಿಗೆ ಸಿಕ್ಕಿಬಿದ್ದರೆ, ಕೇಳಿದಷ್ಟು ದಂಡ ಪಾವತಿಸಿ ಮುಂದೆ ಪ್ರಯಾಣಿಸಬಹುದು ಎಂಬ ಮನೋಭಾವ ಅವರಲ್ಲಿದೆ. ದಂಧೆಯಲ್ಲಿ ತೊಡಗಿಕೊಂಡವರಿಗೆ ಜೈಲು ಶಿಕ್ಷೆಯಾಗುವವರೆಗೆ ಅಥವಾ ಕಠಿಣವಾದ ಕ್ರಮ ತೆಗೆದುಕೊಳ್ಳುವವರೆಗೆ ಏನೂ ಮಾಡಿದರೂ ಪ್ರಯೋಜನವಾಗುವುದಿಲ್ಲ. ಜಿಲ್ಲಾಡಳಿತ ಅಥವಾ ಸರ್ಕಾರ ಇದರ ಬಗ್ಗೆ ಚಿಂತನೆ ಮಾಡಬೇಕು' ಎಂದು ಅವರು ಹೇಳುತ್ತಾರೆ.

`ಹಿಂದಿನ ಕಾಲದ ಜನರು ಕೆರೆ ನೀರನ್ನೇ ನಂಬಿಕೊಂಡು ಜನರು ಜೀವನ ನಡೆಸುತ್ತಿದ್ದರು. ಆದರೆ ಈಗ ಕೆರೆಗಳು ಬತ್ತಿರುವುದರಿಂದ ಇಡೀ ಕೆರೆ ಪ್ರದೇಶವು ಮರಳು ಮಾಫಿಯಾಗೆ ಬಲಿಯಾಗುತ್ತಿದೆ. ಕೆರೆಗಳಲ್ಲಿ ನೀರು ನಿಲ್ಲುವಂತೆ ಮಾಡಲು ಮತ್ತು ಮಳೆನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ಮರಳು ತುಂಬ ಮುಖ್ಯ.

ಮರಳನ್ನು ಅಗತ್ಯಕ್ಕೆ ಅನುಸಾರವಾಗಿ ಸಂರಕ್ಷಿಸದಿದ್ದರೆ, ಅಪಾಯ ನಿಶ್ಚಿತ. ಮರಳು ಅಗೆದಷ್ಟು ಅಂತರ್ಜಲದ ಪ್ರಮಾಣ ಕಡಿಮೆಯಾಗುತ್ತದೆ. ಇದರ ಅರಿವು ಇದ್ದರೂ ಅಥವಾ ಇಲ್ಲದಿದ್ದರೂ ಮರಳುದಂಧೆ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ' ಎಂಬ ಆತಂಕ ಹೊರಹಾಕುತ್ತಾರೆ ಪರಿಸರವಾದಿಗಳು.

ಹಣದಾಸೆಗೆ ಜೀವಗಳು ಬಲಿ
ದಿನಕ್ಕೆ ಊಟ ಮಾಡುವಷ್ಟು ದುಡ್ಡು ಸಿಕ್ಕರೆ ಸಾಕು ಎಂದು ಮರಳಿನ ಕೆಲಸಕ್ಕಾಗಿ ಬರುತ್ತಿರುವ ಕೂಲಿಕಾರ್ಮಿಕರು ಕೆಲಸ ಮಾಡುತ್ತಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮರಳನ್ನು ಅಗೆಯುತ್ತಿರುವ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮರಳನ್ನು ತುಂಬಿಸುತ್ತಿರುವ ವೇಳೆ ಮರಳಿನ ದಿಬ್ಬ ಕುಸಿದು ಕೂಲಿಕಾರ್ಮಿಕರು ಮೃತಪಟ್ಟ ಘಟನೆಗಳು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸಂಭವಿಸಿವೆ.

ಬಾಗೇಪಲ್ಲಿಯಲ್ಲಿ ಕೆಲ ತಿಂಗಳ ಹಿಂದೆ ಕೂಲಿಕೆಲಸಕ್ಕೆಂದು ಬಂದಿದ್ದ ಬಡ ದಂಪತಿ ಮರಳಿನ ದಿಬ್ಬ ಕುಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದೇ ತಾಲ್ಲೂಕಿನ ಚೇಳೂರು ಸಮೀಪದ ಪಾಪಾಗ್ನಿ ನದಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ನಿಮ್ಮಕಾಯಲಪಲ್ಲಿ ಗ್ರಾಮದ ನಿವಾಸಿ ಸುನಂದಮ್ಮ  ಸ್ಥಳದಲ್ಲೇ ಮೃತಪಟ್ಟರೆ, ಮಣಿ ಗಾಯಗೊಂಡ.

`ಆಯಾ ದಿನದ ದುಡಿಮೆ ನಂಬಿಕೊಂಡು ಬರುವ ಇಂತಹ ಕಾರ್ಮಿಕರಿಗೆ ಪರಿಹಾರ ಧನ ಸಿಗುವುದಿಲ್ಲ. ಅವರು ಸಾವಿನ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮವೂ ಜರುಗಿಸಲಾಗುವುದಿಲ್ಲ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಎನ್.ಮುನಿಕೃಷ್ಣಪ್ಪದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT