ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಗಿರಿ ನಿಷೇಧಕ್ಕೆ ಆದೇಶ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಶಿವಮೊಗ್ಗ: ಪರಿಸರ ಹಾಗೂ ಜೀವಸಂಕುಲಕ್ಕೆ ಮಾರಕವಾಗಿರುವ ನೀಲಗಿರಿ ಮರ ಬೆಳೆಯುವುದನ್ನು ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶಗಳಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಹಾಗೂ ಸಣ್ಣ ಕೈಗಾರಿಕಾ ಸಚಿವ ಸಿ.ಎಚ್. ವಿಜಯಶಂಕರ್ ತಿಳಿಸಿದರು.

ನೀಲಗಿರಿ ಅಲ್ಲದೇ, ಅಕೇಷಿಯಾ ಬೆಳೆಯುವುದನ್ನೂ ನಿಷೇಧಿಸಿ ಸದ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು. ನೀಲಗಿರಿ ಮತ್ತು ಅಕೇಷಿಯಾಗೆ ಪರ್ಯಾಯವಾಗಿ ಪರಿಸರಕ್ಕೆ ಪೂರಕವಾಗುವ ಹಾಗೂ ಪ್ರಾಣಿ-ಪಕ್ಷಿಗಳಿಗೆ ಉಪಯುಕ್ತವಾಗುವ ಗಿಡಮರಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಗುವುದು ಎಂದು ಅವರು ಮಂಗಳವಾರ  ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. 
ಅರಣ್ಯ ಅಭಿವೃದ್ಧಿಗೆ ಸಾಮೂಹಿಕ ಸಹಭಾಗಿತ್ವ ಪಡೆಯುವ ನಿಟ್ಟಿನಲ್ಲಿ ಪ್ರಾದೇಶಿಕ ಅರಣ್ಯ ನೀತಿಯನ್ನು ಜಾರಿಗೆ ತರಲು ಈಗಾಗಲೇ ಸರ್ಕಾರ ರಚಿಸಿರುವ ವಿಷಯತಜ್ಞರ ಆರು ಸಮಿತಿಗಳು ಸಲ್ಲಿಸಿರುವ ವರದಿಗಳು ಪರಿಶೀಲನಾ ಹಂತದಲ್ಲಿವೆ.

ಈ ವರದಿಗಳ ಅನ್ವಯ ಪ್ರಾದೇಶಿಕ ಅರಣ್ಯ ನೀತಿಯನ್ನು ಜಾರಿಗೆ ತರಲಾಗುವುದೆಂದು ಸಚಿವರು ವಿವರಿಸಿದರು. ಜಿಲ್ಲೆಗೊಂದು ’ಟ್ರೀ ಪಾರ್ಕ್’:ಗಿಡಮರಗಳಿಂದಾಗುವ ಪ್ರಯೋಜನಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸುಮಾರು 250 ಎಕರೆ ಪ್ರದೇಶದಲ್ಲಿ ಜಿಲ್ಲೆಗೊಂದು ’ಟ್ರೀ ಪಾರ್ಕ್’ ಅಭಿವೃದ್ಧಿಪಡಿಸಲಾಗುವುದು ಎಂದರು.ಅಲ್ಲದೇ, ದಿನಕ್ಕೆ ಒಂದು ಸಾವಿರಕ್ಕೂ ಹೆಚ್ಚು ಜನ ಸೇರುವ ಸ್ಥಳಗಳನ್ನು ಗುರುತಿಸಿ ಜಿಲ್ಲೆಗೊಂದು ದೇವ ವನ ಅಭಿವೃದ್ಧಿಪಡಿಸಲಾಗುವುದು. ಜತೆಗೆ ದೇವ ವನಕ್ಕೆ ಹೊಂದಿಕೊಂಡಂತೆ ನರ್ಸರಿಯನ್ನು ಬೆಳೆಸಿ, ಸಸಿಗಳನ್ನು ಮಾರಾಟ ಮಾಡಲಾಗುವುದೆಂದರು.

ಸರ್ವೇಯರ್ ನೇಮಕ:ಅರಣ್ಯ ಒತ್ತುವರಿ ತಡೆಗೆ ಪ್ರತ್ಯೇಕ ಸರ್ವೇಯರ್‌ಗಳನ್ನು ನೇಮಕ ಮಾಡಿ ಅರಣ್ಯ ಸರಹದ್ದು ಗುರುತಿಸಿ, ಸಂರಕ್ಷಿಸುವಲ್ಲಿಯೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅರಣ್ಯ ಇಲಾಖೆಯ ನೀತಿ-ನಿಯಮ, ಕಾಯ್ದೆ-ಕಾನೂನುಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಸೇರಿದಂತೆ ಅರಣ್ಯದ ಬಗೆಗಿನ ಜನಾಭಿಪ್ರಾಯ ಸಂಗ್ರಹಿಸಲು ಇಲಾಖೆ, ಮಾಸ ಪತ್ರಿಕೆಯನ್ನು ಹೊರತರಲಿದೆ ಎಂದರು. ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT